-ಆರು-
ಹಿಂದಿನ ಸಂಚಿಕೆಯಿಂದ
ಅಪ್ಪು ಮದುರೈ ನಲ್ಲಿ ಧರ್ಮ ಪ್ರವಚನವನ್ನು ಮಾಡಿ ಶಿಷ್ಯರ ಜೊತೆ ಬೆಂಗಳೂರಿಗೆ ಹಿಂತಿರುಗಿದ. ಮದ್ಯೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಶಿಷ್ಯರನ್ನು ಕಂಡು ದುಡ್ಡಿಗೋಸ್ಕರ ಅಲ್ಲವೇ ಇವರಲ್ಲಿ ಯಾರೋ ಒಬ್ಬರು ನಮ್ಮ ವಿರುದ್ದವಾಗಿರುವುದು ಎಂದು ಮರುಗಿದ. ಬೆಂಗಳೂರಿನಲ್ಲಿ ಸ್ನೇಹಿತ ಅಗಸ್ತ್ಯನ ನೋಡಿ ಸಂತಸಪಟ್ಟರು ನಾಗ ಗಾಂಧಾರಿಯನ್ನು ನೋಡಿ ಆಶ್ಚರ್ಯಪಟ್ಟ. ಅಷ್ಟಕ್ಕೂ ಯಾರೀ ನಾಗ ಗಾಂಧಾರಿ……
“ಆಯಾ ಹೈ ಮುಝೆ ಫಿರ್ ಯಾದ್ ವೋ ಜಾಲಿಮ್
ಗುಜರಾ ಜಮಾನಾ ಬಚಪನ್ ಕಾ
ಹಾಯ್ ರೆ ಅಕೇಲೆ ಛೋಡ್ ಕೆ ಜಾನಾ…” ಎಂದು ಅಪ್ರಮೇಯ ಒಳಗೆ ಬರುತ್ತಿದ್ದಂತೆ ಹಾಡಿದ್ದಳು ನಾಗ ಗಾಂಧಾರಿ.
ಅಪ್ರಮೇಯ ಕಸಿವಿಸಿಗೊಂಡಿದ್ದ. ಅಗಸ್ತ್ಯ ತನ್ನಿಂದ ಈ ವಿಷಯವನ್ನೇಕೆ ಮುಚ್ಚಿಟ್ಟ?
ಅವನ ಮನಸ್ಸಿನ ತಳಮಳದ ಬೆಂಕಿಗೆ ತುಪ್ಪ ಹಾಕುವಂತೆ ಆ ಹಾಡನ್ನು ಮುಂದುವರೆಸಿ, “ವೋ ಖೇಲ್ ವೋ ಸಾಥೀ ವೋ ಝೂಲೇ ವೋ ದೌಡ್ ಕೆ ಕೆಹನಾ ಆ ಛೂ ಲೇ ಹಮ್ ಆಜ್ ತಲಕ್ ಭೀ ನಾ ಭೂಲೆ” ಎಂದು ಹಾಡಿದ.
ಅಪ್ರಮೇಯನ ಮನಸ್ಸು ಆ ಹಾಡನ್ನು ಮುಂದುವರೆಸಿತ್ತು. “ಮಿಲ್ ಕರ್ ರೋಯೇ ಫರಿಯಾದ್ ಕರೇ ಉನ್ ಬೀತೇ ದಿನೋಂ ಕಿ ಯಾದ್ ಕರೇ ಏ ಕಾಶ್ ಕಹೀಂ ಮಿಲ್ ಜಾಯೇ ಕೋಯೀ”
ಇಂದಿನದಲ್ಲ ಈ ಪ್ರೇಮಕಥೆ ಬಹಳ ಹಿಂದಿನದು. ಅವಳು ಹುಟ್ಟಿದೊಡನೆ ಅಪ್ರಮೇಯನಿಗೆ ಅವನ ತಾಯಿ ಗಂಟು ಹಾಕಿದ್ದಳು. ಏಕೆಂದರೆ ನಾಗ ಗಾಂಧಾರಿ ಅವಳ ಪ್ರೀತಿಯ ಅಣ್ಣನ ಮಗಳು.
ನಾಗ ಗಾಂಧಾರಿಯ ತಂದೆ ಒಳ್ಳೆಯ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ. ಅದಕ್ಕೇ ಮಗಳಿಗೆ ಒಂದು ರಾಗದ ಹೆಸರು ಇಟ್ಟಿದ್ದ.
ಶಾಲೆಯಲ್ಲಿ ಅನೇಕ ಸಲ ಅವಳನ್ನು ಹುಡುಗರು ಕೆಣಕಿದ್ದರು. “ಏನೇ ಗಾಂಧಾರೀ, ನೀನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡೇ ಇಲ್ಲ” ಎಂದು. ಅವಳು ಕೆಲವೊಮ್ಮೆ ಒಳ್ಳೆಯ ಮೂಡ್‌ನಲ್ಲಿದ್ದಾಗ “ಅವಳು ಕುರುಡ ಧೃತರಾಷ್ಟ್ರನನ್ನು ಕಟ್ಟಿಕೊಂಡ ಮೇಲೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದು” ಎನ್ನುತ್ತಿದ್ದಳು. ಒಂದು ವೇಳೆ ಸಿಟ್ಟು ಬಂದರೆ “ನಾಗ ಕೂಡ ಇದೆ ನನ್ನ ಹೆಸರಲ್ಲಿ. ಕಚ್ಚಿ ಬಿಡ್ತೀನಿ! ಸಾಯ್ತೀರಿ” ಎಂದು ಹೆದರಿಸುತ್ತಿದ್ದಳು.
ಕೊಪ್ಪದಿಂದ ತೀರ್ಥಹಳ್ಳಿಗೆ ಎರಡೂ ಮನೆಯವರ ಓಡಾಟ ಇದ್ದೇ ಇರುತ್ತಿತ್ತು. ಕೊಪ್ಪದಲ್ಲಿ ತಾಯ್ತಂದೆಯರೊಂದಿಗೆ ಇದ್ದ ಅವಳಿಗೆ ಅಪ್ರಮೇಯ ಎಂದರೆ ಬಲು ಇಷ್ಟ. ಏಕೆಂದರೆ ಅವನೇ ಅವಳನ್ನು ಮದುವೆ ಆಗಬೇಕೆಂದು ಅವಳ ತಂದೆ ಮತ್ತು ಅವಳ ಸೋದರತ್ತೆ (ಅಪ್ರಮೇಯನ ತಾಯಿ) ನಿರ್ಧಾರ ಮಾಡಿಬಿಟ್ಟಿದ್ದರು. ಅದು ಅವಳ ಮಂಡೆಯಲ್ಲಿ ಭದ್ರವಾಗಿ ಕೂತುಬಿಟ್ಟಿದ್ದ ವಿಷಯ.
ಅವರು ಮರೆತಿದ್ದೆಲ್ಲಾ ಅಪ್ರಮೇಯನ ತಂದೆಯ ಬಗ್ಗೆ.
ಅಪ್ರಮೇಯನಿಗೆ ಮೂರು ವರ್ಷಗಳಾಗಿದ್ದಾಗ ನಾಗ ಗಾಂಧಾರಿ ಹುಟ್ಟಿದ್ದಳು. ಅಪ್ರಮೇಯನಿಗೆ ತನ್ನ ಸೋದರ ಮಾವನಿಂದಲೇ ಸಂಗೀತಾಭ್ಯಾಸವಾಗಿತ್ತು.
ಅಗಸ್ತ್ಯ ಅಪ್ರಮೇಯನ ತಾಯಿಯ ತಂಗಿಯ ಮಗ. ಅಪ್ರಮೇಯನಿಗಿಂತ ಐದು ವರ್ಷ ಚಿಕ್ಕವನು. ಅವನು ಬೆಂಗಳೂರಿನ ಜಯನಗರದಲ್ಲಿದ್ದ. ಅಪ್ರಮೇಯ ತೀರ್ಥಹಳ್ಳಿಯಲ್ಲಿದ್ದವನು ಆಗಾಗ ಬೆಂಗಳೂರಿಗೆ ಚಿಕ್ಕಮ್ಮನ ಮನೆಗೆ ಬರುತ್ತಿದ್ದ. ನಾಗ ಗಾಂಧಾರಿಯೂ ಸುಮಾರು ಆರು ವರ್ಷಗಳಾದಾಗಿನಿಂದಲೂ ಅಪ್ರಮೇಯನೊಂದಿಗೆ ಅವಳ ಮತ್ತೊಬ್ಬ ಸೋದರತ್ತೆ ಅಗಸ್ತ್ಯನ ಅಮ್ಮನ ಮನೆಗೆ ಬರುತ್ತಿದ್ದಳು.
ಮೂವರೂ ಒಂದೇ ಓರಗೆಯವರು. ಜೊತೆಗೆ ಅಗಸ್ತ್ಯನ ಅಮ್ಮನಿಂದ ಮೂವರಿಗೂ ಸಿನಿಮಾ ಹಾಡುಗಳ ರುಚಿ ಹತ್ತಿತ್ತು.
ರಜೆ ಬಂದಾಗಲೆಲ್ಲಾ ಮೂವರೂ ಸೇರುತ್ತಿದ್ದರು. ಆರರ ನಾಗ ಗಾಂಧಾರಿ, ಹತ್ತರ ಅಪ್ರಮೇಯ ಮತ್ತು ಐದರ ಅಗಸ್ತ್ಯ ಮೂವರೂ ಆಟ ಆಡಿದ್ದೂ ಆಡಿದ್ದೇ.
ಯಾವಾಗ ನಾಗ ಗಾಂಧಾರಿ ಹತ್ತು ವರ್ಷದವಳಾದಳೋ, ಆಗಿನಿಂದ ತುಟಿಗಳ ಮೇಲೆ ಮೀಸೆ ಮೂಡಲೆತ್ತಿಸುತ್ತಿದ್ದ ಅಪ್ರಮೇಯನೆಂದರೆ ಬಲು ಇಷ್ಟ. ಇದಕ್ಕೆ ಅವಳ ಅಪ್ಪನ ಕುಮ್ಮಕ್ಕು ಇತ್ತು. ಅಪ್ರಮೇಯನ ತಾಯಿಯ ಬೆಂಬಲವಿತ್ತು. ಸದಾ ಅವನಿಗೆ ಅಂಟಿಕೊಂಡು ಇರುತ್ತಿದ್ದಳು. ಅಪ್ರಮೇಯನಿಗೂ ಅದು ಕಿಶೋರಾವಸ್ಥೆ. ಅವಳೊಂದಿಗೆ ಓಡಾಡುತ್ತಿದ್ದ. ಅವನಿಗೂ ಅವಳೆಂದರೆ ಇಷ್ಟವಿತ್ತು.
ಮೂವರೂ ಮುಕೇಶನ ಆಯಾ ಹೈ ಮುಝೆ ಫಿರ್ ಯಾದ್ ವೋ ಜಾಲಿಮ್, ಗುಜರಾ ಜಮಾನಾ ಬಚಪನ್ ಕಾ, ಹಾಯ್ ರೆ ಅಕೇಲೆ ಛೋಡ್ ಕೆ ಜಾನಾ ಬಹಳ ಇಷ್ಟವಾದ ಹಾಡು.
ಅದರಲ್ಲಿ ಜೊತೆಗೆ ಆಡಿದ ಉಯ್ಯಾಲೆ ಆಟ, ಜೂಟಾಟ ಎಲ್ಲದರ ಬಗ್ಗೆ ಇದ್ದಿದ್ದರಿಂದ ಅದನ್ನು ಜೋರಾಗಿ ಮೂವರೂ ಹಾಡುತ್ತಿದ್ದರು. ಅಗಸ್ತ್ಯನ ತಾಯಿ ನಗುತ್ತಿದ್ದರು.
“ಓಡಿ ಬಾ ಝೂಟ್, ನನ್ನ ರೀತಿ ರೆಂಬೆ ಹತ್ತಿ ನಿಲ್ಲಬಲ್ಲೆಯಾ, ನನ್ನ ಸಾಟಿ ಕುಂಟೆಬಿಲ್ಲೆ ಆಡಬಲ್ಲೆಯಾ” ಹೀಗೆ ಒಬ್ಬರನ್ನೊಬ್ಬರು ಛೇಡಿಸುತ್ತಾ ಎರಡು ವರ್ಷಗಳು ಕಳೆದರು.
ನಾಗ ಗಾಂಧಾರಿ ಅಪ್ರಮೇಯನನ್ನು ಬಿಡಲಾರದೇ ಹೋದಳು. ಶನಿವಾರ ಮಧ್ಯಾಹ್ನವಾದರೆ ಕೊಪ್ಪದಿಂದ ತೀರ್ಥಹಳ್ಳಿಗೆ ಬಂದುಬಿಡುತ್ತಿದ್ದಳು. ಅಲ್ಲಿ ತುಂಗಾ ನದಿಯ ದಡದಲ್ಲಿ ಇಬ್ಬರೂ ಕೂತು ನೀರಿಗೆ ಕಲ್ಲು ಹೊಡೆಯುತ್ತಾ ಮಾತಾಡುತ್ತಿದ್ದರು.
“ನಿನ್ನ ಹೆಸರೇ ಚೆನ್ನಾಗಿ ಇಟ್ಟಿದ್ದಾರೆ ಮಾವ” ಎಂದು ನಕ್ಕಿದ್ದ ಅಪ್ರಮೇಯ ಒಮ್ಮೆ.
“ಏನಾಗಿದೆ ನನ್ನ ಹೆಸರಿಗೆ?” ಎಂದಿದ್ದಳು ಜರ್ಬಾಗಿ.
“…ಸೋದರಿ ಶಂಕರಿ ಪಾಹಿಮಾಂ” ಎಂದು ರಾಗವಾಗಿ ಹಾಡಿ, “ಇದು ನಾಗ ಗಾಂಧಾರಿ” ಎಂದಿದ್ದ.
“ಲೋ ಅಪ್ರಮೇಯಾ, ಅದು ಸರಸಿಜನಾಭ ಸೋದರಿ, ನಿನ್ನ ಸೋದರಿ ಅಲ್ಲ” ಎಂದಿದ್ದಳು ಗುಡುಗುತ್ತಾ.
“ಅಯ್ಯೋ ಮಂಕೇ, ನೀನು ನನ್ನ ಸೋದರಿ ಅಲ್ಲ. ಸರಸಿಜನಾಭ ಅಂದರೆ ನಾರಾಯಣ, ಅವನ ತಂಗಿ ಅಂದರೆ ಕಾಳಿ, ದುರ್ಗಿ” ಎಂದು ಕಿಸಕ್ಕನೆ ನಗುತ್ತಿದ್ದ.
ಅವಳಿಗೆ ಉರಿಗೋಪ ಬರುತ್ತಿತ್ತು.
“ಪಾರ್ವತಿ, ಗಿರಿಜಾ ಕೂಡ ದೇವಿಯ ಹೆಸರುಗಳು” ಎಂದೆನ್ನುತ್ತಿದ್ದಳು ಅವನಿಗೆ ತಿಳಿಹೇಳುವಂತೆ.
ಇದಾಗಿ ಒಂದು ವರ್ಷದೊಳಗೆ ಅವಳು ಹತ್ತಿರ ಬಂದರೆ, ಅಂಟಿಕೊಂಡು ಕೂರಲು ಹೋದರೆ ನಯವಾಗಿ ಅವಳನ್ನು ದೂರವಿಡಲು ಅವನು ಪ್ರಯತ್ನಿಸತೊಡಗಿದ.
ಅವಳಿಗೆ ಅದು ಕೋಪವನ್ನೂ, ದುಃಖವನ್ನೂ ಉಂಟುಮಾಡುತ್ತಿದ್ದವು. ಅದಕ್ಕೆ ಕಾರಣವನ್ನು ಅವಳು ಕೇಳಿದ್ದರೆ ಅವನು ಹೇಳುತ್ತಿದ್ದನೋ ಇಲ್ಲವೋ ತಿಳಿಯದು.
ಏಕೆಂದರೆ ಅವನ ತಂದೆ ಅವನಿಗೆ ಬೇರೊಂದು ದಾರಿಯನ್ನು ಹುಡುಕಿಟ್ಟಾಗಿತ್ತು.
ಕುಮಾರಾನಂದಸ್ವಾಮಿಯ ಮಹಾನ್ ಭಕ್ತನಾಗಿದ್ದ ಅಪ್ರಮೇಯನ ತಂದೆ. ಯಾವಾಗಲೋ ಒಮ್ಮೆ ಅವರೊಂದಿಗೆ ಮಾತಾಡುತ್ತಾ, “ನಿಮ್ಮ ನಂತರ ನಿಮ್ಮ ಪರಂಪರೆಯನ್ನು ಮುಂದುವರೆಸೋದು ಯಾರು ಸ್ವಾಮೀ?” ಎಂದು ಕೇಳಿದ್ದ ಅಪ್ರಮೇಯನ ತಂದೆ.
ಅಪ್ರಮೇಯನೂ ಅವನ ತಂದೆಯೊಂದಿಗೆ ಕುಮಾರಾನಂದಸ್ವಾಮಿಗಳನ್ನು ನೋಡಲು ಹೋಗಿದ್ದ. ಮಹಾ ತೇಜಸ್ಸುಳ್ಳ ಮೊಗವುಳ್ಳವನು ಅಪ್ರಮೇಯ. ಅವನಿಗಾಗ ಹದಿನಾಲ್ಕು ವರ್ಷಗಳಾಗಿದ್ದವು.
“ಯಾರೂ ಇಲ್ಲ. ನಾನಾಗಿಯೇ ಯಾರನ್ನೂ ಆಶ್ರಮ ಸೇರೆಂದು ಹೇಳುವ ಹಾಗಿಲ್ಲ” ಎಂದರು ಕುಮಾರಾನಂದಸ್ವಾಮಿಗಳು.
“ನಮ್ಮ ಅಪ್ರಮೇಯ ನಿಮಗೆ ಸರಿಹೊಂದುವನೇ?” ಎಂದಿದ್ದ ಅಪ್ರಮೇಯನ ತಂದೆ.
ಅಪ್ರಮೇಯನೂ ಟಕ್ಕನೆ ಅಪ್ಪನೆಡೆಗೆ ನೋಡಿದ.
“ನಿನಗೆ ಇಷ್ಟವೇನಾ ಮಗೂ ಆಶ್ರಮಕ್ಕೆ ಬರುವುದು? ಕಷ್ಟವಿದೆ ಇಲ್ಲಿನ ಜೀವನ. ತ್ರಿಕರಣಶುದ್ಧವಾಗಿ ಕಠಿಣ ಬ್ರಹ್ಮಚರ್ಯ ಮಾಡಬೇಕು, ಅಂದರೆ ಕಾಯಾ ವಾಚಾ ಮನಸಾ” ಎಂದಿದ್ದರು ಗುರುಗಳು.
ಅವುಗಳ ಅರ್ಥ ಅವನಿಗೆ ಆಗಿತ್ತು. ಕಾಮದ ವಾಸನೆ ಅವನ ದೇಹದಲ್ಲೂ, ಮಾತಿನಲ್ಲೂ, ಮನಸ್ಸಿನಲ್ಲೂ ಇರಕೂಡದು. ಕಾಮವೊಂದೇ ಅಲ್ಲ, ಯಾವ ವಸ್ತುವಿನ ಅಭಿಲಾಷೆಯೂ ಅವನಲ್ಲಿ ಇರಕೂಡದು.
ಅದೇನೆನ್ನಿಸಿತೋ ಅಥವಾ ವಿಧಿಬರಹವೇ ಇದೇ ಇತ್ತೋ ಅವನು ಗುರುಗಳ ಮುಂದಿನ ಮುಖ್ಯ ಶಿಷ್ಯನಾಗಲು ಒಪ್ಪಿಗೆ ನೀಡಿದ್ದ.
ಇದನ್ನು ಅಪ್ರಮೇಯನೂ, ಅವನ ತಂದೆಯೂ ಅಪ್ರಮೇಯನ ತಾಯಿಗೆ ಹೇಳಲಿಲ್ಲ. ಅಷ್ಟು ಹೊತ್ತಿಗೆ ಆಕೆಗೆ ತೀರಾ ಖಾಯಿಲೆಯಾಗಿ ಮಲಗಿದ್ದಳು. ಈ ಸಮಯದಲ್ಲಿ ಹೇಳಿ ಆಕೆಯ ಆಯಸ್ಸನ್ನು ಈಗಲೇ ಯಾಕೆ ಮುಗಿಸಬೇಕೆಂದು ನಿರ್ಧರಿಸಿದ್ದರು ತಂದೆ, ಮಗ.
ಆದರೆ ವಿಧಿವಿಲಾಸವನ್ನು ಬಲ್ಲವರಾರು? ಅಪ್ರಮೇಯನ ಹದಿನಾರನೇ ವಯಸ್ಸಾಗಲು ಎರಡು ತಿಂಗಳಿದ್ದವು. ಆ ಸಮಯದಲ್ಲಿ ಅವನ ತಾಯಿ ತೀರಿಕೊಂಡರು. ಮುಂದಿನ ಒಂದು ತಿಂಗಳಲ್ಲಿ ಅವನ ತಂದೆಯೂ ತುಂಗಾ ನದಿಯಲ್ಲಿ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ತೇಲಿ ಹೋದ. ಮೂರು ದಿನಗಳ ನಂತರ ಆತನ ಶವ ದೊರಕಿತ್ತು.
ಕೊಪ್ಪದಲ್ಲಿದ್ದ ನಾಗ ಗಾಂಧಾರಿ ಮತ್ತು ಅವಳ ಅಮ್ಮ ಮನೆಗೆ ಬಾ ಎಂದು ಕರೆದರು.
ಇದ್ದಕ್ಕಿದ್ದಂತೆ ಒಂದು ದಿನ ಅಪ್ರಮೇಯ ಕಾಣೆಯಾದ.
ಎಲ್ಲರೂ ಗಾಬರಿಯಾಗುವರೆಂದು ಅಗಸ್ತ್ಯನಿಗೆ ಮಾತ್ರ ಸಂದೇಶವನ್ನು ಕಳಿಸಿದ್ದ.
ಅವನು ಕುಮಾರಾನಾಂದಸ್ವಾಮಿಗಳ ಬಳಿ ತಲುಪಿ ಅವರಿಂದ ಅನೇಕ ವಿಷಯಗಳನ್ನು ಕಲಿಯುತ್ತಿದ್ದುದರ ಬಗ್ಗೆ ಹೇಳಿದ್ದ.
ಅಗಸ್ತ್ಯನಿಗೆ ಮಹಾ ಕೋಪ ಬಂದಿತ್ತು. ಪ್ರತಿ ಸಲ ಕಾಗದ ಬರೆದಾಗಲೂ ಅಪ್ಪುವನ್ನು ಹೀಯಾಳಿಸಿದ್ದ, ಮೂದಲಿಸಿದ್ದ. ನೀನು ಅಪ್ರಯೋಜಕ, ನಮ್ಮನ್ನು ದೂರ ಮಾಡಿದ್ದೀ. ನಿನಗಿದು ನ್ಯಾಯವಲ್ಲ ಇತ್ಯಾದಿತ್ಯಾದಿ.
ಒಂದು ದಿನ ಇದ್ದಕ್ಕಿದ್ದಂತೆ ನಾಗ ಗಾಂಧಾರಿಯ ಪತ್ರ ಬಂದಾಗ ಅದನ್ನು ಓದಿದ ಅಪ್ರಮೇಯನ ಮನ ನಡುಗಿತು. ಇವಳನ್ನು ನೆನೆಯುತ್ತಿದ್ದರೆ ತನ್ನ ಬ್ರಹ್ಮಚರ್ಯಕ್ಕೆ ಕುತ್ತು ಬರುವುದೆಂದು ಅವಳ ಪತ್ರಗಳನ್ನು ಓದದೇ ಹಾಗೇ ಸುಟ್ಟುಬಿಡುತ್ತಿದ್ದ.
ಕೆಲವು ದಿನಗಳ ನಂತರ ಅಗಸ್ತ್ಯನೂ ಅವಳ ಬಗ್ಗೆ ಬರೆಯುವುದನ್ನು ನಿಲ್ಲಿಸಿದಾಗ ನಿಟ್ಟುಸಿರಿಟ್ಟಿದ್ದ.
ಆದರೆ ಅಗಸ್ತ್ಯನಿಗೆ ತನ್ನ ಮೇಲೆ ಕೋಪವಿರುವುದೆಂದು ಅವನಿಗೆ ಚೆನ್ನಾಗಿ ತಿಳಿದಿತ್ತು. ಏಕೆಂದರೆ ಅಗಸ್ತ್ಯ ಅಪ್ರಮೇಯನನ್ನು ತನ್ನ ಹಿರಿಯಣ್ಣನಾಗಿ ನೋಡಿ, ಅವನಿಂದ ಅನೇಕ ವಿಷಯಗಳನ್ನು ಕಲಿಯಬೇಕೆಂದಿದ್ದ. ಆದರೆ ಅವನನ್ನು ಅವನ ಹನ್ನೊಂದನೇ ವಯಸ್ಸಿನಲ್ಲೇ ತೊರೆದು ಹೋಗಿಬಿಟ್ಟಿದ್ದ ಅಪ್ರಮೇಯ. ಹದಿಮೂರರ ನಾಗ ಗಾಂಧಾರಿಗೆ ಈಗ ಹೊಸ ಹೊಸ ಭಾವನೆಗಳು ಹುಟಿದ್ದವು. ಆ ಸಮಯದಲ್ಲಿ ಅವಳು ಅಪ್ರಮೇಯನ ಇರುವಿಕೆಗಾಗಿ ಹಂಬಲಿಸುತ್ತಿದ್ದಳು.
ಯಾವ ಪತ್ರ ಬರೆದರೂ ಉತ್ತರ ಬರದಿದ್ದುದರಿಂದ ದುಃಖಿತ ಮನದಿಂದ ಸುಮ್ಮನಾಗಿದ್ದಳು.
ಮದುರೈಯಿಂದ ಹೊರಟಾಗ ಅಗಸ್ತ್ಯನಿಗೆ ಫೋನ್ ಕರೆ ಮಾಡಿದ್ದ ಅಪ್ರಮೇಯ. ಅದಕ್ಕೇ ಅವನು ರೈಲ್ವೇ ನಿಲ್ದಾಣಕ್ಕೆ ಬಂದು ಕರೆದೊಯ್ದಿದ್ದ. ಬಹಳ ವರ್ಷಗಳ ನಂತರ ತನ್ನ ಬಾಲ್ಯದ ಒಡನಾಡಿಯನ್ನು ನೋಡಬೇಕೆಂಬ ಚಿಕ್ಕ ಆಸೆ ಎಲ್ಲಿಯೋ ಮಿಣಕ್ ಎಂದಿತ್ತು ಅಪ್ರಮೇಯನಲ್ಲಿ.
ಆದರೆ ಅವನು ನಿರೀಕ್ಷಿರದಿದ್ದುದು ನಾಗ ಗಾಂಧಾರಿಯ ಇರುವಿಕೆಯನ್ನು. ಅವಳೆಲ್ಲೋ ಮದುವೆಯಾಗಿ ಹಾಯಾಗಿ ಪತಿಯ ಮನೆಯಲ್ಲಿರುವಳೆಂದು ಬಗೆದಿದ್ದ. ಈಗ ನೋಡಿದರೆ ಇವಳು ಇನ್ನೂ ಅವಿವಾಹಿತೆಯಾಗಿಯೇ ಉಳಿದುಕೊಂಡಿದ್ದಾಳೆ. ಮೂವತ್ತೆರಡರ ಅವಳಲ್ಲಿ ತಾನಿನ್ನೂ ಇರುವೆನಾ? ತಾನು ವಿವಾಹವಾಗುವ ಸಂಭವವೇ ಇಲ್ಲವೆಂದು ಅವಳಿಗೆ ಹೇಗೆ ತಿಳಿಹೇಳುವುದು?
ಒಂಟಿಯಾಗಿ ಸಿಕ್ಕಿದೊಡನೆ ಅವನನ್ನು “ಯಾಕೆ ನೀನು ಮದುವೆಯಾಗಿಲ್ಲ?” ಎಂದಳು. “ನಾನೂ ಅದೇ ಪ್ರಶ್ನೆ ಕೇಳುತ್ತೇನೆ ನಿನ್ನನ್ನ” ಎಂದ ನಗುತ್ತಾ ಅಪ್ರಮೇಯ.
“ನನ್ನ ಪ್ರಶ್ನೆಗೆ ಉತ್ತರ ಬರಲಿಲ್ಲ” ಎಂದಳು ಕಟುವಾಗಿ.
“ನಾನು ಈ ಜನ್ಮದಲ್ಲಿ ಮದುವೆ ಆಗಲಾರೆ. ನನಗೆ ಅನೇಕ ಸಾಮಾಜಿಕ ಜವಾಬ್ದಾರಿಗಳಿವೆ” ಎಂದ ಅಪ್ಪು. ಅವನ ಧ್ವನಿಯಲ್ಲಿ ಕ್ಷಮಾಪಣೆಯ ಸೋಂಕೂ ಇರಲಿಲ್ಲ.
“ನಾನು ಈ ಜನ್ಮದಲ್ಲಿ ಮದುವೆ ಆಗಲಾರೆ. ನನಗೆ ಅನೇಕ ಸಾಮಾಜಿಕ ಜವಾಬ್ದಾರಿಗಳಿವೆ” ಎಂದಳು ನಾಗ ಗಾಂಧಾರಿ ಅವನ ಮಾತುಗಳನ್ನು ಅನುರಣಿಸುತ್ತಾ.
“ನಿನ್ನ ತಾಯಿ?” ಎಂದ ಕೊಪ್ಪದಲ್ಲಿನ ಅವಳ ಅಮ್ಮನನ್ನು ನೆನೆದು.
“ಹೋದ ವರ್ಷ ತೀರಿಕೊಂಡರು” ಎಂದಳು ಭಾವರಹಿತವಾಗಿ.
ಅಂದರೆ ಇವಳೂ ನನ್ನಂತೆ ತಾಯಿ, ತಂದೆ ಇಲ್ಲದಿರುವವಳು ಎಂದು ಕ್ಷಣಕಾಲ ವ್ಯಥೆಯಾಯಿತು.
ಅವಳು ಸರಕ್ಕೆಂದು ಹೊರಟುಹೋದಳು. ಬಹುಶಃ ಉಕ್ಕಿ ಬಂದ ಅಳುವನ್ನು ಬೇರೆಡೆಗೆ ಹೋಗಿ ಅಳಬೇಕೆಂದಿರಬಹುದು ಎಂದುಕೊಂಡ.
ಅವನಿಗೆ ಅನಿರೀಕ್ಷಿತವಾದ ಅನಪೇಕ್ಷಿತವಾದ ವಾಗ್ಯುದ್ಧ ಅಗಸ್ತ್ಯನೊಂದಿಗೆ ಇದ್ದಕ್ಕಿದ್ದಂತೆ ಆರಂಭವಾಗಿತ್ತು.
ಅದೂ ಅಂದು ಸಂಜೆಯೇ!
ಅವನು ತನ್ನ ರೂಮಿನಲ್ಲಿ ಬಡಾವಣೆಯ ರಂಗಮಂದಿರದಲ್ಲಿ ಪ್ರವಚನ ಕೊಡಲು ಸಿದ್ಧವಾಗುತ್ತಿದ್ದ.
ನಾಲ್ವರು ಶಿಷ್ಯರೂ ಆ ರೂಮಿನ ಹೊರಗೇ ಕೂತಿದ್ದರು. ಅವರಿಗೆ ಈ ಕದನ ಕೇಳಿಸುತ್ತಿತ್ತು. ಆದರೆ ಯಾರೂ ಎದ್ದು ಬರಲು ಧೈರ‍್ಯ ಮಾಡಲಿಲ್ಲ.
“ನೀನು ಮಾಡಿದ್ದು ಸರಿಯಾ?” ಎಂದ ಅಗಸ್ತ್ಯ. ಅವನ ಸ್ವರವು ಅಗತ್ಯಕ್ಕಿಂತ ಹೆಚ್ಚು ಜೋರಿತ್ತು ಎಂಬುದನ್ನು ಗಮನಿಸಿದ ಅಪ್ರಮೇಯ.
“ಏನು ನಾನು ಮಾಡಿದ್ದು?” ಎಂದ ಅಪ್ರಮೇಯ. ಅವನ ಧ್ವನಿಯಲ್ಲಿ ಸಿಡುಕು ಇರಲಿಲ್ಲ. ನಗೆಯ ಧ್ವನಿಯೇ ಜೋರಿತ್ತು.
“ಹೀಗೆ ನಮ್ಮನ್ನೆಲ್ಲಾ ನಡುನೀರಲ್ಲಿ ಬಿಟ್ಟು ಓಡಿಹೋಗಿಬಿಟ್ಟೆ!” ಒಂದು ರೀತಿಯ ಆಪಾದನೆಯಿತ್ತು ಅಗಸ್ತ್ಯನ ಸ್ವರದಲ್ಲಿ.
“ದಯವಿಟ್ಟು ಅಗಸ್ತ್ಯ! ನಾನು ಓಡಿಹೋಗಲಿಲ್ಲ. ನನ್ನ ತಂದೆಯವರ ಮಾತನ್ನು ಪಾಲಿಸಲು ನಾನು ಹೊರಟುಹೋದೆ”
“ಮತ್ತೆ ನಾಗ ಗಾಂಧಾರಿ?” ಎಂದ ಅಗಸ್ತ್ಯ.
ʼಯಾಕೆ ಇವನ ಸ್ವರ ಇಷ್ಟ ಜೋರಾಗಿದೆ?ʼ ಎಂದುಕೊಂಡ ಅಪ್ರಮೇಯ “ನೋಡೂ, ನಾನು ಯಾರಿಗೂ ಮಾತು ಕೊಟ್ಟಿರಲಿಲ್ಲ. ಕೊಟ್ಟಿದ್ದು ನಮ್ಮ ಅಪ್ಪ, ಕುಮಾರಾನಂದಸ್ವಾಮಿಗಳಿಗೆ. ಅದಕ್ಕೇ ನಾನಲ್ಲಿಗೆ ಹೊರಟುಹೋದೆ” ಎಂದ.
“ಅದೆಲ್ಲಾ ಗೊತ್ತಿಲ್ಲ. ಈಗಾಗಲೇ ಹದಿನೇಳು ವರ್ಷ ಆ ಆಶ್ರಮಕ್ಕೆ ಮಣ್ಣು ಹೊತ್ತಿದ್ದೀ. ಇನ್ನು ಸಾಕು. ನಾಗ ಗಾಂಧಾರಿಯನ್ನ ಮದುವೆಯಾಗಿ ಸುಖವಾಗಿರು” ಎಂದ ಜೋರಾಗಿ ಕಿರುಚಿ.
“ದಯವಿಟ್ಟು ಸ್ವಲ್ಪ ಸ್ವರ ತಗ್ಗಿಸು. ಇವೆಲ್ಲಾ ಮಾತಾಡೋದು ನಿನಗೆ ಶೋಭೆಯಲ್ಲ” ಎನ್ನುತ್ತಿದ್ದಂತೆ “ಯಾವುದ ಶೋಭೆಯಲ್ಲ?” ಎನ್ನುತ್ತಾ ನಾಗ ಗಾಂಧಾರಿ ಒಳಗೆ ಬಂದಳು.
ಮದುವೆ, ಆಶ್ರಮ, ಸಂನ್ಯಾಸ ಇತ್ಯಾದಿಗಳ ಬಗ್ಗೆ ವಿಪರೀತ ಮಾತಿನ ಘರ್ಷಣೆ ನಡೆಯಿತು ಮೂವರಲ್ಲೂ.
ಕೊನೆಗೆ ದಢಾರೆಂಬ ಸದ್ದಿನೊಂದಿಗೆ ನಾಗ ಗಾಂಧಾರಿ ಚೀರಿದಳು. “ನಾನು ನಿನ್ನ ಜೊತೆಗೆ ಜೋಷಿಮಠದ ಆಶ್ರಮಕ್ಕೆ ಬರ್ತೀನಿ. ಅದೇನು ಮಾಡ್ತೀಯೋ ಗೊತ್ತಿಲ್ಲ” ಎನ್ನುತ್ತಾ ಹೊರಬಂದು “ಈ ಅಪ್ರಮೇಯನಿಗೆ ಬುದ್ಧಿ ಕಲಿಸ್ತೇನೆ. ಅವನಿಗೆ ಕೆಟ್ಟ ಹೆಸರು ಬರುವಂತೆ ಮಾಡ್ತೀನಿ” ಎಂದು ಹೇಳುತ್ತಾ ಸರಸರನೆ ಅಲ್ಲಿಂದ ತನ್ನ ರೂಮಿಗೆ ಹೋಗಿ ಜೋರಾಗಿ ಬಾಗಿಲು ಹಾಕಿಕೊಂಡಳು.
ಇನ್ನೆರಡು ನಿಮಿಷಕ್ಕೆ ಅಗಸ್ತ್ಯ ಆಚೆ ಬಂದು “ಇವನ ಕೈಲಿ ಇನ್ನು ಏಗೋಕ್ಕಾಗಲ್ಲ. ಆ ನಾಗ ಗಾಂಧಾರೀನೇ ಸರಿ, ಇವನಿಗೆ ಬುದ್ಧಿ ಕಲಿಸೋಕ್ಕೆ” ಎಂದು ಗಟ್ಟಿಯಾಗಿ ಗೊಣಗುತ್ತಾ ತನ್ನ ರೂಮಿಗೆ ಹೋದ.
ನಾಲ್ವರು ಶಿಷ್ಯರೂ ಪರಸ್ಪರ ಮುಖ ಮುಖ ನೋಡಿಕೊಂಡರು.
ಇಬ್ಬರು ಶಿಷ್ಯರ ಮನಸ್ಸಿನಲ್ಲಿ ಒಂದು ಅಭಿಲಾಷೆ ಮೂಡಿತ್ತು.
ನಾಗ ಗಾಂಧಾರಿಯ ಸಹಾಯ ತೆಗೆದುಕೊಂಡು ವಿಗ್ರಹಗಳನ್ನು ಅಪಹರಿಸಬಹುದು!
(ಸಶೇಷ)
ಯತಿರಾಜ್ ವೀರಾಂಬುಧಿ
1 Comment
Sir good twist in the story waiting for next