ಪಾರು ಹೇಳಿದ ಕಥೆ – 9

–ಇಂಗ್ಲಿಷ್ ಗಾಥೆ–

ಕನ್ನಡ ಮೀಡಿಯಂ ಸೆಕೆಂಡ್ ಪಿ.ಯು.ಸಿ ಪಾಸಾದ ಪಾರು ಹೀಗೆ ಹೇಗೋ ತಾನು ಒಂದು ಕೆಲಸಕ್ಕೆ ಸೇರಿ ದುಡಿಯಬೇಕೆಂಬ ಆಸೆಯನ್ನು ನೆರವೇರಿಸಿಕೊಂಡು ಒಂದು ದಡ ತಲುಪಿದಳು. ಎನ್ನುವಷ್ಟರಲ್ಲಿ ಅವಳಿಗೆ ಮತ್ತೊಂದು ಸವಾಲು ಎದುರಾಯಿತು. ಬೆಂಗಳೂರು ಮಹಾನಗರದಲ್ಲಿ ಶಿಕ್ಷಕಿಯಾಗಿದ್ದ ಪಾರುವಿಗೆ ಇಂಗ್ಲಿಷ್ ಕಲಿಕೆಯ ಅನಿವಾರ್ಯತೆ ಇತ್ತು. ಅದಲ್ಲದೆ ಬೆಂಗಳೂರಿಗೆ ಬಂದ ಹೊಸತರಲ್ಲಿ ಆಚೆ ಹೋದರೆ ಎಲ್ಲರೂ ಇಂಗ್ಲಿಷಿನಲ್ಲಿ ಲೀಲಾಜಾಲವಾಗಿ ಮಾತನಾಡುತ್ತಾರೆ, ಸಣ್ಣ ಸಣ್ಣ ಮಕ್ಕಳು ಇಂಗ್ಲಿಷ್ ಮಾತನಾಡುವುದರಲ್ಲಿ ನಿಪುಣರು.ಬಲು ಮಾತುಗಾತಿಯಾದ ಪಾರು ಅವರನ್ನೇ ಮೌನವಾಗಿ ಪಿಳಪಿಳ ನೋಡುತ್ತಿದ್ದಳು. ಪಾರುವಿಗೆ ಇಂಗ್ಲಿಷ್ ಅರ್ಥವಾಗುತ್ತಿತ್ತು ಮಾತನಾಡಲು ಸ್ವಲ್ಪವೂ ಬರುತ್ತಿರಲಿಲ್ಲ.

ಪಾರು ಅಂದು ಒಂದು ಶಾಪಿಂಗ್ ಮಾಲ್ ಗೆ ಹೋದಳು ಅಲ್ಲಿಯ ಅಂಡರ್ ಗ್ರೌಂಡ್ ನಲ್ಲಿ ಡ್ರೈ ಫ್ಲವರ್ ಗಳನ್ನು ಆಕರ್ಷಣೀಯವಾಗಿ ಜೋಡಿಸಿ ಮಾರಾಟ ಮಾಡುತ್ತಿದ್ದರು. ಅದನ್ನು ಕಂಡ ಪಾರುವಿನ ಮೊಗ ಮರದಗಲವಾಯಿತು. ಅವಳಿಗೆಕೋ ಆ ಹೂವುಗಳು ತುಂಬಾ ಇಷ್ಟವಾದವು. ಬೆಲೆ ಸ್ವಲ್ಪ ಹೆಚ್ಚಿನಿಸಿದರು ಅದನ್ನು ಕೊಂಡುಕೊಂಡಳು. ಆ ಹೂವುಗಳನ್ನು ಕೈಯಲ್ಲಿ ಹಿಡಿದು ಖುಷಿಯಿಂದ ಮಾಲ್ ಎಲ್ಲಾ ಸುತ್ತಾಡಿದಳು. ಅವು ಎಷ್ಟು ಸುಂದರವಾಗಿದ್ದವೆಂದರೆ ಎಲ್ಲರೂ ಅವುಗಳನ್ನೇ ನೋಡುತ್ತಿದ್ದರು.

ಅವಳು ಎರಡನೇ ಮಹಡಿಯಲ್ಲಿ ಓಡಾಡುತ್ತಿದ್ದಾಗ ಮೂರು-ನಾಲ್ಕು ಹುಡುಗರ ಗುಂಪೊಂದು ಬಂತು. ಅದರಲ್ಲಿದ್ದವನೊಬ್ಬ ‘ಮೇಡಂ ಈ ಹೂವು ಎಲ್ಲಿ ತೆಗೆದುಕೊಂಡಿರಿ, ಇದೇ ಮಾಲ್ ನಲ್ಲಿ ಇದ್ಯಾ? ಎಲ್ಲಿದೆ’ ಎಂದು ಇಂಗ್ಲಿಷ್ ನಲ್ಲಿ ಕೇಳಿದ. ತಕ್ಷಣಕ್ಕೆ ಏನು ಉತ್ತರಿಸಬೇಕು ಎಂದು ತಿಳಿಯದ ಪಾರು ಸಲೀಸಾಗಿ ಅಂಡರ್ ವೇರ್ ನಲ್ಲಿ ಎಂದಳು. ಹುಡುಗರು ಮುಸಿ ಮುಸಿ ನಕ್ಕು ಮತ್ತೇನು ಕೇಳದೆ ಜಾಗ ಖಾಲಿ ಮಾಡಿದರು. ಅವಳಿಗೆ ತಕ್ಷಣಕ್ಕೆ ಅವರು ಏಕೆ ನಕ್ಕರು ಎಂದೂ ತಿಳಿಯಲಿಲ್ಲ. ಅಲ್ಲೇ ಇದ್ದ ನಿಖಿಲ್ ಅಮ್ಮಾ, ಅದು ಅಂಡರ್ ಗ್ರೌಂಡ್ ಎಂದಾ. ತಾನು ಏನು ಹೇಳಿದೆ ಎಂದು ತಿಳಿದಾಗ ಮುಖ ನಾಚಿಕೆ, ಅವಮಾನದಿಂದ ಕೆಂಪಾಯಿತು. ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದಳು.

ಇನ್ನೊಮ್ಮೆ ಮಕ್ಕಳ ಜೊತೆ ಎಲ್ಲರೂ ಹೋಟೆಲ್ ಗೆ ಹೋಗಿದ್ದರು. ಆಗ ಮಕ್ಕಳೆಲ್ಲಾ ತಮಗೆ ಬೇಕಾದ ಪಾನೀಯಗಳನ್ನು ಆರ್ಡರ್ ಮಾಡುತ್ತಿದ್ದರು, ಪಾರು ನನಗೆ ಬ್ರಿಂಜಲ್ ಬೇಕು ಎಂದಳು. ಮಕ್ಕಳಿಗೆ ತಿಳಿಯಲಿಲ್ಲ ಏನಂದೆ ಎಂದರು ಬ್ರಿಂಜಲ್ ಬೇಕು ಎಂದಳು. ಎಲ್ಲರೂ ಗೊಳ್ ಎಂದು ನಕ್ಕರು. ವೇಯ್ಟರ್ ಬ್ರಿಜಾಯ್ಸಾ, ಮೇಡಂ ಎಂದಾ! ಇಂಥ ಎಷ್ಟೋ ಪ್ರಸಂಗಗಳು ಪಾರುವಿನ ಭಂಡಾರದಲ್ಲಿವೆ.

ಶಾಲೆಯಲ್ಲು ಅನೇಕ ಅವಮಾನವಾದ ಪ್ರಸಂಗಗಳಿವೆ. ಇಂಗ್ಲೀಷ್ ನಿಂದ ಅವಳ ಟ್ಯಾಲೆಂಟ್ ಗೇ, ಭಂಗ ಬಂದಿದ್ದಿದೆ. ಇದರಿಂದ ಬೇಸತ್ತ ಪಾರು ಇಂಗ್ಲಿಷ್ ಏನು ಬ್ರಹ್ಮವಿದ್ಯನಾ? ಕಲಿಯಲೇಬೇಕು ಎಂದು ಪಣ ತೊಟ್ಟಳು ಆದರೆ ಕೋಲಾರದ ಹಳ್ಳಿಯಿಂದ ಬಂದ ಪಾರುವಿಗೆ ಇಂಗ್ಲಿಷ್ ಪದಗಳನ್ನು ಆಡಲು ನಾಲಿಗೆ ತಿರುಗುತ್ತಿರಲಿಲ್ಲ. ಅವಳು ಇಂಗ್ಲಿಷ್ ಮಾತನಾಡಿದರೆ ಕನ್ನಡದಂತೆ ಕೇಳುತ್ತಿತ್ತು. ಮೊದಮೊದಲು ಎಲ್ಲರೂ ನಗುತ್ತಿದ್ದರು ಆದರೂ ಬಿಡದ ತ್ರಿವಿಕ್ರಮನಂತೆ ಶಾಲೆಯಲ್ಲು ಮಕ್ಕಳೊಂದಿಗೆ ಮಾತನಾಡಲು ಪ್ರಾರಂಭಿಸಿದಳು. ಎಷ್ಟೊಂದು ತಪ್ಪುಗಳಾದವೆಂದರೆ ಬೇಡಪ್ಪಾ! ಇದರ ಸಹವಾಸ ಎನಿಸಿಬಿಡುತ್ತಿತ್ತು ಎಷ್ಟೋ ಬಾರಿ ಒಬ್ಬೊಬ್ಬಳೇ ಹುಚ್ಚಿಯಂತೆ ಮಾತನಾಡಿ ಕೊಳ್ಳುತ್ತಿದ್ದಳು. ಬರೆದು ಅಭ್ಯಾಸ ಮಾಡುತ್ತಿದ್ದಳು.

ನಮ್ಮ ಪಾರುವಿನಲ್ಲಿ ಮೆಚ್ಚಲೇಬೇಕಾದ ಗುಣವೆಂದರೆ ಹಠ, ಯಾವುದನ್ನಾದರೂ ಮಾಡಬೇಕೆಂದರೆ ಬಿಡದೆ ಪ್ರಯತ್ನಿಸುತ್ತಿದ್ದಳು. ಚಿಕ್ಕವಳಿದ್ದಾಗಿನಿಂದಲೂ ಅವಳು ಹಾಗೇ, ಒಮ್ಮೆ ವೀಣಾಳ ಬಳಿಯು ತನ್ನ ಸಂಕಷ್ಟವನ್ನು ತೋಡಿಕೊಂಡಾಗ ಅವಳು ಇವಳಿಗೆ ಸಹಾಯಹಸ್ತ ನೀಡಿದಳು. ಮೊಬೈಲ್ ನಲ್ಲಿ ಇಂಗ್ಲಿಷ್ನಲ್ಲೇ ಮಾತನಾಡುವುದು ಮೆಸೇಜ್ ಮಾಡುವುದು ಮಾಡುತ್ತಿದ್ದಳು. ಏನೇ ಸಂಶಯ ಕಂಡುಬಂದಲ್ಲಿ ಕೇಳಲು ಹೇಳುತ್ತಿದ್ದಳು.

ಈಗ ಪಾರು ಸರಾಗವಾಗಿ ಇಂಗ್ಲಿಷ್ ಮಾತನಾಡುತ್ತಾಳೆ‌. ಒಟ್ಟಿನಲ್ಲಿ ನಮ್ಮ ಪಾರು ಇಂಗ್ಲಿಷ್ ಕಲಿತಳು. ಇಲ್ಲಿಗೆ ಪಾರುವಿನ ಇಂಗ್ಲಿಷ್ ಗಾಥೆ ಪ್ರಸಂಗ ಮುಕ್ತಾಯವಾಯಿತು.

ದಿವ್ಯ.ಎಲ್.ಎನ್.ಸ್ವಾಮಿ

Related post

1 Comment

  • Excellent mam

Leave a Reply

Your email address will not be published. Required fields are marked *