ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹ

ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹ

ನಮ್ಮ ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು. ಕಲೆ, ಸಂಗೀತ, ನೃತ್ಯ, ಸಾಹಿತ್ಯ, ಸಂಸ್ಕೃತಿಯಲ್ಲಿ, ಹಾಗೆಯೇ ಅಲ್ಲಲ್ಲಿ ಈಗಲೂ ಕಾಣಬಹುದಾದ ಅವಿಭಕ್ತ ಕುಟುಂಬಗಳು, ಅಲ್ಲಿ ಕಂಡು ಬರುವ ಒಗ್ಗಟ್ಟು, ಅಂಥಹ ಒಗ್ಗಟ್ಟಿನಿಂದ ಒಟ್ಟಿಗೆ ಆಚರಿಸುವ ಆಚಾರ ವಿಚಾರಗಳು ಅಂದಿನಿಂದ ಇಂದಿನವರೆಗೂ ಭಾರತೀಯರಾದ ಪ್ರತಿಯೊಬ್ಬರಲ್ಲೂ ತನ್ನತನ ಉಳಿಸುವಲ್ಲಿ ಯಶಸ್ವಿಯಾಗಿದೆ.

ಬೇರೆ ಬೇರೆ ದೇಶದವರೂ ಸಹ ಭಾರತೀಯ ಸಂಸ್ಕೃತಿಗೆ ಮರುಳಾಗಿ ಅವರೂ ಅಳವಡಿಸಿ ಕೊಂಡಿರುವುದು, ನಮಗೆ ಹೆಮ್ಮೆಯ ಸಂಗತಿ. ಆದರೆ ನಾವು ನಮ್ಮ ಸಂಸ್ಕೃತಿಯನ್ನೇ ಎಲ್ಲೋ ಮರೆಯುತ್ತಿದ್ದೇವೆ. ಅದರಲ್ಲೂ ಹೆಚ್ಚಾಗಿ ನಮ್ಮ ಯುವ ಜನತೆ ನಮ್ಮತನ ಬಿಟ್ಟು, ಪಾಶ್ಚಿಮಾತ್ಯ ಸಂಸ್ಕೃತಿಗೆ ಬದಲಾ ಗುತ್ತಿದ್ದಾರೆ. ಇದು ಬಹಳ ಆತಂಕಕಾರಿಯ ವಿಷಯ.

ಹೀಗೆಯೇ ಮುಂದುವರಿದರೆ ನಮ್ಮ ಸಂಸ್ಕೃತಿ ಅಳಿಯುವುದು ಖಚಿತ. ನವೀಕರಣದ ಹೆಸರಿನಲ್ಲಿ ಮತ್ತು ಮೋಜು ಮಸ್ತಿಯ ಹೆಸರಿನಲ್ಲಿ ಒಬ್ಬರನ್ನು ಒಬ್ಬರು ನೋಡಿ, ಬದಲಾಗುತ್ತಿರುವುದು ಪ್ರತಿದಿನ ನೋಡುತ್ತಿದ್ದೇವೆ. ಬದಲಾದ ಈ ಹೊಸ ಹೊಸ ಆವಿಷ್ಕಾರ, ಆಧುನಿಕತೆಯು ಕೆಲವೊಮ್ಮೆ ಇಂದಿನ ಇಳಿ ವಯಸ್ಸಿನ ಹಾಗೂ ಮಧ್ಯ ವಯಸ್ಸಿನ ಮನಸ್ಸುಗಳಿಗೆ ಅನಿವಾರ್ಯವಾದರೂ, ಒಲ್ಲದ ಮನಸಿನಿಂದ ಅತ್ತ ನುಂಗಲೂ ಆಗದ, ಇತ್ತ ಉಗುಳಲೂ ಆಗದೆ ಬಿಸಿ ತುಪ್ಪದಂತೆ ಅನಭವಿಸುತ್ತಿರುವುದು ನೋವಿನ ಸಂಗತಿ. ಈಗಿನ ಯುವ ಜನತೆಯಂತೂ ಆಧುನಿಕತೆಯ ಹೆಸರಿನಲ್ಲಿ ಉಡುಗೆ ತೊಡುಗೆ, ಹಾವಭಾವ, ಸಂಗೀತ ಕೇಳುವುದು, ಹಾಡುವುದು, ಹೀಗೇ ಬಹಳಷ್ಟು ಪಾಶ್ಚಿಮಾತ್ಯರಿಂದ ಪ್ರಭಾವಿತರಾಗಿದ್ದಾರೆ. ಅಷ್ಟೇ ಏಕೆ ಭಾರತೀಯ ಎಷ್ಟೋ ಮದುವೆಗಳು, ಮಧುಚಂದ್ರವೂ ಬೇರೆ ಬೇರೆ ದೇಶಗಳಲ್ಲಿ ನಡೆಯುವುದು, ಅದು ಕೂಡಾ ಅವರ ಸಂಪ್ರದಾಯದಂತೆ ನಡೆಯುವುದು ಸಾಮಾನ್ಯವಾಗಿದೆ. ಕೆಲವೊಂದು ಹಿಂದೂ ಸಂಸ್ಕೃತಿ ಅಲ್ಲದ ಹಬ್ಬಗಳನ್ನೂ ಸಹ ನಮ್ಮ ಹಬ್ಬಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಆಚರಿಸುತ್ತಿದ್ದೇವೆ.

ನಮ್ಮ ಸಂಸ್ಕೃತಿ, ಆಚರಣೆಗಳು ನಮ್ಮ ಹಕ್ಕು, ಅದರಲ್ಲೇ ನಮ್ಮ ಅಭಿವೃದ್ಧಿ, ನಮ್ಮ ನೆಮ್ಮದಿ. ಇದನ್ನು ಈಗಿನ ಮಕ್ಕಳಿಗೆ ತಿಳಿ ಹೇಳುವುದು, ನಮ್ಮ ಕರ್ತವ್ಯ. ನಮ್ಮ ಈಗಿನ ವ್ಯವಸ್ಥೆಗಳೂ ಸಹ ಹೀಗೆ ಹದಗೆಟ್ಟಿದೆ. ಕಛೇರಿ ಇರಲಿ, ಶಾಲಾ ಕಾಲೇಜುಗಳಿರಲಿ ಪಾಶ್ಚಿಮಾತ್ಯ ಉಡುಗೆಗೆ, ಭಾಷಾ ಬಳಕೆಗೆ ಹೆಚ್ಚು ಮನ್ನಣೆ ಇರುವುದರಿಂದಲೇ ಯುವಜನತೆ ಗೊಂದಲದಲ್ಲಿರುವುದು. ಇದು ಶುರುವಾದದ್ದು ಎಲ್ಲಿಂದ, ಕೊನೆ ಯಾವಾಗ ? ಅದನ್ನು ಸರಿ ಮಾಡುವುದಾದರೂ ಹೇಗೆ!!! ಮೂಲವನ್ನು ಹುಡುಕಿಯೇ ಅಂತ್ಯ ಹಾಡಬೇಕು.

ವಿದೇಶಿಗರಂತೆ ವರ್ತಿಸುವುದನ್ನು ನಿಲ್ಲಿಸೋಣ. ನಮ್ಮಲ್ಲೇ ಇರುವ ನಮ್ಮ ಸಂಸ್ಕೃತಿ, ನಮಗೆ ಅತ್ಯಂತ ಬೆಲೆಬಾಳುವ ನಿಧಿಯಂತೆ. ಮೊದಲು ನಮ್ಮತನ ಮೆರೆಯಲಿ. ಮಿಕ್ಕಿದ್ದು ನಂತರವಷ್ಟೇ. ಒಳ್ಳೆಯ ಸಂಸ್ಕಾರಗಳ ಸಂಸ್ಕೃತಿಯೇ ನಮ್ಮ ಭಾರತೀಯತೆಯ ಪ್ರತಿಬಿಂಬ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬ ನಾಗರಿಕನೂ ಇದರ ಮೌಲ್ಯ ಅರಿತಾಗ ಸಂಸ್ಕೃತಿಯ ಸಂರಕ್ಷಣೆ ಸಾಧ್ಯ.

ಶೈಲಾ

Related post

Leave a Reply

Your email address will not be published. Required fields are marked *