ಪಿಕಳಾರ ಎಂಬ ಮಾಡೆಲಿಂಗ್ ಹಕ್ಕಿ! (ಬುಲ್ ಬುಲ್)

ಅದೊಂದು ಸ್ಕೌಟ್‍ಗೈಡ್‍ ಉತ್ಸವ. ಚಿಕ್ಕಂದಿನಿಂದಲೆ ಹಲವಾರು ಸದ್ಗುಣಗಳನ್ನು, ಸರಳವಾಗಿ ಬದುಕುವುದನ್ನು ಮತ್ತು ಸಾಹಸ ಪ್ರವೃತ್ತಿಯನ್ನು ಬೆಳೆಸಲು ಆರಂಭಿಸಿದ ಚಳವಳಿ ಸ್ಕೌಟ್ಸ್‍ ಮತ್ತು ಗೈಡ್ಸ್‍. ಇದರಲ್ಲಿ ಪುಟ್ಟ ಗಂಡು ಮಕ್ಕಳ ತಂಡವನ್ನು ಕಬ್ಸ್‍ ಎಂದೂ ಪುಟ್ಟ ಹೆಣ್ಣುಮಕ್ಕಳ ತಂಡವನ್ನು ಬುಲ್‍ಬುಲ್ಸ್ ಎಂದು ಕರೆಯುತ್ತಾರೆ. ಆ ಪುಟ್ಟಮಕ್ಕಳ ಚಟುವಟಿಕೆಯನ್ನು ಕಂಡಾಗ ಸಂತೋಷ, ಆಶ್ಚರ್ಯ ಎರಡೂ ಆಗುತ್ತದೆ.

Photo: G S Srinatha

ಅಂದಹಾಗೆ, ಬುಲ್‍ಬುಲ್‍ ಎಂದರೇನು? ಅದೇ ನಮ್ಮ ಸುಂದರ ಹಕ್ಕಿಗಳಲ್ಲಿ ಒಂದು! ಕನ್ನಡದಲ್ಲಿ ಇದನ್ನು ಪಿಕಳಾರ ಎನ್ನುತ್ತಾರೆ. ನಮ್ಮ ಬಹುತೇಕ ಪಕ್ಷಿಛಾಯಾಗ್ರಾಹಕರ ಅತ್ಯುತ್ತಮ ಚಿತ್ರಗಳಲ್ಲಿ ಪಿಕಳಾರಗಳದ್ದು (Bulbul) ಇರಲೇ ಬೇಕು! ಅಷ್ಟು ಸಾಮಾನ್ಯ ಹಕ್ಕಿ ಇದು. ಹಾಗೆಯೇ, ಅಷ್ಟೇ ಸುಂದರವಾದದ್ದು ಕೂಡ. ಬಹುತೇಕ ಪ್ರತಿಯೊಬ್ಬ ಹೊಸ ಪಕ್ಷಿಛಾಯಾಗ್ರಾಹಕನ ಮೊದಲ ವನ್ಯಹಕ್ಕಿ ಪಿಕಳಾರ! ಅಂದಮಾತ್ರಕ್ಕೆ ಇದರ ಚಿತ್ರತೆಗೆಯುವುದು ಸುಲಭ ಎಂದಲ್ಲ! (ಯಾವ ವನ್ಯಜೀವಿ ಚಿತ್ರ ತೆಗೆಯುವುದೂ ಸುಲಭವಲ್ಲ!) ಪೊದೆ ಮರಗಳಲ್ಲಿ ಇವುಗಳ ಓಡಾಟ ಪಕ್ಷಿ ಛಾಯಾಗ್ರಾಹಕನಿಗೆ ಒಂದು ರೀತಿಯ ಮೊದಲ (ಉಚಿತ) ತರಬೇತಿ ಕಾರ್ಯಾಗಾರ! ಹಾಗಾಗಿ ಇದು ಹೊಸ ಛಾಯಾಗ್ರಾಹಕರಿಗೆ ಮಾಡಲ್‍ ಹಕ್ಕಿ!

ಜನನಿಬಿಡ ಪ್ರದೇಶಗಳಲ್ಲಿಯೂ ಕಂಡುಬರುವ ಇವು ವನ್ಯಪ್ರದೇಶದ ಕಾಡಂಚಿನ ಭಾಗಗಳಲ್ಲಿಯೂ, ಕುರುಚಲು ಕಾಡುಗಳಲ್ಲಿಯೂ ಕಂಡುಬರುತ್ತವೆ. ದಕ್ಷಿಣ ಏಷ್ಯಾದಲ್ಲಿ ಇಪ್ಪತ್ತನಾಲ್ಕು ಪ್ರಭೇದದ ಪಿಕಳಾರಗಳು ಕಂಡುಬರುತ್ತವೆ. ಜಾಗತಿಕವಾಗಿ ನೂರ ಮುವ್ವತ್ತೆರೆಡು ಪ್ರಭೇದಗಳು ಇವೆ. ಏಷ್ಯಾ ಮತ್ತು ಆಫ‍್ರಿಕಾದಲ್ಲಿ ಹೆಚ್ಚು. ನಮ್ಮ ಹಿಮಾಲಯದಲ್ಲಿ ಮೂರು ಪ್ರಭೇದದ ಬುಲ್‍ಬುಲ್‍ ಅಥವಾ ಪಿಕಳಾರಗಳು ಕಂಡುಬರುತ್ತವೆ (ಬೆಟ್ಟದ ಪಿಕಳಾರ, ಬೂದು ಪಿಕಳಾರ ಮತ್ತು ಹಿಮಾಲಯದ ಪಿಕಳಾರ). ನಮ್ಮಲ್ಲಿನ ಪಿಕಳಾರಗಳಲ್ಲಿ ಕೆಮ್ಮೀಸೆ  ಪಿಕಳಾರ (Pycnonotus jocosus)  ಮತ್ತು ಕೆಂಪುಪೃಷ್ಠದ ಪಿಕಳಾರಗಳು (Pycnonotus cafer) ಬಹುಸಾಮಾನ್ಯ. ಈ ಎರಡೂ ಪ್ರಭೇದಗಳಲ್ಲಿ ಕ್ರಮವಾಗಿ ಒಂಬತ್ತು ಮತ್ತು ಎಂಟು ಉಪಪ್ರಭೇದಗಳಿವೆ.

Photo: G S Srinatha

ಭಾರತ ಉಪಖಂಡದಲ್ಲಿ ಕೆಂಪು ಪೃಷ್ಠದ ಪಿಕಳಾರದ ಹರವು ಕೆಮ್ಮೀಸೆ ಪಿಕಳಾರದ್ದಕ್ಕಿಂತ ಹೆಚ್ಚು ಏಷ್ಯಾ ಮತ್ತು ಆಫ‍್ರಿಕಾದಲ್ಲಿ ಹೆಚ್ಚು ಪಿಕಳಾರಗಳು ಕಂಡುಬರುತ್ತವೆ. ನಮ್ಮ ಭಾರತದದ ಪಿಕಳಾರಗಳಲ್ಲಿ ಅಳಿದುಹೋಗಿಬಿಡಬಹುದಾದಂತಹ ಗಂಡಾಂತರಕ್ಕೆ ಸಿಲುಕಿರುವುದು ಹಳದಿಗಂಟಲಿನ ಪಿಕಳಾರ ಮಾತ್ರ (Yellow throated bulbul, , Pycnonotus xantholaemus). ದಖನ್ ಪ್ರಸ್ಥಭೂಮಿಯ ಕುರುಚಲು ಕಾಡುಗಳು, ಬೆಟ್ಟಪ್ರದೇಶಗಳು ಪೂರ್ವಘಟ್ಟಗಳಲ್ಲಿ ಇದು ಕಂಡುಬರುತ್ತದೆ. ಒಡಿಶ್ಶಾದಲ್ಲಿನ ಪೂರ್ವಭಾಗದಲ್ಲಿಯೂ ಕಂಡುಬರುತ್ತದೆ ಎಂಬ ಊಹೆ ಇದೆ. ಪಶ್ಚಿಮಘಟ್ಟದಲ್ಲಿಯೂ ಕೆಲವು ಕಡೆಯಿಂದ ವರದಿಯಾಗಿದೆ. ಕರ್ನಾಟಕದಲ್ಲಿ ಇದು ಕಾಣುವ ಮೇಲುಕೋಟೆ ಮತ್ತು ಸುತ್ತಲ ಪ್ರದೇಶವನ್ನು ಜಾಗತಿಕವಾಗಿ ಪ್ರಮುಖವಾದ ಪಕ್ಷಿ ತಾಣವೆಂದು ಬರ್ಡ್ ಲೈಫ್ ಇಂಟರ್ನ್ಯಾಷನಲ್ ಗುರುತಿಸಿದೆ. ಮುಂದಿನಬಾರಿ ಮೇಲುಕೋಟೆಗೆ ಹೋದಾಗ ನೋಡಲು ಪ್ರಯತ್ನಿಸಿ.

Photo: G S Srinatha

ಕಾಡುಗಳ ಎರಡನೇ ಹಂತ ಬೆಳೆವಣಿಗೆಗಳಲ್ಲಿ, ಕಾಡಂಚುಗಳಲ್ಲಿಯೇ ಹೆಚ್ಚು ಕಂಡುಬರುತ್ತವೆ. ಇದು ಮರದ ಮೇಲೆ ಗೂಡುಕಟ್ಟುತ್ತದೆ.

ಬೀಜಪ್ರಸರಣ, ಹಾಗೂ ಕೀಟಗಳ ನಿಯಂತ್ರಣದಲ್ಲಿ ಮಾತ್ರವಲ್ಲದೆ ಗಿಡಮರಗಳ ಪರಾಗಸ್ಪರ್ಶದಲ್ಲಿಯೂ ಪಿಕಳಾರಗಳು ಬಹುಮುಖ್ಯಪಾತ್ರವಹಿಸುತ್ತವೆ. ಹಾಗಾಗಿ, ಇವುಗಳ ಸಂರಕ್ಷಣೆ ಬಹಳ ಮುಖ್ಯ. ನೀವು ಮುಂದಿನ ಬಾರಿ ಪಿಕಳಾರಗಳನ್ನು ಕಂಡರೆ ನಮಗೆ ತಿಳಿಸಿ.

ಕಲ್ಗುಂಡಿ ನವೀನ್

ಚಿತ್ರಗಳು: ಶ್ರೀ ಜಿ ಎಸ್ ಶ್ರೀನಾಥ

Related post

1 Comment

  • Very good information

Leave a Reply

Your email address will not be published. Required fields are marked *