ಪಾರು ಹೇಳಿದ ಕಥೆಗಳು – 2

ಕಥೆ – ೨

–ಕನಸಿನ ರಾಜಕುಮಾರ–

ರೈಲು ಸಾಗುತ್ತಿದೆ. ಒಮ್ಮೆ ಕತ್ತಲು ಒಮ್ಮೆ ಬೆಳಕು ರೈಲು ಗುಹೆಯೊಳಗೆ ಹೋಗಿ, ಹೊರ ಬರುತ್ತಿದೆ. ಕತ್ತಲು ಬೆಳಕಿನ ಆಟದಂತೆ. ಕತ್ತಲಿನ ನಂತರ ಸುಂದರ ಬೆಳಕು ಗುಹೆಯೊಳಗೆ ಜಿನುಗುವ ನೀರು ಅಲ್ಲಲ್ಲಿ ಪಾಚಿ, ಹಸಿರು ತುಂಬಿದ ನೋಟ ಎಷ್ಟು ಸುಂದರ ಎಂದರೆ ನೋಡಿದಷ್ಟು ನೋಡಬೇಕೆಂಬ ಆಸೆ. ಗುಹೆ ಸರಿದ ನಂತರ ಆಳವಾದ ಪಾತಾಳ ಜಲಪಾತಗಳು, ಕೋರೆಗಳು, ಅತಿ ರಮಣೀಯ ದೃಶ್ಯ. ಒಂದು ಬೇರೆಯೇ ಲೋಕಕ್ಕೆ ಹೋದ ಅನುಭವ, ಅದು ಬೆಂಗಳೂರು-ಕಾರವಾರ ಎಕ್ಸ್ ಪ್ರೆಸ್ ರೈಲು.

ನಮ್ಮ ಪಾರು ಮತ್ತು ಅವಳ ಕುಟುಂಬ ಸುಬ್ರಹ್ಮಣ್ಯಕ್ಕೆ ಹೊರಟಿದೆ. ಅವಳು ಸುಬ್ರಹ್ಮಣ್ಯಕ್ಕೆ ರೈಲಿನಲ್ಲಿ ಹೋಗುತ್ತಿರುವುದು ಇದೇ ಮೊದಲು. ಪಾರು ತುಂಬಾ ಖುಷಿಯಾಗಿದ್ದಾಳೆ. ರೈಲಿನ ಬಾಗಿಲ ಬಳಿ ಕುಳಿತಿದ್ದಾಳೆ. ಅವಳ ಪುಟ್ಟ ಮಕ್ಕಳು ಅಜ್ಜಿ-ತಾತನ ಬಳಿ ಇವೆ. ಅವಳು ತನ್ನ ಎರಡೂ ಕಾಲನ್ನು ಬಾಗಿಲಿನಿಂದ ಆಚೆ ಹಾಕಿ ಕುಳಿತು ಆ ಸೌಂದರ್ಯ ನೋಡುತ್ತಿದ್ದಾಳೆ, ಗುಹೆ ಬಂದಾಗ, ಜೋರಾಗಿ ಕಿರುಚುವುದು ಬಾಗಿಲಿನಿಂದ ನೋಡುವುದು ಮಾಡುತ್ತಿರುವಾಗಲೇ, ಅವಳಿಗೆ ಮುಂದಿನ ಬೋಗಿಯಲ್ಲಿ ಆಕಾಶ ಬಣ್ಣದ ಅಂಗಿ ತೊಟ್ಟ ಹುಡುಗ ನಿಂತು ಕೂಗುತ್ತಿರುವುದು ಕೇಳಿ ತಿರುಗಿ ನೋಡಿದಳು ಮೈ ಬೆವತಂತಾ, ಅನುಭವ. ಆ ಹುಡುಗ ಸರಿಯಾಗಿ ಕಾಣದಿದ್ದರೂ ಅವಳನ್ನು ಆ ಒಂದು ಬಂಗಿ ಆಕರ್ಷಿಸಿತು. ನೋಡುತ್ತಾಳೆ ಅವನು ಎತ್ತರಕ್ಕೆ ತೆಳ್ಳಗೆ ಬೆಳ್ಳಗೆ ಇದ್ದಾನೆ ಅಲ್ಲಿಯೇ ನೋಡುತ್ತಾಳೆ ಪಾರು…

ಪಾರು, ಆಗ ದ್ವಿತೀಯ ಪಿ.ಯು.ಸಿ, ಅವಳ ಪ್ರಪಂಚವೇ ಬೇರೆ, ಅವಳ ಕನಸಿನಲ್ಲಿ ಆಗಾಗ ಒಬ್ಬ ರಾಜಕುಮಾರ ಬರುತ್ತಾನೆ. ತೆಳ್ಳಗೆ ಬೆಳ್ಳಗೆ ಎತ್ತರವಾಗಿದ್ದಾನೆ. ಕ್ರಾಪ್ ಇಲ್ಲದಂತೆ ಬಾಚಿದ ಗುಂಗುರು ಕೂದಲು ಕುರುಚಲು ಗಡ್ಡ ನೀಲಿಬಣ್ಣದ ಚೌಕಳಿ ಶರ್ಟು ಆ ರೂಪ ಅವಳ ಕಣ್ಣಮುಂದೆ ತೇಲುತ್ತದೆ. ಅವನು ನಕ್ಕಾಗ ಹುಡುಗಿಯರ ಹಾಗೆ ಗುಳಿ ಬೇರೆ ಬೀಳುತ್ತದೆ. ಪಾರು ಅವನ ರೂಪಕ್ಕೆ ಪೂರ್ತಿ ಮರುಳಾದಳು. ಮರುದಿನ ಕಾಲೇಜಿನಲ್ಲಿ ಗೆಳತಿಯರ ಮುಂದೆ, ಅವಳ ಕನಸಿನ ರಾಜಕುಮಾರನ ವರ್ಣನೆಯನ್ನು ಮಾಡಿ ಮದುವೆಯಾದರೆ ಅವನನ್ನೇ ಎಂದು ಪೋಸ್ ಸಹ ಕೊಟ್ಟಳು.

ಒಂದು ದಿನ ಕಾಲೇಜಿನಿಂದ ಮನೆಗೆ ಬಂದ ಪಾರುವಿಗೆ, ಅವಳ ಸೋದರತ್ತೆಯಿಂದಲೇ ಸ್ವಾಗತ ದೊರೆಯಿತು. ಏನೂ ತಿಳಿಯದ ಪಾರು ನಡುಮನೆಗೆ ಬಂದರೆ ಹಿರಿಯರೆಲ್ಲಾ, ಬಾರಿ ಚರ್ಚೆ ಯಲ್ಲಿದ್ದಾರೆ.
ಪಾರುವಿನ ಅಪ್ಪ-ಅಮ್ಮ ಸಂಭ್ರಮದಲ್ಲಿದ್ದಾರೆ, ಅವಳಿಗೆ ವಿಷಯ ತಿಳಿಯಲು ಸ್ವಲ್ಪ ಸಮಯವೇ ಬೇಕಾಯ್ತು,ಅವಳ ಸೋದರತ್ತೆಯ ಮಗ ರೈಲ್ವೆ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸದಲ್ಲಿದ್ದ , ಸರಿ ಸರ್ಕಾರಿ ಕೆಲಸ ಅಂತ ಎಲ್ಲಾ,ಹಿರಿಯರು ಸೇರಿ, ಸಂಭ್ರಮದಿಂದ ಮದುವೆ ಮಾತುಕತೆ ನಡೆಸಿದ್ದರು ಪಾರುವಿಗೆ ಏನೂ ಹೇಳಲು ಆಗಲೂ ಇಲ್ಲಾ, ಅವರು ಇವಳನ್ನು ಏನೂ ಕೇಳಲೂ, ಇಲ್ಲ. ಮದುವೆ ಆಗಿಯೇ ಹೋಯಿತು. ಅವಳ ಕನಸಿನ ರಾಜಕುಮಾರ ಅವಳ ಮನಃಪಟಲದಲ್ಲೆಲ್ಲೋ ಅಡಗಿ ಕುಳಿತಿದ್ದ. ಇಂದು ಅವಳಿಗೆ ರೈಲು ಸದ್ದಿನಲ್ಲು ಅವನೇ ಕಂಡಂತೆ ಬಾಸವಾಯಿತು. ಹತ್ತಿರದಿಂದ ನೋಡಬೇಕು ಎಂದು ಯಾರಿಗೂ ಯಾವುದಕ್ಕೂ ಹೆದರದ ಪಾರು, ಆ ಮುಂದಿನ ಬೋಗಿಯ ಒಳಗೆ ಅಜ್ಜಿಯ ಬಳಿ ಕುಳಿತಿದ್ದ. ನಿಖಿತಾಳನ್ನು ಕರೆದುಕೊಂಡು ಹೋದಳು. ಆ ಬಾಗಿಲ ಬಳಿ ಹೋಗಿ ‘ನಾನಗೂ ಜಾಗ ಬಿಡ್ರಿ ನಾವು ನೋಡಬೇಕು’ ಎಂದು ಕೇಳಿದಾಗ, ಅವನು ಇವಳನ್ನು ನೋಡಿ ಸರಿದು ನಿಂತ. ‘ಇಷ್ಟೊತ್ತು ಆ ಬಾಗಿಲಲ್ಲೇ ಇದ್ರಿ ಇಲ್ಲಿಗ್ಯಾಕ್ರೀ ಬಂದ್ರಿ?’ ಎಂದವನನ್ನೆ ತಲೆಯೆತ್ತಿ ನೋಡಿದಳು. ‘ಹೌದು ಅವನೇ ಅವನು ಅವಳು ಕನಸಿನಲ್ಲಿ ಕಂಡ ರಾಜಕುಮಾರನೇ’ ಹೋಗಿ ಅದೇ ಬೋಗಿಯ ಸೀಟಿನಲ್ಲಿ ಕುಳಿತಳು. ಅವನನ್ನು ಹತ್ತಿರದಿಂದ ನೋಡಿದಳು ಅದೇ ರೂಪ ಗುಳಿ ಸಹ ಬೀಳುತ್ತಿದೆ‌. ಎಷ್ಟು ಹೊತ್ತು ಹಾಗೆ ಕುಳಿತ್ತಿದ್ದಳೋ…. ನಿಕಿತಾ ‘ಅಮ್ಮಾ,ಬಾ ಅಪ್ಪಾ ಅಜ್ಜಿ ಕಾಯುತ್ತಿರುತ್ತಾರೆ.’ ಎಂದಾಗ ತನ್ನ ಭ್ರಮಾಲೋಕದಿಂದ ವಾಸ್ತವಕ್ಕೆ ಬಂದಳು ನಮ್ಮ ಪಾರು. ಮಗಳ ಕೈಹಿಡಿದು ನಕ್ಕಳು ಆ ನಗುವಿನಲ್ಲೇ ಅವಳ ಕಣ್ಣಾಲಿಗಳು ತುಂಬಿತು. ರೈಲು ಮುಂದೆ ಚಲಿಸುತ್ತಲೇ ಇದೆ. ಮತ್ತೆ ಗುಹೆಯ ಕತ್ತಲು….. ಮತ್ತೆ ಬೆಳಕು……. ‌‌.

ದಿವ್ಯಾ.ಎಲ್.ಎನ್.ಸ್ವಾಮಿ

Related post

Leave a Reply

Your email address will not be published. Required fields are marked *