ಪಾರು ಹೇಳಿದ ಕಥೆ – 8

ಗಲಿ ಬಿಲಿ – ಗಡಿ ಬಿಡಿ

ಅಂದು ಪಾರುವಿಗೆ, ಏಕೋ ಎದ್ದಾಗಿನಿಂದ ಆಯಾಸ ಒಂದು ರೀತಿಯ ಬೇಸರ ಆದರೂ ಕರ್ತವ್ಯ ಪ್ರಜ್ಞೆಯಿಂದ ಶಾಲೆಗೆ ತಯಾರಾದಳು. ಮಕ್ಕಳು ಮನೆಯಲ್ಲಿಯೇ ಇದ್ದರು ಅವರಿಗೆ ಕೊರೋನಾ ಗಲಾಟೆಯಲ್ಲಿ ಇನ್ನು ಶಾಲೆ ಪ್ರಾರಂಭವಾಗಿಲ್ಲ ಆನ್ ಲೈನ್ ತರಗತಿಗಳು ನಡೆಯುತ್ತಿವೆ. ಆದರೆ ಶಿಕ್ಷಕರೆಲ್ಲಾ ಶಾಲೆಗೆ ಹೋಗಬೇಕು. ಪಾರು ತಡವಾಗಿ ಎದ್ದಿದ್ದರಿಂದ ಬೇಗ ಬೇಗ ತಯಾರಾದಳು.

ಅಂದೇಕೋ ಅವಳಿಗೆ ಶಶಿ ಚಿಕ್ಕಮ್ಮನದೇ ನೆನಪು ಮೊನ್ನೆಯಷ್ಟೇ ಎಲ್ಲರೂ ಕೂಡಿ ತಿರುಪತಿಗೆ ಹೋಗಿದ್ದರು.
ಎಷ್ಟು ಸರಳ ನಡತೆ ಅವರದು ಚಿಕ್ಕಪ್ಪನು ಅಷ್ಟೇ ತುಂಬಾ ಒಳ್ಳೆಯವರು. ಎಲ್ಲರೂ ಕೂಡಿ ಸಂತೋಷದಿಂದ ಕಾಲ ಕಳೆದಿದ್ದರು. ಶಶಿ ಚಿಕ್ಕಮ್ಮ ಎಂದರೆ- ಪಾರುವಿನ ಅಮ್ಮನ ತಂಗಿ. ಅವರಿಗೇಕೋ ಪಾರುವಿನ ಮೇಲೆ ಸ್ವಲ್ಪ ಹೆಚ್ಚೇ ಪ್ರೀತಿ( ಅವರಿಗೆ ಇಬ್ಬರೂ ಗಂಡುಮಕ್ಕಳಿದ್ದಿದ್ದರಿಂದ ಇರಬೇಕು ) ಏನಾದರೂ ಕೊಡಿಸುತ್ತಲೇ ಇರುತ್ತಾರೆ. ಪಾರುವಿನ ಎಲ್ಲಾ ಕಷ್ಟ-ಸುಖಕ್ಕು ಜೊತೆಯಾಗಿದ್ದಾರೆ. ಅಮ್ಮನಲ್ಲಿ ಹೇಳಲಾಗದ್ದನ್ನು ಪಾರು ಅವರ ಬಳಿ ಹೇಳುತ್ತಾಳೆ. ಅಷ್ಟು ಒಳ್ಳೆಯ ಬಾಂಧವ್ಯ ಅವರಲ್ಲಿ ಪಾರು ವಿಗೆ.

ಶಾಲೆಗೆ ಬಂದಳು ಪಾರು. ಅವಳ ಫೋನ್ ಮಕ್ಕಳ ಬಳಿಯಲ್ಲಿಯೇ ಇದೆ. ಏನಾದರೂ ತುರ್ತು ಸಮಾಚಾರ ವಿದ್ದರೆ ಎಂದು ಗೆಳತಿಯ ನಂಬರನ್ನು ಮಕ್ಕಳಿಗೆ ಹೇಳಿಕೊಟ್ಟಿದ್ದಾಳೆ. ಆ ನಂಬರ್ ಗೆ ನಿಖಿಲ್ ನಿಂದ ಫೋನ್ ಬಂತು ‘ ಅಮ್ಮಾ, ಸೃಜನ್ ಮಾಮ ಫೋನ್ ಮಾಡಿದ್ದ ಅವ್ವ-ಅಪ್ಪ ಕೊರೋನಾದಿಂದ ಹೋಗಿಬಿಟ್ಟರು ಯಾರನ್ನು ನೋಡಲು ಬಿಡುತ್ತಿಲ್ಲಾ, ಎಂದ, ನಿಮಗೆ ಹೇಳುವಂತೆ ಹೇಳಿದ್ದಾನೆ’, ಎಂದಾಗ ಪಾರುವಿಗೆ ಕೈ ಕಾಲೇ ಆಡದಾಯಿತು. ಏನಂತೋ ಸರಿಯಾಗಿ ಕೇಳಿದ್ದೀಯಾ? ಎಂದು ಕೂಗಿದಂತೆಯೇ ಕೇಳಿದಳು. ಹೌದಮ್ಮಾ ಎಂದ.

ಪಾರು ಸ್ವಲ್ಪಹೊತ್ತು ಹಾಗೆ ಕುಳಿತಳು ಏನು ಮಾಡಲೂ ತೋಚಲಿಲ್ಲ ಕೊನೆಗೆ ಗೆಳತಿಯ ಫೋನಿನಿಂದ ಸೃಜನ್ ಗೆ ಫೋನ್ ಮಾಡಿದಳು. ಎಂಗೇಜ್ ಸೌಂಡ್ ಬಂತು. ಮತ್ತೆ ಮತ್ತೆ ಪ್ರಯತ್ನಿಸಿದರೂ ಫೋನ್ ಸಿಗಲಿಲ್ಲ ವಾಟ್ಸಾಪ್ ಕಾಲ್ ಮಾಡಲು ತೆಗೆದರೆ ರಿಪ್ ಎಂದು ಹಾಕಿಕೊಂಡಿದ್ದ. ಪಾರುವಿನಲ್ಲಿ ಇದ್ದ ಸ್ವಲ್ಪ ಬಲವು ಅಡಗಿಹೋಯಿತು. ಏನು ಮಾಡುವುದೆಂದೇ ತೋಚಲಿಲ್ಲ ತಕ್ಷಣ ಶಾಲೆಗೆ ರಜಾ ಹಾಕಿ ಮನೆಗೆ ಬಂದಳು. ಮಕ್ಕಳನ್ನು ಮತ್ತೆ ಮತ್ತೆ ಕೇಳಿದಳು ಮತ್ಯಾರಾದರೂ ಫೋನ್ ಮಾಡಿದ್ರಾ, ಅಜ್ಜಿ-ತಾತ ಎಂದು ಅವರು ಇಲ್ಲಾ, ಎಂದರು.

ಅಪ್ಪ- ಅಮ್ಮ ಇದ್ದ ಹಳ್ಳಿಯಲ್ಲಿ ಸರಿಯಾಗಿ ನೆಟ್ ವರ್ಕ್ ಬೇರೆ ಸಿಗುವುದಿಲ್ಲಾ, ಸರಿ ಮತ್ತೆ ಮತ್ತೆ ಫೋನ್ ಮಾಡಿದಳು ಪಾರುವಿನ ಅಮ್ಮನಿಗೆ ಫೋನ್ ಸಿಕ್ತು. ಅಷ್ಟರೊಳಗೆ ಎಷ್ಟು ಅತ್ತಿದ್ದಳೋ ಅಮ್ಮಾ, ಶಶಿ ಚಿಕ್ಕಮ್ಮನಿಗೆ ಚಿಕ್ಕಪ್ಪನಿಗೆ ಏನಾಯ್ತು ಎಂದು ಅಳಲು ಪ್ರಾರಂಭಿಸಿದಳು.

ಅಮ್ಮ, ನಿಧಾನವಾಗಿ ‘ಯಾಕೆ ಪಾರು ಅಳುತ್ತಿದ್ದೀಯಾ? ವಯಸ್ಸಾಗಿತ್ತಲ್ಲಾ, ಎಲ್ಲೋ ಆಚೆ ಹೋಗಿದ್ದಾರೆ ಕೊರೋನಾ ಬಂದಿದೆ ಆಸ್ಪತ್ರೆಯಲ್ಲೇ, ಪ್ರಾಣ ಹೋಯಿತಂತೆ. ಯಾರನ್ನು ಬಿಟ್ಟಿಲ್ಲಾ ಎಂದರು ಮನೆಗೂ ಕೊಡ್ತಿಲ್ಲಾ, ಏನ್ ಮಾಡ್ತಾರೋ ಪಾಪ ಎಂದರು.

ಪಾರು ಈ ಅಮ್ಮ ಏನು ಇಷ್ಟು ಸಲೀಸಾಗಿ ಹೇಳ್ತಿದ್ದಾಳೆ, ಶಶಿ ಚಿಕ್ಕಮ್ಮನಿಗೆ ಏನ್ ಮಹಾ ವಯಸ್ಸು ಅಂತ ಬೈದುಕೊಂಡು ಅದನ್ನೇ ಅಮ್ಮನ ಬಳಿ ಹೇಳಿದಳು. ಆಗ ಗಲಿಬಿಲಿ ಆಗುವ ಸರದಿ ಅವಳ ಅಮ್ಮನದು ಏನೇ ಏನ್ ಹೇಳ್ತಿದ್ದೀಯಾ? ಶಶಿಗೆ ಏನಾಗಿದೆ. ಸತ್ತುಹೋಗಿರುವ ವರು ನಿಮ್ಮ ಚಿಕ್ಕಪ್ಪನ ಅಮ್ಮ ಅಪ್ಪ ಎಂದರು ಅವರಿಗೆ ವಯಸ್ಸಾಗಿತ್ತಲ್ಲೇ, ಎಂದರು.

ಅಷ್ಟೊತ್ತು ಗಾಬರಿಯಾದವಳಿಗೆ ಸ್ವಲ್ಪ ಸಮಾಧಾನವಾಯಿತು‌. ಮಗನನ್ನು ಕರೆದು ಸೃಜನ್ ಮಾಮ ಏನಂದ ಅಂದೆ ಎಂದು ಗದರಿದಳು ಅವ್ವ-ಅಪ್ಪ ಹೋಗ್ಬಿಟ್ರು ಎಂದಾ ಅಂದ. ಆಗ, ಪಾರು ನಿರಾಳಳಾದಳು. ಇಷ್ಟೆಲ್ಲಾ ಗಲಿಬಿಲಿ ಗಡಿಬಿಡಿ ಗಳಿಗೆ ಇದೇ ಕಾರಣವಾಗಿತ್ತು. ಸೃಜನ್ ಅಜ್ಜಿ ತಾತನನ್ನು ಅವ್ವ-ಅಪ್ಪ ಎಂದು ಕರೆಯುತ್ತಿದ್ದ‌.

ಒಂದು ಕಡೆ ಪಾರುವಿಗೆ ಶಶಿ ಚಿಕ್ಕಮ್ಮ ಚಿಕ್ಕಪ್ಪನಿಗೆ ಏನೂ ಆಗಿಲ್ಲವೆಂದು ಸಂತಸವಾದರೂ, ಅಯ್ಯೋ ಪಾಪ ಆ ಹಿರಿಜೀವಗಳು ಕೊರೋನಾದಿಂದ ಹೋಗಬೇಕಾಗಿತಲ್ಲ, ಒಂದು ಸಂಸ್ಕಾರನು ಸರಿಯಾಗಿ ನಡೆಯುವುದಿಲ್ಲ ಎಂದು ವ್ಯಥೆಪಟ್ಟಳು.

ದಿವ್ಯ. ಎಲ್. ಎನ್ .ಸ್ವಾಮಿ

Related post

Leave a Reply

Your email address will not be published. Required fields are marked *