ಪಿತೃಪಕ್ಷ – ಮಹಾಲಯ ಅಮಾವಾಸ್ಯೆ
ಭಾದ್ರಪದ ಮಾಸದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ 15 ದಿನಗಳನ್ನು ಪಿತೃಪಕ್ಷ ಅಥವಾ ಪಕ್ಷಮಾಸವೆನ್ನುತ್ತಾರೆ.
ಈ ಸಮಯದಲ್ಲಿ ಪಿತೃಗಳು ತಮ್ಮ ಮಕ್ಕಳಿಂದ ಪಿಂಡ, ತಿಲೋದಕಗಳನ್ನು ಎದುರು ನೋಡುತ್ತಿರುತ್ತಾರೆ. ಈ ಹದಿನೈದು ದಿನಗಳಲ್ಲಿ ಯಾರು ಶ್ರಾದ್ಧವನ್ನು ಮಾಡುತ್ತಾರೋ ಅವರನ್ನು ಸಂತೃಪ್ತರಾದ ಪಿತೃಗಳು ಉತ್ತರೋತ್ತರ ಅಭಿವೃದ್ದಿಯಾಗಲೆಂದು ಆಶೀರ್ವಾದ ಮಾಡುತ್ತಾರೆ. ಪಿತೃಗಳ ಆಶೀರ್ವಾದವಿದ್ದರೆ ಮಕ್ಕಳು ಮೊಮ್ಮಕ್ಕಳು ಆಯುರಾರೋಗ್ಯ ಆಯುಷ್ಯಗಳನ್ನು ಪಡೆದು ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ನಮಗೆ ಜನ್ಮನೀಡಿ ನಾವು ಈಗಿರುವ ಪರಿಸ್ಥಿತಿಗೆ ನಮ್ಮ ಪಿತೃಗಳ ಕೊಡುಗೆ ಬಹಳಷ್ಟಿರುತ್ತದೆ, ಹಾಗಾಗಿ ವರ್ಷಕ್ಕೊಮ್ಮೆ ಗತಿಸಿದವರೆಲ್ಲರನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸುವುದು ಮಕ್ಕಳ ಅದ್ಯ ಕರ್ತವ್ಯ. ಪಿತೃಗಳು ನಮ್ಮ ಪಾಲಿಗೆ ದೇವರಿದ್ದಂತೆ. ಪಿತೃ ಪಕ್ಷದ ಕರ್ಮವನ್ನು ಆಚರಿಸಲು ಯಾವುದೇ ಜಾತಿ ಧರ್ಮಗಳ ಬೇದವಿಲ್ಲ. ಪಿತೃಪಕ್ಷ ಎಲ್ಲಾರಿಗೂ ಅನ್ವಯಿಸುವ ಆಚರಣೆ. ವಾರ್ಷಿಕ ಶ್ರಾದ್ಧಾದಲ್ಲಿ ನಾವು ಮೂರು ತಲೆಮಾರುಗಳನ್ನಷ್ಟೇ ನೆನೆಸಿಕೊಂಡು ಶ್ರಾದ್ಧಾ ಮಾಡುತ್ತೇವೆ, ಆದರೆ ಪಿತೃಪಕ್ಷದಲ್ಲಿ ನಮ್ಮ ಆಪ್ತರು, ನಮ್ಮ ಶ್ರೇಯಸ್ಸಿಗೆ ಕಾರಣರಾದವರು, ವಿದ್ಯೆ ಕಲಿಸಿದ ಗುರುಗಳು, ಅಷ್ಟೇ ಏಕೆ ನಮ್ಮ ಪ್ರೀತಿ ಪಾತ್ರವಾದ ಜಾನುವಾರುಗಳು ಶ್ವಾನಗಳನ್ನು ಸ್ಮರಿಸಿಕೊಳ್ಳಬಹುದು ಎನ್ನುತ್ತಾರೆ.
ಆಚರಣೆ ಹೀಗಿರಲಿ
ಯೋ ವೈ ಶ್ರಾದ್ಧಾಂ ನರಃ ಕುರ್ಯಾತ್ ಏಕಸ್ಮಿನ್ನಪಿ ವಾಸರೇ
ತಸ್ಯ ಸಂವತ್ಸರ ಯಾವತ್ ಸಂತೃಪ್ತಾಃ ಪಿತರೋ ಧ್ರುವಂ
ಎಂದರೆ ಒಂದು ಸಂವತ್ಸರ ಪೂರ್ತಿ ಪಿತೃದೇವತೆಗಳು ಸಂತ್ರುಪ್ತರಾಗಿರಬೇಕೆಂದರೆ ಭಾದ್ರಪದ ಕೃಷ್ಣಪಕ್ಷದಲ್ಲಿ ಒಂದು ದಿನವಾದರೂ ಶ್ರಾದ್ಧವನ್ನು ಮಾಡಬೇಕು, ಪಿತೃ ಪಕ್ಷದಲ್ಲಿ ಪಿತೃಗಳು ಪಿಂಡವನ್ನು ಬಯಸುತ್ತಾರೆ. ಪಿತೃ ಪಕ್ಷದ ಹದಿನೈದು ದಿನದಲ್ಲಿ ಯಾವತ್ತು ಬೇಕಾದರೂ ಪಕ್ಷ ಶ್ರಾದ್ಧವನ್ನು ಮಾಡಬಹುದು. ಹದಿನೈದು ದಿನಗಳಲ್ಲಿ ಆಗದಿದ್ದರೆ ಮಹಾಲಯ ಅಮಾವಾಸ್ಯೆಯಂದು ಮಾಡಲೇ ಬೇಕು. ತ್ರಿಮತಸ್ಥ ಬ್ರಾಹ್ಮಣರು ಪಿಂಡ ಪ್ರಧಾನ ಮಾಡಿ ತಿಲತರ್ಪಣ ನೀಡುತ್ತಾರೆ. ಹದಿನೈದು ದಿನದಲ್ಲಿ ಒಂದು ದಿನವಾದರೂ ಶ್ರಾದ್ಧವನ್ನು ಮಾಡಿ ಪಿಂಡ ಪ್ರದಾನ ಮಾಡಬೇಕು. ಇದನ್ನು ಶಾಸ್ತ್ರಗಳಲ್ಲಿ ಹೀಗೆ ಹೇಳಿದ್ದಾರೆ.
ಮಹಾಲಯೇ ಗಯಾಶ್ರಾದ್ಧೇ ಮಾತಾಪಿತ್ರೋಮೃತೇಹನಿಪಿಂಡಮಿಚ್ಚಂತಿ ಪತರಃ ಪಿಂಡಹೀನನ ಕಾರಯೇತ್
ಅಂದರೆ ಪಿತೃಪಕ್ಷದಲ್ಲಿ ಯಾವುದಾದರೂ ಒಂದು ದಿನ ಶ್ರಾದ್ಧ ಮಾಡಿ ಪಿಂಡದಾನ ಮಾಡಬೇಕು. ಇದನ್ನು ಸಕೃನ್ಮಹಾಲಯ ಶ್ರಾದ್ಧ ಎನ್ನುತ್ತಾರೆ. ಈ ಸಕೃನ್ಮಹಾಲಯ ಶ್ರಾದ್ಧ, ಗಯಾಶಾದ್ಧ, ಹಾಗೂ ಸಾಂವತ್ಸರಿಕಶ್ರಾದ್ಧಾಗಳಲ್ಲಿ ಪಿಂಡದಾನವು ಅವಶ್ಯ ಕರ್ತವ್ಯವಾಗಿದೆ. ಉಳಿದ ದಿನಗಳಲ್ಲಿ ತರ್ಪಣ ಶ್ರಾದ್ಧ ಮಾಡಿದರೆ ಸಾಕು.
ನಂಬಿಕೆ ಸಾಂಪ್ರದಾಯವನ್ನು ಅವಲಂಬಿಸಿ ವಿವಿಧ ಸಮುದಾಯದವರು ಬೇರೆ ಬೇರೆ ರೀತಿಯಾಗಿ ಮಾಡುತ್ತಾರೆ. ಇವೆಲ್ಲವೂ ಭಾವನಾತ್ಮಕವಾಗಿ ಮಾಡುವ ಕಾರ್ಯವಾಗಿದೆ. ಹಿರಿಯರು ಅಗಲಿದ ನಿರ್ಧಿಷ್ಟ ತಿಥಿಯಂದು ಪಕ್ಷಮಾಸದಲ್ಲಿ ಶ್ರಾದ್ಧಮಾಡಬಹುದು. ತಿಥಿ ನೆನಪಿಲ್ಲದಿದ್ದರೆ 15 ದಿನದಲ್ಲಿ ಯಾವತ್ತು ಬೇಕಾದರೂ ಮಾಡಬಹುದು. ಇದು ಆಗದೇ ಇದ್ದರೆ ಮಹಾಲಯ ಅಮಾವಸ್ಯೆಯಂದು ಶ್ರಾದ್ಧಾ ಮಾಡಬಹುದು.
ಕೆಲವರು ತಮ್ಮ ಪೂರ್ವಜರ ಫೋಟೋವನ್ನು ಇಟ್ಟು ಅವರಿಷ್ಟವಾದ ತಿಂಡಿ ತಿನಿಸುಗಳನ್ನು ಮಾಡಿ ಅವರನ್ನು ಪೂಜಿಸಿ ಮನೆಯ ಸದಸ್ಯರು ನೆಂಟರಿಷ್ಟರೊಂದಿಗೆ ಭೋಜನ ಮಾಡುತ್ತಾರೆ. ಇನ್ನು ಕೆಲವರು ತಮ್ಮ ಪೂರ್ವಜರ ಸಮಾಧಿಯ ಬಳಿ ಹೋಗಿ ಹಾಲು ತುಪ್ಪ ಹಾಕಿ ಹೂವು ಹಣ್ಣು ಕಾಯಿಗಳನ್ನು ಅರ್ಪಿಸಿ ಪೂಜಿಸುತ್ತಾರೆ. ಆಚರಣೆ ಬೇರೆ ಬೇರೆಯೆ ಇರಲಿ, ಆದರೆ ಮಹಾಲಯವನ್ನು ಮಾಡುವುದು ಬಿಡಬಾರದು. ಮಾಡಿದ ಅಡುಗೆಯನ್ನು ಮೊದಲು ಹಸುವಿಗೆ ತಿನ್ನಲು ಕೊಟ್ಟು ನಂತರ ಮನೆಯವರೆಲ್ಲಾ ಊಟ ಮಾಡಿ. ಇದರಿಂದ ಅನಂತ ಫಲಸಿಗುತ್ತದೆ. ಮಾಡುವ ಕಾರ್ಯದಲ್ಲಿ ಶ್ರದ್ಧೆಯಿರಲಿ. ಅದಕ್ಕೆ ಇದನ್ನು ಶ್ರಾದ್ಧವೆನ್ನುವುದು. ಪಿತೃಪಕ್ಷದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ನೀರು ತುಂಬಿದ ಪಾತ್ರೆ (ಉದಕುಂಬ ಧಾನ) ಅನ್ನ, ವಸ್ತç, ಧಾನ್ಯಗಳನ್ನು ದಾನ ನೀಡುವುದು ತುಂಬಾ ಉತ್ತಮ ಕಾರ್ಯವಾಗಿದೆ.
ಆಚರಣೆಯ ಹಿನ್ನಲೆ
ಮಹಾಭಾರತ ಯುದ್ಧದಲ್ಲಿ ಕರ್ಣ ಹತನಾಗಿ ಸ್ವರ್ಗವನ್ನು ಸೇರಿದಾಗ ನಿತ್ಯವೂ ಅವನಿಗೆ ಅಲ್ಲಿ ತಿನ್ನಲು ಬಂಗಾರ, ಬೆಳ್ಳಿ ಅಭರಣಗಳನ್ನೇ ಕೊಡಲಾಗುತ್ತದೆ. ಆದರೆ ಅಭರಣಗಳನ್ನು ತಿಂದುಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವೇ? ಹಸಿವು ಬಾಯಾರಿಕೆಯಿಂದ ಕಂಗಾಲಾದ ಕರ್ಣ ಇದರ ಬಗ್ಗೆ ಇಂದ್ರನನ್ನು ಕೇಳಲಾಗಿ, ಇಂದ್ರ ಹೇಳುತ್ತಾನೆ ನೀನು ನಿನ್ನ ಜೀವಿತಾವಧಿಯಲ್ಲಿ ಯಥೇಚ್ಚವಾಗಿ ಬೆಳ್ಳಿ ಬಂಗಾರವನ್ನು ದಾನಮಾಡಿದ್ದಿ, ಅಲ್ಲದೇ ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ನೀರನ್ನು ದಾನವಾಗಿ ನೀಡಿಲ್ಲ. ಹಾಗಾಗಿ ಇಲ್ಲಿ ತಿನ್ನಲು ನಿನಗೆ ಆಹಾರ ಸಿಗುತ್ತಿಲ್ಲ ಎನ್ನುತ್ತಾನೆ. ಆಗ ಕರ್ಣ ನನಗೆ ನನ್ನ ಪೂರ್ವಜರ ಬಗ್ಗೆ ಎನೂ ತಿಳಿಯದಿದ್ದರಿಂದ ನಾನು ಯಾವ ಶ್ರಾದ್ದವನ್ನು ಮಾಡಾಲಾಗಿಲ್ಲ, ಹಾಗಾಗಿ ನನಗೆ ಭೂಲೋಕಕ್ಕೆ ಹೋಗಿ ಶ್ರಾದ್ದಾ ಮಾಡಿ ಬರಲು ಅನುಮತಿಯನ್ನು ನೀಡಬೇಕಾಗಿ ಕೇಳುತ್ತಾನೆ. ಹಾಗೇ ಭೂಲೋಕಕ್ಕೆ ಹೋಗಿ 15 ದಿನಗಳ ಕಾಲ ತನ್ನ ಪೂರ್ವಿಕರಿಗೆ ಶ್ರಾದ್ಧವನ್ನು ಮಾಡಿಬರುತ್ತಾರೆ. ಹೀಗೆ 15 ದಿನಗಳ ಕಾಲ ಕರ್ಣ ಶ್ರಾದ್ಧ ಆಚರಿಸಿದ ದಿನವನ್ನೇ ಪಕ್ಷಮಾಸವೆನ್ನುತ್ತಾರೆ. ಹಾಗೇಯೇ ಸಮುದ್ರ ಮಂಥನ ಕಾಲದಲ್ಲಿ ಅನೇಕ ದೇವತೆಗಳು ಮತ್ತು ಋಷಿಗಳು ದೈತ್ಯರಿಂದ ಸಂಹರಿಸಲ್ಪಟ್ಟರು. ಇವರೆಲ್ಲರೂ ಒಂದು ರೀತಿಯಲ್ಲಿ ನಮ್ಮ ಪೂರ್ವಜರೆ ಆಗಿದ್ದರಿಂದ ಅವರಿಗೋಸ್ಕರ ಮಹಾಲಯ ಪಕ್ಷವನ್ನು ಆಚರಿಸುತ್ತೇವೆ.
ಮಹಾಲಯವನ್ನು ಆಚರಿಸುವ ಪದ್ದತಿ ನಾಲ್ಕು ವರ್ಣದವರಲ್ಲಿಯೂ ಇದೆ, ಅಷ್ಟೇ ಏಕೆ ಪ್ರಪಂಚದಾದ್ಯಂತ ಈ ಪದ್ದತಿಯನ್ನು ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ. ಅಮೇರಿಕಾ ಖಂಡದಲ್ಲಿ ಇದನ್ನು “ಥ್ಯಾಂಕ್ಸ್ ಗಿವಿಂಗ್ ಡೇ” ಎಂದು ಆಚರಿಸಿ ಅಂದು ಮೃತರಾದ ಪೂರ್ವಜರನೆಲ್ಲಾ ನೆನೆಸಿಕೊಂಡು ಅವರಿಗಿಷ್ಟವಾದ ಅಡುಗೆ ಮಾಡಿ ಫೋಟೋಗಳ ಮುಂದೆ ಇಟ್ಟು ಊಟ ಮಾಡುವ ಪದ್ದತಿ ಇದೆ. ಅಂದರೆ ಪೂರ್ವಜರನ್ನು ಜ್ಞಾಪಿಸಿಕೊಂಡು ಶ್ರಾದ್ಧಾ ಮಾಡುವು ಪದ್ದತಿ ಅನಾದಿಕಾಲದಿಂದಲೂ ಎಲ್ಲಾ ದೇಶ ಜಾತಿಗಳಲ್ಲಿಯೂ ಇದೆ. ಆಚರಣೆ ಬೇರೆ ಬೇರೆಯಾದರೂ ಇದರ ಮೂಲ ಉದ್ದೇಶ ಪೂರ್ವಜರನ್ನು ಸಂತೃಪ್ತಿ ಪಡಿಸಿ ಆಶೀರ್ವಾದ ಪಡೆಯುವುದು.
ಮಹಾಲಯ ಪಕ್ಷದಲ್ಲಿ ಶ್ರಾದ್ಧಾವನ್ನು ಮಾಡಬಾರದ ದಿನ.
ಮಹಾಲಯ ಪಕ್ಷದಲ್ಲಿ ಎಲ್ಲಾ ದಿನವೂ ಶ್ರಾದ್ದಾ ಮಾಡಲು ಬರುವುದಿಲ್ಲ. ಪ್ರತಿಪದ, ಷಷ್ಠಿ ಮತ್ತು ಏಕಾದಶಿಗೆ ನಂದಾ ತಿಥಿ ಎಂದು ಕರೆಯುತ್ತಾರೆ. ಅಂದು ಮಹಾಲಯ ಶ್ರಾದ್ಧಾ ಮಾಡುವುದು ನಿಷಿದ್ದ.
ಶುಕ್ರವಾರಗಳಂದು ಮಹಾಲಯ ಶ್ರಾದ್ಧಾ ಮಾಡಬಾರದು.
ಪಕ್ಷಮಾಸದಲ್ಲಿ ಬರುವ ಚತುರ್ಧಶಿಯನ್ನು ಘಾತ ಚತುರ್ಧಶಿ ಎನ್ನುತ್ತಾರೆ. ಅಪಘಾತ, ಕೊಲೆ, ಅತ್ಮಹತ್ಯೆ ಮಾಡಿಕೊಂಡವರಿಗೆ ಮಾತ್ರ ಚತುರ್ಧಶಿಯಂದು ಶ್ರಾದ್ದಾ ಮಾಡಬೇಕು.
ರೋಹಿಣಿ, ರೇವತಿ ಮತ್ತು ಮಖಾ ನಕ್ಷತ್ರ ಇರುವ ದಿನವೂ ಮಹಾಲಯ ಶ್ರಾದ್ಧಾ ಮಾಡಲು ಬರುವುದಿಲ್ಲ.
ಡಾ. ಪ್ರಕಾಶ್ ಕೆ ನಾಡಿಗ್