ಪಶ್ಚಿಮ ಘಟ್ಟದಲ್ಲೊಂದು ಇಣುಕು – 1
ಪಶ್ಚಿಮ ಘಟ್ಟ ನಮ್ಮ ದೇಶದ ಅನರ್ಘ್ಯ ಸಂಪತ್ತು. ಗುಜರಾತಿನಿಂದ ಕನ್ಯಾಕುಮಾರಿಯವರೆಗೆ ಸುಮಾರು 1600 ಕಿಲೋಮೀಟರ್ ಉದ್ದದ ಘಟ್ಟ ಪ್ರದೇಶ ಹಾಗೂ ಪ್ರಪಂಚದ ಅತಿಸೂಕ್ಷ್ಮ ಪರಿಸರ ಎಂದು ಗುರುತಿಸಲ್ಪಟ್ಟಿದೆ.
ಮನಮೋಹಕ ದೃಶ್ಯಾವಳಿಗಳು, ಬಿಸಿಲು ಮತ್ತು ಮೋಡಗಳ ಕಣ್ಣಾಮುಚ್ಚಾಲೆಯಾಟ, ಜುಳುಜುಳು ಹರಿವ ನೀರಿನ ತೊರೆಗಳು, ಅಸಂಖ್ಯ ವನ್ಯಸಂಪತ್ತು, ಔಷಧೀಯ ಸಸ್ಯಸಂಪತ್ತು, ವೈವಿಧ್ಯಮಯ ಪ್ರಾಣಿ, ಪಕ್ಷಿ ಪ್ರಬೇಧಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಪಶ್ಚಿಮ ಘಟ್ಟಕ್ಕೆ ಮಹತ್ವದ ಸ್ಥಾನ ಇದೆ.
ನಮ್ಮ ಕರ್ನಾಟಕದಲ್ಲಿ ಪಶ್ಚಿಮಘಟ್ಟವು ದಾಂಡೇಲಿಯಿಂದ ಶುರುವಾಗಿ ಕೊಡಗು ಜಿಲ್ಲೆಯವರೆಗೆ ಸುತ್ತುವರೆದಿದೆ.
ಪಶ್ಚಿಮಘಟ್ಟದ ನಮ್ಮ ಕರ್ನಾಟಕದಲ್ಲಿನ ಭಾಗವನ್ನು ಸಹ್ಯಾದ್ರಿ ಶ್ರೇಣಿಗಳು ಎಂದು ಗುರುತಿಸಲಾಗಿದೆ ಹಾಗೂ ನಮ್ಮ ಕರ್ನಾಟಕದಲ್ಲಿಯೇ ಬಹುಪಾಲು ಪಶ್ಚಿಮಘಟ್ಟಗಳ ಭಾಗವಿರುವುದು ನಮ್ಮ ಕನ್ನಡ ನಾಡಿನ ಹೆಮ್ಮೆಯೇ ಸರಿ. ವಿವಿಧ ರೀತಿಯ ವನ್ಯಜೀವಿಗಳನ್ನು ಪಶ್ಚಿಮಘಟ್ಟವು ಹೊಂದಿದ್ದು ನಮ್ಮ ಕರ್ನಾಟಕ ಒಂದರಲ್ಲೇ 12 ರಕ್ಷಿತಾರಣ್ಯಗಳನ್ನು ಹೊಂದಿದೆ. ಇಂತಹ ಪರಿಸರ ವ್ಯವಸ್ಥೆಗೆ ಇರುವ ಅಪಾಯ ಕಡಿಮೆಯೇನಲ್ಲ.
ಹಲವು ನದಿಗಳಿಗೆ ಉಗಮಸ್ಥಾನ ಇದು. ತನ್ನೊಡಲಲ್ಲಿ ಸಂಗ್ರಹಿಸಿಟ್ಟ ನೀರನ್ನು ಇಡೀ ಜೀವರಾಶಿಗೆ ನಿಸ್ವಾರ್ಥವಾಗಿ ಧಾರೆ ಎರೆಯುವ ಮೂಲಕ ಅಸಂಖ್ಯ ಜೀವರಾಶಿಯ ಜೀವನದಿಯಾಗಿಯೂ ಇದು ಗುರುತಿಸಲ್ಪಟ್ಟಿದೆ.
ಈ ಬೆಟ್ಟಗಳಲ್ಲಿರುವ ಖನಿಜ ನಿಕ್ಷೇಪಗಳು ಇಂದು “ವಾಣಿಜ್ಯ” ದೃಷ್ಠಿಗೆ ಬಲಿಯಾಗಿ ಇಲ್ಲಿನ ನೀರಸೆಲೆಗಳು “ವಿದ್ಯುತ್ ಉತ್ಪಾದನೆ”ಯ ಹೆಸರಿನಲ್ಲಿ ಉದ್ಯಮಿಗಳ ಕಬಂಧ ಬಾಹುಗಳಲ್ಲಿ ಸಿಲುಕಿ ನಲುಗುತ್ತಿವೆ. ರಕ್ಷಿತಾರಣ್ಯ ಎಂಬ ಹಣೆಪಟ್ಟಿ ಹೊಂದಿರುವ ಕಾಡುಗಳು ಮರಗಳ್ಳರ ಪಾಲಾಗುತ್ತಿದೆ. ನಿರಂತರವಾಗಿ ಪಶ್ಚಿಮ ಘಟ್ಟದ ಮೇಲೆ ಒಂದಿಲ್ಲೊಂದು ರೀತಿಯ ಅತ್ಯಾಚಾರಗಳು ನಡೆಯುತ್ತಿವೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಕುದುರೆಮುಖ…
ಸಂಸೆ, ಮಲ್ಲೇಶ್ವರ ಹ್ಯಾಮ್ಲೆಟ್ ಗೆ ಸೇರ್ಪಡೆಗೊಂಡಿರುವ ಕುದುರೆ ಮುಖ ಪರಿಸರದಲ್ಲಿ ಮೂರುಶಕಗಳಿಗೂ ಹೆಚ್ಚು ಕಾಲ ಗಣಿಗಾರಿಕೆ ನಡೆಸಲಾಗಿತ್ತು.1969 ರಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದರಿಂದಾಗಿ 30 ವರುಷಗಳು ಪರಿಸರದ ಗರ್ಭಸೀಳಿ ಗಣಿಗಾರಿಕೆಯನ್ನು 3,500 ಹೆಕ್ಟೇರ್ ಭೂಮಿಯಲ್ಲಿ ನಡೆಸಲಾಗಿದೆ. 1999 ರಲ್ಲಿ ಈ ಲೀಸ್ ಅವಧಿ ಪೂರ್ತಿಗೊಂಡರೂ ಪ್ರತಿ ವರ್ಷ ಲೀಸ್ ನವೀಕರಣಗೊಳಿಸಿ 2005 ರ ತನಕ ಮತ್ತೆ ಗಣಿಗಾರಿಕೆ ನಡೆಸಲಾಯಿತು. ಪರಿಸರಾಸಕ್ತರ ನಿರಂತರ ಹೋರಾಟದ ಫಲವಾಗಿ 2005 ಡಿಸೆಂಬರ್ ನಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ.
ಗಣಿಗಾರಿಕೆಯಿಂದ ಸೊರಗಿದ್ದ ಕುದುರೆಮುಖದಲ್ಲಿ ಮತ್ತೆ ಹಸಿರನ್ನು ಚಿಗುರಿಸುವ ಪ್ರಯತ್ನಗಳು ಪ್ರಾರಂಭಗೊಂಡವು. ಗಣಿಗಾರಿಕೆ ನಡೆದ ಭೂ ಭಾಗದಲ್ಲಿ ಹಸಿರು ನಾಶವಾಗಿ ಹುಲ್ಲೂ ಚಿಗುರದಂತಹ ಸ್ಥಿತಿ ನಿರ್ಮಾಣವಾಗಿ,ಪ್ರಕೃತಿ ಮುನಿಸಿಕೊಂಡಿದ್ದಳು. ಈ ಭಾಗದಲ್ಲಿ ಹಸಿರು ಮೊದಲಿನಂತೆ ಬೆಳಸಬೇಕೆಂಬ ಉದ್ದೇಶದಿಂದ ಈ ಪ್ರದೇಶದಲ್ಲಿ ಈಗಾಗಲೇ ಹುಲ್ಲುಬೀಜಗಳನ್ನು ಬಿತ್ತಿ ಹುಲ್ಲುಬೆಳೆಸಲಾಗಿದೆ.
ಗಣಿಗಾರಿಕೆ ನಿಂತು ದಶಕ ಕಳೆದಿದೆ. ಯಂತ್ರಗಳ ಕರ್ಕಶ ಧ್ವನಿ ಮರೆಯಾಗಿದೆ. ಮತ್ತೆ ಈ ಭಾಗದಲ್ಲಿ ವನ್ಯಪ್ರಾಣಿಗಳ ಸಂಚಾರ ಪ್ರಾರಂಭಗೊಂಡು ಚಿರತೆ, ಕಾಡುಕೋಣ, ಹುಲಿ, ಸಿಂಗಳೀಕ, ಜಿಂಕೆ ,ಸಾಂಬಾರ್ ಮೊದಲಾದ ವನ್ಯಪ್ರಾಣಿಗಳು, ವೈವಿಧ್ಯಮಯ ಪಕ್ಷಿಗಳು ಈ ಪ್ರದೇಶದಲ್ಲಿ ಸಂಚರಿಸತೊಡಗಿವೆ. ಕಟ್ಟುನಿಟ್ಟಾದ ನಿಯಮಗಳಿಂದಾಗಿ ಮನುಷ್ಯನ ಅತಿರೇಕಗಳಿಗೆ ಕಡಿವಾಣ ಹಾಕುತ್ತಿರುವುದರಿಂದಾಗಿ ಗಣಿಗಾರಿಕೆ ನಡೆದ ಪ್ರದೇಶ ಮತ್ತೆ ಹಸಿರಿನಿಂದ ಕಂಗೊಳಿಸುವಂತಾಗುತ್ತಿದೆ. ಮರಳಿ ಕುದುರೆಮುಖ ಆ ಕಳೆ ಪಡೆದುಕೊಳ್ಳುತ್ತಿದೆ.
ಮುಂದಿನ ವಾರಕ್ಕೆ…….
ಸುನಿಲ್ ಹಳೆಯೂರು