ಪಾರಿಜಾತ ಹೂ ಮತ್ತೆ ಕಾಡಿತ್ತು!

ಬಾಲ್ಯದ ದಿನಗಳು ಎಲ್ಲರಲ್ಲೂ ನೆನಪಿರುತ್ತೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಅವು ಎದ್ದು ಕೂರುತ್ವೆ.

ಮತ್ತೆ ಅವು ಗರ್ಭದಲ್ಲಿ ಸೇರಿ ಬಿಡುತ್ತೆ. ಮತ್ಯಾವಾಗಲೋ ಮತ್ತೆ ಎದ್ದು ಕಾಡುತ್ತೆ. ಹಾಗೆ ನನಗೂ ನನ್ನ ಬಾಲ್ಯದ ನೆನಪುಗಳು ಸಾಕಷ್ಟು ಬಾರಿ ಕಾಡಿದ್ದಿದೆ.

ಇತ್ತೀಚೆಗೆ ನಾವು ನೋಡಿದ ಡಾ. ವೈದೇಹಿ ಅವರ ಕತೆಗಳ ಆಧಾರಿತ, ಚಂಪಾ ಶೆಟ್ಟಿ ಅವರ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರ ನೋಡಿದ ಮೇಲೆ ಮತ್ತೆ ನನ್ನ ಬಾಲ್ಯದ ದಿನಗಳು ಮತ್ತಷ್ಟು ಕಾಡ ಹತ್ತಿತು.

ಈ ಚಿತ್ರದಲ್ಲಿ ಬರುವ ಅಜ್ಜಿಯ ಪಾತ್ರವು ನನ್ನಜ್ಜಿಯನ್ನು ನೆನೆಯುವಂತೆ ಮಾಡಿ ಕಾಡಿತು.

ಅಜ್ಜಿಯ ಎಂದೂ ಬಿಚ್ಚದ ಸೀರೆಯ ಗಂಟಾಗಿದ್ದ ನನಗೆ! ಅಜ್ಜಿ ಮಡಿಲಲ್ಲಿ ಮುದುಡಿ ಬೆಚ್ಚಗೆ ಮಲಗಿದ್ದ ದಿನಗಳು ನೆನಪಾಯ್ತು‌.

ನನ್ನತ್ತೆಗೆ ಅವಳಮ್ಮನ ಅಪ್ಪುಗೆಯನ್ನು ತಪ್ಪಿಸಿದ ಕೋಪಕ್ಕೂ ಒಳಗಾಗಿದ್ದೆ! ತನ್ನ ಮಗಳನ್ನಾದರೂ ದೂರುವ ಅಜ್ಜಿ ನನ್ನನ್ನು ದೂರ ಮಾಡುತ್ತಿರಲಿಲ್ಲ.

ಆದೇ ಅಜ್ಜಿಯಲ್ಲಿನ ಮುಗ್ಧ ಪ್ರೀತಿಯ ದ್ಯೋತಕ!

ಅಜ್ಜಿ ಹೇಳಿದ್ದನ್ನು ವೇದವಾಕ್ಯದಂತೆ ಪಾಲಿಸುತ್ತಿದ್ದ ನನಗೆ ಆ ಕೆಲಸಗಳು ಖುಷಿಯನ್ನೇ ಕೊಟ್ಟಿದ್ದವು‌.

ಕತ್ತಲ್ಲನ್ನು ಓಡಿಸಲು ಸಮರ ನಡೆಸುವ ನಸು ಮುಂಜಾವಿನಲಿ ವೈರ್ ಬುಟ್ಟಿ ಹಿಡಿದು ಒಂದೇ ಓಟದಲ್ಲಿ ಹತ್ತು ಹದಿನೈದು ಮನೆಗಳ ದೂರದಲ್ಲಿದ್ದ ದೊಡ್ಡ ಕಂಬಗಳ ಮನೆಯ ಮುಂದಿನ ಅಂಗಳದಲ್ಲಿದ್ದ ಪಾರಿಜಾತ ಗಿಡದ ಬುಡಕ್ಕೆ ತಲುಪುತ್ತಿದ್ದೆ.

ಅಲ್ಲಿ ಆಗಷ್ಟೆ ಬಿದ್ದ ಪಾರಿಜಾತ ಹೂವುಗಳು ತಾಜಾ ಬಿಳಿ ಪಕಳೆಗಳನ್ನು ಹೊಂದಿದ್ದವಲ್ಲದೇ ತಮ್ಮ ಕೆಂಪು ಹಿಡಿಕೆಯ ತೋರು ಬೆರಳನ್ನು ತೋರುತ್ತಾ ಮೇಲ್ಮುಖವಾಗಿ ಪವಡಿಸಿ ಎತ್ತಿಕೊಳ್ಳಿ ಬನ್ನಿ,

ನಮ್ಮ ಬೆರಳ ಹಿಡಿದು ಆತುಕೊಳ್ಳಿ, ನಮ್ಮನ್ನು ದೇವರ ಮುಡಿಗೇರಿಸಿ ಎಂದು ಆಹ್ವಾನ ಕೊಡುತ್ತಿದ್ದವೇನೋ ಎಂಬಂತೆ ನನ್ನನ್ನು ಆಕರ್ಷಿಸುತ್ತಿದ್ದವು ಆ ಕೃಷ್ಣಪ್ರಿಯ ಹೂವುಗಳು.

ಆ ಪಾರಿಜಾತ ಗಿಡವಿದ್ದ ಮನೆಯ ಅಜ್ಜಿಗೆ ಆ ಹೂವುಗಳ ಉಸ್ತುವಾರಿಯ ಕೆಲಸ!

ತನ್ನ ಪಾರಿಜಾತ ಗಿಡದ ಎಲ್ಲಾ ಹೂವುಗಳು ಒಂದೇ ಮನೆಯ ದೇವರ ಮುಡಿಗೇರುವುದು ಬೇಡ. ಹಲವು ಮನೆಗಳ, ಹಲವು ದೇವರ ಮುಡಿಗೆ ಏರಬೇಕು ಎಂಬ ಭಾವ!

ಹಾಗಾಗಿ ಹೂವು ಆಯಲು ಬರುವರಿಗೆಲ್ಲಾ ಪಾಲು ಮಾಡುವ ಕೆಲಸ ಆ ಅಜ್ಜಿಯದ್ದು. ನನ್ನಜ್ಜಿಯ ಆಪ್ತ ಸ್ನೇಹಿತೆ ಆ ಅಜ್ಜಿ ಆದರೂ ಪಾಲಲ್ಲಿ ವ್ಯತ್ಯಯವಿಲ್ಲ. ಎಲ್ಲರಂತೆ ನಾನು. ಒಂದೆರಡು ಹೂವನ್ನೂ ಹೆಚ್ಚಿಗೆ ಹೆಕ್ಕಲು ಬಿಡುತ್ತಿಲಿರಲಿಲ್ಲ. ಒಬ್ಬರಿಗೆ ಇಂತಿಷ್ಟೆ ಎಂದು ಒಂದು ಕಣ್ಣಳತೆ ಆ ಅಜ್ಜಿಗೆ ಇರೋದು. ಗಿಡದ ಬುಡದ ಕಲ್ಲಿನ ಕಟ್ಟೆಯ ಒಳಗಿನದು ಒಬ್ಬರಿಗಾದರೆ. ಗಿಡದ ಮುಂದಿನ ಎಡ ಪಕ್ಕದ ಎರಡು ಬಂಡೆಯ ಮೇಲಿನ  ಹೂ ಮತ್ತೊಬ್ಬರಿಗೆ. ಹಾಗೇ ಬಲದ ಎರಡು ಬಂಡೆಯದು ಮಗದೊಬ್ಬರಿಗೆ. ಹೀಗೇ ತನಗನಿಸಿದ್ದು, ತನಗೆ ತೋಚಿದ್ದನ್ನು ಅನುಸರಿಸಿ ಪಾಲ್ಹಾಕುತ್ತಿದ್ದಳು. ಯಾರದೂ ಮರು ಮಾತಿಲ್ಲ. ಅವಳದೇ ಮನೆಯ ಆವರಣದ ಗಿಡ. ಅವಳದೇ ಪಾರುಪಥ್ಯ!

ಅದೂ ಅಲ್ಲದೇ ದೇವಲೋಕದ ಪಾರಿಜಾತ ಸಿಕ್ಕರಷ್ಟೇ ಸಾಕು ಎಂಬ ಭಾವ ಆಯಲು ಬಂದವರಿಗೆ, ಸಿಗುವ ಒಂದಿಷ್ಟು ಹೂವಿಗೂ ಕತ್ತರಿ ಬಿದ್ದರೆ ಎಂಬ ಭಯ!

ನೆಲದಲ್ಲಿ ಬಿದ್ದದ್ದು ಖಾಲಿಯಾದ ಮೇಲೆ ತಾನೇ ಖುದ್ದು ಎಷ್ಟು ಬೇಕೋ ಅಷ್ಟು ಮೆಲುವಾಗಿ ಗಿಡ ಅಲುಗಿಸಿ ಪುಷ್ಪ ವೃಷ್ಟಿ ಕರೆದು ಆರಿಸಿಕೊಳ್ಳಲು ಬಂದವರಿಗೆ ಅವಕಾಶ ಮಾಡಿ ಕೊಡುತ್ತಿದ್ದಳು.

ತನ್ನ ಮನೆಗೆ ಬೇಕಾದ ಹೂವನ್ನು ಅದ್ಯಾವಾಗ ತೆಗಿದಿಟ್ಟು ಕೊಂಡಿರುತ್ತಿದ್ದಳೋ ನನಗಂತೂ ನೆನಪಿಲ್ಲ! ನಿಸ್ವಾರ್ಥ ಸೇವೆ!

ಹೀಗೆ ಅಜ್ಜಿಯ ಮಾತಂತೆ ಪಾರಿಜಾತ ಹೂವ ತಂದು ದೇವರ ಗೂಡಿನ ಮುಂದಿಟ್ಟು. ಒಂದೇ ನೆಗೆತಕ್ಕೆ ನಮ್ಮ ಮನೆಯ ಹಿಂದಿನ ಹಿಂಬಾಗಿಲಿನ ಹಿತ್ತಲಿಗೆ ನೆಗೆಯುತ್ತಿದ್ದೆ. ಅಲ್ಲಿನ ಪುಟ್ಟ ಪುಟ್ಟ ಬಿಳಿಯ, ಜೋರಾಗಿ ಕಿತ್ತರೆ ನಲುಗುವ ತುಂಬೆ ಹೂವುಗಳನ್ನು ಬಿಡಿಸುವ ಕೆಲಸ. ಎಷ್ಟು ಬಿಡಿಸಿದರೂ ಹೂವಿನ ಬಟ್ಟಲು ತುಂಬುವುದೇ ಇಲ್ಲ!

ಪುಟಾಣಿ ಹೂ ಹೆಚ್ಚು ಬಿಡಿಸಬೇಕು! ತುಂಬೆ ಶಿವನಿಗೆ ಪ್ರೀತಿಯಂತೆ! ರೋಮಾರೋಮದಿ ಕೋಟಿ ಲಿಂಗವ ಹೊಂದಿದ ಹನುಮನ ಭಕ್ತೆ ನನ್ನಜ್ಜಿಗೆ ಈ ತುಂಬೆ ಹೂವು ಪೂಜೆಗೆ ಬೇಕೇ ಬೇಕು!

ಅಜ್ಜಿಗೆ ಇಷ್ಟ ಆದ ಕಾರಣ ಈ ಕೆಲಸ ನನಗೆ ಕಷ್ಟವಲ್ಲ!

ಆ ತುಂಬೆಯ ಬಟ್ಟಲ್ಲನ್ನು ಮತ್ತೆ ದೇವರ ಮುಂದಿಟ್ಟು ಮತ್ತೊಂದು ಬಟ್ಟಲ ಸಮೇತ ಮತ್ತೆ ನಮ್ಮಜ್ಜಿಯ ಮತ್ತೊಬ್ಬ ಗೆಳತಿ ನಮ್ಮ ಮನೆಯ ಮುಂದಿನ ರೇವಮ್ಮಜ್ಜಿಯ ಮನೆಯ ಮುಂದಿನ ಪಾರಿಜಾತದ ಗಿಡದ ಬುಡಕ್ಕೆ ನೆಗೆಯೋದು ರೂಢಿ!

ಅಲ್ಲಿ ಬಿದ್ದ ಹೂವುಗಳಲ್ಲದೇ ಗಿಡವನ್ನು ನಾವೇ ಅಲುಗಿಸಿಯೂ, ರೆಂಬೆಗಳನ್ನು ಕೊಡವಿಯೂ ಹೂಗಳನ್ನು ಆರಿಸಬಹುದಿತ್ತು. ಆ ರೇವಮ್ಮಜ್ಜಿ ಹಾಗೂ ಆ ಮನೆಯ ತಾತ ನಮಗೆ ಬಲು ಸಲೀಸು! ಮಕ್ಕಳೆಂದರೆ ಅವರಿಗೆ ಅಕ್ಕರೆ. ಹಾಗಾಗಿ ನಮ್ಮ ತುಡುಗುತನಕ್ಕೆ ಕಡಿವಾಣವೇ ಇರಲಿಲ್ಲ!

ಇಲ್ಲಿ ಪಾರಿಜಾತವಷ್ಟೇ ಅಲ್ಲದೇ ರೇವಮ್ಮಜ್ಜಿಯ ಕೈಯಿಂದ ಒಂದಷ್ಟು ತಿಂಡಿ-ತಿನಿಸುಗಳೂ ಸಿಕ್ಕೋದು. ಪಾರಿಜಾತದ ಆಯುವಿಕೆಯು ಸ್ವಾಮಿ ಕಾರ್ಯಕ್ಕಾದರೆ. ಸ್ವಾಹ ಕಾರ್ಯಕ್ಕೂ ಅಲ್ಲಿ ಅವಕಾಶವಿತ್ತು.

ಈ ರೇವಮ್ಮಜ್ಜಿಯನ್ನು ನೆನೆಯಲು ಮತ್ತೊಂದು ಪ್ರಮುಖ ಘಟನೆಯು ಮನದಲ್ಲಿ ಅಚ್ಚಾಗಿದೆ. ಆ ಘಟನೆ ನಡೆದು ಐವತ್ತು ವರ್ಷಗಳಾದರೂ ಇಂದಿಗೂ ಅದು ಮಬ್ಬಾಗಿಲ್ಲಾ, ಕಳೆಗುಂದಿಲ್ಲ!

ಆಗ ನಮ್ಮ ಮನೆಯವರೆಲ್ಲಾ ದುಃಖ ತಪ್ತರಾಗಿ ಸೂತಕದಲ್ಲಿದ್ದು ನನ್ನಮ್ಮನ ಅಂತಿಮ ಯಾತ್ರೆಯ ಕಾರ್ಯದಲ್ಲಿ ತೊಡಗಿದ್ದರು.

ಆ ಬೆಳಗ್ಗೆ ನನ್ನನ್ನೂ ಹಾಗೂ ನನ್ನಣ್ಣಂದಿರನ್ನು ಈ ರೇವಮ್ಮಜ್ಜಿಯು ತಮ್ಮ ಮನೆಯ ಪಡಸಾಲೆಗೆ ಕರೆದೊಯ್ದು, ಅಲ್ಲಿ ಸಾಲಾಗಿ ಕೂರಿಸಿ ಮೂವರಿಗೂ ತಿನ್ನಲು ಚಿತ್ರಾನ್ನವನ್ನು ಕೊಟ್ಟಿದ್ದರು. ಅದು ಹಸಿವನ್ನು ನೀಗಿಸಲೋ, ನಮ್ಮಲ್ಲಿನ ನೋವನ್ನು ನೀಗಿಸಲೋ, ಭಯ ಪಡದಿರಿ, ಅಮ್ಮನ ಪ್ರೀತಿಯಲಿ ಕಿಂಚಿತ್ತಾದರೂ ಕೊಡುವ ನಮ್ಮಂತಹವರು ನಿಮ್ಮ ನೆರವಿಗೆ ಇದ್ದೇವೆ ಎಂಬ ಭಾವವೋ ಗೊತ್ತಿಲ್ಲ! ಇಂದಿಗೂ ಅದು ಅರ್ಥವಾಗಿಲ್ಲಾ!

ಆದರೆ ಅಂದಿನ ಆ ತಿನಿಸಿನ ರುಚಿ ಇಂದೂ ನೆನಪಿದೆ! ಅಮ್ಮನ ಪ್ರೀತಿಯನ್ನು ಕಳೆದುಕೊಂಡ ದಿನವು ರೇವಮ್ಮಜ್ಜಿಯ ತುತ್ತಿನ ಪ್ರೀತಿಯ ಮೂಲಕ ನೆನಪಾಗುತ್ತೆ!

ಅಂದೂ ಕೂಡ ಅದೇ ಪಾರಿಜಾತದ ಗಿಡದ ಕೆಳಗಿನ ಹೂವುಗಳ ನಡುವೆ ಜಾಗ ಮಾಡಿಕೊಂಡು ರೇವಮ್ಮಜ್ಜಿಯ ಮನೆ ಹೊಕ್ಕಿದ್ದೆ. ಆಗ ಪಾರಿಜಾತ ಹೂವುಗಳ ಮೇಲಿನ ಮಂಜಿನ ಹನಿಗಳು ನನ್ನೊಳಗಿನ ಕಣ್ಣೀರಿನ ಬಿಂಬದಂತೆ ಗೋಚರಿಸಿತ್ತು! ಅಂದು ಆ ಹೂವುಗಳು ದೇವರಿಗೆ ದಕ್ಕಲಿಲ್ಲ!

-ತುಂಕೂರ್ ಸಂಕೇತ್

Related post