ಪೀಸಾ ಗೋಪುರ ವಾಲಿದ್ದು ಏಕೆ?

ಪೀಸ್ ಫುಲ್ ನಗರಿ – ಪೀಸಾ

ಕಾರ್ಯನಿಮಿತ್ತ ಡೆನ್ಮಾರ್ಕ್‍ಗೆ ಹೋಗುವ ಅವಕಾಶ ಸಿಕ್ಕಿತ್ತು, ಜಾಸ್ತಿ ಸಮಯವಿಲ್ಲದ ಕಾರಣ ಯೂರೋಪಿನ ನಾಲ್ಕ್ಯೆದು ದೇಶಗಳನ್ನಾದರೂ ಸುತ್ತೋಣಾ ಎಂದು ಡೆನ್ಮಾರ್ಕ್, ಫ್ರಾನ್ಸ್, ಇಟಲಿ ಹಾಗೂ ವ್ಯಾಟಿಕನ್ ಪ್ರವಾಸ ಕ್ಯೆಗೊಂಡಿದ್ದೆ, ಪ್ಯಾರಿಸ್‍ನಿಂದ ಹೋರಟು ಪೀಸಾದಲ್ಲಿ ಇಳಿಯುವ ಮೂಲಕ ಇಟಲಿಗೆ ಪಾದರ್ಪಣೆಮಾಡಿದ್ದೆ. ಪೀಸಾದ ಪಾರ್ಚಿಜಿಯೋ ವಿಮಾನ ನಿಲ್ದಾಣದಲ್ಲಿಳಿದಾಗ ಮಧ್ಯಾಹ್ನ ಮೂರು ಘಂಟೆಯಾಗಿತ್ತು, ಇಮಿಗ್ರೇಶನ್ ಚೆಕ್ ಮುಗಿಸಿ ಹೊರ ಬಂದಾಗ ಮಧ್ಯಾಹ್ನ ಮೂರುವರೆಯಾಗಿತ್ತು,ಯೂರೋಪಿನಲ್ಲಿ ಮೂರನೆ ದೇಶದಲ್ಲಿ ಕಾಲಿಟ್ಟ ಸಂತಸ ಒಂದುಕಡೆಯಾದರೆ ಹೊಟ್ಟೆ ಬೇರೆ ಚುರುಗುಡುತ್ತಿತ್ತು, ವಿಮಾನ ನಿಲ್ದಾಣದಿಂದ ಪೀಸಾ ಗೋಪುರಕ್ಕೆ ನಲವತ್ತು ನಿಮಿಷದ ಕಾಲ್ನಡಿಗೆ, ನೆಡೆಯುತ್ತಾ ಹೋಗೋಣ ದಾರಿಯಲ್ಲಿ ಏನಾದರೂ ತಿಂದರಾಯಿತೆಂದು ಹಾಗೂ ನೆಡೆಯುತ್ತಾ ಹೋದರೆ ನಗರಪ್ರದಕ್ಷಿಣೆಯೂ ಆಗುತ್ತದೆಯೆಂದು ನಡೆಯುತ್ತಲೆ ಹೊರಟೆ.

ವಿಮಾನ ನಿಲ್ದಾಣದಿಂದ ಹೊರಬಂದು ಮೊಬ್ಯೆಲ್‍ನಲ್ಲಿ ಜಿಪಿಎಸ್ ಹಾಕಿ ಪೀಸಾಗೋಪುರದ ಕಡೆ ಹೆಜ್ಜೆ ಹಾಕಲಾರಂಬಿಸಿದ್ದೆ. ಪೀಸಾ ಇಟಲಿಯ ಒಂದು ಚಿಕ್ಕ ನಗರ, ಸುಮಾರು 90 ಸಾವಿರ ಜನಸಂಖ್ಯೆ ಹೊಂದಿದೆ, ನಗರದ ಮಧ್ಯದಲ್ಲಿ ಶಾಂತವಾಗಿ “ಆರ್ನೋ” ನದಿ ಹರಿಯುತ್ತದೆ, ನಗರದಲ್ಲಿ ಹೆಜ್ಜೆ ಹಾಕುತ್ತಾ ನೆಡೆದಂತೆ ಇಟಾಲಿಯನ್ ಸಂಸ್ಕೃತಿ ಕಣ್ಮುಂದೆ ತೆರೆಯುತ್ತಾ ಹೋಯಿತು. ಶುಭ್ರವಾಗಿ ನಗರದ ಮಧ್ಯಭಾಗದಲ್ಲಿ ಹರಿದು ಹೋಗಿರುವ ಆರ್ನೋ ನದಿಯ ಇಕ್ಕೆಲಗಳಲ್ಲಿ ಹರಡಿರುವ ಒಂದೇ ರೀತಿಯ ಮೂರ್ನಾಲ್ಕು ಅಂತಸ್ತಿನ ಕಟ್ಟಡಗಳು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅರ್ನೋ ನದಿಗೆ ಅನೇಕ ಕಡೆಗಳಲ್ಲಿ ಸೇತುವೆಗಳನ್ನು ಕಟ್ಟಾಲಾಗಿದೆ, ಪೀಸಾ ನಗರದಲ್ಲಿ 20ಕ್ಕೂ ಅಧಿಕ ಐತಿಹಾಸಿಕ ಚರ್ಚಗಳಿವೆ, ರಸ್ತೆಗಳಂತೂ ಈಗ ತೊಳೆದಿದ್ದಾರೆನೋ ಎಂಬಷ್ಟು ಶುಭ್ರವಾಗಿದ್ದವು. ಶಾಂತವಾದ ರಸ್ತೆಗಳು, ಅಷ್ಟೇನೂ ಜನಜಂಗುಳಿಯಿರಲಿಲ್ಲಾ, ವಾಹನ ಒಡಾಟವೂ ಇರಲಿಲ್ಲಾ, ರಸ್ತೆಯ ಬದಿಗಳಲ್ಲಿ ಬೆಳೆದಿದ್ದ ಹಸಿರು ಮರಗಳು ನೆರಳಿನ ಜೊತೆಗೆ ತಂಪನ್ನೀಯುತ್ತಿದ್ದವು. ಈಸ್ಟರ್ ವಾರವಾಗಿದ್ದರಿಂದ ಬಹಳ ಮಂದಿ ಪ್ರವಾಸಕ್ಕೆ ಹೋಗಿದ್ದರೆಂದು ಕಾಣುತ್ತದೆ, ಹಸಿವು ನೀಗಿಸಿಕೊಳ್ಳಲು ಹೋಟೆಲ್ ಹುಡುಕತೊಡಗಿದ್ದೆವು, ಬಹಳಷ್ಟು ಹೋಟೆಲ್‍ಗಳು ಮುಚ್ಚಿದ್ದವು, ಕೊನೆಗೂ ಒಂದು ಪಿಜ್ಜಾ ಸೆಂಟರ್ ಸಿಕ್ಕಿತು, ಸೀದಾ ಒಳ ಹೊಕ್ಕವರಿಗೆ ಇಟಾಲಿಯನ್ ಬೆಡಗಿಯೊಬ್ಬಳು ನಗುಮುಖದಿಂದ ಸ್ವಾಗತಿಸಿದಳು, ಮೆನು-ಗಿನು ನೋಡದೆ ಒಂದು ವೆಜ್ ಪೀಜ್ಜಾ ಆರ್ಡರ್ ಮಾಡಿದೆವು, ಪೀಜ್ಜಾ ಜೊತೆಗೆ ಕಾಫೀ ಕುಡಿದು ಅಲ್ಲಿಂದ ಹೊರನೆಡೆದೆವು.

ದಾರಿಯಲ್ಲಿ ನಮಗೆ ಪೀಸಾ ವಿಶ್ವವಿದ್ಯಾಲಯದ ದರ್ಶನವೂ ಅಯಿತು, ಇದು ಹನ್ನೆರಡನೆ ಶತಮಾನದಿಂದಲೂ ಈ ವಿಶ್ವವಿದ್ಯಾಲಯವಿದೆಯೆಂದು ಚರಿತ್ರೆ ಹೇಳುತ್ತದೆ. ಇಲ್ಲಿಂದ ಸ್ವಲ್ಪ ಮುಂದೆ ಬಂದರೆ ಸಾಕು ನಿಮಗೆ ದೊಡ್ಡ ಚೌಕಾಕಾರದ ಮ್ಯೆದಾನ ತೆರೆದುಕೊಳ್ಳುತ್ತದೆ, ಅಲ್ಲೇ ಇರುವುದು ಜಗತ್ಪ್ರಸಿದ್ದ ಪೀಸಾ ವಾಲುಗೋಪುರ, ಇದಕ್ಕೆ “ಬೆಲ್ ಟವರ್” ಎಂಬ ಇನ್ನೊಂದು ಹೆಸರು ಇದೆ, ಈ ಪೀಸಾ ಗೋಪುರದ ಪಕ್ಕದಲ್ಲೇ ಒಂದು ಪುರಾತನ ಚರ್ಚ್ ಹಾಗೂ ದೊಡ್ಡ ಗೊಮ್ಮಟಾಕೃತಿಯ ಕಟ್ಟಡವಿದೆ.

ಪೀಸಾ ಗೋಪುರ ವಾಲಿದ್ದು ಏಕೆ,?


ಅನೇಕರಿಗೆ ಇದು ಕಟ್ಟಿದ ಮೇಲೆ ವಾಲಲಾರಂಬಿಸಿತು ಎಂದು ತಿಳಿದ್ದಿದ್ದಾರೆ, ಮನುಷ್ಯ ತಪ್ಪು ಮಾಡುವುದು ಸಹಜ, 11ನೇ ಶತಮಾನದಲ್ಲಿ ಮಾಡಿದ ಒಂದು ತಪ್ಪು 14500 ಟನ್ ಭಾರದ ಗೋಪುರ ವಾಲುವಂತೆ ಮಾಡಿತಲ್ಲದೇ ಪ್ರಪಂಚದಾದ್ಯಂತ ಜನಾಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮಿತು, ಇದ್ದು ನೆಟ್ಟಗಿದ್ದಿದ್ದರೆ ಅಷ್ಟು ಪ್ರಸಿದ್ದಿಯಾಗುತ್ತಿರಲಿಲ್ಲವೋ ಏನೋ?
ಪೀಸಾ ಗೋಪುರ ರೋಮನ್ ಶಿಲ್ಪಕಲಾಕೃತಿಗಳಿಗಿಂತ ಸ್ವಲ್ಪ ಭಿನ್ನವಾಗಿದೆಯಲ್ಲದೇ ಅಧುನಿಕ ತಂತ್ರಜ್ನಾನವನ್ನು ಬಳಸಲಾಗಿಲ್ಲಾ, ಅದರೆ ಇದು ಹೇಗೆ ವಾಲಿತೆಂಬುದೆ ಇಲ್ಲಿ ಪ್ರಶ್ನೆ.

ಸಾಂಧರ್ಬಿಕ ಚಿತ್ರ

ಆಗಸ್ಟ್ 9, 1173 ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಯಿತು. ಮೊದಲು ಇಲ್ಲಿ ದೊಡ್ಡ ಘಂಟೆಯೊಂದನ್ನು ಕಟ್ಟಬೇಕೆಂದು ನಿರ್ಧರಿಸಲಾಗಿತ್ತು, ಅದರೆ 1778 ರಲ್ಲಿ ಮೂರು ಅಂತಸ್ತಿನ ಕೆಲಸ ಮುಗಿದಾಗ ಇಟಲಿಯ ಜನತೆಗೆ ಅಶ್ಚರ್ಯ ಕಾದಿತ್ತು, ಈ ಕಟ್ಟಡ ಒಂದು ಕಡೆಗೆ ಸ್ವಲ್ಪ ವಾಲಿದ್ದನ್ನು ಕಂಡ ಜನ ಹೌಹಾರಿದ್ದರು, ಇದು ವಾಲಲು ಕಾರಣ ಅಲ್ಲಿದ್ದ ಜೇಡಿಮಣ್ಣು, ಈ ಎತ್ತರದ ಗೋಪುರಕ್ಕೆ ಹಾಕಿದ್ದ ಕೇವಲ ಮೂರು ಮೀಟರ್ ಆಳದ ಅಡಿಪಾಯ ಸಾಕಾಗಲಿಲ್ಲ, ಜೇಡಿಮಣ್ಣಿನ ಸಾಂದ್ರತೆ ದುರ್ಬಲವಾಗಿದ್ದ ಕಡೆ ಅದು ವಾಲಲಾರಂಬಿಸಿ ಒಂದು ಹಂತದಲ್ಲಿ ವಾಲುವುದು ನಿಂತಿತು, ಮುಂದಿನ ನೂರು ವರ್ಷ ಅದರ ನಿರ್ಮಾಣವನ್ನು ಕೈಬಿಡಲಾಯಿತು, ನೂರು ವರ್ಷಗಳ ನಂತರ ಮಣ್ಣು ಹೊಂದಿಕೊಂಡಿರಬಹುದು ಎಂಬ ನಿರ್ಧಾರಕ್ಕೆ ಬಂದು 1272 ‘ಗ್ಯೋವಾನ್ನಿ’ ಎಂಬ ತಂತ್ರಜ್ಞ ಇದರ ನಿರ್ಮಾಣಕ್ಕೆ ಮುಂದಡಿಯಿಟ್ಟನು, 1284 ರಲ್ಲಿ ಇನ್ನು ನಾಲ್ಕು ಅಂತಸ್ತು ಮುಗಿಯುತ್ತಾ ಬಂದಿತ್ತು ಅದರೆ ಮತ್ತೆ ಮೋಲೊರೀಯಾ ಯುದ್ದದ್ದಿಂದಾಗಿ ಇದರ ನಿರ್ಮಾಣಕಾರ್ಯ ನಿಂತುಹೋಯಿತು,1319 ರಲ್ಲಿ ಏಳನೇ ಅಂತಸ್ತು ಪೂರ್ಣವಾಯಿತು, ಘಂಟೆ ಕಟ್ಟಲು ಜಾಗ ನಿರ್ಮಾಣಮಾಡಲಾಯಿತು.
1838 ‘ಅಲೆಕ್ಸಾಂಡರೋ ಡೆಲ್ಲಾ’ ಎಂಬ ಪ್ರಸಿದ್ದ ಇಂಜಿನಿಯರ್ ಇದರ ಬುಡದಲ್ಲಿ ಹಾಕಲಾದ ಅಡಿಪಾಯವನ್ನು ಜನರಿಗೆ ತೋರಿಸಲು ಗುಂಡಿಯೊಂದನ್ನು ತೋಡಿದನು. ಮಣ್ಣು ಸಡಿಲವಾದ ಕಾರಣ ಗೋಪುರ ಇನ್ನಷ್ಟು ವಾಲಿತು, ಇದಾದ ನಂತರ 19ನೇ ಶತಮಾನದವರೆಗೂ ಹಾಗೆ ಉಳಿದುಬಿಟ್ಟಿತ್ತು.

1964 ರಲ್ಲಿ ಇಟಲಿ ಸರ್ಕಾರ ಈ ಗೋಪುರ ಬೀಳದಂತೆ ಸಹಾಯ ನೀಡಬೇಕೆಂದು ಪ್ರಸಿದ್ದ ಇಂಜಿನಿಯರುಗಳಿಗೆ ಬೇಡಿತು, ಕಾರಣ ವಾಲುವಿಕೆಯಿಂದಲೇ ಪ್ರಸಿದ್ದಿ ಪಡೆದಿದ್ದ ಇದರಿಂದ ಪ್ರವಾಸೋದ್ಯಮವೂ ಬೆಳೆದಿತ್ತು, ಇಂಜಿನಿಯರುಗಳು ಹಾಗೂ ಇತಿಹಾಸಕಾರರ ದಂಡು ಮುಂದೆ ಬಂದು ತಾತ್ಕಾಲಿಕವಾಗಿ ಇದರ ಹಿಂದೆ 800 ಟನ್ ಗಳಷ್ಟು ಭಾರವನ್ನು ಹೇರಿದರು. 1987 ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಇದು ಹೆಸರು ಪಡೆಯಿತು. 1990 ರಲ್ಲಿ ಇದನ್ನು ಮತ್ತೆ ಮುಚ್ಚಲಾಯಿತು, ಮೇಲಿದ್ದ ಭಾರದ ಘಂಟೆಯನ್ನು ಕೆಳಗಿಳಿಸಲಾಯಿತು. 2001 ರಲ್ಲಿ ಮತ್ತೆ ಪ್ರವಾಸಿಗರಿಗೆ ಮುಕ್ತವಾದ ಇದು ಈಗ ಸುಭದ್ರವಾಗಿತ್ತು, ಗೋಪುರದ ಒಂದು ಪಕ್ಕದಲ್ಲಿ ಭಾರವನ್ನು ಹೆಚ್ಚಿಸಿ ಗೋಪುರ ಮತ್ತೆ ವಾಲದಂತೆ ಇದನ್ನು ಬಲಪಡಿಸಲಾಗಿದೆ, ಮುಂದಿನ 300 ವರ್ಷಗಳವರೆಗೆ ಗೋಪುರಕ್ಕೆ ಯಾವುದೇ ತೊಂದರೆ ಇಲ್ಲವೆಂದು ತಂತ್ರಜ್ಞರು ಪ್ರಮಾಣ ಪತ್ರ ನೀಡಿದ ಮೇಲೆ ಮತ್ತೆ ಪ್ರವಾಸಿಗರಿಂದ ಗಿಜಿಗುಡುತ್ತಿದೆ.

180 ಅಡಿ ಎತ್ತರದ ಈ ಗೋಪುರ ವೃತ್ತಾಕಾರವಾಗಿದ್ದು ಆರು ಅಂತಸ್ತುಗಳನ್ನು ಹೊಂದಿದೆ, ಮೇಲೆ ಹೋಗಲು 250 ಮೆಟ್ಟಿಲುಗಳಿವೆ, ಒಂದು ಸಲಕ್ಕೆ 25 ಜನರಿಗೆ ಮಾತ್ರ ಮೇಲೆ ಹತ್ತಲು ಅವಕಾಶ, ಮೇಲೆ ನಿಂತರೆ ಇಡೀ ಪೀಸಾ ನಗರ ದೃಶ್ಯ ಮನಮೋಹಕವಾಗಿ ಕಾಣುತ್ತದೆ. ಇದರ ನಿರ್ಮಾಣದಲ್ಲಿ ಕೇವಲ ಕಂಬಗಳು ಹಾಗೂ ಮಾರ್ಬೆಲ್‍ಗಳ ಆರ್ಚ್‍ಗಳನ್ನು ಬಳಸಿ ನಿರ್ಮಿಸಲಾಗಿದ್ದು ಸೂಕ್ಷವಾಗಿ ಗಮನಿಸಿದರೆ ಮೇಲಿನ ಅಂತಸ್ತು ನೆಟ್ಟಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ತನ್ನ ವಾಲುವಿಕೆಯಿಂದಲೆ ಪ್ರಸಿದ್ದವಾಗಿರುವ ಗೋಪುರವನ್ನು ಬೀಳದಂತೆ ಅದನ್ನು ಕೈಗಳಿಂದ ಒತ್ತಿ ಹಿಡಿಯುವ ಪೋಸಿನಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿರುವ ಪ್ರವಾಸಿಗರ ದೃಶ್ಯ ಇಲ್ಲಿ ಸಾಮಾನ್ಯ.

ಪೀಸಾ ಗೋಪುರದ ಪಕ್ಕದಲ್ಲೇ ದೊಡ್ಡ ಬೃಹದಾಕಾರದ ಗೊಮ್ಮಟದ ಮಾದರಿಯ ಕಟ್ಟಡವಿದೆ. ರೋಮನ್ ವಾಸ್ತು ಶೈಲಿಯಲ್ಲಿ ಕಟ್ಟಿರುವ ಈ ಗೊಮ್ಮಟ್ಟದ ಕಟ್ಟಡದ ಇಂಚಿಂಚು ನೋಡಲು ಅಧ್ಬುತವಾಗಿದೆ. ಈ ಕಟ್ಟಡದ ವಾಸ್ತುಶಿಲ್ಪ ನಿಮ್ಮನ್ನು ಆಕರ್ಷಿಸದೆ ಇರದು, ಇದರ ಪಕ್ಕದಲ್ಲೆ ಗೋಥಿಕ್ ಶೈಲಿಯಲ್ಲಿ ಕಟ್ಟಿರುವ ಬ್ಯಾಪಿಟಸ್ಟರಿ ಇದೆ, ಇಲ್ಲಿ ಮ್ಯೂಸಿಯಂ ಸಹ ಇದ್ದು ಈ ಚರ್ಚ್ ಹೊರಬಾಗದಲ್ಲಿ ನೋಡಲು ಎಷ್ಟು ಅಂದವಾಗಿದೆಯೋ ಒಳಗಿನ ನಿರ್ಮಾಣ ಅದಕ್ಕಿಂತ ಸುಂದರವಾಗಿದೆ. ಈ ಮೂರು ಐತಿಹಾಸಿಕ ಸ್ಮಾರಕಗಳ ಸುತ್ತ ಆವರಣದಲ್ಲಿ ಸುಂದರವಾದ ಹುಲ್ಲಿನ ರಾಶಿ ಕಣ್ಣಿಗೆ ತಂಪನೀಯುತ್ತದೆಯಲ್ಲದೆ ರಾತ್ರಿಯ ಸಮಯದಲ್ಲಿ ಬೆಳಕಿನಿಂದ ಕಂಗೊಳಿಸುವ ಈ ಮೂರು ಸ್ಮಾರಕಗಳನ್ನು ನೋಡುವುದೇ ಒಂದು ಅನಂದ. ಪೀಸಾಗೋಪುರದ ಸುತ್ತ ಅನೇಕ ಮಳಿಗೆಗಳಿವೆ, ಇಲ್ಲಿ ಪೀಸಾಗೋಪುರದ ಮಾದರಿ ಹಾಗೂ ಇಟಲಿಯಲ್ಲಿರುವ ಐತಿಹಾಸಿಕ ಸ್ಮಾರಕಗಳ ಮಾದರಿಗಳು ಕಿಚನ್, ಟೀಶರ್ಟ್ ಮಾರುವ ಅಂಗಡಿಗಳಿದ್ದು ಈ ಅಂಗಡಿಗಳನ್ನು ನೆಡೆಸುವ ಬಹುತೇಕರು ಪಾಕಿಸ್ತಾನಿ ಹಾಗೂ ಬಾಂಗ್ಲಾದೇಶಿಯರು, ತಮ್ಮ ದೇಶದಲ್ಲಿನ ಅಭದ್ರತೆಯಿಂದಾಗಿ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ.

ಪೀಸಾ ಬರಿ ವಾಲುಗೋಪುರಕ್ಕಷ್ಟೇ ಅಲ್ಲಾ, ಭೂಮಿ ವಿಶ್ವದಲ್ಲಿರುವ ಅನೇಕ ಗ್ರಹಗಳಲ್ಲಿ ಒಂದು ಮತ್ತು ಅದು ಸೂರ್ಯನ ಸುತ್ತ ತಿರುಗುತ್ತದೆ ಎಂದು ಹೇಳಿ ಕ್ರೈಸ್ತ ಧಾರ್ಮಿಕ ಪ್ರಪಂಚವನ್ನು ಬೆಚ್ಚಿ ಬೀಳಿಸಿದ ಹಾಗೂ ಅವರಿಂದ ಬಹಿಷ್ಕಾರಕ್ಕೊಳಗಾಗಿದ್ದ “ಗೆಲಿಲಿಯೊ” ಎಂಬ ಪ್ರಸಿದ್ದ ವಿಜ್ಞಾನಿ ಬಾಳಿಬದುಕಿದ ನಗರ. ತನ್ನ ಚಲನ ಸಿದ್ದಾಂತವನ್ನು ರುಜುವಾತುಮಾಡಲು ಬೇರೆ ಬೇರೆ ತೂಕದ ಎರಡು ವಸ್ತುಗಳನ್ನು ಒಂದೇ ಸಮಯಕ್ಕೆ ನೆಲಕ್ಕೆ ಬಿಟ್ಟು ಸಾಬೀತುಪಡಿಸಲು ಪ್ರಯೋಗಕ್ಕೂ ಈ ಪೀಸಾಗೋಪುರ ಸಾಕ್ಷಿಯಾಗಿತ್ತು. ಪೀಸಾ ಪ್ರವಾಸಕ್ಕೆ ಕೇವಲ ಅರ್ಧದಿನ ಸಾಕಾಗಿರುವುದರಿಂದ ಇಲ್ಲಿ ಉಳಿದುಕೊಳ್ಳುವ ಪ್ರಮೇಯ ಬರುವುದಿಲ್ಲಾ, ಹೊಟ್ಟೆಗೆ ಹೆಜ್ಜೆಗೊಂದರಂತೆ ಪಿಜ್ಜಾ ಸೆಂಟರ್ ಗಳಿವೆ, ನೀವು ವೈನ್ ಪ್ರಿಯರಾಗಿದ್ದರೆ ರಸ್ತೆ ಬದಿಯಲ್ಲಿ ಸಿಗುವ ಹಾಟ್ ವೈನ್ ಕುಡಿಯುವುದನ್ನು ಮರೆಯಬೇಡಿ. ಇಲ್ಲಿನ ತಂಪಾದ ವಾತಾವರಣಕ್ಕೆ ಇದು ಹೊಂದುತ್ತದೆ. ಪೀಸಾ ನೋಡಿಕೊಂಡು ನೀವು ರೋಮ್ ಗೆ ರೈಲಿನಲ್ಲಿ ಪ್ರಯಾಣ ಬೆಳೆಸಬಹುದು. ಪ್ರಯಾಣದ ಅವಧಿ ಮೂರು ಘಂಟೆ. ಶಾಂತವಾಗಿ ಹರಿಯುವ ಅರ್ನೋ ನದಿಯ ಇಕ್ಕೆಲದಲ್ಲಿ ಹರಡಿರುವ ಈ ಸಣ್ಣ ನಗರ ಶಾಂತಸುಂದರವಾಗಿದೆ, ಪೀಸಾಗೋಪುರದಲ್ಲಿ ಕಾಣುವ ಜನಜಂಗುಳಿಯನ್ನು ಬಿಟ್ಟರೆ ನಗರ ಯಾವಾಗಲು ಶಾಂತವಾಗಿರುತ್ತದೆ. ನದಿಯ ಪಕ್ಕದಲ್ಲಿ ಉದ್ದಕ್ಕೂ ಹಾಕಿರುವ ಕಲ್ಲಿನ ಕುರ್ಚಿಗಳಲ್ಲಿ ಕುಳಿತು ಪಿಸುಗುಟ್ಟುವ ಜನರನ್ನು ಬಿಟ್ಟರೆ ಶಾಂತವಾಗಿರುವ ಪೀಸಾನಗರವನ್ನು ಪೀಸ್ ಫುಲ್ ನಗರ ಎಂದರೆ ತಪ್ಪಾಗಲಾರದು.

ಡಾ|| ಪ್ರಕಾಶ್.ಕೆ.ನಾಡಿಗ್
ತುಮಕೂರು

Related post

2 Comments

  • ಗೋಪುರದ ಬಗ್ಗೆ ವಿವರಣೆ

  • ಗೋಪುರ

Leave a Reply

Your email address will not be published. Required fields are marked *