ಪರಾಭವ ಭಾವನಾ – 1 ಯತಿರಾಜ್‌ ವೀರಾಂಬುಧಿ

ಖ್ಯಾತ ಲೇಖಕರಾದ “ಯತಿರಾಜ್ ವೀರಾಂಬುಧಿ” ಯವರು ಸಾಂಸ್ಕೃತಿಕ ಅಭಿರುಚಿ, ಅಭಿವ್ಯಕ್ತಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್, ಕಥೆ, ಕಾದಂಬರಿ, ಅಂಕಣ, ಹಾಸ್ಯ ಲೇಖನ ಅನುವಾದ ಹೀಗೆ ಕನ್ನಡ ಸಾಹಿತ್ಯ ಲೋಕದ ಅನೇಕ ಮಜಲುಗಳಲ್ಲಿನ ಇವರ ಸೇವೆ ಅಮೋಘವಾದದ್ದು. ಕೇವಲ ಬದುಕಿನ ಮೇಲ್ಮೆಯ ಹೊರನೋಟಕ್ಕೆ ಸೀಮಿತಗೊಳ್ಳದ ಯತಿರಾಜ ವೀರಾಂಬುಧಿ ಅವರ ಸೃಜನಶೀಲ ಮನಸ್ಸು, ಅಂತರಂಗದ ಹುಡುಕಾಟಕ್ಕೆ ಕೂಡ ಹೇಗೆ ಕಾತರಿಸುತ್ತದೆ ಎಂಬುದಕ್ಕೆ ಅವರ ಪ್ರಸಿದ್ಧ ಪುಸ್ತಕದ ಶೀರ್ಷಿಕೆ ‘ಭಗವದ್ಗೀತೆ ಬಚ್ಚಿಟ್ಟಿದ್ದ ಪಾಠಗಳು’ ಒಂದು ಸೂಚ್ಯವೇನೋ! ಅವರ ಅಕ್ಷರ ಪ್ರೀತಿ ಅನಂತವಾದದ್ದು.

ನಮ್ಮ ಸಾಹಿತ್ಯಮೈತ್ರಿ ಪತ್ರಿಕೆಗೆ ನಿಮ್ಮ ಬರಹ ಅತ್ಯಾವಶ್ಯಕ ಎಂದು ವಿನಂತಿಸಿದೊಡನೆ ಸ್ನೇಹಪೂರ್ವಕವಾಗಿ ಅವರ “ಪರಾಭವ ಭಾವನಾ” ಕಾದಂಬರಿಯನ್ನು ಧಾರಾವಾಹಿ ರೂಪದಲ್ಲಿ ಬಳಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಇಂದಿನಿಂದ ಪ್ರತಿವಾರವೂ ಅವರ “ಪರಾಭವ ಭಾವನಾ” ಕಾದಂಬರಿಯು ಧಾರಾವಾಹಿಯ ರೂಪದಲ್ಲಿ ಪ್ರಕಟಕೊಳ್ಳುತ್ತದೆ.

—ಒಂದು—

ಅಪ್ಪುವಿಗೆ ತನ್ನ ಬಲಮುಷ್ಟಿಯಲ್ಲಿ ಇನ್ನೂ ಅಂತಹ ಶಕ್ತಿ ಇರಬಹುದೆಂಬ ನಂಬಿಕೆಯೇ ಇರಲಿಲ್ಲ. ಇವನಿಂದ ಹೊಡೆತ ತಿಂದು ಕೆಳಗೆ ಬಿದ್ದವನು ಕ್ಷಣಕಾಲ ಮಲಗಿ ಪ್ರಜ್ಞೆ ಕಳೆದುಕೊಂಡ. ಒಂದು ವೇಳೆ ತಾನು ತನ್ನ ಎಡಗೈಯಿಂದ ಹೊಡೆದಿದ್ದರೆ ಆ ಕೆಳಗೆ ಬಿದ್ದವನು ಸತ್ತೇ ಹೋಗಿರುತ್ತಿದ್ದನೇನೋ! ಎಂದುಕೊಂಡ ಅಪ್ಪು.
ಆದರೆ ಅವನ ವೃತ್ತಿ ಅವನಿಗೆ ಅಹಿಂಸೆಯನ್ನು ಬೋಧಿಸಿದೆ. ಈಗ ನೋಡಿದರೆ ತನ್ನಿಂದ ಪೆಟ್ಟು ತಿಂದಿದ್ದಾನೊಬ್ಬ.
ಆ ಸಮುದ್ರದ ಮರಳಿನ ದಡದಲ್ಲಿ ತನ್ನಿಂದ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದವನನ್ನು ನೋಡಿದ.
ಅದೊಂದು ಅನಿರೀಕ್ಷಿತ ಆಕ್ರಮಣ.
ಅಪ್ಪು ಎಂಬ ಅಡ್ಡ ಹೆಸರಿನ ‘ಅಪ್ರಮೇಯ’ ಧನಷ್ಕೋಟಿಗೆ ಹೋಗುತ್ತಿದ್ದ. ಅವನ ಗುರುವು ಮೃತ್ಯುಶಯ್ಯೆಯಲ್ಲಿದ್ದುದರಿಂದ ಅವನಿಗೆ ಕರೆ ಬಂದಿತ್ತು.

ತನ್ನ ಸುತ್ತಲಿನ ಪ್ರದೇಶವನ್ನೊಮ್ಮೆ ಅಪ್ಪು ಗಮಿನಿಸಿದ. ಅಬ್ಬಾ, ಈ ಧನುಷ್ಕೋಟಿಯ ಮರಳದಂಡೆ ಅದೆಷ್ಟು ಸ್ವಚ್ಛವಾಗಿದೆ! ಶಾಂತವಾಗಿದೆ ಕೂಡ.
ಶ್ರೀರಾಮ ಇಲ್ಲಿ ತನ್ನ ಬಿಲ್ಲನ್ನು ಇಟ್ಟುಬಿಟ್ಟನೆಂಬ ಪ್ರತೀತಿ ಇದೆ.
ಇಂತಹ ಸುತ್ತಲೂ ಏನೂ ಇರದ, ಜನರಿಲ್ಲದ ವಾತಾವರಣವು ಬಹುಶಃ ೧೯೬೪ರ ಸುನಾಮಿಯಿಂದ ಆಗಿರಬಹುದು. ಆ ಸಮಯದಲ್ಲಿ ಈ ಇಡೀ ಊರು ಧನುಷ್ಕೋಟಿ ಮುಳುಗಿಹೋಗಿತ್ತು. ಸಮುದ್ರ ತೀರ ತಲುಪಲು ಮೈಲಿಗಟ್ಟಲೆ ನಡೆಯಬೇಕಿತ್ತು.
ಅರೆ, ಇದೇನಿದು? ಯಾರಿದು?
ಅವನ ಬೆನ್ನಿನ ಮೇಲೆ ಯಾರೋ ಒದ್ದಿದ್ದರು. ಆರನೆಯ ಇಂದ್ರಿಯದ ಪ್ರಜ್ಞೆ ಇರಬಹುದು, ಮೈಯನ್ನು ಉಕ್ಕಾಗಿಸಿಕೊಂಡು ಬೀಳದಂತೆ ಸಾವರಿಸಿಕೊಂಡ.
ಮರುಕ್ಷಣ ಹಿಂದಕ್ಕೆ ತಿರುಗಿದಾಗ ತನ್ನನ್ನು ಹೊಡೆಯಲು ಬಂದವನು ತನ್ನ ಬಲಮುಷ್ಟಿಯ ಪ್ರಹಾರದಿಂದ ಧರಾಶಾಯಿಯಾಗಿದ್ದ.
ಈಗ ಬೇಗನೆ ಗುರುವನ್ನು ತಲುಪಬೇಕು. ಎಲ್ಲಿದ್ದಾರೆ ಗುರು?
ಸ್ವಲ್ಪ ಹೊತ್ತು ಕಣ್ಮುಚ್ಚಿ ಆಲೋಚಿಸಿದ.
ಹೌದೂ ತನ್ನ ಶಿಷ್ಯರು ತುಲಸೀದಾಸ ಮತ್ತು ಕನಕದಾಸ ಎಲ್ಲಿ ಹೋದರು? ಗುರುಗಳಿರಬಹುದಾದ ಜಾಗವನ್ನು ಕಂಡುಕೊಂಡು ಬನ್ನಿರೆಂದು ತಾನು ಅವರನ್ನು ಕಳಿಸಿದ್ದ.
ನೋಡಬೇಕು, ಅವರೇನು ವಿಷಯ ತರುವರೋ ಎಂದುಕೊಂಡ.
ಅಷ್ಟರಲ್ಲಿ ಮರಳಿನ ಮೇಲೆ ಯಾರೋ ಓಡಿಬರುವ ಸಪ್ಪಳ ಕೇಳಿಸಿತ್ತು.
ಅವರ ಶಿಷ್ಯ ಕನಕದಾಸ ಓಡಿಬರುತ್ತಿದ್ದ.
ತುಲಸೀದಾಸ ನಿಧಾನವಾಗಿ ನಡೆದು ಬರುತ್ತಿದ್ದ.
ಮನುಷ್ಯರ ಸ್ವಭಾವಗಳಲ್ಲಿ ಅದೆಷ್ಟು ವಿಧ!
“ಅಪ್ಪುಸ್ವಾಮೀ, ಯಾರಿವನು?” ಎಂದು ಕೇಳಿದ ಕನಕದಾಸ.
ಅವನತ್ತಲೇ ನೋಡಿದರು ಅಪ್ಪು ಅರ್ಥಾತ್ ಅಪ್ರಮೇಯ ಸ್ವಾಮಿ. ಶಿಷ್ಯರ ಬಾಯಲ್ಲಿ ಅಪ್ಪುಸ್ವಾಮಿ. ಸಪೂರ ದೇಹದ ಸುಮಾರು ಮೂವತ್ತರ ಕನಕದಾಸ. ನೋಡಲು ಲಕ್ಷಣವಿಲ್ಲ. ಆದರೆ ಮನುಷ್ಯನ ಸ್ವಭಾವ ಮಾತ್ರ ಬಹಳ ಒಳ್ಳೆಯದು.
ಮೆಲ್ಲನೆ ನಡೆದು ಬಂದ ತುಲಸೀದಾಸ. ಸ್ವಲ್ಪ ನಿಧಾನವೇ ಎಲ್ಲ ರೀತಿಯಲ್ಲೂ. ಸಿಟ್ಟು ಬರದ ಶಾಂತಸ್ವಭಾವದ ಯುವಕ. ನಕ್ಕರೆ ಬಲು ಚಂದ ಕಾಣುತ್ತಿದ್ದ ಸುಮಾರು ಇಪ್ಪತ್ತೈದರ ಯುವಕ.
“ಗೊತ್ತಿಲ್ಲ. ಇದ್ದಕ್ಕಿದ್ದ ಹಾಗೆ ನನ್ನ ಮೇಲೆ ಬಿದ್ದ. ನನ್ನನ್ನು ನಾನು ಕಾಪಾಡಿಕೊಳ್ಳಬೇಕಿತ್ತಲ್ಲ, ವಿಶೇಷವಾಗಿ ಈಗ ನಾನು ಎಚ್ಚರದಿಂದ ಆರೋಗ್ಯಕರವಾಗಿರಬೇಕು” ಎಂದು ನಕ್ಕರು.
ಈಗ ಕನಕದಾಸ ಮತ್ತು ತುಲಸೀದಾಸ ತಮ್ಮ ಗುರುಗಳನ್ನು ನೋಡಿದರು. ಸುಮಾರು ಮೂವತ್ತೈದರ ಪ್ರಾಯ. ಚಿಕ್ಕದಾಗಿ ಕ್ರಾಪ್ ಮಾಡಿದ್ದ ತಲೆ. ಹಿಂದೆ ಒಂದು ಪುಟ್ಟ ಶಿಖೆ. ಮೇಲೊಂದು ಕಾವಿ ಜುಬ್ಬಾ. ಪ್ರಯಾಣದಲ್ಲಿ ಅನುಕೂಲವೆಂದು ಕಾವಿ ಪೈಜಾಮ. ಉತ್ತರ ಭಾರತದ ತಮ್ಮ ಆಶ್ರಮದಲ್ಲಿದ್ದರೆ ಕಾವಿ ಪಂಚೆ, ಕಾವಿ ಮೇಲು ಹೊದಿಕೆ.
ಕಟ್ಟುಮಸ್ತಾದ ಪೈಲ್ವಾನ್ ದೇಹ. ದಿನವೂ ಪ್ರಾಣಾಯಾಮ, ಉಠ್ಬೈಠ್, ಕಸರತ್ತು, ಕಳರಿಪಯಟ್ಟು ಮಾಡುತ್ತಾರೆ ಅಪ್ಪು. ಜೊತೆಗೆ ಬಲು ಸುಂದರ ಮುಖ. ನೋಡಿದೊಡನೆ ನಮಸ್ಕರಿಸಬೇಕೆನ್ನುವ ಶಾಂತ ವದನ. ಆರಡಿಯ ದೇಹ.
ಇವರು ಸ್ವಾಮಿ ಆಗುವ ಬದಲು ಪೈಲ್ವಾನ್ ಆಗಿದ್ದರೆ ಭಾರತಕ್ಕೆ ಒಂದೆರಡು ಚಿನ್ನದ ಪದಕ ಬರುತ್ತಿತ್ತು ಎಂದುಕೊಂಡಿದ್ದ ತುಲಸೀದಾಸ ಅನೇಕಸಲ.
“ಏನಾದ್ರು ವಿಷಯ ತಿಳಿಯಿತೇ?” ಕೇಳಿದರು ಅಪ್ಪು ಮುಂದೆ ನಡೆಯತ್ತಾ.


“ಹೂಂ ಅಪ್ಪು ಸ್ವಾಮಿ. ಮುಂದೆ ಹೋದರೆ ಒಂದು ಚಿಕ್ಕ ಗುಹೆ ಇದೆಯಂತೆ. ಅದರಲ್ಲಿ ಗುರುಗಳಿದ್ದಾರಂತೆ” ಎಂದಿದ್ದ ಕನಕದಾಸ.
ಮೂವರೂ ಆ ಗುಹೆಯತ್ತ ನಡೆದರು. ಕಾಲು ಮರಳಿನಲ್ಲಿ ಹೂತುಕೊಂಡು ಹೋಗುತ್ತಿತ್ತು. ಬಿಸಿಲು ಸ್ವಲ್ಪ ಕಡಿಮೆಯಾಗುತ್ತಿತ್ತು. ಮೂರು ಗಂಟೆಯ ನಂತರ ಸಮುದ್ರದ ಮೇಲೆ ತಂಪುಗಾಳಿ ಬೀಸುವ ವಿಷಯ ಅಪ್ಪುವಿಗೆ ತಿಳಿದಿತ್ತು.
ಅದೋ! ಅಲ್ಲಿದೆ ಗುಹೆ…
ಹತ್ತಿರ ಹೋದರು. ಅಲ್ಲಿ ಇಬ್ಬರು ಯುವಕರು ನಿಂತಿದ್ದರು.
ಅವರಿಗೆ ಅಪ್ಪುವಿನ ಆಗಮನದ ಬಗ್ಗೆ ತಿಳಿದಿತ್ತೇನೋ…
ನಮಸ್ಕರಿಸಿ “ನಾನು ಪುರಂದರದಾಸ್” ಎಂದ ಒಬ್ಬ. “ಮತ್ತೊಬ್ಬ ಕಬೀರ್ ದಾಸ್” ಎಂದ.
ಅಪ್ಪುವಿನ ಮುಖದ ಮೇಲೆ ಮುಗುಳ್ನಗೆ ಮೂಡಿತು. ಒಂದು ರೀತಿ ವಿಶಿಷ್ಟ ಹೆಸರುಗಳು ತನ್ನ ಇಬ್ಬರು ಶಿಷ್ಯರು ಮತ್ತು ಗುರುಗಳ ಇಬ್ಬರು ಶಿಷ್ಯರದು.
ಅಪ್ಪು “ಗುರುಗಳೆಲ್ಲಿ?” ಎಂದು ಕೇಳಿದ.
“ಒಳಗೆ ಅಪ್ಪು ಸ್ವಾಮಿ” ಎಂದ ಪುರಂದರದಾಸ್.
ಗುಹೆಯಲ್ಲಿ ಮಂದ ಕಾಂತಿಯಿತ್ತು. ಒಂದು ಮೂಲೆಯಲ್ಲಿ ಕೃಷ್ಣಾಜಿನದ ಮೇಲೆ ಆಕೃತಿಯೊಂದು ಕಂಡಿತ್ತು. ಗುರುಗಳು ಗುಬ್ಬಚ್ಚಿಗಳಂತಾಗಿಬಿಟ್ಟಿದ್ದರು. ಮುಖದ ತುಂಬಾ ಕೇಶ. ತಲೆಯ ತುಂಬಾ ಕೇಶ. ಎದೆಯಲ್ಲಿನ ಎಲುಬುಗಳನ್ನು ಎಣಿಸಬಹುದಾಗಿತ್ತು.
“ಬಂದೆಯಾ?” ಎಂದರು ಮೆಲ್ಲನೆ. ಅವರ ತುಟಿಗಳು ಅಲುಗಾಡಿದ್ದರಿಂದ ಅಪ್ಪು ಅವರ ಬಾಯಿಯ ಬಳಿ ಕಿವಿಯಿಟ್ಟ. ಆಗ ಮಾತ್ರವೇ ಆ ಬಂದೆಯಾ ಅವನಿಗೆ ಕೇಳಿಸಿತ್ತು.
“ಆಸ್ಪತ್ರೆಗೆ ಹೋಗೋಣ ಸ್ವಾಮೀ” ಎಂದ ಅಪ್ಪು.
ತಲೆಯನ್ನು ಕಷ್ಟಪಟ್ಟು ಅಡ್ಡಡ್ಡಲಾಗಿ ಆಡಿಸಿದರು ಗುರುಗಳು.
ಕಣ್ಣುಗಳಲ್ಲೇ ಹತ್ತಿರ ಬರುವಂತೆ ಕರೆದರು. ಅಪ್ಪು ಮತ್ತೆ ಅವರ ಬಾಯಿಯ ಬಳಿ ಕಿವಿಯಿಟ್ಟ.
“ಅಲ್ಲಿ!” ಎಂಬ ಮಾತು ಮೆಲ್ಲಗೆ ಕೇಳಿಸಿತು.
ಅವನು ಅವರ ಮಾತನ್ನನುಸರಿಸಿ ಅವರು ನೋಡಿದೆಡೆ ನೋಡಿದ. ಅವರ ತೋರುಬೆರಳು ಅವರ ಪಕ್ಕದಲ್ಲಿಯೇ ಇದ್ದ ಗೋಡೆಯತ್ತ ತೋರಿತು.
“ಏನಿದೆ ಸ್ವಾಮೀ ಅಲ್ಲಿ?” ಎಂದ.
ಅವರಿಂದ ಉತ್ತರ ಬರಲಿಲ್ಲ. ಸರಕ್ಕೆಂದು ಅವರತ್ತ ನೋಡಿದ ಅಪ್ಪು. ಅವರ ಬಿಟ್ಟ ಕಣ್ಣುಗಳು ಬಿಟ್ಟೇ ಇದ್ದವು. ತೋರು ಬೆರಳು ನಿಂತೇ ಇತ್ತು. ತುಟಿಗಳ ಮೇಲೆ ಒಂದು ನಗು ಕಾಣಿಸಿತ್ತು. ಅಷ್ಟೇ…
ಗುರುಗಳು ಇಹಲೋಕದ ವ್ಯಾಪಾರ ಮುಗಿಸಿದ್ದರು.
ಅಪ್ಪು ಕ್ಷಣಕಾಲ ಸ್ಥಾವರದಂತಾದ.
ಏನಿದು ವಿಚಿತ್ರ? ನನ್ನ ಆಗಮನಕ್ಕಾಗಿಯೇ ಕಾದಿದ್ದರೇನು ಗುರುಗಳು? ಸುತ್ತಲೂ ನೋಡಿದ ಅಪ್ಪು.
ಅವನೊಬ್ಬನೇ ಇದ್ದ. ನಾಲ್ವರು ಶಿಷ್ಯರೂ ಹೊರಗೇ ನಿಂತಿದ್ದರು.
ಇದೂ ಒಂದು ತರಹ ಒಳ್ಳೆಯದಾಯಿತು ಎಂದುಕೊಂಡ ಅಪ್ಪು. ಏಕೆಂದರೆ ಅವನಿಗೆ ಅವನ ಬೆನ್ನ ಹಿಂದೆ ನಡೆಯಲಿದ್ದ, ನಡೆಯಬಹುದಾಗಿದ್ದ, ನಡೆದ ಸಂಚುಗಳ ಬಗ್ಗೆ ಒಂದಿಷ್ಟು ಸುಳಿವು ಮೊದಲೇ ಸಿಕ್ಕಿದಂತಾಗಿತ್ತು!
ಗುಹೆಯ ಬಾಗಿಲಿಗೆ ನಡೆದ ಅಪ್ಪು. ನಾಲ್ವರು ಶಿಷ್ಯರೂ ಅವರಾಡುತ್ತಿದ್ದ ಮಾತು ನಿಲ್ಲಿಸಿ ಇವನತ್ತ ನೋಡಿದರು.
“ನಾನು ಹೇಳೋವರೆಗೆ ಯಾರೂ ಒಳಗೆ ಬರಕೂಡದು. ಗುರುಗಳಿಗೆ ಒಂದಿಷ್ಟು ಸಂಸ್ಕಾರ ಮಾಡಬೇಕಿದೆ” ಎಂದುಬಿಟ್ಟ ಬಾಯ್ತಪ್ಪಿ.
“ಅಂದರೆ ಗುರುಗಳು?” ಎಂದರು ಪುರಂದರ ಮತ್ತು ಕಬೀರ.
“ಹೌದು. ಅವರು ಪರಂಧಾಮವನ್ನೈದಿದರು” ಎಂದ ಸ್ವಲ್ಪ ದುಃಖಿತ ಸ್ವರದಲ್ಲಿ ಅಪ್ಪು.
ತನ್ನ ಶಿಷ್ಯರಿಬ್ಬರಿಗೂ ಸನ್ನೆ ಮಾಡಿದ ಅಪ್ಪು. ಗುರುಗಳ ಶಿಷ್ಯರಿಗೆ ಅದರರ್ಥ ಆಗಲಿಲ್ಲ. ಇವರಿಬ್ಬರ ಮೇಲೆ ಒಂದು ಕಣ್ಣಿಡಿ ಎಂದು ಅಪ್ಪು ಸನ್ನೆ ಮಾಡಿದ್ದ. ಅಪ್ಪು ಸನ್ನೆ ಮಾಡಿದ್ದೂ, ಆ ಇಬ್ಬರು ಶಿಷ್ಯರು ಸರಿ ಎಂದು ಕಣ್ಣು ಬಾಗಿಸಿದ್ದೂ ಇನ್ನಿಬ್ಬರು ಶಿಷ್ಯರಿಗೆ ಅರಿವಾಗಲೇ ಇಲ್ಲ ಎಂದರೆ ಅದೆಷ್ಟು ಬೇಗ ಅಪ್ಪು ಅವರಿಗೆ ಸಂಜ್ಞೆ ಮಾಡಿದ್ದಿರಬೇಕು!
ಮತ್ತೆ ಒಳಗೆ ಹೋದ ಅಪ್ಪು. ಗುರುಗಳ ದೇಹವನ್ನು ಮೆಲ್ಲನೆ ಪಕ್ಕಕ್ಕೆ ಬಾಗಿಸಿ ನೋಡಿದ. ಅವರು ದಿಂಬಿನಂತೆ ಇಟ್ಟುಕೊಂಡಿದ್ದ ಸೇರು ಅಪ್ಪುವಿನ ಕಣ್ಣಿಗೆ ಬಿತ್ತು. ಅದು ಖಾಲಿಯಾಗಿತ್ತು. ಆದರೂ ಏನೋ ಅನುಮಾನ ಬಂದು ಅದರೊಳಗೆ ಕೈ ಹಾಕಿದ. ಏನೋ ಸಿಕ್ಕಿದಂತಾಯಿತು.


ಅದನ್ನು ಕಿತ್ತಿದ. ಅದೊಂದು ಮೇಣದ ಚೂರು. ಅದರೊಂದಿಗೆ ಹೊರಬಂದಿತ್ತೊಂದು ಚಿಕ್ಕ ಬೀಗದ ಕೈ.
ಇದು ಯಾವುದರ ಬೀಗದ ಕೈ?
ಸೇರು ಇದ್ದುದು ಗುರುಗಳ ತಲೆಯ ಬುಡದಲ್ಲಿ. ಹಾಗಾದರೆ ಅವರು ಅವರ ಪಕ್ಕದ ಗೋಡೆಯತ್ತ ಏಕೆ ಬೆರಳು ತೋರಿದರು?
ಅಲ್ಲೇನಿರಬಹುದು?
ಮೆಲ್ಲನೆದ್ದ. ಅವರ ಬೆರಳು ಹಾಗೆಯೇ ನಿಂತಿತ್ತು. ಅದು ತೋರುತ್ತಿದ್ದ ದಿಕ್ಕನ್ನು ಸರಿಯಾಗಿ ಗಮನಿಸಿ, ನಂತರ ಅವರ ಕೈಗಳನ್ನು ಮಡಿಚಿದ. ಅವರ ಕಾಲುಗಳನ್ನು ಕೂಡ ಮಡಿಚಿದ.
ಈಗ ಗೋಡೆಯತ್ತ ನಡೆದ. ಅದೇನೂ ದೊಡ್ಡ ಗುಹೆಯಾಗಿರಲಿಲ್ಲ. ಪುರಾತನ ಗುಹೆಯೊಂದಕ್ಕೆ ಅಲ್ಲಲ್ಲಿ ದುರಸ್ತಿ ಮಾಡಲಾಗಿತ್ತು.
ಗುರುಗಳು ತೋರಿದ ಜಾಗದಲ್ಲಿ ಗೋಡೆಯನ್ನು ತಡವಿದ. ಅಲ್ಲೊಂದು ಕಡೆ ಗೋಡೆ ಸ್ವಲ್ಪ ಒರಟಾಗಿ ಇದ್ದಂತೆನಿಸಿತು.
ಅಲ್ಲಿಯೇ ಇದ್ದ ಬೀಗದಕೈಯೊಂದರಿಂದ ಆ ಜಾಗವನ್ನು ಕೆರೆದ.
ಅಲ್ಲಿ ಟೊಕ್ ಎಂಬ ಸದ್ದು ಬಂದು ಗೋಡೆ ತೂತಾಗಿತ್ತು.
ಚಿಕ್ಕ ಗೂಡೊಂದು ಕಂಡಿತ್ತಲ್ಲಿ. ಅದರೊಳಗೆ ಕೈ ತೂರಿಸಲು ನೋಡಿದ. ಕೇವಲ ಎರಡು ಬೆರಳು ಮಾತ್ರ ಹೊಗುವಷ್ಟು ಚಿಕ್ಕ ರಂಧ್ರವದು. ತೋರುಬೆರಳು, ಮಧ್ಯದ ಬೆರಳು ತೂರಿಸಿದ. ಕೈಗೆ ಯಾವುದೋ ಕಾಗದ ಸಿಕ್ಕಂತೆ ಆಗಿತ್ತು. ಅದನ್ನು ಹೊರಗೆಳೆದ. ಟಕ್ಕನೆ ಗುಹೆಯ ಬಾಗಿಲಿನತ್ತ ನೋಡಿದ. ನಾಲ್ವರ ಗಮನವೂ ಈ ಕಡೆ ಇರಲಿಲ್ಲ. ಬಹುಶಃ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿದ್ದಿರಬೇಕು. ತನಗದು ಅನುಕೂಲವೇ!
ಚೀಟಿಯಲ್ಲಿ ಮೂರು ವಾಕ್ಯಗಳಿದ್ದವು. “ಅಪ್ರಮೇಯಾ, ರಾಮೇಶ್ವರದ ಗುಡಿಗೆ ಹೋಗಿ ಅಲ್ಲಿನ ನಿವೃತ್ತ ಅರ್ಚಕರ ವಿಳಾಸ ಪಡೆದುಕೋ. ಅವರ ಬಳಿ ನಿನಗೊಂದು ಬೀಗದಕೈ ಇದೆ. ಮತ್ತು ಒಂದು ಪತ್ರವಿದೆ. ನೀನು ನನ್ನ ಶಿಷ್ಯ ಎಂದೊಡನೆ ಅವರೊಂದು ವಾಕ್ಯ ಹೇಳುತ್ತಾರೆ. ಅದರ ಉಳಿದರ್ಧವನ್ನು ನೀನು ಹೇಳಬೇಕು. ಅದು ಯಾವುದೆಂದು ನಿನಗೆ ಅರಿವಿದೆ. ನನ್ನ ನಿನ್ನ ನಡುವೆ ಈ ಶ್ಲೋಕದ ಬಗ್ಗೆ ಬಹಳ ಚರ್ಚೆ ನಡೆದಿದೆ. ಅಂದ ಹಾಗೆ ನನ್ನ ಶಿಷ್ಯರಿಬ್ಬರನ್ನೂ ನಿನ್ನೊಂದಿಗೇ ಇಟ್ಟುಕೋ. ಅವರಲ್ಲಿ ಒಬ್ಬ ಬಹಳ ಒಳ್ಳೆಯವನು. ಇನ್ನೊಬ್ಬನನ್ನು ನಂಬಬೇಡ. ಅವನಾರೆಂದರೆ… ಎಂದು ಪತ್ರವನ್ನು ನಿಲ್ಲಿಸಿಬಿಟ್ಟಿದ್ದರು ಗುರುಗಳು!
ಓಹೋ, ಇವರ ಒಬ್ಬ ಶಿಷ್ಯ ಅಪಾಯಕಾರಿ. ಆದರೆ ಇವರಿಬ್ಬರಲ್ಲಿ ಯಾರದು?
ಪತ್ರ ಬರೆಯುವ ವೇಳೆಗೆ ಯಾರೋ ಬಂದುಬಿಟ್ಟರೇನೋ, ಅದಕ್ಕೇ ಅವಸರವಸರವಾಗಿ ಅದನ್ನು ಗುಹೆಯ ಗೋಡೆಯಲ್ಲಿ ಮುಚ್ಚಿಟ್ಟುಬಿಟ್ಟಿದ್ದಾರೆ. ಸರಿ, ಈಗ ಇಬ್ಬರು ಶಿಷ್ಯರನ್ನೂ ಒಟ್ಟಿಗೇ ಕರೆದುಕೊಂಡು ಹೋಗಬೇಕು. ನಂಬಿಕೆಗೆ ಅನರ್ಹನಾರೆಂದು ಅರಿಯಬೇಕು.
ಹೌದೂ, ತಾನು ಇಲ್ಲಿಂದ ಏನಾದರೂ ಒಯ್ಯಬೇಕಿದೆಯಾ? ಅದಕ್ಕೇ ತನ್ನನ್ನು ಕರೆಸಿದರಾ? ಅಥವಾ ಅವರ ದೇಹಕ್ಕೆ ಸಂಸ್ಕಾರ ಮಾಡಲು ನನ್ನನ್ನು ಇಲ್ಲಿಗೆ ಬರಹೇಳಿದರಾ?
ಶಿಷ್ಯರನ್ನು ಒಳಗೆ ಕರೆದ. ನಾಲ್ವರೂ ಸೇರಿ ಶವವನ್ನು ಮೇಲೆತ್ತಿದರು.
ಶವಕ್ಕೆ ಸಂಸ್ಕಾರ ಮಾಡಿ ಅಲ್ಲಿಂದ ಹೊರಡುವಾಗ “ನಾನು ನಿಮ್ಮ ಜೊತೆ ಬರ್ತೀನಿ” ಎಂದ ಪುರಂದರದಾಸ. “ನೀವು ಕರೆದುಕೊಂಡು ಹೋದರೆ ಬರ್ತೀನಿ” ಎಂದ ಕಬೀರ್ ದಾಸ.
“ಬನ್ನಿ ಹೋಗೋಣ. ಇಷ್ಟು ದೂರ ಬಂದಾಗಿದೆ. ರಾಮೇಶ್ವರನ ದರ್ಶನ ಮಾಡೋಣ” ಎಂದ ಅಪ್ಪು.

ಅವನ ಮನದಲ್ಲಾಗಲೇ ಆಲೋಚನೆ. ಇವರು ಹಿಂದೆಯೇ ಇರುವಾಗ ಹೇಗೆ ನಿವೃತ್ತ ಅರ್ಚಕರನ್ನು ಹುಡುಕುವುದು? ಭೇಟಿ ಮಾಡಿ ಹೇಗೆ ಮಾತಾಡುವುದು?
ಅಪ್ಪುವಿನ ಸ್ವಭಾವವೇ ಹಾಗೆ. ಮನದಲ್ಲಿ ಒಮ್ಮೆ ಪ್ರಶ್ನೆ ಮೂಡಿದರೆ ಅದನ್ನು ಚರ್ವಿತ ಚರ್ವಣ ಆಗುವವರೆಗೂ ಮಂಥನ ಮಾಡಿ ಅದರಲ್ಲಿನ ನಕಾರಾತ್ಮಕ ಹಾಲಾಹಲವನ್ನು ತೆಗೆದುಹಾಕಿ, ಸಕಾರಾತ್ಮಕ ಅಮೃತವನ್ನು ಪಾನ ಮಾಡಲು ಸಿದ್ಧಗೊಳಿಸುವ ಸ್ವಭಾವ ಆತನದು.
ಈಗಲೂ ಅದೇ ಅವನ ಮನಸ್ಸಿನಲ್ಲಿ ನಡೆದದ್ದು.
ಗುರುಗಳು ತನ್ನನ್ನು ಯಾವುದೋ ಕೆಲಸಕ್ಕಾಗಿ ಕರೆದಿದ್ದಾರೆ. ಆ ಕೆಲಸವೇನೆಂದು ತನಗಿನ್ನೂ ತಿಳಿಯದು.
ಪ್ರಾಯಶಃ ರಾಮೇಶ್ವರದ ಅರ್ಚಕರ ಬಳಿ ಇದಕ್ಕೆ ಉತ್ತರ ಸಿಗಬಹುದು.
ನಿವೃತ್ತ ಅರ್ಚಕರು ಸಿಗುವುದು ಹೇಗೆ? ಈಗ ಪೂಜೆ ಮಾಡುವ ಅರ್ಚಕರನ್ನು ಕೇಳಿದರೆ ನಿವೃತ್ತ ಅರ್ಚಕರ ವಿವರ ಸಿಕ್ಕೀತು ಎಂದುಕೊಂಡ.
ಹೆಚ್ಚು ದೂರವೇನೂ ಇರಲಿಲ್ಲ. ಹದಿನೆಂಟು ಕಿಮೀ ದೂರ ಪ್ರಯಾಣ ಮಾಡಿದರೆ ಅಲ್ಲಿದೆ ರಾಮೇಶ್ವರನ ಗುಡಿ.
ಲಂಕಾಗೆ ಪ್ರಯಾಣ ಮಾಡುವ ಮೊದಲು ಶ್ರೀರಾಮ ತಾನೇ ನಿರ್ಮಿಸಿದ ಮರಳಿನ ಲಿಂಗವೇ ರಾಮೇಶ್ವರ ಎಂಬ ಹೆಸರು ಪಡೆದಿದೆ.
ಈಗ ತನ್ನ ಮುಂದೆ ಇನ್ನೂ ಎರಡು ಸಮಸ್ಯೆಗಳಿವೆ.
ಗುರುಗಳ ಶಿಷ್ಯರಲ್ಲಿ ಕೆಟ್ಟವನಾರೆಂದು ಅರಿಯಬೇಕು.
ವಿನೋದವೆಂದರೆ, ಅವರ ಇಬ್ಬರು ಶಿಷ್ಯರಲ್ಲೇ ಒಬ್ಬ ನಂಬಿಕೆಗೆ ಅನರ್ಹ ಎಂದು ಇಲ್ಲಿಗೆ ಬರುವಾಗ ತಿಳಿದುಬಂದಿತ್ತು.
ತಾನೀಗ ಇಬ್ಬರು ಒಳ್ಳೆಯವರಲ್ಲದ ಶಿಷ್ಯರನ್ನು ಕಿತ್ತುಹಾಕಬೇಕು. ಅದಕ್ಕೂ ಮೊದಲು ಅವರಾರೆಂದು ತಿಳಿಯಬೇಕು.
ಇದೊಂದು ಜಟಿಲ ಸಮಸ್ಯೆಯೇ ಸರಿ!

ಮುಂದಿನ ವಾರಕ್ಕೆ

ಯತಿರಾಜ್ ವೀರಾಂಬುಧಿ

ಚಿತ್ರಗಳು : pininterest

Related post

Leave a Reply

Your email address will not be published. Required fields are marked *