ಪಾರು ಹೇಳಿದ ಕಥೆಗಳು ಕಥೆ-3

–ತಿರುವು–

ತನ್ನ ಹೆಸರಿಗೆ ಬಂದ ಪತ್ರವನ್ನೇ ಕೈಯಲ್ಲಿ ಹಿಡಿದು ಕುಳಿತಿದ್ದಾಳೆ ಪಾರು. ಆ ಒಂದು ಪತ್ರ ತನ್ನ ಬಾಳಿನ ತಿರುವನ್ನೇ ಬದಲಿಸಬಹುದು ಎಂಬ ಯಾವ ಸುಳಿವು ಅವಳಿಗಿರಲಿಲ್ಲ.

ಅವಳಿಗೆ ಅಂದು ನಡೆದ ಘಟನೆ ನೆನಪಾಯಿತು.
ಪಕ್ಕದ ಮನೆಗೆ ಗಂಟಿನವನು ಬಂದಿದ್ದ. ಆಂಟಿ ,ಪಾರು ಸೀರೆ ನೋಡುತ್ತೀಯಾ? ಎಂದು ಕರೆದರು. ಹೋದ ಪಾರುವಿಗೆ, ಮನೆಗೆ ಬಂದಾಗ ಮಾವ (ಗಂಡ) ನಿಂದ ಬೈಗುಳ ದೊರೆಯಿತು. ಎರಡು ಮಕ್ಕಳ ಜವಾಬ್ದಾರಿ ಒಟ್ಟಿಗೆ ತಲೆ ಮೇಲಿದೆ. ನೀನೇನು ಮಾಡುತ್ತೀಯಾ? ಹಾಗೆ ಹೀಗೆ ಎಂದು, ಸ್ವಾಭಿಮಾನಿ ಪಾರು ಗೂ ಸಿಟ್ಟು ಬಂತು. ನಾನು ಕೆಲಸಕ್ಕೆ ಹೋಗುತ್ತೇನೆ ಎಂದಳು. ಮಾವ ಜೋರಾಗಿ ನಕ್ಕಾ! ಆ; ಕೆಲಸಕ್ಕಾ! ಪಿಯುಸಿ ಕನ್ನಡ ಮೀಡಿಯಂಗೆ, ಕೆಲಸನಾ? ಎಂದಾ.

ಅವಳ ಮುಖ ಕೋಪ ದಿಂದ ಕೆಂಪಾಯಿತು.
ಪಾರು ಅಂದಿನಿಂದ ಕೆಲಸ ಹುಡುಕ ತೊಡಗಿದಳು. ಕೆಲಸ ಖಾಲಿ ಇದೆ. ಎನ್ನುವ ಎಲ್ಲಾ ಪೇಪರ್ ಕಟಿಂಗ್ ಗಳು ಅವಳ ಕೈ ಸೇರಿದವು. ಅದರಲ್ಲಿರುವ ವಿದ್ಯಾರ್ಹತೆ ನೋಡಿ ಕುಗ್ಗಿ ಹೋಗುವಳು. ಆದರೆ ಪಾರು ಯಾವುದಕ್ಕೂ ಬೇಗ ಸೋಲೊಪ್ಪಿಕೊಳ್ಳುವವಳಲ್ಲ.

ಇಂದು ಸ್ನೇಹಿತೆ ವೀಣಾಳ ಪತ್ರ ನೋಡಿದ ಪಾರುವಿಗೆ ಬೂದಿ ಮುಚ್ಚಿದ ಕೆಂಡದಂತಿದ್ದ ಆಸೆ ಮತ್ತೆ ಮೊಳಕೆಯೊಡೆಯಿತು. ಕಾರಣ ಅದರಲ್ಲಿದ್ದ ಸಾಲುಗಳು.

“ಪಾರು ನೀನು ಈಗ ಹೇಗಿದ್ದೀಯ? ನಿನಗೆ ಪಿಯುಸಿ ಇದ್ದಾಗಲೇ ಮದುವೆಯಾಯಿತು ಅಲ್ವಾ? ಆಮೇಲೆ ನೀನು ಸಿಕ್ಕೇ ಇಲ್ಲಾ. ಅವಳಿ ಮಕ್ಕಳಾದ ಸುದ್ದಿ ಕೇಳಿ ತುಂಬಾ ಖುಷಿಯಾಯಿತು. ಆದರೆ ಪಾರು ಓದು ನಿಲ್ಲಿಸಿ ಸಂಸಾರಸ್ಥೆ ಯಾದೆಯಾ? ಸ್ಕೂಲಿನಲ್ಲಿ ಎಷ್ಟು ಚೆನ್ನಾಗಿ ಆಟವಾಡುತ್ತಾ, ಎಲ್ಲರನ್ನೂ ನಗಿಸುತ್ತಾ ಇದ್ದ ಪಾರು ನೀನೇನಾ? ಎಷ್ಟೊಂದು ಕನಸುಗಳಿತ್ತು ನಿನ್ನಲ್ಲಿ ಎಲ್ಲವನ್ನೂ ಗಂಟು ಕಟ್ಟಿ ಇಟ್ಟಿದ್ದಿಯಾ, ಪಾರು ನಾನಿಂದು ಎಸ್.ಐ ಆಗಿ ಸೆಲೆಕ್ಟ್ ಆಗಿದ್ದೇನೆ. ರೂರಲ್ ಕೋಟ, ಕನ್ನಡ ಮೀಡಿಯಂ, ಎಲ್ಲಾ ನನ್ನ ಸಹಾಯಕ್ಕೆ ಬಂತು. ನಿನಗೆ ಯೂನಿಫಾರ್ಮ್ ಧರಿಸಿರುವ ಕೆಲಸಗಳೆಂದರೆ, ತುಂಬಾ ಪ್ರೀತಿ ಅಲ್ವಾ? ನಾನು ಯೂನಿ ಫಾರ್ಮ್ ಧರಿಸಿರುವ ಫೋಟೋ ಕಳಿಸಿದ್ದೇನೆ. ನನ್ನ ಸ್ನೇಹಿತೆ ಗೆಳತಿ ಸೀರೆ ಉಟ್ಟು ಎರಡು ಮಕ್ಕಳನ್ನು ಹಿಡಿದು ನಿಂತಿರುವ ಚಿತ್ರ ನನ್ನ ಕಣ್ಣ ಮುಂದೆ ಬರುತ್ತಿದೆ. ಪಾರು ಬದಲಾಗು”, ಎಂದು ಬರೆದಿದ್ದಳು.

ಪಾರು ಚಿಕ್ಕವಳಿದ್ದಾಗಿಂದಲೂ ಕನಸುಗಾತಿ ಯಷ್ಟೇ ತಾನೇ, ಅವಳು ಸ್ಕೌಟ್ಸ್, ಗೈಡ್ಸ್ ,ಪೋಲಿಸ್, ಡಾಕ್ಟರ್ ಗಳ
ಯೂನಿಫಾರ್ಮ್ ಚಿತ್ರಗಳನ್ನು ನೋಡಿದರೆ, ಕತ್ತರಿಸಿ ಶೇಖರಿಸುತ್ತಿದ್ದಳು. ಅವಳ ರೂಮಿನಲ್ಲಿ ಹಾಸಿಗೆ ಕೆಳಗೆಲ್ಲ ಈ ಚಿತ್ರಗಳೇ.

ನಮ್ಮ ಪಾರು, ಚುರುಕಾದ ಹುಡುಗಿ ಸಣ್ಣವಯಸ್ಸಿನಲ್ಲೇ ಕರ ಕುಶಲಕಲೆ ಅವಳಿಗೆ ಒಲಿದಿತ್ತು ಚಂದ ಚಂದದ ಬಟ್ಟೆಯ ಪೇಪರಿನ ಹೂಗಳನ್ನು ಮಾಡುತ್ತಿದ್ದಳು.ವೀಣಾಳ ಮನೆಗೆ ಹೋದಾಗ ಅವರ ಅಮ್ಮನೇ ಅವಳಿಗೆ ಪ್ರೋತ್ಸಾಹಿಸಲು ಅವಳಿಂದ ಹತ್ತಿಪ್ಪತ್ತು ರೂಪಾಯಿಗಳನ್ನು ಕೊಟ್ಟು ಅವುಗಳನ್ನು ತಾವೇ ಕೊಳ್ಳುತ್ತಿದ್ದರು. ಅವರ ಮಹಿಳಾ ಸಮಾಜದಲ್ಲಿ ಪಾರುವಿಗೆ ಹೇಳಿ ಕೊಡಲು ಹೇಳುತ್ತಿದ್ದರು.ಆಗಲೂ ನಲವತ್ತು, ಐವತ್ತು ರೂಪಾಯಿಗಳನ್ನು ಕೊಡುತ್ತಿದ್ದರು.

ಹೀಗೆ ಬಣ್ಣ ಬಣ್ಣದ ಹೂಗಳನ್ನು ಮಾಡುವುದು ಚಿತ್ರ ಬರೆಯುವುದು, ಇದರ ಜೊತೆ ಆಟದಲ್ಲೂ ಬಹಳ ಮುಂದಿದ್ದ ಪಾರು ಓದುವುದರಲ್ಲಿ ಮಾತ್ರ ಉತ್ತೀರ್ಣಳಾಗುವುದರಲ್ಲೇ ಸಂತೃಪ್ತಳಾಗಿದ್ದಳು.. ಅವಳಿಗೆ ಎಲ್ಲದಕ್ಕೂ ಸ್ಪೂರ್ತಿ ಈ ವೀಣಾ, ವೀಣಾಳ ಪತ್ರ ಫೋಟೋ ನೋಡಿ ಪಾರುವಿಗೆ ತಾನು ವೇಸ್ಟ್ ಬಾಡಿ ( ನಿರುಪಯೋಗಿ) ಎನಿಸತೊಡಗಿತು, ಸರಿ ಅಂದಿನಿಂದ ಕೆಲಸದ ಹುಚ್ಚು ಹತ್ತಿತು. ಅಮ್ಮನಿಗೆ ಹೇಳಿ ಬೈಸಿಕೊಂಡಳು, ಆದರೆ ಅಪ್ಪ ಪ್ರೋತ್ಸಾಹಿಸಿದರು ಏನು ಮುಂದೆ ಓದಬೇಕಿದ್ದರೆ ಓದಮ್ಮಾ ಎಂದರು . ಸಿ.ಪಿ. ಎಡ್ ಮಾಡು, ಪಿ.ಇ. ಟೀಚರ್ ಆಗಬಹುದು ಎಂದು ಪ್ರೋತ್ಸಾಹಿಸಿದರು.

ಸಿ.ಪಿ. ಎಡ್, ಟ್ರೈನಿಂಗಿಗೆ ಸೇರಿದಳು . ಮೊದಲನೇ ದಿನ ಕಾಲೇಜಿಗೆ ಹೋದ ಪಾರುವಿಗೆ ನಕ್ಷತ್ರವನ್ನೇ ಮಡಿಲಿಗೆ ಹಾಕಿಕೊಂಡ ಸಂತಸ. ಅವಳ ಕನಸು ಎಲ್ಲಿಗೆ ಮುಟ್ಟಿತ್ತೆಂದರೆ, ದೆಹಲಿಯಲ್ಲಿ ತಾನು ಸ್ಕೌಟ್ಸ್ ಗೈಡ್ಸ್ ನ ಶಿಕ್ಷಕಿಯಾಗಿ ಪೆರೇಡ್ ನಲ್ಲಿ ಭಾಗವಹಿಸಿದಂತೆ ಅನ್ನಿಸತೊಡಗಿತು. ಇಂತಹ ಕನಸುಗಳನ್ನು ಕಾಣಲು ನಮ್ಮ ಪಾರುವಿನಿಂದ ಮಾತ್ರ ಸಾಧ್ಯ! ಅಲ್ಲವೇ?

ದಿವ್ಯ.ಎಲ್.ಎನ್.ಸ್ವಾಮಿ

ಚಿತ್ರ ಕೃಪೆ: ಎಸ್ ಇಳೆಯರಾಜ

Related post

4 Comments

  • Excellent mam.. wordings suuper

  • Excellent 👍

  • ಮೇಡಂ ಈ ಕಥೆ ಚೆನ್ನಾಗಿ ಇದೆ ಮತ್ತು ಕ್ಯೂರಿಯಾಸಿಟಿ ಹೆಚ್ಚು ಹೆಚ್ಚು ಇದೆ ಈ ನಿಮ್ಮ ಪಾರುವಿನ ಕಥೆಯಲ್ಲಿ. ನೀವು ಒಳ್ಳೆಯ ಬರಹಗಾರರು. ಈ ನಿಮ್ಮ ಕೆಲಸಕ್ಕೆ ಅಭಿನಂದನೆಗಳು.

  • super divya mam, continue the work

Leave a Reply

Your email address will not be published. Required fields are marked *