ಪರಾಭವ ಭಾವನಾ – 8 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ
ಅಪ್ರಮೇಯ ಬೆಂಗಳೂರಿನ ಎರಡು ಕಡೆಯ ಬಯಲು ಮಂದಿರದಲ್ಲಿನ ಪ್ರವಚನದಲ್ಲಿ ಒಮ್ಮೆ ಸಂತ ಕಬೀರ್ ಹಾಗು ಇನ್ನೊಮ್ಮೆ ಸಂತ ತುಳಸಿ ದಾಸರ ಬಗ್ಗೆ ಅವರುಗಳು ರಚಿಸಿದ ಹಾಡುಗಳ ಮೂಲಕ ಮಹತ್ವವನ್ನು ಒತ್ತಿ ಹೇಳುತ್ತಾನೆ. ನೆರೆದಿದ್ದ ಜನರೆಲ್ಲರಿಗೂ ಹೊಸದಾದ ಅನುಭವವಾಗುತ್ತದೆ. ಇದರ ಮದ್ಯೆ ಅಪ್ರಮೇಯ ಶಿಷ್ಯರಲೊಬ್ಬ ವಿಗ್ರಹ ಕದಿಯುವ ವಿಫಲ ಪ್ರಯತ್ನವನ್ನು ಮುಂದುವರೆಸುತ್ತಾನೆ. ಮುಂದೆ….

-ಎಂಟು-

ಅಪ್ರಮೇಯನೊಂದಿಗೆ ನಾಗ ಗಾಂಧಾರಿ, ಅಗಸ್ತ್ಯ ಕುಳಿತಿದ್ದರು.

ಅವರಿಬ್ಬರ ಮುಖದ ಮೇಲೆ ಅವರೊಳಗಿನ ನಿಜವಾದ ಭಾವನೆ ತಿಳಿಯುವಂತಿರಲಿಲ್ಲ.

“ಆದರೂ ನನಗೊಂದು ವಿಷಯ ಹೇಳು” ಎಂದು ಆರಂಭಿಸಿದ ಅಗಸ್ತ್ಯ. “ನೀನ್ಯಾಕೆ ನೇರವಾಗಿ ಫ್ಲೈಟ್‌ ಹತ್ತಿ ಡೆಲ್ಲಿ ಸೇರಿ ಅಲ್ಲಿಂದ ರಸ್ತೆ ಮೇಲೆ ನಿನ್ನ ಆಶ್ರಮ ತಲುಪಬಾರದು? ಈ ಜಂಜಡ ಯಾಕೆ? ಈ ಟೆನ್ಷನ್‌ ಯಾಕೆ?” ಎಂದ.

ಅಪ್ರಮೇಯನ ಉತ್ತರವನ್ನು ಕೇಳಲು ಕಾದು ಕುಳಿತಿದ್ದರು ಅವನ ಶಿಷ್ಯರು ಕೂಡ.

“ಅಗಸ್ತ್ಯ, ನಾನು ನನ್ನ ಹದಿನಾರನೇ ವಯಸ್ಸಿನಲ್ಲಿ ಜೋಷಿಮಠದ ಬಳಿ ಗುರುಗಳ ಆಶ್ರಮ ತಲುಪಿದೆ ಅಂತ ನಿನಗೆ ಗೊತ್ತಿದೆ” ಎಂದು ಆರಂಭಿಸಿದ. ನಾಗ ಗಾಂಧಾರಿ ತನ್ನ ತುಟಿಗಳನ್ನು ಸೊಟ್ಟ ಮಾಡಿದ್ದು ಅಪ್ರಮೇಯನ ಕಣ್ಣಿಗೆ ಬೀಳದಿರಲಿಲ್ಲ.

ಮನದಲ್ಲೇ ಮುಗುಳ್ನಗುತ್ತಾ “ಉತ್ತರ ಭಾರತ ಬಹಳ ಸಲ ನೋಡಿದ್ದೀನಿ. ದಕ್ಷಿಣ ಭಾರತದ ಕೆಲವು ಊರುಗಳನ್ನು ನೋಡುವ ಆಸೆ ಬಹಳ ವರ್ಷಗಳಿಂದ ಇತ್ತು. ಎಲ್ಲ ಕಡೆ ದೇವರು, ಧರ್ಮ, ನ್ಯಾಯ, ನೀತಿ ಇವುಗಳ ಬಗ್ಗೆ ಇರುವ ದಾರ್ಶನಿಕರ ತತ್ವಗಳನ್ನು ನನಗೆ ತಿಳಿದಷ್ಟು, ನನಗೆ ತಿಳಿದಂತೆ ಹೇಳುವ ಅಭಿಲಾಷೆ ಇತ್ತು. ನನಗೆ ಗುರುಗಳು ಹೇಳಿದ್ದೂ ಅದೇ. ನಿನ್ನ ಕೈಲಾದಷ್ಟು ಧರ್ಮವನ್ನು ಹರಡು. ಜನರಲ್ಲಿ ಕೆಲವರಾದರೂ ಬದಲಾಗುವ ಅವಕಾಶವಿದೆ. ಬಹಳ ಜನ ನ್ಯೂಟನ್ನನ ಮೊದಲ ನಿಯಮದಂತೆ ಇರುತ್ತಾರೆ. ಯಾರಾದರೂ ಬಂದು ಅವರನ್ನು ಅಲುಗಾಡಿಸುವವರೆಗೂ ಅವರಲ್ಲಿ ಚಲನೆ ಇರುವುದಿಲ್ಲ. ಬಹುಶಃ ಕೆಲವರಾದರೂ ಈ ಪ್ರವಚನಗಳಿಂದ ಪ್ರಭಾವಿತರಾದರೆ ಅವರ ಮಕ್ಕಳು ಕೂಡ ಧರ್ಮಿಷ್ಠರಾಗುತ್ತಾರೆ. ಏಕೆಂದರೆ ಮಕ್ಕಳು ಹಿರಿಯರು ಹೇಳುವುದನ್ನು ಕೇಳುವುದಿಲ್ಲ. ಹಿರಿಯರನ್ನೇ ಗಮನಿಸಿ ಅವರು ಮಾಡಿದಂತೆಯೇ ಮಾಡುತ್ತಾರೆ” ಎಂದ.

ಅಗಸ್ತ್ಯನಿಗೆ ಅವನ ಮಾತುಗಳು ಅರ್ಥವಾಗಿದ್ದವು. ನಾಗ ಗಾಂಧಾರಿಗೆ ಅರ್ಥವಾಗಿದ್ದರೂ ಅವನ ಮೇಲಿನ ಕೋಪವಿನ್ನೂ ಆರಿರಲಿಲ್ಲವಾದ್ದರಿಂದ ಸುಮ್ಮನಿದ್ದಳು. ಶಿಷ್ಯರಲ್ಲಿ ಇಬ್ಬರಿಗೆ ಖುಷಿ. ಹೇಗೂ ಇನ್ನೂ ಊರೂರು ತಿರುಗುವಾಗ ಅವರ ಬಳಿ ಇರುವ ವಿಗ್ರಹಗಳನ್ನು ಅಪಹರಿಸುವ ಅವಕಾಶಗಳು ಹೆಚ್ಚಾಗುತ್ತವೆ.

“ಹಾಗಾದರೆ ಮುಂದಿನ ಊರು?” ಎಂದ ಅಗಸ್ತ್ಯ.

“ಹೈದರಾಬಾದ್”‌ ಎಂದ ಅಪ್ರಮೇಯ.

“ಓ ನಾನು ಬರಲಾರೆ. ನನಗಿಲ್ಲಿ ಎರಡು ಮೂರು ಮೀಟಿಂಗ್‌ಗಳಿವೆ. ಇರಲೇಬೇಕು ನಾನು” ಎಂದ. ಅವನು ಬೆಂಗಳೂರಿನಲ್ಲಿ ಒಂದು ಬಹುರಾಷ್ಟ್ರೀಯ ಕಂಪೆನಿಯ ಟೀಮ್‌ ಮ್ಯಾನೇಜರ್‌ ಆಗಿದ್ದ.

“ಸರಿ. ಈವತ್ತು ರಾತ್ರಿ ನಾನು ಹೊರಡುತ್ತೇನೆ” ಎಂದ ಅಪ್ರಮೇಯ.

“ಬಸ್ಸೇ ವಾಸಿ ಹೈದರಾಬಾದಿಗೆ” ಎಂದು ಅಗಸ್ತ್ಯ ಹೇಳಿದಾಗ “ಟ್ರೈನೇ ವಾಸಿ. ನಿನಗೇ ಗೊತ್ತಲ್ಲ ಯಾಕೇಂತ” ಎಂದ ಮಾರ್ಮಿಕವಾಗಿ.

“ಓ… ಸೇಫ್ಟಿ!” ಎಂದು ನಕ್ಕ ಅಗಸ್ತ್ಯ, “ಸರಿ, ನಿನಗೆ ತತ್ಕಾಲ್‌ ಟಿಕೆಟ್‌ ಬುಕ್‌ ಮಾಡ್ತೇನೆ. ನೀನು ಹೋಗ್ತಿಯೇನಮ್ಮ?” ಎಂದು ನಾಗ ಗಾಂಧಾರಿಯನ್ನು ಕೇಳಿದ.

“ಅಫ್‌ ಕೋರ್ಸ್!”‌ ಎಂದಳು ಅವಳು ತಕ್ಷಣವೇ.

“ಹಾಗೇ, ನಿನಗೆ ಹೈದರಾಬಾದ್‌, ಸಿಕಂದ್ರಾಬಾದ್‌ಗಳಲ್ಲಿ ಒಂದೊಂದು ಪ್ರವಚನಕ್ಕೆ ಅರೇಂಜ್‌ ಮಾಡ್ತೀನಿ. ನಮ್ಮ ಆಫೀಸಿನ ಶಾಖೆ ಇದೆ ಅಲ್ಲಿ” ಎಂದ ಅಗಸ್ತ್ಯ ಎಲ್ಲ ಏರ್ಪಾಡುಗಳನ್ನೂ ಮಾಡಲು ಹೊರಟ.

ಶಿಷ್ಯರು ಮುಖ ಮುಖ ನೋಡಿಕೊಂಡರು. ಬಸ್‌ ಆಗಿದ್ದರೆ ಚೆನ್ನಾಗಿತ್ತೇನೋ‌ ಎಂದುಕೊಂಡ ಒಬ್ಬ ಶಿಷ್ಯ. ನಾಯಕ್  ಕಡೆಯವರಿಗೆ ಹೇಳಿ ಬಸ್ಸನ್ನು ಮಧ್ಯರಾತ್ರಿ ಅಡ್ಡ ಹಾಕಿದ್ದರೆ ಆಗ ಅಪ್ಪು ಸ್ವಾಮಿಯ ಬಳಿ ಇರುವ ವಿಗ್ರಹಗಳನ್ನು ಕದಿಯಬಹುದಿತ್ತು. ಮುಖಕ್ಕೆ ಮುಖವಾಡ ಹಾಕಿಕೊಂಡರೆ ಯಾರೋ ರಸ್ತೆಯ ದರೋಡೆಕೋರರೆಂಬಂತೆ ಪೋಜು ಕೊಡಬಹುದಿತ್ತು. ರೈಲು!

ಮತ್ತೆ ಹೊಸ ಅವಕಾಶಕ್ಕೆ ಕಾಯಬೇಕು!

ಅಪ್ರಮೇಯನ ಮನಸ್ಸಿನಲ್ಲಿದ್ದುದೆಲ್ಲಾ ಆ ರಾಮ, ಕೃಷ್ಣ, ನರಸಿಂಹ ವಿಗ್ರಹಗಳ ಭದ್ರತೆ. ಆದರೆ ಮತ್ತೆ ತಾನು ಈ ಕಡೆ ಬರುವ ಅವಕಾಶ ಎಂದು ಬಂದೀತೋ!

ಅದಕ್ಕೇ ಅವನು ವಿಗ್ರಹಗಳನ್ನು ಕಾಪಾಡಿಕೊಳ್ಳುತ್ತಾ, ಜನರಿಗೆ ಒಂದಿಷ್ಟು ಧರ್ಮದ ವಿಷಯ ಹೇಳುತ್ತಾ ದಕ್ಷಿಣ ಭಾರತವನ್ನು ಸುತ್ತೋಣವೆಂದೇ ನಿರ್ಧರಿಸಿದ್ದ.

ಅವನಿಗೆ ಕೇರಳಕ್ಕೆ ಹೋಗಲಾಗಲಿಲ್ಲ. ಕರ್ನಾಟಕದ ಉಳಿದ ಭಾಗಗಳಿಗೂ ಹೋಗಲಾಗಲಿಲ್ಲ ಎಂಬ ಬೇಸರವಿದ್ದರೂ, ಎಲ್ಲವೂ ಅವನ ಲೀಲೆ. ಅವನೆಲ್ಲೆಲ್ಲಿಗೆ ಹೋಗೆನ್ನುವನೋ ಅಲ್ಲಿಗೆಲ್ಲಾ ಹೋಗುತ್ತಾ ಇರುವುದು ತನ್ನ ಕರ್ತವ್ಯ.

ಸಂಜೆಯ ರೈಲುಗಾಡಿ ಹತ್ತಲು ಯಶವಂತಪುರ ರೈಲ್ವೇ ನಿಲ್ದಾಣ ತಲುಪಿದರು ಆರು ಜನರೂ.

ನಾಗ ಗಾಂಧಾರಿ ಅಪ್ರಮೇಯನ ಬಳಿ ಮಾತಾಡಲೇ ಇಲ್ಲ. ಅವಳಿಗೆ ಅವನ ಮೇಲೆ ಕೋಪವಿತ್ತೆಂಬ ವಿಷಯವನ್ನು ಎಲ್ಲ ಶಿಷ್ಯರೂ ಗಮನಿಸಿದರು. ಒಬ್ಬ ಶಿಷ್ಯ ಅವಳ ಸಹಾಯವನ್ನು ಸರಿಯಾದ ಸಮಯದಲ್ಲಿ ಪಡೆಯಬೇಕೆಂದುಕೊಂಡ.

ರೈಲು ಹತ್ತುವ ಮೊದಲು ಅವನು ನಾಯಕ್‌ನ ಅಡ್ಡಾಗೆ ಫೋನ್‌ ಮಾಡಿದ.

“ಏನು? ನನ್ನ ಹತ್ತಿರ ಆಟ ಆಡ್ತಿದ್ದೀಯಾ? ಯಾವುದೋ ಹಿಂಸೆ, ಕೊಲೆಗಳನ್ನು ಮಾಡ್ದೇ ಆ ಮೂರ‍್ತಿಗಳನ್ನು ಅಪಹರಿಸೋಣ ಅಂತ ನಿನಗೆ ಅವಕಾಶ ಕೊಟ್ಟಿರೋದು. ನಿನಗೇನೂ ನಾವು ಕಮ್ಮಿ ದುಡ್ಡ ಕೊಡ್ತಿಲ್ಲ. ನಾಳೆ ನಿನ್ನ ಗುರು ಏರೋಪ್ಲೇನ್‌ ಹತ್ತಿಬಿಟ್ಟರೆ ನಮಗೆ ಬಹಳ ಕಷ್ಟ ಇದೆ” ಎಂದ ನಾಯಕ್.‌ ತನ್ನ ಚೇಲಾಗಳಿಂದ ಪ್ರಯೋಜನವಿಲ್ಲವೆಂದು ತಾನೇ ಫೋನೆತ್ತಿ ಮಾತಾಡಿದ್ದ ನಾಯಕ್.‌

“ಇಲ್ಲ ನಾಯಕ್‌ ಸಾಬ್!‌ ನಮ್ಮ ಗುರುಗಳು ಇನ್ನೂ ಕೆಲವು ಊರುಗಳಿಗೆ ಹೋಗ್ತಾರೆ. ನಿಮ್ಮ ನೆಟ್‌ವರ್ಕ್‌ ಹೇಗೂ ಇಡೀ ಭಾರತದಲ್ಲಿದೆಯಲ್ಲಾ? ನಾನು ಯಾವ ಊರಿಗೆ ಹೋದರೆ ಅಲ್ಲಿ ನಿಮ್ಮ ಜನ ರೆಡಿ ಇರಲಿ. ನಾನು ಸಮಯ ನೋಡಿ ಕದ್ದು ನಿಮ್ಮವರಿಗೆ ಕೊಡ್ತೀನಿ. ನನಗೆ ಈಗ ಇನ್ನೊಬ್ಬರು ಇನ್‌ಸೈಡರ್‌ ಸಿಕ್ಕಿದ್ದಾರೆ” ಎಂದ ನಾಗ ಗಾಂಧಾರಿಯನ್ನು ನೆನೆಯುತ್ತಾ.

“ಸರಿ ಸರಿ. ನನಗೆ ಇನ್ನೂ ಬೇರೆ ಬೇರೆ ದೊಡ್ಡ ಕೆಲಸಗಳಿವೆ. ಅದಕ್ಕೇ ಇದನ್ನು ನಿನಗೇ ಒಪ್ಪಿಸಿದ್ದೀನಿ. ನೀನು ಕದ್ದರೆ ಗೆದ್ದೆ. ಕದಿಯದಿದ್ದರೆ ಸತ್ತೆ ಅಂತ ನೆನಪಿಟ್ಕೋ” ಎಂದು ಬೆದರಿಕೆಯ ಧ್ವನಿಯಲ್ಲಿ ಹೇಳಿ ಫೋನಿಟ್ಟ ನಾಯಕ್.‌

ಶಿಷ್ಯ ನಡುಗಿದ. ತನ್ನ ಶೋಧವನ್ನು ತೀವ್ರಗೊಳಿಸಿ ವಿಗ್ರಹಚೋರಿ ಮಾಡಬೇಕು ಎಂದು ನಿರ್ಧರಿಸಿದ.

ರೈಲು ಹೊರಟಾಗ ಅಪ್ರಮೇಯನನ್ನು ಅವನ ಪಟಗಳಿಂದ ಗುರುತಿಸಿದ ಕೆಲವರು “ಸ್ವಾಮೀ, ಇದು ನಾವು ಬಯಸದೇ ಬಂದ ಭಾಗ್ಯ. ದಯವಿಟ್ಟು ನಿಮ್ಮ ಉಪದೇಶವನ್ನು ನಮಗೂ ಕೊಡಿ” ಎಂದರು.

ನಿಟ್ಟುಸಿರಿಟ್ಟ ಅಪ್ರಮೇಯ. ಈಗ ತನ್ನ ಶಿಷ್ಯನೋ ಅವನ ಕಡೆಯವರೋ (ಅಂದರೆ ಅಗಸ್ತ್ಯನ ಮನೆಯಲ್ಲಿ ಕಳ್ಳತನಕ್ಕೆ ಬಂದವನೋ) ಏನೂ ಮಾಡಲಾಗದು. ಇಷ್ಟು ಜನರ ನಡುವೆ ಇದ್ದರೆ ಒಳ್ಳೆಯದು. ಏಕೋ ಅವನಿಗೆ ಹತಾಶಭಾವ ಆವರಿಸಿಕೊಂಡಿತ್ತು.

ತನ್ನ ಬಳಿ ಇದ್ದು ದಿನವೂ ಧರ್ಮ, ನ್ಯಾಯ, ನೀತಿಗಳ ಬಗ್ಗೆ ಕೇಳಿದರೂ ಹೇಗೆ ಮನಸ್ಸು ಚಂಚಲವಾದೀತು? ಇದು ತಾತ್ಕಾಲಿಕವೋ, ಶಾಶ್ವತವೋ? ಇವರುಗಳು ವರ್ತನೆ, ಗುಣಗಳಿಂದ ಒಳ್ಳೆಯವರೆಂದು ತಾನೇ ತನ್ನ ಶಿಷ್ಯರನ್ನಾಗಿ ಮಾಡಿಕೊಂಡ? ತನ್ನ ಶಿಷ್ಯರಿರಲಿ, ತನ್ನ ಗುರುವೂ ಅವರ ಶಿಷ್ಯರಲ್ಲೊಬ್ಬನ ಬಗ್ಗೆ ಸಂಶಯ ವ್ಯಕ್ತಪಡಿಸಿದರಲ್ಲಾ?

ಎಲ್ಲರನ್ನೂ ಆ ನಾರಾಯಣನೇ ಕಾಪಾಡಬೇಕು!

“ಸರಿ, ನಿಮ್ಮ ಇಚ್ಛೆಯಂತೆ ಒಬ್ಬರು ಸಂತರ ಬಗ್ಗೆ, ಅವರ ವಾಚನಗಳ ಬಗ್ಗೆ ಹೇಳುತ್ತೇನೆ” ಎಂದ ಅಪ್ರಮೇಯ.

ನಾಲ್ವರು ಶಿಷ್ಯರೂ ಮುಖ ಮುಖ ನೋಡಿಕೊಂಡರು. ಅಂದರೆ ಗುರುಗಳೇ ವಿಶೇಷ ಪ್ರವಚನ ಮಾಡುತ್ತಾರೆ. ತಾವು ಹಾಡುವುದು ಬೇಕಿಲ್ಲವೇನೋ… ತಮ್ಮ ಮೇಲೆ ಕೋಪವೇನಾದರೂ ಬಂದಿತೇ ಎಂದು ಇಬ್ಬರೆಂದುಕೊಂಡರೆ, ಉಳಿದಿಬ್ಬರು ತಮ್ಮ ಮೇಲೆ ಅನುಮಾನವೇನಾದರೂ ಬಂದಿದೆಯೇ ಎಂದುಕೊಂಡರು.

“ತಮ್ಮ ರಾಮೋಪಾಸನೆ, ನಾಮಸ್ಮರಣೆ, ಗೋರಕ್ಷೆ ಮತ್ತು ಅನ್ನದಾನದ ಸಂಗತಿಗಳಿಂದ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ ಸಂತ ಅವರು” ಎಂದು ನಿಲ್ಲಿಸಿದ. ಎಲ್ಲರೂ ಯಾರಿರಬಹುದು ಎಂದು ಆಲೋಚಿಸುತ್ತಿದ್ದರು.

“ಬ್ರಹ್ಮ ಎಂದರೆ ಸಕಲವನ್ನೂ ಒಳಗೊಂಡ ಅತಿದೊಡ್ಡ ವಸ್ತು. ಚೈತನ್ಯ ಎಂದರೆ ಚಲನಶಕ್ತಿಗೆ ಸಾಕ್ಷೀಭೂತವಾದ್ದು. ಅಂತಹ ಪ್ರಜ್ಞಾವಿಶೇಷವನ್ನು ಹೊಂದಿದ್ದವರು ಶ್ರೀ ಬ್ರಹ್ಮಚೈತನ್ಯರೆಂದೇ ಹೆಸರಾದ ‍ಶ್ರೀ ಮಹಾರಾಜ ಗೋಂದಾವಲೇಕರರು” ಎಂದ ಅಪ್ರಮೇಯ.

Gondavalekar Maharaj

ಕೆಲವರು ಓಹೋ… ಎಂದು ತಲೆದೂಗಿದ್ದರು. ಏಕೆಂದರೆ ಅವರಿಗೆ ಬ್ರಹ್ಮಚೈತನ್ಯರ ಬಗ್ಗೆ ಒಂದಿಷ್ಟು ವಿಷಯದ ಅರಿವಿತ್ತು.

“ನಾಮವೆಂದರೆ ಭಗವಂತನ ಹೆಸರು. ಸಾಧನೆಯ ದೃಷ್ಟಿಯಿಂದ ಬೇರೆ ಬೇರೆ ಹೆಸರುಗಳಲ್ಲಿ ಭೇದವಿರುವುದಿಲ್ಲ. ನಾಮವು ಸಗುಣವೂ ಹೌದು, ನಿರ್ಗುಣವೂ ಹೌದು. ನಾಮವು ಎಷ್ಟು ಆಳವಾಗಿ ಹೋಗಬೇಕೆಂದರೆ ಪ್ರಾಣದ ಜೊತೆಗೇ ಹೊರಗೆ ಬರಬೇಕು. ಅಂತ್ಯ ಸಮಯದಲ್ಲಿ ಅತ್ಯಂತ ಕೊನೆಗೆ ಹೊರಗೆ ಬರುವ ವಸ್ತುವೆಂದರೆ ಭಗವಂತನ ನಾಮವಾಗಬೇಕು. ನಾಮದಲ್ಲಿಯೇ ಕೊನೆಯ ಶ್ವಾಸ ಹೋಗಬೇಕು. ನಾಮದಲ್ಲಿ ಆನಂದದ ಹೊರತಾಗಿ ಬೇರೆ ಏನೂ ಇರುವುದಿಲ್ಲ” ಎಂದು ಹೇಳಿದ ಅಪ್ರಮೇಯ “ಒಂದು ಉದಾಹರಣೆ ನೀಡುವಿರಾ? ಜೀವನದ ಅಂತ್ಯದಲ್ಲಿ ನಾಮವನ್ನು ತೆಗೆದುಕೊಂಡವರದ್ದು?” ಎಂದು ಕೇಳಿದ.

“ಹೇ ರಾಮ್!” ಎಂದಿದ್ದ ಒಬ್ಬ ಪುಟ್ಟ ಹುಡುಗ.

ಮುಗುಳ್ನಕ್ಕ ಅಪ್ರಮೇಯ, “ನಾನು ಹೇಳಿದ್ದು ನಿನಗರ್ಥ ಆಯಿತಲ್ಲಾ! ಭಲೇ ಭಲೇ” ಎಂದ.

“ನಮ್ಮ ಮನೆಯಲ್ಲಿ ಗೋಂದಾವಲೇಕರ್‌ ಮಹಾರಾಜರ ಪೂಜೆ ನಡೆಯುತ್ತಲೇ ಇರುತ್ತದೆ” ಎಂದ ಹುಡುಗ “ರಾಜ್‌ಘಾಟ್‌ನಲ್ಲಿ ಗಾಂಧೀಜಿಯವರ ಸಮಾಧಿಯ ಮೇಲೆ ಹೇ ರಾಮ್‌ ಅಂತ ಬರೆದಿದ್ದನ್ನು ನೋಡಿದ್ದೇನೆ. ಅದಕ್ಕೇ ನೀವು ಈ ಮಾತು ಹೇಳಿದಾಗ ನನಗೆ ನೆನಪಾಯಿತು” ಎಂದ.

ಅಪ್ರಮೇಯ ಸಂತಸಗೊಂಡ. ಮುಂದಿನ ಪೀಳಿಗೆಯವರೆಲ್ಲಾ ಹೀಗೆ ಒಂದಿಷ್ಟು ಧರ್ಮ, ನ್ಯಾಯ, ನೀತಿ ಎಂದು ಆ ದಾರಿಯಲ್ಲಿ ನಡೆದರೆ ಭವಿಷ್ಯವು ಚೆನ್ನಾಗಿರುತ್ತದೆ.

“ತಾಯಿಗಾಗಿ ಅಳುತ್ತಿರುವ ಮಗು ತಾಯಿನ್ನು ನೋಡುವವರೆಗೆ ಅಳುವುದನ್ನು ನಿಲ್ಲಿಸುವುದಿಲ್ಲ. ಸಮಾಧಾನಕ್ಕಾಗಿ ಆನಂದಕ್ಕಾಗಿ ಚಡಪಡಿಸುವ ನಮ್ಮ ಮನಸ್ಸು ಭಗವತ್‌ ಪ್ರಾಪ್ತಿಯಾಗದ ಹೊರತು ಶಾಂತವಾಗುವುದಿಲ್ಲ.  ನಾಮಸ್ಮರಣೆಯಲ್ಲಿ ಸ್ತ್ರೀ, ಪುರುಷ, ಬಡವ, ಶ್ರೀಮಂತ ಎಂಬ ಭೇದಗಳಿರುವುದಿಲ್ಲ. ನಾಮವನ್ನು ಕೇವಲ ಶ್ರದ್ಧೆಯಿಂದ ತೆಗೆದುಕೊಳ್ಳುವುದು ಮಹತ್ವದ್ದಾಗಿರುತ್ತದೆ”

ಹೀಗೇ ಅವನ ಪ್ರವಚನ ಮುಂದುವರೆದಿತ್ತು. ಜನರು ಕೇಳುತ್ತಲೇ ಇದ್ದರು. ನಡುನಡುವೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ತನಗೆ ತಿಳಿದ ಮಟ್ಟಿಗೆ ಉತ್ತರಿಸುತ್ತಿದ್ದ. ತನಗೆ ಗೊತ್ತಾಗದಿದ್ದ ಪ್ರಶ್ನೆಗಳನ್ನು ಬರೆದುಕೊಳ್ಳಲು ತನ್ನ ಶಿಷ್ಯರಿಗೆ  ಹೇಳಿದ. ಪ್ರಶ್ನೆ ಕೇಳಿದವನ ಇ-ಮೆಯಿಲ್‌ ಐಡಿ ಪಡೆದು ಉತ್ತರಿಸುವ ವಚನ ನೀಡುತ್ತಿದ್ದ.

ಒಬ್ಬ ಶಿಷ್ಯ ಅಂದುಕೊಂಡ. ಇವರೆಲ್ಲಿ ಉತ್ತರಿಸುತ್ತಾರೆ?

ನಾಯಕ್‌ನ ಸೈರಣೆ ಮಿತಿ ಮೀರಿದಾಗ ಅವನು ಖಂಡಿತ ತನ್ನ ಶಿಷ್ಯರಿಂದ ಧಾಳಿ ಮಾಡಿಸುತ್ತಾನೆ. ಅದರಲ್ಲಿ ಅಪ್ಪು ಗುರುಗಳ ಗತಿಯೇನಾಗುವುದೋ?

ತನಗೆ ಅವರೆಂದರೆ ಭಕ್ತಿ ಇದೆ. ಆದರೆ ಹಣದ ಮೇಲೆ ಹೆಚ್ಚು ಮೋಹವಿದೆ. ಅದಕ್ಕೇ ಅವನು ತನ್ನ ಮನಸ್ಸಾಕ್ಷಿಯನ್ನು ಮಾರಿಕೊಳ್ಳಲು ಸಿದ್ಧನಾಗಿದ್ದಾನೆ!

“ನಮ್ಮ ಚಿತ್ತವನ್ನು ನಾಮದಲ್ಲಿ ಇಡಬೇಕು. ಅದೇ ಸತ್ಯವೆಂದು ತಿಳಿಯಬೇಕು. ಮನಸ್ಸಿನಲ್ಲಿ ಇದೇ ನಿಶ್ಚಯವಿರಬೇಕು. ಆಗ ಮನಸ್ಸು ಭ್ರಾಂತಿಯಿಂದ ಮುಕ್ತಿ ಹೊಂದಿ ನಿರ್ಭ್ರಾಂತವಾಗುತ್ತದೆ”

“ನಾಮದ ರುಚಿಯು ಎಷ್ಟು ವಿಲಕ್ಷಣವಾಗಿದೆಯೆಂದರೆ, ಅದು ಯಾರಿಗೆ ಹತ್ತುತ್ತದೆಯೋ, ಅವರಿಗೆ ತಮ್ಮ ಸ್ವಂತದ ಅರಿವು ಉಳಿಯುವುದಿಲ್ಲ. ಆದ್ದರಿಂದ ನಮ್ಮನ್ನು ನಾವು ನಾಮಕ್ಕೆ ಸಮರ್ಪಿಸಿಕೊಳ್ಳಬೇಕು”

“ಒಳ್ಳೆಯ ಮನುಷ್ಯನ ಲಕ್ಷಣಗಳೇನು ಸ್ವಾಮೀ?” ಎಂದ ಒಬ್ಬ ಆಸ್ತಿಕ ಮಹಾಶಯ.

“ಯಾವ ಮನುಷ್ಯನು ಬಹಳಷ್ಟು ಜನರಿಗೆ ಮನಃಪೂರ್ವಕವಾಗಿ ಹಿಡಿಸುತ್ತಾನೋ ಅವನು ಉತ್ತಮ ಮನುಷ್ಯ. ಇಂಥ ಮನುಷ್ಯನು ಯಾರ ವಿಷಯದಲ್ಲಿಯೂ ಯಾವುದೇ ನಿಂದೆ ಅಥವಾ ಸ್ತುತಿ ಮಾಡುವುದಿಲ್ಲ. ಅವನಿಗೆ ಸನ್ಮಾನದ ಅಪೇಕ್ಷೆ ಇರುವುದಿಲ್ಲ. ಇಂತಹ ಸಂತರ ಪ್ರತಿಯೊಂದು ಕರ್ಮದಲ್ಲಿ ನಿಮಗೆ ಪ್ರೇಮ, ದಯೆ, ಪರೋಪಕಾರ, ನಿಸ್ವಾರ್ಥತೆ ಮತ್ತು ಭಗವಂತನ ಮೇಲಿನ ನಿಷ್ಠೆಯೇ ಕಂಡು ಬರುತ್ತವೆ” ಎಂದು ಹೇಳಿದ ಅಪ್ರಮೇಯ.

ಹೀಗೇ ಮಹಾರಾಜ ಗೋಂದಾವಲೇಕರರ ಅನೇಕ ವಿಷಯಗಳನ್ನು ಹೇಳುತ್ತಾ ನಾಲ್ಕು ಗಂಟೆಗಳನ್ನೇ ಕಳೆದಿದ್ದ ಅಪ್ರಮೇಯ.

ರೈಲುಗಾಡಿಯಲ್ಲಿ ಊಟದ ಸರಬರಾಜು ನಡೆಸಲು ರೈಲ್ವೇ ಕ್ಯಾಂಟೀನಿನವರು ಬಂದಾಗ ಮಾತು ನಿಲ್ಲಬೇಕಾಯಿತು.

“ಮಂಗಳವನ್ನು ಹಾಡೋಣ. ನಿಮಗೆ ನನ್ನ ಮಾತುಗಳಿಂದ ಒಂದಿಷ್ಟು ಪ್ರಯೋಜನವಾಗಿದೆಯೆಂದು ಅಂದುಕೊಂಡಿದ್ದೇನೆ” ಎಂದ ಅಪ್ರಮೇಯ.

“ಹೌದು ಸ್ವಾಮೀ” ಎಂದು ಅನೇಕ ಕೊರಳುಗಳು ಉಲಿದವು.

“ರಾಜ್ಯಾಧಿಕಾರವೇ ಬರಲಿ, ಅಥವಾ ಹೋಗಲಿ ಸಮಸ್ತ ಧನ ಮಾನ. ಇದೇ ಗುರುಗಳ ಅಂಬೋಣ. ಭಂಗವಾಗದಿರಲೆಂದಿಗೂ ಸಮಾಧಾನ.

ಪ್ರೇಮದಲ್ಲಿಯೇ ಶ್ರೀರಾಮ ರಮಿಸುವನು. ಪ್ರೇಮವೇ ಈ ಜಗದಿ ಅಮೌಲ್ಯವೆಂದರಿಯೋಣ. ಇದೇ ಗುರುಗಳ ಅಂಬೋಣ. ‍ಶ್ರೀ ಗುರುಗಳಿರುವುದು ಪ್ರೇಮದ ತೃಷ್ಣ” ಎಂದು ಎಲ್ಲರಿಗೂ ಕೈಯೆತ್ತಿ ಮುಗಿದ.

ಅಲ್ಲಿ ಬಹಳ ಜನ ಚಪ್ಪಾಳೆ ತಟ್ಟಿದರು. ಅನೇಕರು ಬಂದು ಅಪ್ರಮೇಯನ ಪಾದ ಮುಟ್ಟಿ ನಮಸ್ಕರಿಸಿದರು.

ಕಾಚಿಗೂಡ ಸ್ಟೇಷನ್‌ ತಲುಪಿ ಅಲ್ಲಿಂದ ಊಬರ್‌ ಹಿಡಿದು ʼಹೊಟೇಲ್‌ ಹರ್ಷʼ ತಲುಪಿದರು. ಈ ಸಲ ನಾಗ ಗಾಂಧಾರಿ ಇದ್ದಿದ್ದರಿಂದ ಲೋಕಲ್‌ ಪ್ರವಾಸ, ಹೊಟೇಲ್‌ ಸ್ಟೇ ಎಲ್ಲವನ್ನೂ  ಅವಳೇ ನೋಡಿಕೊಂಡಳು. ಇಡೀ ಪ್ರಯಾಣದಲ್ಲಿ ಅವಳು ಎದುರಿಗೇ ಕುಳಿತಿದ್ದರೂ ಒಮ್ಮೆಯೂ ಅಪ್ರಮೇಯನತ್ತ ನೋಡಲಿಲ್ಲ. ಕೈಯಲ್ಲೊಂದು ಕಾದಂಬರಿ ಹಿಡಿದು ಅದರಲ್ಲಿಯೇ ಮಗ್ನಳಾಗಿದ್ದಳು.

ಇದನ್ನು ಗಮನಿಸಿದ ಶಿಷ್ಯ, ʼಈ ಊರಲ್ಲಿ ಇವಳನ್ನು ಕೇಳಿಬಿಡಬೇಕು. ಇವಳ ಸಹಾಯದಿಂದ ವಿಗ್ರಹಗಳನ್ನು ಕದ್ದುಬಿಡಬೇಕುʼ ಎಂದುಕೊಂಡ!

ಮುಂದುವರೆಯುವುದು…

ಯತಿರಾಜ್‌ ವೀರಾಂಬುಧಿ

Related post

2 Comments

  • Gondavalekar Maharaj info is good in that situation let us see how Appu will trap the culprit.

  • Story moving in good wave and length pls continue

Leave a Reply

Your email address will not be published. Required fields are marked *