ಪಶ್ಚಿಮ ಘಟ್ಟದಲ್ಲೊಂದು ಇಣುಕು – 4
ನಾವು ಭಗವತಿ ಪ್ರಕೃತಿ ಶಿಬಿರದಿಂದ ಹೊರಟು ಕುರಿಂಜಾಲು ಬೆಟ್ಟದ ಕಡೆಗೆ ಚಾರಣ ಹೊರಟಿದ್ದೆವಷ್ಟೇ…ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ನಮ್ಮ ಗೈಡ್ ರಂಜಿತ್ ಒಂದು ಪ್ರಾಣಿಯ ಮಲ ತೋರಿಸಿ ಕೆಲವು ನಿಮಿಷಗಳ ಹಿಂದಷ್ಟೇ ಈ ಪ್ರಾಣಿ ಬಂದು ಹೋಗಿದೆ ಎಂದ. ನನ್ನ ಕುತೂಹಲ ಹೆಚ್ಚಾಗಿ ಅದರ ವಿವರ ಕೇಳಿದಾಗ ಅವನು ಹೇಳಿದ್ದು ಕಾಡುನಾಯಿ ಬಗ್ಗೆ..
Wild dog ಎಂದು ಕರೆಯಲಾಗುವ ಇದು ಸಂಘಜೀವಿ. ಸೀಳುನಾಯಿ ಕೆನ್ನಾಯಿ ಎಂದೂ ಕರೆಯುತ್ತಾರೆ.
ಕೃಪಾಕರ-ಸೇನಾನಿ ಅವರ The pack (ದಿ ಪ್ಯಾಕ್) ಎಂಬ 45 ನಿಮಿಷಗಳ ಸಾಕ್ಷ್ಯಚಿತ್ರ ಈ ಕಾಡುನಾಯಿಗಳ ಕುರಿತಾಗಿದ್ದು ಅದು Green Oscar Award ಪಡೆದುಕೊಂಡಿತ್ತು. 10 ವರ್ಷಗಳ ಕಾಲ ಅವುಗಳ ಜೀವನ ಶೈಲಿ ಅಧ್ಯಯನ ಮಾಡಿದ್ದ ಅವರು ತಯಾರಿಸಿದ್ದ ಸಾಕ್ಷ್ಯ ಚಿತ್ರ ನೋಡಿ ನನಗೆ ಇವುಗಳ ಬಗ್ಗೆ ಮತ್ತಷ್ಟು ಆಸಕ್ತಿ ಹೆಚ್ಚಿತ್ತು.
ಕಾಡುನಾಯಿಗಳು ಬೇಟೆಯಾಡುವುದು ಹಗಲು ಹೊತ್ತು. ಇವುಗಳು ತಮ್ಮ ಮರಿಯನ್ನು ಗುಹೆಗಳಲ್ಲಿ ರಕ್ಷಿಸಿಕೊಳ್ಳುತ್ತವೆ. ಇವುಗಳ ಗರ್ಭಾವಸ್ಥೆ ಎರಡು ತಿಂಗಳು. ಒಮ್ಮೆಗೆ ನಾಲ್ಕರಿಂದ ಆರು ಮರಿಗಳನ್ನು ಹಾಕಿ ಎರಡು ತಿಂಗಳವರೆಗೂ ಹಾಲು ಕುಡಿಸುತ್ತವೆ.
ಕಾಡು ನಾಯಿಯೊಂದು ಪೂರ್ತಿಯಾಗಿ ಬೆಳೆಯಲು ಆರು ತಿಂಗಳು ಬೇಕು. ಇವುಗಳ ಆಯಸ್ಸು 15ರಿಂದ 16 ವರ್ಷ. ಇವುಗಳು ತಮ್ಮ ಬೇಟೆಯನ್ನು ಎಷ್ಟು ಕಿಲೋಮೀಟರ್ ವರೆಗೂ ಕೂಡ ಬೆನ್ನಟ್ಟಿಕೊಂಡು ಹೋಗಿ, ಕೊಲ್ಲಬಲ್ಲವು. ಸಾಮಾನ್ಯವಾಗಿ ನೀರಿರುವ ಬಳಿ ಅಟ್ಟಿಸಿಕೊಂಡು ಹೋಗಿ ಅಲ್ಲಿ ತಪ್ಪಿಸಿಕೊಳ್ಳಲು ಬಿಡದಂತೆ ಕೊಂದುಬಿಡುತ್ತವೆ. ಇವು ಬೇರೆ ನಾಯಿಗಳಂತೆ ಬೊಗಳುವುದಿಲ್ಲ. ಇವುಗಳ ಕಿರುಚಾಟ ಸೀಟಿ ಹೊಡೆದಂತೆ ಇರುತ್ತದೆ.
ಕಾಡುನಾಯಿಗಳು ಬೇಟೆಯಾಡುವ ಪರಿಯೇ ಭಯಂಕರ. ಅದು ತಾನು ಬೇಟೆಯಾಡಿದ ಪ್ರಾಣಿ ಸಾಯುವವರೆಗೆ ಕಾಯುವುದೇ ಇಲ್ಲ. ಬದುಕಿರುವಂತೆಯೇ ತಿನ್ನಲು ಆರಂಭಿಸುತ್ತದೆ.
ಇವುಗಳು ತುಂಬಾ ಚುರುಕು ಹಾಗೂ ಚಾಣಾಕ್ಷ ಜೀವಿಗಳು. ಇವುಗಳ ಶಕ್ತಿಯೇ ಗುಂಪು. ಇವುಗಳ ಬೇಟೆ ಆಡುವ ಪ್ರಕ್ರಿಯೆ ವಿಶಿಷ್ಟ ಹಾಗೂ ಅದ್ಬುತ. ಇವುಗಳ ಗುಂಪನ್ನು ಹಲವಾರು ತಂಡಗಳನ್ನಾಗಿ ಮಾಡಿಕೊಂಡು ಬೇಟೆ ಆಡುತ್ತವೆ.
ಒಂದು ತಂಡ ಬೇಟೆ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋದರೆ, ಅದು ಬರುವ ದಾರಿಯಲ್ಲೇ ಹೊಂಚು ಹಾಕಿ ನಿಲ್ಲುವ ಮತ್ತೊಂದು ಗುಂಪು ಸುಲಭವಾಗಿ ಬೇಟೆಯಾಡುತ್ತದೆ. ಹುಲಿ ಅಥವಾ ಚಿರತೆ ಬೇಟೆ ಆಡುವಾಗ ಕುತ್ತಿಗೆಗೆ ಬಾಯಿ ಹಾಕಿ ಉಸಿರುಗಟ್ಟಿಸಿ ತಮ್ಮ ಬೇಟೆಯನ್ನು ಕೊಲ್ಲುತ್ತವೆ. ಆದರೆ ಕಾಡುನಾಯಿಯ ರೀತಿಯೇ ಬೇರೆ. ಬೇಟೆಯನ್ನು ಕಚ್ಚುತ್ತಾ ಹಾಗೇ ತಿನ್ನಲು ಶುರು ಮಾಡಿಬಿಡುತ್ತವೆ.
ಗುಂಪಿನಲ್ಲಿ ವಾಸಿಸುವ ಕಾಡುನಾಯಿಗಳದ್ದು ಅತ್ಯಂತ ಸಂಕೀರ್ಣ ಬದುಕು. ಅಧ್ಯಯನಕ್ಕಾಗಲೀ, ಚಿತ್ರೀಕರಣಕ್ಕಾಗಲೀ ಸುಲಭಕ್ಕೆ ಸಿಗದ ನಿಗೂಢ ಜೀವಿಗಳಿವು. ಸಂಕೋಚ ಪ್ರವೃತ್ತಿಯ ಇವು ಮಾನವನಿಂದ ಸದಾ ದೂರ. ಇದಕ್ಕೆ ಕಾರಣಗಳು ಇಲ್ಲವೆಂದಲ್ಲ. ಭಾರತವನ್ನು ಆಳಿದ ಬ್ರಿಟೀಷರು ಕಾಡುನಾಯಿಗಳ ಮಾರಣಹೋಮ ಮಾಡಿದರು. ತಾವು ಬೇಟೆಯಾಡುವ ಜಿಂಕೆಗಳ ಸಂತತಿಗೆ ಈ ನಾಯಿಗಳು ಮಾರಕವೆಂದು ತೀರ್ಮಾನಿಸಿದರು. ತಮಗೆ ಸಿಗಬೇಕಾದ ಜಿಂಕೆಯನ್ನೆಲ್ಲಾ ಇವು ತಿಂದು ಮುಗಿಸುತ್ತಿವೆಯೆಂದು ಭಾವಿಸಿ, ಕಂಡಲ್ಲಿ ಕೊಲ್ಲಲು ಆದೇಶಿಸಿದರು. ಆನಂತರ ಕಾಡುನಾಯಿಗಳ ಸಂತತಿ ನಿರ್ನಾಮ ಹಂತಕ್ಕೆ ಬಂದಿತು. ಇದು 1972 ರವರೆಗೆ ಮುಂದುವರೆಯಿತು. ಈ ಆಘಾತದಿಂದ ತತ್ತರಿಸಿದ ಕಾಡುನಾಯಿಗಳು ಮನುಷ್ಯರನ್ನು ಕಂಡರೆ ಸಾಕು, ಹೆದರಿ ನಡುಗುತ್ತಿದ್ದವು. ಆ ನೆನಪು ಇನ್ನೂ ಅವುಗಳಲ್ಲಿ ಉಳಿದಿರುವುದರಿಂದ, ಅವುಗಳನ್ನು ಸುಲಭವಾಗಿ ಸಮೀಪಿಸಲು ಸಾಧ್ಯವಿಲ್ಲ…
ಮುಂದುವರೆಯುವುದು….
ಸುನೀಲ್ ಹಳೆಯೂರು