ಪರಾಭವ ಭಾವನಾ – 7 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ
ಅಗಸ್ತ್ಯನ ಮನೆಯಲ್ಲಿ ನಾಗ ಗಾಂಧಾರಿಯನ್ನು ಕಂಡ ಅಪ್ರಮೇಯನಿಗೆ ತನ್ನ ಹಾಗು ಅವಳ ಬಾಲ್ಯದ ನೆನಪುಗಳು ಮರುಕಳಿಸಿ ಅವಳ ಪ್ರೇಮಪಾಶದಿಂದ ಪಾರಾದ ಬಗೆಯನ್ನು ಚಿಂತಿಸುತಿದ್ದಾಗ ಅಗಸ್ತ್ಯ ವಾಗ್ವಾದಕ್ಕೆ ಬಿದ್ದು ನಾಗ ಗಾಂಧಾರಿಯು ನಿನಗೋಸ್ಕರ ಇನ್ನು ಮದುವೆಯಾಗದೆ ಉಳಿದಿರುವಳು ಎಂದು ಅಪ್ರಮೇಯನಿಗೆ ನೆನಪಿಸಿದ. ಅಪ್ರಮೇಯ ನಿರಾಕರಿಸಿದ್ದಕ್ಕೆ ನಾಗ ಗಾಂಧಾರಿಯು ಸಿಟ್ಟಿನಿಂದ ಕಿರುಚುತ್ತಾ “ನಾನು ನಿನ್ನ ಜೊತೆಗೆ ಜೋಷಿಮಠದ ಆಶ್ರಮಕ್ಕೆ ಬರ್ತೀನಿ. ಅದೇನು ಮಾಡ್ತೀಯೋ ಗೊತ್ತಿಲ್ಲ” ಎನ್ನುತ್ತಾ ಹೊರಬಂದು “ಈ ಅಪ್ರಮೇಯನಿಗೆ ಬುದ್ಧಿ ಕಲಿಸ್ತೇನೆ. ಅವನಿಗೆ ಕೆಟ್ಟ ಹೆಸರು ಬರುವಂತೆ ಮಾಡ್ತೀನಿ” ಎಂದು ಅಗಸ್ತ್ಯನೊಡನೆ ಪ್ರಮಾಣ ಮಾಡುತ್ತಾಳೆ. ಅಪ್ರಮೇಯನ ಶಿಷ್ಯರಲ್ಲೊಬ್ಬ ಇವಳನ್ನು ವಿಗ್ರಹ ಕದಿಯಲು ಬಳಸಿಕೊಳ್ಳಲ್ಲು ತೀರ್ಮಾನಿಸುತ್ತಾನೆ ಮುಂದೆ…

-ಏಳು-

ಮತ್ತೆ ಆ ವಿಷಯವು ನಡೆದೇ ಇಲ್ಲವೆಂಬಂತೆ ಮೂವರೂ ಮಾತಾಡಿದಾಗ ನಾಲ್ವರು ಶಿಷ್ಯರಿಗೂ ಅಚ್ಚರಿ. ತಾವು ಹಿಂದೆ ಕೇಳಿದ್ದು ನಿಜವೋ ಅಥವಾ ಇದೇ ಸತ್ಯವೋ ಎಂಬ ಗಲಿಬಿಲಿ ಅವರಲ್ಲಿ ಉಂಟಾಗಿತ್ತು.

ಆ ಬಯಲು ರಂಗಮಂದಿರವು ಕಿಕ್ಕಿರಿದು ನೆರೆದಿತ್ತು. ಬೆಂಗಳೂರಿನ ವೈವಿಧ್ಯಮಯ ಅಭಿರುಚಿಯ ಜನರ ಬಗ್ಗೆ ತಿಳಿದಿದ್ದ ಅಪ್ರಮೇಯ ಇಂದು ಕೆಲವು ಹೊಸ ಪ್ರಯೋಗ ಮಾಡಬೇಕೆಂದುಕೊಂಡ.

ಜನ ಕಿಕ್ಕಿರಿದು ಸೇರಿದ್ದರು. “ಯಾರೋ ಕನ್ನಡದ ಸ್ವಾಮಿಗಳಂತೆ. ಜೋಷಿ ಮಠದ ಹತ್ತಿರ ಆಶ್ರಮವಂತೆ. ಚೆನ್ನಾಗಿ ಮಾತಾಡ್ತಾರಂತೆ” ಎಂಬ ಸುದ್ದಿ ಅಲ್ಲೆಲ್ಲಾ ಹರಡಿತ್ತು.

ಅಪ್ರಮೇಯ ಅವನ ನಾಲ್ವರು ಶಿಷ್ಯರೊಂದಿಗೆ ವೇದಿಕೆ ಹತ್ತಿದೊಡನೆ ಅಲ್ಲಿ ಮೌನವಾವರಿಸಿತು.

ಅಪ್ರಮೇಯ ಪ್ರವಚನವಾರಂಭಿಸಿದ.

ಕಬೀರ್ ದಾಸ್

“ನಾವು ಭಕ್ತಿಪಂಥದ ಬಗ್ಗೆ ಕೇಳಿದ್ದೇವೆ. ನಮಗೆ ಪುರಂದರದಾಸರು, ಕನಕದಾಸರು, ಜಗನ್ನಾಥದಾಸರು, ವಿಜಯ ದಾಸರು ಹೀಗೆ ಕನ್ನಡದಲ್ಲಿ ಭಕ್ತಿಯ ರಸವನ್ನೇ ಹರಿಸಿದ್ದರು. ಹಾಗೆಯೇ ಉತ್ತರದಲ್ಲಿ ಅನೇಕರಿದ್ದರು. ಉದಾಹರಣೆಗೆ ಕಬೀರ್‌ ದಾಸ್.‌ ಹದಿನೈದನೇ ಶತಮಾನ ಮತ್ತು ಹದಿನಾರನೇ ಶತಮಾನದ ನಡುವೆ ಇದ್ದ ಕಬೀರ್‌ ಭಕ್ತಿಯ ಬಗ್ಗೆ ಒಂದು ವಿಶಿಷ್ಟ ದೋಹಾಗಳನ್ನು ಬರೆದಿದ್ದರು. ದೋಹಾ ಎಂದರೆ ದ್ವಿಪದಿಗಳೆಂದು ಹೆಸರು” ಎಂದು ಹೇಳಿ ತನ್ನ ಶಿಷ್ಯ ಕಬೀರ್‌ದಾಸ್‌ನತ್ತ ನೋಡಿದ ಅಪ್ರಮೇಯ.

ಗಂಟಲು ಸರಿಪಡಿಸಿಕೊಂಡು ಕಬೀರ್‌ದಾಸ್‌ “ಗುರು ಗೋವಿಂದ ದೋನೋ ಖಡೆ, ಕಾಕೆ ಲಾಗೂ ಪಾಯ್|‌ ಬಲಿಹಾರೀ ಗುರು ಅಪನೋ, ಗೋವಿಂದ್‌ ದಿಯೋ ಮಿಲಾಯ್” ಎಂದು ರಾಗವಾಗಿ ಹಾಡಿದ.

“ಇದನ್ನು ಉತ್ತರಭಾರತದ ಅನೇಕ ಪಠ್ಯಪುಸ್ತಕಗಳಲ್ಲಿ ಕೂಡ ಕಾಣಬಹುದು. ಇದರ ಅರ್ಥವು ಬಹಳ ಚೆನ್ನಾಗಿದೆ” ಎಂದು ಆರಂಭಿಸಿದ ಅಪ್ರಮೇಯ. “ಗುರು ಮತ್ತು ಭಗವಂತ ಇಬ್ಬರೂ ಎದುರಿಗೆ ನಿಂತಿದ್ದಾರೆ. ಆಗ ನಾನು ಯಾರ ಪಾದವನ್ನು ಮೊದಲು ಸ್ಪರ್ಶ ಮಾಡಬೇಕು? ಆದರೆ ಗುರುವೇ ನೀವೇ ನನಗೆ ಹೇಳಿದ್ದೀರಿ, ದೇವರು ದೊಡ್ಡವನು ಎಂದು”.

ಮತ್ತೆ ಕಬೀರ್‌ದಾಸ್‌ ಹಾಡಿದ. “ಐಸೀ ವಾಣೀ ಬೋಲಿಯೇ, ಮನ್‌ ಕಾ ಆಪಾ ಖೋಯ್‌, ಔರನ್‌ ಕೋ ಶೀತಲ್‌ ಕರೇ, ಆಪಹು ಶೀತಲ್‌ ಹೋಯೇ”

“ಮಾತಿಗಿಂತ ಕ್ರೂರವಾದದ್ದು ಮತ್ತೊಂದಿಲ್ಲ. ಏಕೆಂದರೆ ಮಾತಿನಿಂದ ನಾವು ಒಬ್ಬರನ್ನು ಕೊಂದೇ ಬಿಡಬಹುದು. ಕಬೀರ ಈ ದೋಹಾದಲ್ಲಿ ನಿಮ್ಮ ಮನವು ಕಳೆದುಹೋಗುವಂತಹ ಮಾತನ್ನಾಡಿರಿ. ನೀವು ಶಾಂತಿಯನ್ನು ಮಾತ್ರ ತೋರಿಸಿ. ನಿಮ್ಮ ಅಹಂ ಅನ್ನು ತೋರಿಸಬೇಡಿ, ಕೊಚ್ಚಿಕೊಳ್ಳಬೇಡಿ, ಇತರರ ಕಷ್ಟವನ್ನು ನೋಡಿ ಹಿಗ್ಗಬೇಡಿ, ಯಾರಿಗಾದರೂ ನೋವಾಗುವಂತಹ ಅಪಾಯವಾಗುವಂತಹುದೇನನ್ನೂ ನಿಮ್ಮ ಮಾತಿಗೆ ಅಂಟಿಸಬೇಡಿ”

ಮತ್ತೆ ಕಬೀರ್‌ ಹಾಡಿದ. “ಕಾಲ್‌ ಕರೇ ಸೋ ಆಜ್‌ ಕರ್‌, ಆಜ್‌ ಕರೈ ಸೋ ಅಬ್‌

ಪಲ್‌ ಮೇ ಪರಲಯ ಹೋಯಗೀ ಬಹುರಿ ಕರೇಗಾ ಕಬ್”‌

“ಇದಂತೂ ಅತ್ಯಂತ ಜನಪ್ರಿಯ ದೋಹಾ. ನಾವು ಯಾವಾಗಲೂ ಮಾಡಲೇಬೇಕಾದ ಕೆಲಸಗಳನ್ನು ಮುಂದೂಡುತ್ತಿರುತ್ತೇವೆ. ನಾಳೆ ಮಾಡಬೇಕಾದುದನ್ನು ಇಂದೇ ಮಾಡು. ಇಂದು ಮಾಡಬೇಕಾದುದನ್ನು ಈಗ ಮಾಡು. ನೀನು ಗುರುತಿಸುವ ಮುನ್ನವೇ ಸಮಯದ ಕ್ಷಣಗಳು ಜಾರಿ ಹೋಗುತ್ತಿರುತ್ತವೆ. ಒಮ್ಮೆ ಹೋದ ಕ್ಷಣ ಮರಳಿ ಬರುವುದಿಲ್ಲ. ನೀ ಮಾಡಬೇಕಾದ ಕೆಲಸ ಮಾಡಲ್ಪಡದೇ ಹಾಗೇ ಎಂದೆಂದಿಗೂ ಉಳಿದುಬಿಡುತ್ತದೆ”

ಶ್ರೋತ್ರುಗಳಿಗೆ ಇದು ಬಹಳವೇ ಸಂತೋಷ ತಂದಿದ್ದವು.

ಹೀಗೇ ಅನೇಕ ಉದಾಹರಣೆಗಳನ್ನು ಹೇಳುತ್ತಾ ಕಬೀರನ ಚರಿತ್ರೆಯನ್ನೂ ವಿವರಿಸಿದ್ದ ಅಪ್ಪು.

ನಂತರ “ಕಹತ ಕಬೀರಾ ಸುನೋ ಭೈ ಸಾಧು-ಎಂಬ ಕೊನೆಯ ಪಲ್ಲವಿಯನ್ನುಳ್ಳ ಹಲವು ಹಾಡುಗಳು ನಮಗೆಲ್ಲ ಪರಿಚಿತವಾಗಿವೆ. ಬೆತ್ತಲೆ ನಡೆದಾಡಿ ಸಾಯುಜ್ಯ ಪಡೆಯುವುದಾದರೆ ಅರಣ್ಯದ ಮೃಗಗಳೆಲ್ಲ ಮುಕ್ತ ಜೀವಿಗಳೆ. ಬೆತ್ತಲೆ ನಡೆದೂ ಇಲ್ಲ; ತೊಗಲನ್ನು ಹೊದೆದೂ ಏನೂ ಫಲವಿಲ್ಲ. ಒಳಗೆ ದೈವಸಿದ್ಧಿ ಆಗಬೇಕು. ಇಂದ್ರಿಯ ಸುಖವನ್ನು ಕಾಣದವ ಮುಕ್ತನೆನ್ನುವುದಾದರೆ ಷಂಡರು ಷಂಡರಾದ ಕಾರಣದಿಂದಲೆ ಬ್ರಹ್ಮವನ್ನು ಮುಟ್ಟಿರಬೇಕು. ಕಬೀರ ಹೇಳುತ್ತಾನೆ, ಕೇಳಿ, ಸಾಧು ಸಹೋದರರೆ ಭಗವಂತನ ಪಾವನ ನಾಮದ ಮೂಲಕ ಹೊರತು ಯಾರಿಗೂ ಮುಕ್ತಿ ದೊರಕಿಲ್ಲ. ಇವೆಲ್ಲವೂ ಕಬೀರ ಮಹಾತ್ಮನ ಕೆಲವು ವಾಣಿಗಳು” ಎಂದು ಹೇಳಿ “ಕಬೀರನ ಅತ್ಯಂತ ಜನಪ್ರಿಯ ತತ್ವದೊಂದಿಗೆ ಈ ಪ್ರವಚನಕ್ಕೆ ಮಂಗಳ ಹಾಡುತ್ತೇನೆ” ಎಂದ.

ಕಬೀರ್‌ದಾಸ್‌ “ ಪೋಥೀ ಪಢೀ ಪಢೀ ಜಗ ಮುವಾ ಪಂಡಿತ್‌ ಭಯಾನ ಕೋಯ

ಢಾಯೀ ಆಖರ್‌ ಪ್ರೇಮ್‌ ಕಾ ಪಢೇ ಸೋ ಪಂಡಿತ್‌ ಹೋಯ್‌” ಎಂದು ಹಾಡಿದಾಗ ಅಪ್ರಮೇಯ, “ಅರ್ಥಾತ್‌, ಇಡೀ ಪ್ರಪಂಚವು ಅನೇಕ ಗ್ರಂಥಗಳನ್ನು ಓದುವುದರಲ್ಲಿ ಮಗ್ನವಾಗಿದೆ. ಆದರೆ ಯಾರೂ ಪಂಡಿತರಾಗಿಲ್ಲ ಯಾರು ಪ್ರೇಮವೆಂಬ ಎರಡೂವರೆ ಅಕ್ಷರವನ್ನು ಅರ್ಥ ಮಾಡಿಕೊಳ್ಳುವರೋ ಅವರು ಜ್ಞಾನವನ್ನು ಪಡೆಯುತ್ತಾರೆ” ಎಂದು ಹೇಳಿ ಮುಗುಳ್ನಕ್ಕು, “ವಿಶ್ವಪ್ರೇಮ ಬಹಳ ಮುಖ್ಯ. ನಾನು ಚೆನ್ನಾಗಿರಬೇಕು. ಪಕ್ಕದವನು ಚೆನ್ನಾಗಿರಕೂಡದು. ಅವನ ಎರಡು ಕಣ್ಣು ಹೋಗಲು ನನ್ನ ಒಂದು ಕಣ್ಣು ಹೋಗಬೇಕೆಂದರೆ ಆ ಒಂದು ಕಣ್ಣು ಕಳೆದುಕೊಳ್ಳಲು ನಾನು ಸಿದ್ಧ ಎಂದು ಹೇಳುವವರಲ್ಲಿ ಪ್ರೇಮದ ಬಗ್ಗೆ ಏನು ಮಾತನಾಡಿ ಏನು ಪ್ರಯೋಜನ? ಆದ್ದರಿಂದ ಪ್ರೇಮದಿಂದಿರಿ, ಪ್ರೇಮವನ್ನು ಹರಡಿ…”

ಅವನು ಈ ಮಾತು ಹೇಳುತ್ತಿದ್ದಂತೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ನಾಗ ಗಾಂಧಾರಿ ಒಮ್ಮೆ ತುಟಿ ಸೊಟ್ಟ ಮಾಡಿದಳು. ಅವಳನ್ನು ಆ ಕ್ಷಣದಲ್ಲಿ ಗಮನಿಸಿದ್ದ ಅಪ್ರಮೇಯ ಮನದಲ್ಲೇ ನಕ್ಕ. ʼಓಹೋ, ವಿಶ್ವಕ್ಕೆಲ್ಲಾ ಪ್ರೇಮ ಹಂಚುವ ಇವನು ನನ್ನ ಬಗ್ಗೆ ಅಕರಾಸ್ಥೆ ತೋರುತ್ತಿಲ್ಲ ಎಂದುಕೊಳ್ಳುತ್ತಿದ್ದಾಳೆʼ ಎಂದುಕೊಳ್ಳುತ್ತಾ, ಸಭಿಕರನ್ನು ನೋಡುತ್ತಾ, “ನಾವೂ ಬದುಕೋಣ. ಇತರರನ್ನೂ ಬದುಕಲು ಬಿಡೋಣ. ಆಗ ಪ್ರಪಂಚವು ಒಂದು ಸುಂದರವಾದ ಜಾಗ. ಶುಭಂ ಭೂಯಾತ್”‌ ಎಂದು ಹೇಳಿ ಸಭೆಗೆ ನಮಸ್ಕರಿಸಿ ಎದ್ದು ನಿಂತ.

ಸಭಿಕರು ಬಹಳ ಹೊತ್ತು ಚಪ್ಪಾಳೆ ತಟ್ಟಿದರು. ಇದೊಂದು ಹೊಸ ರೀತಿಯ ಅನುಭವ ಅವರಿಗೆ.  

ಅಗಸ್ತ್ಯ ಕಾರು ತರಲು ಹೋದಾಗ ಒಬ್ಬ ಶಿಷ್ಯ ರಂಗಮಂದಿರದ ಪಕ್ಕದಲ್ಲಿ ಕತ್ತಲಿದ್ದ ಜಾಗಕ್ಕೆ ಹೋಗಿ ನಂಬರೊಂದನ್ನು ಡಯಲ್‌ ಮಾಡಿದ.

ನಾಯಕ್‌ನ ಮತ್ತೊಬ್ಬ ಚೇಲಾ ಫೋನೆತ್ತಿದ.

“ರಾಮೇಶ್ವರದಲ್ಲಂತೂ ಆಗಲಿಲ್ಲ. ಮದುರೈನಲ್ಲೂ ಆಗಲಿಲ್ಲ. ಮುಂದೆ ಎಲ್ಲಿ ಹೋಗ್ತಾನಂತೆ ನಿಮ್ಮ ಗುರು?” ಎಂಬ ವ್ಯಂಗ್ಯ ಕೇಳಿ ಬಂದಾಗ ಮುಖ ಕಿವಿಚಿ, “ಆದಷ್ಟು ಬೇಗ ವಿಗ್ರಹಗಳನ್ನು ಅವರಿಂದ ಕದಿಯುತ್ತೀನಿ” ಎಂದು ಹೇಳಿ ವೇಗವಾಗಿ ಉಳಿದವರನ್ನು ಸೇರಿಕೊಂಡ.

ಅವನ ಗೈರುಹಾಜರಿಯನ್ನು ಅವರಲ್ಲಿ ಯಾರೂ ಗುರುತಿಸಲಿಲ್ಲವೆಂದು ಅವನಿಗೆ ನಿರಾಳವಾಯಿತು.

ಅವನೂ, ಇನ್ನೊಬ್ಬ ಶಿಷ್ಯನೂ ಆಲೋಚಿಸುತ್ತಿದ್ದರು. ಹೇಗಾದರೂ ನಾಗ ಗಾಂಧಾರಿಯನ್ನು ತಮ್ಮ ಕಡೆಗೆ ಸೆಳೆದುಕೊಂಡು ವಿಗ್ರಹಗಳನ್ನು ಕದಿಯಬೇಕು ಎಂದುಕೊಂಡರು.

ಅಪ್ರಮೇಯ ಅಂದು ಬಹಳವೇ ಆಯಾಸಗೊಂಡಿದ್ದ. ಕೆಲವು ಹಣ್ಣಿನ ಹೋಳುಗಳು ಮತ್ತು ಹಾಲು ಕುಡಿದು ಮಲಗಿಬಿಟ್ಟ.

ಅವನ ಬಳಿ ಹೋಗಲು ಬೆದರಿದ ನಾಲ್ವರೂ ಆ ಮನೆಯ ದೊಡ್ಡ ಹಾಲ್‌ನಲ್ಲಿ ಮಲಗಿದರು.

ಮರುದಿನ ಬೆಳಗ್ಗೆ ಮತ್ತೊಂದು ಜಾಗದಲ್ಲಿ ಪ್ರವಚನವಿತ್ತು.

“ಇದೊಂದೇ ಅಗಸ್ತ್ಯ. ಆಮೇಲೆ ನಾನು ಹೈದರಾಬಾದ್‌ ಕಡೆಗೆ ಹೋಗಬೇಕು” ಎಂದು ಅಪ್ರಮೇಯ ಹೇಳುತ್ತಿದ್ದುದು ನಾಲ್ವರು ಶಿಷ್ಯರ ಕಿವಿಗಳಿಗೂ ಬಿದ್ದಿತು. ಓಹೋ, ಇದು ಬಹಳ ದೀರ್ಘ ಪ್ರಯಾಣ ಎಂದುಕೊಂಡರು ಇಬ್ಬರು ಒಳ್ಳೆಯ ಶಿಷ್ಯರು. ಒಳಸಂಚು ಮಾಡುತ್ತಿದ್ದ ಉಳಿದಿಬ್ಬರು ಶಿಷ್ಯರು ನಿಟ್ಟುಸಿರಿಟ್ಟರು. ತಮಗೆ ವಿಗ್ರಹಗಳನ್ನು ಕದಿಯಲು ಮತ್ತಷ್ಟು ಸಮಯ ಸಿಗುತ್ತದೆ ಎಂದು ಅವರಿಗೆ ಸಂತಸ.

“ಸರಿ, ನಿನ್ನಿಷ್ಟ! ನಾನಂತೂ ನಿನ್ನ ತಂಟೆಗೆ ಬರೋಲ್ಲ. ಈ ಪ್ರವಚನ ಏರ್ಪಡಿಸಿದ ತಪ್ಪಿಗೆ ಬರ್ತೀನಿ. ಆಮೇಲೆ ನೀನುಂಟು, ನಿನ್ನ ಶಿಷ್ಯರುಂಟು” ಎಂದು ಗಟ್ಟಿಯಾಗಿ ಹೇಳಿದ ಅಗಸ್ತ್ಯ.

ಮರುದಿನ ಬೆಳಗ್ಗೆ ತುಲಸೀದಾಸ್‌ನನ್ನು ಕರೆದು “ಈವತ್ತು ನೀನು ಹಾಡಬೇಕು” ಎಂದು ಹೇಳಿದ ಅಪ್ರಮೇಯ ಅವನು ಹಾಡಬೇಕಾದ ಕೆಲವು ಚೌಪಾಯಿಗಳ (ನಾಲ್ಕು ಸಾಲಿನ ಪದ್ಯಗಳು) ಬಗ್ಗೆ ಹೇಳಿದ.

ಹಾಲ್‌ನಲ್ಲಿ ಜನರು ಕಿಕ್ಕಿರಿದಿದ್ದರು. ಅದೇ ಮಾತು ಇಲ್ಲಿಯೂ. ಉತ್ತರ ಭಾರತದಲ್ಲಿರುವ ಕನ್ನಡದ ಸ್ವಾಮಿಗಳು.

“ಸಂತ ತುಲಸೀದಾಸರ ಬಗ್ಗೆ ಒಂದಿಷ್ಟು ಅರಿಯೋಣ” ಎಂದ ಸಭೆಗೆ ವಂದಿಸಿದ ನಂತರ.

ಅಪ್ಪುವಿನ ಶಿಷ್ಯ ತುಲಸೀದಾಸ್‌, “ಕಲ್‌ಯುಗ್‌ ಕೇವಲ ನಾಮ ಆಧಾರಾ, ಸುಮಿರ್‌ ಸುಮಿರ್‌ ನರ ಉತರಾಹೀ ಪಾರಾ” ಎಂದು ಬಹು ಸುಶ್ರಾವ್ಯವಾಗಿ ಹಾಡಿದ.

“ಅರ‍್ಥಾತ್…” ಎಂದು ಆರಂಭಿಸಿದ ಅಪ್ರಮೇಯ, “ಈ ಕಲಿಯುಗದಲ್ಲಿ ನಮಗೆ ಆಧಾರವೆಂದರೆ ಭಗವಂತನ ನಾಮವೊಂದೇ. ಕೇವಲ ನಾಮವನ್ನು ಕೇಳುವುದರಿಂದ, ಜಪಿಸುವುದರಿಂದ ಮಾನವನು ಭವಸಾಗರದಿಂದ ಹೊರಬೀಳುತ್ತಾನೆ.  ನಾಮ ಜಪದ ಬಗ್ಗೆ ಯಾವುದೇ ವಿಧಿ ವಿಧಾನವಾಗಲೀ, ದೇಶ, ಕಾಲಾವಸ್ಥೆಯ ಬಂಧವಾಗಲೀ ಇಲ್ಲ. ಯಾವುದೇ ರೀತಿಯಲ್ಲಿ ಯಾವುದಾದರೂ ಅವಸ್ಥೆಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಎಲ್ಲಾದರೂ ಸರಿಯೇ ಎಂತಹ ನಾಮವನ್ನಾದರೂ ಜಪಿಸಬಹುದು. ಈ ನಾಮ ಜಪದಿಂದ ಪ್ರತಿಯುಗದಲ್ಲಿಯೂ ಭಕ್ತರಿಗೆ ಒಳ್ಳೆಯದಾಗಿದೆ ಎಂದಿದ್ದಾರೆ ಸಂತ ತುಲಸೀದಾಸರು”  ಎಂದ.

ನಂತರ “ಅವರ ಬಗ್ಗೆ ಒಂದು ಕುತೂಹಲದ ಪ್ರತೀತಿ ಇದೆ. ಅವರಿಗೆ ಮದುವೆಯಾದ ಹೊಸತು. ಹೆಂಡತಿ ತವರಿಗೆ ಹೊರಟುಹೋಗಿದ್ದಳು. ಅವಳನ್ನು ಆಗಲೇ ನೋಡಬೇಕೆಂಬ ಉತ್ಕಟೇಚ್ಛೆ ಹುಟ್ಟಿ ಮನೆಯಿಂದ ಹೊರಟರು. ವಿಪರೀತ ಜೋರಾದ ಮಳೆ. ಪ್ರವಾಹದಲ್ಲಿ ಈಜಿಕೊಂಡು ಹೋದರಂತೆ. ಹಾವೊಂದನ್ನು ಹಗ್ಗವೆಂದು ಹಿಡಿದರಂತೆ. ಕೊನೆಗೂ ಅವಳ ಮನೆ ಸೇರಿದಾಗ ಅವಳು ಏಕೆ ಬಂದಿರಿ ಇಷ್ಟು ಮಳೆಯಲ್ಲಿ? ಎಂದಳಂತೆ. ನಿನ್ನನ್ನು ನೋಡಲು ಬಂದೆ ಎಂದರು. ಯಾಕೆ? ನಾಳೆ ಮಳೆ ಕಳೆದ ನಂತರ ಬರಬಹುದಿತ್ತಲ್ಲಾ? ಎಂದು ಅವಳು ಕೇಳಿದಾಗ ನಿನ್ನ ಮೇಲೆ ಅಷ್ಟು ಪ್ರೇಮ ನನಗೆ ಎಂದರಂತೆ ಭಾವುಕತೆಯಿಂದ. ಅವಳಾಗ ಅವರತ್ತ ಅನುಕಂಪದಿಂದ ನೋಡಿ, ಇಷ್ಟು ಪ್ರೇಮದ ಅರ್ಧವನ್ನು ನೀವು ಆ ರಾಮನಲ್ಲಿ ತೋರಿಸಿದ್ದರೆ ಅವನು ಇಷ್ಟು ಹೊತ್ತಿಗೆ ನಿಮಗೆ ಒಲಿದಿರುತ್ತಿದ್ದ ಎಂದಳಂತೆ. ಅದೇ ಅವರು ರಾಮಚರಿತ ಮಾನಸ ಬರೆಯಲು ಪ್ರೇರಣೆಯಾಯಿತೆನ್ನುತ್ತಾರೆ” ಎಂದು ತುಲಸೀದಾಸ್‌ನತ್ತ ನೋಡಿದ.

ಅವನು “ಶ್ರೀ ರಾಮಚಂದ್ರ ಕೃಪಾಲು ಭಜನಮ ಹರಣ ಭವಭಯ ದಾರುಣಂ. ನವ ಕನ್ಜಲೋಚನ ಪಾದ ಕಂಜಾರುಣಮ್” ಎಂದು ಇಡೀ ಭಜನ್‌ ಹಾಡಿದ.

ಅಪ್ರಮೇಯ ಅದನ್ನು ವಿವರಿಸುತ್ತಾ, “ದಯಾಳು ಶ್ರೀರಾಮನನ್ನು ಆರಾಧಿಸು. ಈಗ ಲೋಕೋತ್ತರ ಪ್ರಪಂಚದ ಭಯವನ್ನು ನಿವಾರಿಸುತ್ತಾನೆ. ಈತನ ಕಣ್ಣುಗಳು ತಾಜಾ ಕಮಲಗಳಂತಿವೆ. ಈತ ಕಮಲ ವದನ. ಈತನ ಕೈಗಳು ಕಮಲದಂತಿವೆ. ಈತನ ಪಾದಗಳು ಕಮಲದಂತಿವೆ…” ಎಂದು ಇಡೀ ಭಜನೆಯನ್ನು ವಿವರಿಸಿದ.

ರಾಮನ ಭಕ್ತರಿಗಂತೂ ಪಾರವಶ್ಯದ ಮೇಲ್ಮಟ್ಟವನ್ನು ಮುಟ್ಟಿದಂತಾಗಿತ್ತು.

“ಅವರ ಕೆಲವು ಚೌಪಾಯಿಗಳನ್ನು ನೋಡೋಣ” ಎಂದು ತುಲಸೀದಾಸ್‌ನತ್ತ ನೋಡಿದ.

ಸುತ ದಾರಾ ಅರು ಲಕ್ಷ್ಮಿ ಪಾಪೀ ಘರ್‌ ಭೀ ಹೋಯ ಸಂತ ಸಮಾಗಮ ಹರಿ ಕಥಾ ತುಲಸೀ ದುರ್ಲಭ ದೋಯ” ಎಂದು ಅವನು ಹಾಡಿದ ಮೇಲೆ, “ಎಲ್ಲಿನ ಹೆಂಡತಿ, ಮಗ ಮತ್ತು ಧನಸಂಪತ್ತು? ಇದು ಪಾಪಿ ಮನುಷ್ಯನ ಬಳಿಯೂ ಇರಬಹುದು. ಆದರೆ ಸಂತರೊಂದಿಗಿನ ಸತ್ಸಂಗ ಮತ್ತು ಪ್ರಭುವಿನ ಕಥೆ, ಹರಿಯ ಬಗ್ಗೆ ಚರ್ಚೆ ಈ ಭೌತಿಕ ಜಗತ್ತಿನಲ್ಲಿ ದುರ್ಲಭ”

ಇವರ ಮಾತುಗಳನ್ನು ಕೇಳುತ್ತಿದ್ದ ನಾಯಕ್‌ ಕಡೆಯ ಲೋಕಲ್‌ ರೌಡಿ ಒಮ್ಮೆ ಅಗಸ್ತ್ಯನ ಮನೆಗೆ ಹೋಗಿ ಅಲ್ಲಿ ವಿಗ್ರಹಗಳನ್ನೇಕೆ ಹುಡುಕಬಾರದೆಂದು ನಿರ್ಧರಿಸಿ ಅಲ್ಲಿಗೆ ವೇಗವಾಗಿ ಬೈಕ್‌ ಹತ್ತಿ ಹೋದ.

ಆದರೆ ಅಲ್ಲಿ ಅವನಿಗೆ ನಿರಾಶೆ ಕಾದಿತ್ತು…

ಕಲಿಯುಗ ಕೇವಲ ನಾಮ ಆಧಾರಾ, ಸುಮಿರ ಸುಮಿರ ನರ ಉತರಾಹಿ ಪಾರಾ” ಎಂದು ತುಲಸೀದಾಸ್‌ ಹಾಡಿದ.

“ಈ ಕಲಿಯುಗದಲ್ಲಿ ಭಗವಂತನ ಹೆಸರೇ ಆಧಾರ. ಕೇವಲ ನಾಮವನ್ನು ಕೇಳಿಸಿಕೊಳ್ಳುವುದರಿಂದ, ಜಪಿಸುವುದರಿಂದ ಭವಸಾಗರದಿಂದ ಮನುಷ್ಯ ಹೊರಬೀಳುತ್ತಾನೆ” ಎಂದು ಹೇಳಿದ ಅಪ್ರಮೇಯ, “ಇದು ನಿಮಗೆ ಕೇವಲ ಕೆಲವು ಮಾದರಿಗಳು. ಏಕೆನ್ನುವಿರಾ? ಇವೆಲ್ಲವೂ ಸಾಗರದೋಪಾದಿಯಲ್ಲಿ ಹೇರಳವಾಗಿವೆ. ಒಮ್ಮೆ ಇದರ ರುಚಿ ಹತ್ತಿದರೆ ನೀವೇ ಇದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ ಓದಲೆಂಬ ಅಭಿಲಾಷೆ ನನ್ನದು. ಏಕೆಂದರೆ ಈಗಿನ ಕಾಲದಲ್ಲಿ ಬಲು ಮುಖ್ಯವಾಗಿ ಬೇಕಾಗಿರುವುದು ಪರಾನುಕಂಪ. ಅದಿಲ್ಲದೇ ಮನುಷ್ಯರು ಉದಾಸೀನ ತೋರುತ್ತಾ ಇತರರ ಬಗ್ಗೆ ಸಂಪೂರ್ಣ ನಿರ‍್ಲಕ್ಷ್ಯ ತೋರುತ್ತಿರುವುದು ಅಪಾಯಕಾರಿಯಾದ ಬೆಳವಣಿಗೆ” ಎಂದ ಅಪ್ರಮೇಯನ ‍ಧ್ವನಿಯಲ್ಲಿ ವ್ಯಥೆ ತುಂಬಿತ್ತು.

ಮನೆಗೆ ಬರುವ ವೇಳೆಗೆ ಅಗಸ್ತ್ಯ ಕಾರನ್ನು ವೇಗವಾಗಿ ಓಡಿಸಿದ. ಏಕೆಂದು ನೋಡಿದಾಗ ಮನೆಯ ಗೇಟಿನಲ್ಲಿ ಪೊಲೀಸರು ನಿಂತಿದ್ದರು.

“ಏನಾಯಿತು?” ಎಂದ ಅಗಸ್ತ್ಯ.

“ನೀವಿಲ್ಲದಿದ್ದಾಗ ಯಾರೋ ಒಳಗೆ ಎಂಟರ್‌ ಆಗಲು ನೋಡಿದ್ದಾರೆ. ನಿಮ್ಮ ಮನೆಯ ಅಲಾರ್ಮ್‌ ಹತ್ತಿರದಲ್ಲಿರೋ ನಮ್ಮ ಪೊಲೀಸ್‌ ಸ್ಟೇಷನ್‌ನಲ್ಲಿ ರಿಂಗ್‌ ಆಯಿತು. ತಕ್ಷಣ ಇಲ್ಲಿಗೆ ಬಂದೆವು. ಯಾರೋ ಬೈಕ್‌ ಹತ್ತಿ ವೇಗವಾಗಿ ಹೊರಟುಹೋದ” ಎಂದ ಒಬ್ಬ ಪೊಲೀಸ್.‌

ಅಪ್ರಮೇಯ ಒಮ್ಮೆ ತನ್ನ ವಿಗ್ರಹಗಳನ್ನು ನೆನೆದ.

ಇಲ್ಲಿಂದ ಹೊರಟುಬಿಡಬೇಕು, ಇಲ್ಲದಿದ್ದರೆ ಮತ್ತೆ ಇಂತಹ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.

ಮನೆಯ ಗೇಟ್‌ ಹತ್ತಿದಾಗ ಅಲಾರಂ ಹೊಡೆದಿದ್ದಿದರಿಂದ ನಾಯಕ್‌ನ ಚೇಲಾ ಗೇಟ್‌ ಹಾರಿ, ಬೈಕ್‌ ಸ್ಟಾರ್ಟ್‌ ಮಾಡಿ ವೇಗವಾಗಿ ಹೊರಟುಹೋಗಿದ್ದ.

ಛೇ! ನಾಳೆ ಮತ್ತೆ ಬೇರೆ ರೀತಿ ಪ್ರಯತ್ನಿಸಬೇಕು!

ಅಪ್ರಮೇಯನ ಶಿಷ್ಯನೊಬ್ಬ ನಿರಾಸೆಗೊಂಡ. ಈ ಪ್ರಯತ್ನ ಇನ್ನೂ ಎಷ್ಟು ಸಲ ಆಗಬೇಕು?

(ಸಶೇಷ)

ಯತಿರಾಜ್‌ ವೀರಾಂಬುಧಿ

Related post

Leave a Reply

Your email address will not be published. Required fields are marked *