ಪಶ್ಚಿಮ ಘಟ್ಟದಲ್ಲೊಂದು ಇಣುಕು – 3

ಪಶ್ಚಿಮ ಘಟ್ಟದಲ್ಲೊಂದು ಇಣುಕು – 3

ಪಶ್ಚಿಮ ಘಟ್ಟಗಳಲ್ಲಿ ಇರುವ ಸಾವಿರಾರು ಬಗೆಯ ಪ್ರಾಣಿ ಮತ್ತು ಸಸ್ಯ ಸಂಕುಲಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ. ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆ ಇರುವ ಇಲ್ಲಿ ಹಲವಾರು ಜೀವಿಗಳು ಅಳಿವಿನಂಚಿನಲ್ಲಿವೆ.

ಸಿಂಗಳೀಕ

ಇದರ ಬಾಲ ಸಿಂಹದ ಬಾಲದಂತಿರುವುದರಿಂದ ಇದಕ್ಕೆ ಸಿಂಹ ಬಾಲದ ಕೋತಿ (ಲಯನ್ ಟೈಲ್ಡ್‌ ಮಕಾಕ್) ಎಂದು ಹೆಸರು. ಇದರ ವೈಜ್ಞಾನಿಕ ನಾಮ ಮಕಾಕ ಸೈಲ್ನಸ್. ಇದರ ತಲೆ ಮತ್ತು ದೇಹದ ಉದ್ದ ಸುಮಾರು ೫೦-೬೦ ಸೆಂ ಮೀ ಬಾಲ ೧೦-೧೫ ಸೆಂಮೀ. ಹೆಣ್ಣು ಗಂಡಿಗಿಂತ ಚಿಕ್ಕದು.

ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುವ ಜಗತ್ತಿನ ಅತ್ಯಂತ ಹಳೆಯ ವಾನರ ಜಾತಿಯ ಪ್ರಾಣಿ ಸಿಂಹ ಬಾಲದ ಸಿಂಗಳೀಕ, ಮಾಮೂಲಿ ಕೋತಿಗಳಂತೆ ಇರದೇ ಮಾನವನನ್ನು ಕಂಡರೆ ದೂರ ಹೋಗುವ ಸಂಕೋಚದ ಪ್ರಾಣಿ ಇದಾಗಿದೆ.

ಸಿಂಗಳೀಕಗಳು ಪಶ್ಚಿಮಘಟ್ಟ ಮತ್ತು ಉತ್ತರ ಕನ್ನಡ ಜಿಲ್ಲೆಗಳ ದಟ್ಟ ಕಾಡಿನಲ್ಲಿ ವಾಸಿಸುತ್ತವೆ. ಗಲ್ಲ ಮತ್ತು ಕೆನ್ನೆಗಳ ಮೇಲೆ ಉದ್ದವಾದ ಕಂದುಬಣ್ಣದ ಕೂದಲು ಹೊಂದಿವೆ. ಇಡೀ ದೇಹದ ಮೇಲಿನ ಕೂದಲು ಮಿರುಗುವ ಕಪ್ಪು ಬಣ್ಣದ್ದು. ನಾಚಿಕೆಪಡುವ ಈ ಜೀವಿಗಳು ಗುಂಪು ಗುಂಪಾಗಿ ವಾಸಿಸುತ್ತವೆ. ಒಂದೊಂದು ಗುಂಪಿನಲ್ಲೂ ಸುಮಾರು ೧೨ ರಿಂದ ೨೦ ಪ್ರಾಣಿಗಳಿರುತ್ತವೆ. ಮರಗಳ ಮೇಲೆಯೇ ಇವುಗಳ ಚಲನವಲನ. ಕೆಲವು ಸಂದರ್ಭಗಳಲ್ಲಿ ಇವು ಮರಗಳಿಂದ ಇಳಿದು ಭೂಮಿಯ ಮೇಲೂ ಓಡಾಡುತ್ತವೆ.

ವಿವಿದ ರೀತಿಯ ಹಣ್ಣುಗಳು, ಎಲೆಗಳು, ಮೊಗ್ಗು, ಕೀಟಗಳು, ಚಿಕ್ಕ ಕಶೇರುಕಗಳು(vertebrates), ಮರದ ಮೇಲಿನ ಪಾರಿವಾಳದಂತಹ ಹಕ್ಕಿಗಳ ಮೊಟ್ಟೆಗಳು ಇವುಗಳ ಆಹಾರವಾಗಿದೆ.

ಇವುಗಳ ಒಟ್ಟು ಸಂಖ್ಯೆ ಅಂದಾಜು 3000-3500 ಇರಬಹುದೆಂದು ಅಂದಾಜಿಸಲಾಗಿದೆ.ಶಿರಸಿಯ ಸುತ್ತಲಿನ ಕಾಡುಗಳಲ್ಲಿ, ಕೊಲ್ಲೂರು ಕುದುರೆಮುಖ ಕಾಡುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡು ಬರುತ್ತವೆ. ಕೊಡಗಿನ ಕಡೆ ಇವುಗಳನ್ನು ಬೇಟೆಯಾಡಿ ಕಾಡನ್ನು ಕಾಫಿ ತೋಟಗಳನ್ನಾಗಿ ಬದಲಾಯಿಸಿದ ಪರಿಣಾಮದಿಂದ ಆ ಪ್ರದೇಶದಿಂದ ಸಂಪೂರ್ಣ ಕಾಣೆಯಾಗಿವೆಯಂತೆ.

ಅಣೆಕಟ್ಟುಗಳ ನಿರ್ಮಾಣ, ವಿದ್ಯುತ್ ಉತ್ಪಾದನೆ ಯೋಜನೆಗಳು, ರಸ್ತೆಗಳು, ವ್ಯವಸಾಯ ಇನ್ನು ಮುಂತಾದವುಗಳು ಇವುಗಳ ಅವಾಸಸ್ಥಾನವನ್ನು ನಾಶ ಮಾಡುತ್ತಿವೆ ಎಂಬುದು ಪರಿಸರ ತಜ್ಞರ ಅಭಿಪ್ರಾಯ. ಇದು ನಿಜವೂ ಹೌದು.

ಸುಮಾರು 300ಚದರ ಕಿಮೀ ನಷ್ಟು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟ, ಸಿರಸಿ ಮತ್ತು ಸಿದ್ದಾಪುರ ತಾಲೂಕುಗಳ ಪ್ರದೇಶವನ್ನು ಸಿಂಹ ಬಾಲದ ಸಿಂಗಳೀಕಗಳ ರಕ್ಷಣೆಗಾಗಿ ಕಾಯ್ದಿರಸಲಾಗಿದೆ.

ಅಳಿವಿನಂಚಿನಲ್ಲಿರುವ ಅಪರೂಪದ ಕೆಂದಳಿಲು

ಕಂದು, ಕೆಂಪು ,ಕಪ್ಪು ಬಣ್ಣಗಳಿಂದ ಕೂಡಿದ, ಮಿನುಗು ಕಣ್ಣುಗಳು,ನುಣುಪು ತುಪ್ಪಳದ ,ತನ್ನ ದೇಹಕ್ಕಿಂತ ಎರಡು ಪಟ್ಟು ಉದ್ದನೆಯ ಬಾಲವುಳ್ಳ ಈ ಅಳಿಲು ನೋಡಲು ಬಹಳ ಆಕರ್ಷಣೀಯವಾಗಿದೆ.

ಬಣ್ಣ, ಚುರುಕಾದ ಚಲನೆ, ವಿಶಿಷ್ಟ ಚಟುವಟಿಕೆ ಮೂಲಕ ಜನರನ್ನು ಆಕರ್ಷಿಸುವ ಕೆಂದಳಿಲು ಇತ್ತೀಚೆಗೆ ಕಣ್ಮರೆಯಾಗುತ್ತಿವೆ.

ಪಶ್ಚಿಮಘಟ್ಟ ಪ್ರದೇಶ, ಸಹ್ಯಾದ್ರಿ ಪರ್ವತ ಶ್ರೇಣಿ ಸೇರಿದಂತೆ ದಟ್ಟ ಕಾನನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೀವಿಸುತ್ತಿದ್ದ ಕೆಂದಳಿಲುಗಳು ಈಗ ಅಲ್ಲಲ್ಲಿ ಕೆಲವೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತವೆ.

ತಲೆ ಮತ್ತು ಶರೀರ 35ರಿಂದ 45 ಸೆಂ.ಮೀ. ಇದ್ದರೆ, ಬಾಲ ಮಾತ್ರ ತನ್ನ ಶರೀರದ ಒಂದೂವರೆ ಪಟ್ಟು ಉದ್ದ ಹೊಂದಿರುತ್ತದೆ. ಸಾಮಾನ್ಯವಾಗಿ ಇದು ಮರ ಬಿಟ್ಟು ನೆಲದ ಮೇಲೆ ಇಳಿಯುವುದು ಬಹಳ ಕಡಿಮೆ. ಸಸ್ಯಹಾರಿಯಾದ ಇದು ಕಾಡು ಮರಗಳ ಹಣ್ಣುತಿಂದು ಜೀವಿಸುತ್ತದೆ. ಹೆಣ್ಣು ಅಳಿಲು ಎತ್ತರವಾದ ಮರಗಳ ಮೇಲೆ ಕವಲುಗಳ ನಡುವೆ ಪೊಟರೆ ಮಾಡಿಕೊಂಡು ಮಾರ್ಚ್‌ನಲ್ಲಿ ಮರಿ ಹಾಕುತ್ತದೆ. ಜೀವಿತಾವಧಿಯಲ್ಲಿ ಏಳೆಂಟು ಬಾರಿ ಮರಿ ಹಾಕುವ ಇವು ಪ್ರತಿ ಬಾರಿ ಗೂಡು ಕಟ್ಟುವಾಗಲೂ ಕಿ.ಮೀ.ಗಟ್ಟಲೆ ಅಂತರ ಕಾಯ್ದುಕೊಳ್ಳುತ್ತವೆ. ಇವುಗಳು ಗುಂಪಾಗಿ ಕಾಣಿಸಿಕೊಳ್ಳುವುದು ಬಹಳ ವಿರಳ. ಏಕೆಂದರೆ ಇವು ಒಂಟಿತನವನ್ನೇ ಇಷ್ಟಪಡುತ್ತವೆ.

ಮುಂಜಾನೆ ಮತ್ತು ಸಂಜೆ ಮಾತ್ರ ಆಹಾರ ಅರಸುತ್ತವೆ ಕೆಂದಳಿಲುಗಳು ಬಿಸಿಲೇರಿದಂತೆ ವಿಶ್ರಾಂತಿಗೆ ಜಾರುತ್ತವೆ. ಆಹಾರ ಸರಪಣಿಯ ವಾಡಿಕೆಯಂತೆ ಕೆಂದಳಿಲು ಇರುವ ಜಾಗದಲ್ಲಿ ಹಾರುವ ಬೆಕ್ಕು ಜೀವಿಸುತ್ತದೆ. ಬೆಳಗ್ಗೆ ಕೆಂದಳಿಲು ಕಾಣಿಸಿಕೊಂಡ ಮರದಲ್ಲೇ ಸಂಜೆ ಹೊತ್ತಿಗೆ ಹಾರುವ ಬೆಕ್ಕು ಕಾಣಿಸಿಕೊಳ್ಳುವುದು ಕಾಡಿನ ಅಚ್ಚರಿಗಳಲ್ಲೊಂದು. ಬಹಳ ಚುರುಕಾದ ಇವು ಶತ್ರುಗಳಿಂದ ತಪ್ಪಿಸಿಕೊಳ್ಳಲು ಒಂದೇ ಜಿಗಿತಕ್ಕೆ ಮರದಿಂದ ಮರಕ್ಕೆ 6 ಮೀಟರ್‌ವರೆಗೆ ಹಾರಬಲ್ಲವು. ಎದ್ದು ಕಾಣುವ ಮೈ ಬಣ್ಣವಿದ್ದರೂ ಕ್ಷಣಾರ್ಧದಲ್ಲಿ ಶತ್ರುಗಳ ಕಣ್ಣು ತಪ್ಪಿಸಿಕೊಳ್ಳಬಲ್ಲವು.

ಇದರ ಪಾದದ ಕೆಳಗೆ ಮೆತ್ತನೆಯ ಗೊರಸು ಇದೆ. ಕಾಲುಗಳಲ್ಲಿ ಗಟ್ಟಿಮುಟ್ಟಾದ ಉಗುರುಗಳು ಇರುವುದರಿಂದ ಮರಹತ್ತುವುದು ಇವುಗಳಿಗೆ ಸಲೀಸು. ಇವುಗಳ ಬಾಚಿ ಹಲ್ಲುಗಳು ಜೀವನ ಪರ್ಯಂತ ಬೆಳೆಯುತ್ತಲೇ ಇರುತ್ತವಂತೆ.
ಅರಣ್ಯದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪ, ಸ್ಥಳೀಯರ ಬಾಯಿ ಚಪಲ ಮತ್ತು ಶ್ರೀಮಂತರ ವಿಲಾಸಿ ಚರ್ಮ ಉತ್ಪನ್ನಗಳ ತಯಾರಿಕೆಗೆ ಬಲಿಯಾಗಿ ನಶಿಸಿಹೋಗುವ ಪ್ರಾಣಿಗಳ ಪಟ್ಟಿಗೆ ಮಲಬಾರ್ ಅಳಿಲು ಕೂಡ ಸೇರಿದೆ.
ನಾಲ್ಕರಿಂದ ಐದು ಕೆ.ಜಿ. ತೂಗುವ ಇವುಗಳನ್ನು ಮಲೆನಾಡಿಗರು ಮತ್ತು ಗಿರಿಜನರು ತಿನ್ನುತ್ತಾರೆ. ರಾತ್ರಿಯವೇಳೆ ಮರದ ಟೊಂಗೆಗಳನ್ನು ಬಿಗಿದಪ್ಪಿ ಮಲಗುವ ಕೆಂದಳಿಲುಗಳನ್ನು ಬ್ಯಾಟರಿ ಬೆಳಕು ಬಿಟ್ಟು ಕದಲದಂತೆ ಮಾಡಿ ಬೇಟೆ ಆಡುತ್ತಾರೆ. ಅವುಗಳ ತುಪ್ಪಳ ಮತ್ತು ಚರ್ಮದ ಮಾರಾಟಕ್ಕಾಗಿ ಮರಗಳಲ್ಲಿ ಬಲೆಬೀಸಿ ಹಿಡಿಯುತ್ತಾರೆ.

ಕೇಂದ್ರ ಸರಕಾರವು ಕೆಂದಳಿಲನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಿದೆ.ಅರಣ್ಯ ಇಲಾಖೆ ಕೂಡ ಈ ಅಳಿಲುಗಳ ಬೇಟೆಯನ್ನು ನಿಷೇಧಿಸಿದೆ. ಇಂತಹ ಬೇಟೆಗಳನ್ನು ಕೈಗೊಂಡವರಿಗೆ ಕಠಿಣ ಶಿಕ್ಷೆಯೂ ಇದೆ

ಮುಂದುವರೆಯುವುದು….

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *