ಪಾಕ ಕ್ರಾಂತಿ (ಆಯ್ದ ಬಾಗ)

ಸಂತೆಯ ಅನಾವರಣ

ಪಾಕಕ್ರಾಂತಿಯ ನನಗಿಷ್ಟವಾದ ಸಣ್ಣ ತುಣುಕು.

ಸಂತೆಯಲ್ಲಿ ಚೌಕಶಿ ಮಾಡುವುದೆಂದರೆ ಅದೊಂದು ಮನ:ಶಕ್ತಿಯ ಮಲ್ಲಯುದ್ಧವೇ ಸರಿ. ಬೇಡಿಕೆ ಎಷ್ಟಿದೆ?ಸರಬರಾಜು ಎಷ್ಟಿದೆ? ಮುಂತಾದ ಮಾರುಕಟ್ಟೆ ಒತ್ತಡಗಳಿಗೆ ಯಾವ ರೀತಿಯೂ ಸಂಬಂಧಪಡದ ಒಂದು ವಿಚಿತ್ರ ಮತ್ತು ಅಸಂಬದ್ಧ ಜಗಳ ಅದು.

“ಎಷ್ಟಯ್ಯ? ” ಎಂದು ರೇಟು ಕೇಳಿ.

ಅವನು ರೇಟು ಹೇಳಿದ ಕೂಡಲೇ ನೀವು ಹೃದಯಸ್ತಂಭನ ವಾದಂತೆ ನಟಿಸಬೇಕು!

ನೀವು ಕೇಳಿದ ರೇಟಿಗೆ ಕೊಡದಿದ್ದರೆ ಅವನ ಮಾಲು ಕಾಲ ಕಸಕ್ಕಿಂತ ನಿಮಗೆ ಕೀಳೆಂದು ಅಭಿನಯಿಸಿ, ಅವನ ಒತ್ತಾಯಕ್ಕಾಗಿ ಮಾತ್ರವೇ ಚೌಕಾಶಿ ಮುಂದುವರಿಸುತ್ತಿದ್ದೀರಿನ್ನುವ ಹಾಗೆ ನಟನೆ ಮಾಡಬೇಕು.

ಮಾರುವವನಂತೂ ನೀವು ಕೊಡುವ ದುಡ್ಡಿಗೆ ಏನು ಬೆಲೆ ಇಲ್ಲವೇನ್ನುವುದನ್ನು ಸಾಕ್ಷ್ಯಾಧಾರ ಸಹಿತ ನಿಮಗೆ ಮನದಟ್ಟು ಮಾಡಿಸುತ್ತಾನೆ. ನಿಮ್ಮ ರೇಟು ಕೇಳಿದ ಕೂಡಲೇ ಆತ ನಿಮ್ಮನ್ನು ಅಜನ್ಮ  ವೈರಿಯಂತೆ ನೋಡುತ್ತಾ.

ನೀವು ಪುರಾತನ ಕಾಲದ ಪಳೆಯುಳಿಕೆಯೋ ಅಥವಾ ಯಾವುದೋ ಕೊಂಪೆ ಊರಿನಿಂದ ಬಂದಿರುವ ಬೆಂತರಾವೂ ಎಂದು ಶಂಕೆ ವ್ಯಕ್ತ ಪಡಿಸುತ್ತಾನೆ. ಇಲ್ಲವೇ ನಿಮ್ಮ ವ್ಯಾಪಾರ ಅಕ್ಷರಶ: ಢಕಾಯಿತಿಯ  ಇನ್ನೊಂದು ಆವೃತಿಎಂದೇ ಘೋಷಿಸಿ ನೀವು ಹೇಳುತ್ತಿರುವ ಬೆಲೆಯನ್ನು ಅಕ್ಕಪಕ್ಕದವರಿಗೆಲ್ಲಾ ಬಹಿರಂಗಪಡಿಸಿ ಎಲ್ಲರೂ ಸಾಮೂಹಿಕವಾಗಿ ಅಪಹಾಸ್ಯ ಮಾಡುತ್ತಾರೆ!

   ಒಟ್ಟಿನಲ್ಲಿ ಸಂತೆ ಮೈದಾನ ವೆಂದರೆ ಅದೊಂದು ಅಸ್ತ್ರ ಪ್ರತ್ಯಸ್ತ್ರಗಳ ಕುರುಕ್ಷೇತ್ರ. ತರಲೆಗಳ ತವರುಮನೆ. ಒಂದು ಸಾರಿ ಚೌಕಾಶಿಯ ಜಗಳ ಪ್ರಾರಂಭಿಸಿದ ಮೇಲೆ ಮಧ್ಯದಲ್ಲಿ ಯುದ್ಧ ವಿರಾಮ ಘೋಷಿಸುವಂತೆಯೂ ಇಲ್ಲ! ಬೆಲೆ ದುಬಾರಿಯಾಯ್ತು ಎಂದು ಮುಖ ತಿರುಗಿಸಿದರೆ. ” ರೇ! ಬನ್ನಿ ಇಲ್ಲಿ. ಯಾಪಾರ ಅಂದ್ರೆ ಕಡ್ಡಿ ಮುರದಂಗೆ ಒಂದೇ ಮಾತಾ? ನಾನು ಬೇಕಾದ್ದು ಹೇಳಬಹುದು.

ನೀವೇನು ನಾನು ಕೇಳಿದಷ್ಟು ಕೊಟ್ರಿ? ನೀವು ಮೂರುಕಾಸಿಗೆ ಕೇಳಿರಬಹುದು! ನಾನೇನು ಕೊಟ್ಟುಬಿಟ್ಟನ! ಬನ್ನಿ ಇಲ್ಲಿ. ಸ್ವಲ್ಪ ಹೆಚ್ಚು ಕಮ್ಮಿ ಮಾಡಿಕೊಳ್ಳೋಣ  ” ಇಂದು ಮತ್ತೆ ನಿಮ್ಮನ ಯುದ್ಧರಂಗಕ್ಕೆ ಎಳೆದುಕೊಳ್ಳುತ್ತಾರೆ. ನಾವು ಚಕ್ರವ್ಯೂಹ ಪ್ರವೇಶಿಸಿದ ಅಭಿಮನ್ಯು ತರ ಹೊರದಾರಿ ಗಳಿಲ್ಲದ ಕದನವೊಂದರಲ್ಲಿ ಸಿಲುಕಿಕೊಳ್ಳುತ್ತೇವೆ.

             ಈ ಚೌಕಾಶಿ ವ್ಯವಹಾರದಲ್ಲಿ ಗಂಡಸರಿಗಿಂತ ಹೆಂಗಸರು ಹೆಚ್ಚು ಕುಶಲಿಗಳು ಎಂದು ಕಾಣುತ್ತದೆ. ಸಂತೆಗಳಲ್ಲಿ ಅವರದೇ ಹೆಚ್ಚು ದರ್ಪ ದರಬಾರು. ಕೆಲವು ಹೆಂಗಸರು ಚೌಕಾಶಿ ಮಾಡುವ ಗಿರಾಕಿಗಳು ಕೊಂಚ ಮರ್ಯಾದಸ್ಥರ ಕಂಡರೆ ಸ್ವಲ್ಪ A ಸರ್ಟಿಫಿಕೇಟ್ ಅರ್ಥ ಧ್ವನಿಸುವಂತ ಮಾತುಗಳನ್ನು ಸಹ ಆಡಿ  ಗಿರಾಕಿಗಳ ವದನ ನಾಚಿಕೆಯಿಂದ ಕೆಂಪಾಗಿ ಅವರು ಆದಷ್ಟು ಬೇಗ ದುಡ್ಡುಕೊಟ್ಟು ಪರಿಸ್ಥಿತಿಯಿಂದ ಪಾರಾಗಲು ಹವಾಣಿಸುವಂತೆ ಮಾಡುತ್ತಾರೆ.

ಇಷ್ಟಾದರೂ ಇದೆಲ್ಲ ವ್ಯಾಪಾರದ ಮರ್ಜಿಯೇ ಎನ್ನಬಹುದು. ಆದರೆ ಸಂತೆ ವ್ಯವಹಾರದಲ್ಲಿ ಇದಕ್ಕಿಂತ ಎಷ್ಟು ಅಸಂಗತವೂ ಸರ್ವೇಸಾಮಾನ್ಯ ಎನ್ನುವಂತೆ ಸಂಭವಿಸುವಂತೆ ನೋಡಿದ್ದೇನೆ.

ಇವರ  ಚೌಕಾಶಿಯ ಕೋಪಾಟೋಪಗಳನ್ನು ಬಿಂಕ ಬಿನ್ನಾಣ ಗಳನ್ನು ನೋಡಿದರೆ ಸಂತೆಗಳಲ್ಲಿ ಕೇವಲ ಕೊಟ್ಟುಕೊಳ್ಳುವ ವ್ಯಾಪಾರಕ್ಕಿಂತ ಸಂಕೀರ್ಣವಾದದ್ದು ನಡೆಯುತ್ತದೆ ಎಂದು ಹೇಳಬಹುದು.

ಇವರ ಚೌಕಾಶಿಯ ಚಕ್ರವ್ಯೂಹದೊಳಗೆ ನುಗ್ಗಿ ಗುದ್ದಾಡಲು ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ನಾನು ಚೌಕಾಸಿಗೆ ಹೋಗುವುದಿಲ್ಲ ನನ್ನ ಹೆಂಡತಿಯoತೂ ಸಂತೆ ವ್ಯಾಪಾರಕ್ಕೆ ನಾನು ಸುತರಾಂ ನಾಲಾಯಕ್ ಮನುಷ್ಯನೆಂದು ತೀರ್ಮಾನಿಸಿದ್ದಾಳೆ. ಅವಳ ಪ್ರಕಾರ ನಾವು ಕಾರಿನಲ್ಲೊ ಸ್ಕೂಟರಿನಲ್ಲೊ ಟ್ರಿಮ್ ಆಗಿ ಸಂತೆಗೆ ಹೋಗುವುದೇ ತಪ್ಪು. ಆದ್ದರಿಂದಲೇ ಸಂತೆ ಮಾರಾಟಗಾರರು ಬೆಲೆ ಹೆಚ್ಚಿಗೆ ಹೇಳುತ್ತಾರೆ ಎಂದು ಅವಳ ಭಾವನೆ. ಇದರಲ್ಲಿ ಸತ್ಯಂಶಾ ಇರಬಹುದು. ಆದರೇನು ಮಾಡುವುದು!

ಸಂತೆಗಳಲ್ಲಿ ಬಡವರೆಂದು ತೋರಿಸಿಕೊಳ್ಳಲು ನಾವು ಹರಕಲು ಬಟ್ಟೆ ಕೊಳಕು ಚೀಲಗಳ ಸಂತೆ ಯುನಿಫಾರ್ಮ್ ಒಂದನ್ನು ಧರಿಸಿ ಫ್ಯಾನ್ಸಿ ಡ್ರೆಸ್ ಮಾಡಿಕೊಂಡು ಹೋಗಲಾಗುತ್ತದೆಯೆ?

ಮೂಡಿಗೆರೆ ಸಂತೆ ಎಂದರೆ ಮೂರ್ಖರು. ಮುಟ್ಠಾಳರು, ಪೆದ್ದರು, ಕೇಡಿಗಳು ವಂಚಕರು ಕಣ್ಣುಕಟ್ಟು ಮಾಡುವವರು ಪ್ರಮಾಣಿಕರು, ಚೌಕಾಸಿ ಮಾಡುವವರು, ಪ್ರತಿಯೊಬ್ಬರಿಗೂ ತಮ್ಮ ತಮ್ಮ ಕಸುಬುದಾರಿಕೆಯನ್ನು ಒರೆಹಚ್ಚಿ   ತಾಳೆ ನೋಡಲು ವಾರಕ್ಕೊಮ್ಮೆ ಸಿಕ್ಕುವ ಸದಾವಕಾಶ. ತರತರದ ವಿದ್ಯೆ ಅವಿದ್ಯೆ ಗಳ ಪ್ರವೀಣರು ಬೇರೆಬೇರೆ ಕಡೆಗಳಿಂದೆಲ್ಲ ಇಲ್ಲಿಗೆ ಆಗಮಿಸುತ್ತಾರೆ.

ಹಾಗೆ ಅವರ ಕೈಚಳಕಕ್ಕೆ ಬಲಿಪಶುಗಳಾದ ಮೂರ್ಖ ಶಿಖಾಮಣಿಗಳು ಜಗಳ ಹೊಡೆದಾಟ ಮಾರಾಮಾರಿಗೆ ರೆಡಿಯಾಗಿ, ಹುಟ್ಟಿದ ಮನುಷ್ಯರೆಲ್ಲ ಒಂದಲ್ಲ ಒಂದು ದಿನ ಸ್ಮಶಾನಕ್ಕೆ ಬಂದೇ ಬರುತ್ತಾರೆನ್ನುವಂತೆ, ಕಳೆದ ಸಂತೆಯಲ್ಲಿ ತಮಗೆ ಮೋಸ ಮಾಡಿದ ದಗಾಕೋರರ ಮುಖ  ಪ್ರಮುಖ ದರ್ಶನಕ್ಕೆ ಹಲ್ಲು ಮಸೆಯುತ್ತಿರುತ್ತ ಅಡ್ಡಾಡುತ್ತಾರೆ. ಕಂಡಾಗ ಜಗಳವಾಡಲು ಸ್ಪೂರ್ತಿ ಬರದಿದ್ದರೆ ಕೂಡಲೇ ಓಡಿ ಹೋಗಿ ಒಂದೆರಡು ದರಾಮು ಸ್ಪೂರ್ತಿ ಸಂಜೀವಿನಿಯನ್ನು ಸೇವಿಸಿ ಸ್ಪೂರ್ತಿ ತಗೊಳ್ಳುತ್ತಾರೆ. ಆದರೆ ಸ್ಪೂರ್ತಿ ತಲೆಗೆ ಹೊತ್ತಿಗೆ ಅವರಿಗೆ ಜಗತ್ ಸಮಸ್ತವೂ ದಗಾಕೋರರ ತರವೇ ಕಾಣುತ್ತದೆ.

 ಸಾಯಂಕಾಲದ ಹೊತ್ತಿಗೆ ಅವರು ಇನ್ನಷ್ಟು ಮೂರ್ಖರಾಗಿ ದಾರಿಯಲ್ಲಿ ತೂರಾಡುತ್ತಾ, ಹೀನಮಾನ ಬೈಯುತ್ತ. ಹೆಂಡತಿ-ಮಕ್ಕಳ ಸಹಾಯ ಒಂದಿಗೆ ಮನೆ ಕಡೆಗೆ ಹೆಜ್ಜೆ ಹಾಕುವುದನ್ನು ನೀವು ನೋಡಬಹುದು. ಒಟ್ಟಿನಲ್ಲಿ ನಮ್ಮೂರ ಸಂತೆ ಎಂದರೆ ಎಲ್ಲರ ಎಲ್ಲವೂ ವ್ಯಕ್ತವಾಗುವ ಒಂದು  ಅಭಿವ್ಯಕ್ತಿ ವೇದಿಕೆ.

ನನ್ನ ಅತ್ಯಂತ ಹಿಂದಿನ  ಸ್ಮೃತಿಗಳಲ್ಲಿ ಒಂದು. ನಮ್ಮಜ್ಜ ಸಂತೆಗೆ ಹೋಗುತ್ತಿದ್ದದ್ದು. ಅವರು ಸಂತೆಗೆ ಹೋಗುವಾಗ ಹಾಕಿಕೊಂಡು ಹೋಗಲೆಂದೇ ಒಂದು ಜರಿ ರುಮಾಲು. ಹಾಗೂ ಜರಿಪೇಟ ಕೋಟಹ್ಯಾಂಗರಿಗೆ  ನೇತುಹಾಕಿರುತ್ತಿದ್ದರು. ಪ್ರತಿವಾರವೂ ಅಡಿಗೆ ಅಳು ಉಜೀಣನನ್ನು  ಕರೆದುಕೊಂಡು ಒಂದು ದೊಡ್ಡ ಬುಟ್ಟಿಯನ್ನೂ ಚೀಲವನ್ನ್ನೂ ಅವನ ತಲೆ ಮೇಲೆ ಹೋರಿಸಿಕೊಂಡು, ಜರಿ ರುಮಾಲು ಪೇಟ  ತೊಟ್ಟು ಸಂತೆ ಕಡೆಗೆ ಹೋಗುತ್ತಿದ್ದುದನ್ನು ನಾನು ಈಗಲೂ ನಿರಾಯಸವಾಗಿ ಕಲ್ಪಿಸಿಕೊಳ್ಳಬಲ್ಲೆ. ಆದರೆ  ನಾವೆಲ್ಲಾ ತುಂಬಾ ಚಿಕ್ಕವರಿದ್ದುದರಿಂದ ಸಂತೆಗೆ ಕರೆದೊಯ್ಯುತ್ತಲೂ ಇರಲಿಲ್ಲ.ನಮಗೆ ಸಂತೆ ಹೇಗಿರುತ್ತದೆಂದು ಗೊತ್ತೂ

ಇರಲಿಲ್ಲ. ಹೈಸ್ಕೂಲು ದಾಟಿ ಕಾಲೇಜಿಗೆ ಬರುವವರೆಗೂ ಸಂತೆಗಳನ್ನು ನಾನು ನೋಡಿಯೇ ಇರಲಿಲ್ಲ. ಹೈಸ್ಕೂಲಿನ ಸಂಸ್ಕೃತದ ಮೇಷ್ಟರು ಕ್ಲಾಸಿನಲ್ಲಿ ಹುಡುಗರು ಗಲಾಟೆ ಮಾಡಿದಾಗ ಇದೇನು ಕ್ಲಾಸು ಸಂತೆಯೂ ಎಂದು ಬಯ್ಯುತ್ತಿದ್ದುದ್ದ ರಿಂದ  ಅದೊಂದು ಗಲಾಟೆ ಜಾಗ ಎಂದು ಮಾತ್ರ ತಿಳಿದಿದ್ದೆ. ಸಂತೆ ಎಂದರೆ ಹಳ್ಳಿಯವರು ವ್ಯಾಪಾರ ವ್ಯವಹಾರ ನಡೆಸುವ ಜಾಗ ಎಂದು ತಿಳಿದದ್ದು ನಾನು ಕಾಲೇಜಿಗೆ ಬರುವ ವೇಳೆಗೆ. ಅದು ಸಾಹಿತ್ಯದ ಮುಖಾಂತರ. ಕಥೆ ಕಾದಂಬರಿಗಳಲ್ಲಿ ಓದಿ.! ಪೇಟೆ ಗಳಲ್ಲಿರುವ ಬೇಕಾದಷ್ಟು ಮಕ್ಕಳು ಸಂತೆಯ ಬಗ್ಗೆ ನನ್ನಂತೆಯೇ ಏನು ಗೊತ್ತಿಲ್ಲದವರು ಇದ್ದರು.

ಮೂಲ ಕಥೆ – ಪೂರ್ಣ ಚಂದ್ರ ತೇ ಜಸ್ವಿ


ಫೇಸ್ಬುಕ್ ಕೃಪೆ -ಅನಿರುದ್ಧ ಸಾಲಿಗ್ರಾಮ

Related post