–ಕಣ್ಣಾ ಮುಚ್ಚಾಲೆ–
ಪಾರು ಏನೋ ಕೆಲಸದಲ್ಲಿ ಮಗ್ನಳಾಗಿದ್ದಳು. ಇದ್ದಕ್ಕಿದ್ದಂತೆ ನಿಖಿಲ್ ಅಮ್ಮ ನಿಕಿತಾ ಎಲ್ಲಿ? ಎಂದು ಕೇಳಿದ. ಗೊತ್ತಿಲ್ಲಾ, ಇಲ್ಲೇ ಎಲ್ಲೋ ಇರಬೇಕು ನೋಡು ಎಂದಳು. ಅಮ್ಮ ಕಣ್ಣಾಮುಚ್ಚಾಲೆ ಆಟ ಆಡ್ತಾ ಇದ್ವಿ, ನಿಕಿತ ಕಾಣ್ತಾ ಇಲ್ಲಾ! ಎಂದ. ಪಾರು ಗಾಬರಿಯಾದಳು ಮನೆಯೆಲ್ಲಾ ಹುಡುಕಿದಳು, ಮೊದಲು ನೀರಿನ ತೊಟ್ಟಿ, ಸೋಫಾ, ಮಂಚದ ಅಡಿ ,ಅಕ್ಕಪಕ್ಕದ ಮನೆ ಎಲ್ಲಾ ಕಡೆ ಅವಳ ಹುಡುಕಾಟ ಸಾಗಿತ್ತು. ನೆನಪಾದ ದೇವರಿಗೆಲ್ಲಾ ಕೈ ಮುಗಿದಳು. ಗಾಡಿಯಲ್ಲಿ ಅಕ್ಕಪಕ್ಕದ ಬೀದಿಗೂ ಹೋಗಿಬಂದಳು. ಸುಸ್ತಾದ ಪಾರು ಕೊನೆಗೆ ಮಂಚದ ಮೇಲೆ ಕುಳಿತಳು. ಪಕ್ಕದಲ್ಲಿದ್ದ ಗಾದ್ರೇಜ್ ಬೀರುವಿನಿಂದ ನರಳಿದ ಶಬ್ದ ಕೇಳಿಸಿತು ಒಂದೇ ಉಸುರಿಗೆ ಬೀರಿನ ಬಳಿ ಬಂದರೆ ಬೀರು ಮುಚ್ಚಿದೆ, ಬಲ ವಂತವಾಗಿ ತೆರೆದಳು. ಕೆಳಗೆ ಬಟ್ಟೆಗಳ ಮಧ್ಯೆ ಅಡಗಿ ಕುಳಿತಿದ್ದಾಳೆ ಮಗಳು… ಬಿಕ್ಕುತ್ತಿದ್ದಾಳೆ ಅಡಗಿ ಕುಳಿತ ಮಗುವಿಗೆ ಹೊರಗೆ ಬರಲು ತಿಳಿದಿಲ್ಲಾ, ಅವಳು ಬೀರುವಿನಲ್ಲಿ ಕುಳಿತು ಸುಮಾರು ಒಂದು ಗಂಟೆಯಾಗಿದೆ ತುಂಬಾ ಸುಸ್ತಾಗಿದ್ದಾಳೆ. ಪಾರು ವಿಗೆ ಮಗುವನ್ನು ನೋಡಿ ಹೋದ ಜೀವ ಬಂದಂತಾಯಿತು. ಮಗು ಎಷ್ಟೋ ಹೊತ್ತು ಬಿಕ್ಕುತ್ತಲೇ ಇತ್ತು. ನಿಖಿಲ್ ಬಂದು ಅಮ್ಮಾ ನಿಖಿತಾಗೆ ಏನಾಯ್ತು? ಎಂದಾಗ, ಇಬ್ಬರೂ ಮಕ್ಕಳನ್ನು ತಬ್ಬಿಕೊಂಡಳು ಪಾರು.
ಪಾರುವಿಗೆ ಹಳೆಯ ಘಟನೆಗಳು ಸುರುಳಿಯಂತೆ ಮನಃಪಟಲದಲ್ಲಿ ಸುಳಿದವು, ಅವಳಿಗೆ ಒಬ್ಬ ಅಣ್ಣ ಒಬ್ಬ ತಮ್ಮ, ಯಾವಾಗಲೂ ಇವಳನ್ನು ರೇಗಿಸುವ ಅಣ್ಣ ಇವಳಿಗಿಂತ ನಾಲ್ಕೈದು ವರ್ಷಕ್ಕೆ ದೊಡ್ಡವನು. ತಮ್ಮನು ಇವಳಿಗಿಂತ ಮೂರು ನಾಲ್ಕು ವರ್ಷಕ್ಕೆ ಚಿಕ್ಕವನು.
ಪಾರುವಿನ ಅಣ್ಣ, ಮಿತಭಾಷಿ, ಕಷ್ಟಪಟ್ಟು ಓದುತ್ತಿದ್ದರೂ, ಓದುವುದರಲ್ಲಿ ಹಿಂದಿದ್ದ, ಅಪ್ಪ ಅಮ್ಮನಿಗೆ ತೊಂದರೆ ಕೊಡಬಾರದೆಂಬ ಮನೋಭಾವ, ಯಾವಾಗಲೂ ಏಕಾಂಗಿಯಾಗಿರುತ್ತಿದ್ದ. ಅಪ್ಪ ಅಮ್ಮನಿಗೆ ಕಷ್ಟ ಕೊಡದೆ ಓದಬೇಕೆಂಬುದು ಅವನ ಮಹದಾಸೆ ಹಗಲು ರಾತ್ರಿ ಓದಿದರು ಕಡಿಮೆ ಅಂಕ ತೆಗೆದು ಅಮ್ಮನಿಂದ ಬೈಸಿಕೊಳ್ಳುತ್ತಿದ್ದ. ಎಸ್.ಎಸ್.ಎಲ್.ಸಿಯಲ್ಲಿ, ಸರಿಯಾದ ಮಾರ್ಗದರ್ಶನವಿಲ್ಲದೆ ಎಷ್ಟು ಓದಿದರು ಹೆದರಿಕೆಯಿಂದ ಓದಿದಷ್ಟು ಮರೆತೇ ಹೋಗುತ್ತಿತ್ತು ಹೀಗಾಗಿ ಗಣಿತದಲ್ಲಿ, ಇಂಗ್ಲಿಷಿನಲ್ಲಿ ಫೇಲಾದ. ಮೊದಲೇ ಮಿತಭಾಷಿಯಾದ ಹುಡುಗ, ಇನ್ನೂ ಸಪ್ಪಗಾದ. ಮನೆಯವರಿಗೆ ಏಕೆ ಹೀಗಾದ ಎಂದು ಅರಿಯುವ ಮುನ್ನವೇ- ಆತ್ಮಹತ್ಯೆಗೆ ಶರಣಾದ ಮನೆಯವರೆಲ್ಲಾ ಕಂಗಾಲಾದರು.
ಆ ಆಘಾತದಿಂದ ಇನ್ನೂ ಚೇತರಿಸಿಕೊಂಡೇ ಇಲ್ಲಾ, ಎನ್ನುವಾಗಲೇ ಪಾರುವಿನ ಕುಟುಂಬ ಕ್ಕೆ ಮತ್ತೊಂದು ಕಂಟಕ ಎದುರಾಯಿತು. ಇದಾಗಿ ನಾಲ್ಕೈದು ವರ್ಷಗಳಾಗಿರಬಹುದು. ಪಾರುವಿನ ತಮ್ಮ ಆಗ ಇನ್ನು ಎರಡನೇ ತರಗತಿಯಲ್ಲಿದ್ದ ಅವನು ಪಾರುವಿನಷ್ಟೇ ತುಂಟಾ! ಅಂದು ಅವನಿಗೆ ಜ್ವರ ಇತ್ತು. ಅಮ್ಮಾ ಊಟ ಮಾಡಿಸಿ ಮಾತ್ರೆ ಕೊಟ್ಟು ಎಲ್ಲೂ ಹೊರಗೆ ಹೋಗಬೇಡ ಎಂದು ತಾಕೀತು ಮಾಡಿದ್ದರು. ಆದರೂ ಆಡುವ ವಯಸ್ಸು ಸಾಯಂಕಾಲ ನಾಲ್ಕರ ಸುಮಾರಿಗೆ ಸ್ವಲ್ಪ ಜ್ವರ ಕಡಿಮೆಯಾಗಿ ಲವಲವಿಕೆಯಿಂದ ಇದ್ದ. ರಾಜೇಶನಾದ ಅವನನ್ನು ಎಲ್ಲರೂ ರಾಜು ಎಂದು ಕರೆಯುತ್ತಿದ್ದರು. ಗೆಳೆಯರೆಲ್ಲ ಜೋರಾಗಿ ಕಿರಿಚಿಕೊಂಡು ಆಡುವ ಸದ್ದು ಕೇಳಿ ಅವನೂ, ಆಡಲು ಹೋದ. ಅವರು ಕಣ್ಣಾಮುಚ್ಚಾಲೆ ಆಡುತ್ತಿದ್ದರು. ಅವನು ಸೇರಿಕೊಂಡ ಮಕ್ಕಳು ಭಾರಿ ಬಿರುಸಿನಿಂದ ಆಡುತ್ತಿದ್ದರು, ಎಲ್ಲರೂ ಅಡಗಿಕೊಳ್ಳಲು ಜಾಗಗಳನ್ನು ಹುಡುಕಿ ಅಡಗಿ ಕೊಳ್ಳುತ್ತಿದ್ದರು. ಎಷ್ಟೊತ್ತಾದರೂ ರಾಜು ಕಾಣದಿದ್ದಾಗ ಅಮ್ಮಾ, ಪಾರು, ಸ್ನೇಹಿತರೆಲ್ಲರೂ ಸೇರಿ ಹುಡುಕಾಡಿದರು ಕಣ್ಣಾಮುಚ್ಚಾಲೆ ಆಡಲು ಹೋದ ರಾಜು, ಪಾರುವಿನ ಬಾಳಿನ ಪುಟದಿಂದ ಲೇ ಕಣ್ಮರೆಯಾಗಿದ್ದ. ಅಡಗಿಕೊಳ್ಳಲು ಹೋಗಿ ಸಂಪಿನಲ್ಲಿ ಬಿದ್ದಿದ್ದ ಮನೆಯವರಿಗೆ ಸಿಕ್ಕಾಗ ಬಹಳ ತಡವಾಗಿತ್ತು.ಹೀಗೆ ಪಾರುವಿನ ಕುಟುಂಬದಲ್ಲಿ ಒಂದರ ಮೇಲೊಂದು ಆಘಾತಗಳಾಗಿ ಪಾರುವೇ ಅವಳ ತಂದೆ ತಾಯಿಯ ಕಣ್ಣಾಗಿದ್ದಳು. ಆದ್ದರಿಂದಲೇ, ಪಾರು ಮಗಳು ಕಣ್ಣಾಮುಚ್ಚಾಲೆ ಆಟ ಆಡಿ ಕಾಣೆ ಯಾದಾಗ ವಿಪರೀತ ಗಾಬರಿಯಾದಳು.
ಪಾರುವಿಗೆ ಈಗ ಒಮ್ಮೊಮ್ಮೆ ಜನಪದರ ಹಾಡಿನ ಸಾಲುಗಳು ನೆನಪಾಗುತ್ತವೆ.
“ಹೆಣ್ಣಿನ ಜನುಮಕೆ ಅಣ್ಣತಮ್ಮರು ಬೇಕು
ಬೆನ್ನು ತಟ್ಟುವರು ಸಭೆಯೊಳಗೆ
ಸಾವಿರ ಹೊನ್ನ ಕಟ್ಟುವರು ಉಡಿಯೊಳಗೆ…..”
ಆದರೆ ಪಾರುವಿಗೆ ಆ ಭಾಗ್ಯವಿಲ್ಲ, ವಿಧಿ ಅವಳ ಜೀವನದಲ್ಲಿ ಕಣ್ಣಾಮುಚ್ಚಾಲೆಯಾಟ ಆಡಿತ್ತು.
ದಿವ್ಯ. ಎಲ್. ಎನ್ .ಸ್ವಾಮಿ
ಚಿತ್ರ ಕೃಪೆ: ಎಸ್ ಇಳಯರಾಜ