ಮಹಾತ್ಮ ಗಾಂಧೀಜಿ ಅವರ ನೂರೈವತ್ತನೇ ಜನ್ಮದಿನದ ಪ್ರಯುಕ್ತ ಕನ್ನಡಪ್ರಭದ ಮಕ್ಕಳ ಪುಟಕ್ಕಾಗಿ ನಾ ಬರೆದ ಪುಟ್ಟ ಕತೆಯು ಮತ್ತೆ ಈಗ ನೆನಪಾಯ್ತು. ಇವತ್ತಿಗೆ ಇದು ಸಮಂಜಸವೆನಿಸಿತು!
ಪುಟ್ಟಿ ಕಂಡ ಗಾಂಧಿ ಹೇಗಿದ್ದರು ಗೊತ್ತಾ?
‘ತಾತಾ, ನೀನು ಗಾಂಧಿ ತಾತನ್ನ ನೋಡಿದ್ದಾ? ಅವರೇ ಅಂತೇ ಬ್ರಿಟಿಷರನ್ನು ನಮ್ ದೇಶದಿಂದ ಹೊರಗೆ ಕಳಿಸಿದ್ದು! ಹೌದಾ ತಾತಾ? ಅವರನ್ನ ನೀನು ನೋಡಿದ್ದಾ?’
ಎಂದು ಪುಟ್ಟಿ ತಾತನ್ನ ಕೇಳಿದಳು.
‘ಹ್ಞೂ ಮರೀ, ನೀನು ಹೇಳಿದ್ದು ಸರಿ. ನಾನು ಗಾಂಧೀಜಿ ಅವರನ್ನು ಒಂದೇ ಒಂದು ಸಾರಿ ನೋಡಿದ್ದೆ. ಆಗಿನ್ನೂ ನಾನು ತುಂಬಾ ಚಿಕ್ಕವನು. ಬಹುಶಃ ಆಗ ನಾನು ಪ್ರೈಮರೀ ಸ್ಕೂಲ್‌ಗೆ ಹೋಗ್ತಿದ್ದೆ ಅನ್ಸುತ್ತೆ’
‘ಹಾಗಾದ್ರೆ ನಿನಗೆ ಜ್ಞಾಪಕ ಇರಲ್ಲ ಬಿಡು’
‘ಇಲ್ಲ ಇಲ್ಲಾ, ಚೆನ್ನಾಗಿ ಜ್ಞಾಪಕ ಇದೆ. ದೊಡ್ಡ ಸಮಾರಂಭ ಅದು. ಬಯಲು ರಂಗಮಂದಿರದ ಜಗುಲಿ ಮೇಲೆ ಅದು ನಡೆದಿತ್ತು. ಅಲ್ಲಿ ಜನರ ಜಾತ್ರೇನೇ ಸೇರಿತ್ತು. ಸುತ್ತಮುತ್ತಲಿನ ಕಟ್ಟಡಗಳ ಮೇಲೆಲ್ಲಾ ಜನ. ಗಿಡ-ಮರಗಳ ಮೇಲೂ ಜನ. ಹೀಗೆ ಕಿಕ್ಕಿರಿದಿದ್ದ ಸಭೆಯಲ್ಲಿ ನಾನು ಗಾಂಧಿ ಮಹಾತ್ಮನನ್ನು ನೋಡಿದ್ದೆ’.
‘ಚೆನ್ನಾಗಿಯೇ ಕಂಡಿರಬೇಕು ಅಲ್ವಾ?’
‘ನನ್ನಪ್ಪ ನನ್ನನ್ನು ತಮ್ಮ ಭುಜದ ಮೇಲೆ ಕೂರಿಸಿಕೊಂಡು ನಿಂತಿದ್ರು. ಸಭೆಯ ವೇದಿಕೆ ತುಂಬಾ ದೂರವಿತ್ತು. ಆಗೋ ಅಲ್ಲಿ ಇದ್ದಾರಲ್ಲ ಬಿಳಿ ಪಂಚೆ ಉಟ್ಟು, ಬಿಳಿ ದೋತಿ ಹೊದ್ದು ಅವರೇ ಗಾಂಧಿ. ಎಂದರು ನನ್ನಪ್ಪ.
ನಾನೋ ಸಾಧ್ಯವಾದಷ್ಟು ನನ್ನ ಕುತ್ತಿಗೆಯನ್ನು ಉದ್ದ ಮಾಡಿ ನೋಡಿದ್ದೆ. ನಮ್ಮಪ್ಪ ಹೇಳಿದ್ದಂತಹ ವ್ಯಕ್ತಿ ಅಲ್ಲಿದ್ದರು. ಆದರೆ ಅಷ್ಟು ದೊಡ್ಡ ಜನ ಸಾಗರದ ಆಚೆ ಗಾಂಧಿ ಅವರು ಚಿಕ್ಕ ಚುಕ್ಕೆಯಂತೆ ಕಂಡರು’.
‘ನೀನು ನನಗೆ ಸುಳ್ಳು ಹೇಳ್ತಾ ಇದ್ದೀಯಾ ತಾತ. ಗಾಂಧೀ ಅಂದ್ರೆ ದೇವರಂತೆ! ಅವರು ದೇವರ ತರಹ ಭೂಮಿಯಿಂದ ಆಕಾಶದವರೆಗೂ ನಿಂತಿರ್ತಾರೆ! ಅವರು ನಿನಗೆ ಕಂಡೇ ಇರಬೇಕು. ಏನಿಲ್ಲಾಂದ್ರೂ ಅವರ ಕಾಲಾದ್ರೂ ಕಂಡೇ ಇರುತ್ತೆ. ನಿಜ ಹೇಳು ತಾತ’…
‘ಮಗೂ, ನೀನು ಗಾಂಧಿ ಎಂದರೆ ದೇವರು ಅಂತಾ ಅಂದು ಕೊಂಡಿದ್ದೀಯಾ? ಪುರಾಣ ಕತೆಗಳಲ್ಲಿ ವರ್ಣಿಸಿರೋ ಥರ ಎತ್ತರಕ್ಕೆ ಬೆಳೆದು ನಿಂತ ದೇವರ ಥರ ಅವರಲ್ಲ. ಅವರು ದೇವರಲ್ಲ!
‘ಮತ್ತೆ ಎಲ್ಲರೂ ಗಾಂಧಿ ಅಂದ್ರೆ ಹಾಗೆ, ಗಾಂಧಿ ಅಂದ್ರೆ ಹೀಗೆ, ಅಂತಾರೆ. ಮಹಾತ್ಮ ಅಂತಾನು ಕರೀತಾರಲ್ಲಾ? ಹಾಗಿದ್ರೂ ನಿನಗೆ ದೊಡ್ಡದಾಗಿ ಯಾಕೆ ಕಂಡಿಲ್ಲ! ಬ್ರಿಟಿಷರನ್ನು ಸಣ್ಣ ಕೋಲು ಹಿಡಿದು ಓಡಿಸಿ ಬಿಟ್ಟ ಮಾಂತ್ರಿಕ ಅಂತಾರೆ ಅವ್ರನ್ನ. ದೇವರಲ್ಲ ಅಂದ್ರೆ ಹ್ಯಾಗೆ?’
‘ಗಾಂಧಿ ದೇವರಲ್ಲಿರುವಂತಹ ಗುಣಗಳನ್ನು ಹೊಂದಿರೋರು. ಕಷ್ಟದಲ್ಲಿರುವವರನ್ನು ಕಾಯೋರು, ದೇಶದ ಜನರ ಬಗ್ಗೆ ಕಾಳಜಿಯನ್ನು ಹೊಂದಿರೋರು. ಸಾಮಾನ್ಯ ವ್ಯಕ್ತಿಯೊಬ್ಬರು ಸತ್ಯ, ನಿಷ್ಠೆ ಅಹಿಂಸೆ, ಸತ್ಯಾಗ್ರಹ, ಉಪವಾಸಗಳಂತಹ ಉತ್ತಮ ಕೆಲಸಗಳಿಂದ ದೇವರಂತಾಗಿದ್ದಾರೆ ಅಷ್ಟೆ. ಆದರೆ ಅವರು ದೇವರಲ್ಲ!’
‘ಸರಿ ತಾತಾ, ಆ ಸಭೆಯಲ್ಲಿ ಬಾಪು ಏನು ಮಾಡ್ತಿದ್ರು?’
‘ಬಾಪು ಭಾಷಣ ಮಾಡಿದ್ರು. ಹಿಂದಿಯಲ್ಲಿ. ನನಗೆ ಏನೂ ಅರ್ಥವಾಗಲಿಲ್ಲ. ಆದರೆ ಅವರ ಧ್ವನಿಯಲ್ಲಿ ಒಂದು ರೀತಿಯ ಮಂತ್ರದ ಉಚ್ಚಾರವಿತ್ತು. ದೇಶ ಭಕ್ತಿಯನ್ನು ಹುಟ್ಟಿಸುವ ಮಂತ್ರ ಶಕ್ತಿ ಇತ್ತು. ಆಗ ಆ ವಯಸ್ಸಲ್ಲೇ ನನ್ನಲ್ಲೂ ದೇಶಭಕ್ತಿ ಉಕ್ಕಿತ್ತು. ಭಾಷಣ ಮುಗಿದ ಕೂಡಲೇ ‘ಭಾರತ್ ಮಾತಾಕಿ ಜೈಯ್ಯಾ’ ಅಂದಿದ್ದೆ. ನನ್ನಪ್ಪನಿಗೆ ಖುಷಿಯೋ ಖುಷಿ. ‘ಜೈಯ್ಯಾ ಜೈಯ್ಯಾ’ ಎಂದು ಮುದ್ದು ಮುದ್ದಾಗಿ ಹೇಳಿದ್ದು ನನ್ನಪ್ಪನಿಗೆ ಇಷ್ಟವಾಗಿತ್ತು ಅನ್ನಿಸುತ್ತೆ. ಹಾಗಾಗಿ ಆಗಾಗ ನನ್ನಿಂದ ಹಾಗೇ ಹೇಳಿಸಿ ಖುಷಿ ಪಡ್ತಿದ್ದರು. ಇವನಿಗೆ ಬಾಪು ಅವರನ್ನು ತೋರಿಸಿದ್ದು ಸಾರ್ಥಕವಾಯ್ತು ಎಂದು ಅವರಿಗೆ ಅನಿಸಿತ್ತು’!
‘ಹಾಗಾದ್ರೆ ತಾತ ನೀನೂ ದೇಶಭಕ್ತನೇ?’
‘ತಾತಾ ನಕ್ಕು. ಹಾಗೇನಿಲ್ಲ ನಾನು ಚಿಕ್ಕವನಲ್ವಾ, ಹಾಗಾಗಿ ನಾನು ಗಾಂಧಿ ಭಕ್ತನಾಗಿದ್ದೆ ಅಷ್ಟೆ’.
‘ತಾತಾ, ಗಾಂಧಿ ಜಯಂತಿಯನ್ನು ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ‘ನಾನ್‌ವಾಯ್ಲೆನ್ಸ್ ಡೇ’ ಅಂತಾ ಸೆಲೆಬ್ರೇಟ್ ಮಾಡ್ತಾರೆ. ಈ ವರ್ಷದ ಅಕ್ಟೋಬರ್ 2ಕ್ಕೆ ಗಾಂಧಿ ಹುಟ್ಟಿ ನೂರೈವತ್ತು ವರ್ಷಗಳು ಆಯ್ತಂತೆ. ಅದನ್ನೂ ಜೋರಾಗಿಯೇ ಮಾಡ್ತಿದ್ದಾರೆ. ನಮ್ಮ ಸ್ಕೂಲ್‌ನಲ್ಲಿ ಆವತ್ತು ನೂರೈವತ್ತು ಮಕ್ಕಳಿಗೆ ಗಾಂಧಿ ಪಾತ್ರ ಹಾಕಿಸಿ ಮೆರವಣಿಗೆ ಮಾಡ್ತಾರಂತೆ. ಎಷ್ಟು ಚೆಂದ ಇರುತ್ತೋ ನೋಡಬೇಕು. ತುಂಬಾನೇ ಕ್ಯೂರ್ಯಾಸಿಟಿ ಇದೆ. ಅವತ್ತು ನೀನೂ ಬರಬೇಕು ತಾತಾ. ನಿಮ್ಮಪ್ಪ ನಿಂಗೆ ದೂರದಿಂದ ಚುಕ್ಕೆಯಂತಹ ಒಬ್ಬ ಗಾಂಧಿಯನ್ನು ತೋರಿಸಿದ್ರಲ್ಲ. ಹಾಗೆ ಮೊಮ್ಮಗಳಾದ ನಾನು ನಿನಗೆ ಈಗ ಒಂದೇ ಬಾರಿಗೆ ನೂರೈವತ್ತು ಗಾಂಧಿಗಳನ್ನು ತೋರಿಸುತ್ತೇನೆ. ಮಿಸ್ ಮಾಡ್ಕೊಂಡ್ರೆ ನಿನಗೇ ಲಾಸು ಅಷ್ಟೇ, ಬರ್ತೀಯಾ ತಾನೆ?’.
ತಾತಾ ಜೋರಾಗಿ ನಕ್ಕರು. ಆದ್ರೆ ಮಾತಾಡಲಿಲ್ಲ.
‘ನಕ್ಕಿದ್ದು ಯಾಕೆ ಎಂದು ಅರ್ಥವಾಗಲಿಲ್ಲ ತಾತಾ?’
‘ನೋಡು ಮಗೂ, ಆ ಗಾಂಧಿ ಏನೆಲ್ಲಾ ಸಾಧನೆ ಮಾಡಿದ್ದರು. ಆದರೆ ಈಗ ಎಲ್ಲರೂ ಗಾಂಧಿ ವೇಷ-ಭೂಷಣಗಳನ್ನು ಹಾಕ್ಕೋಂತ್ತಾರೆ. ಹೀಗೆ ವೇಷ ಹಾಕಿದರೆ ಗಾಂಧಿ ಆಗಲ್ಲ. ತತ್ವ, ನಿಷ್ಠೆ ಗುಣಗಳನ್ನು ರೂಢಿಸಿಕೊಳ್ಳಬೇಕು. ಈಗ ಎಲ್ಲರೂ ಗಾಂಧಿ ಹೆಸರಲ್ಲೇ ಮಾಡಬಾರದ್ದು ಮಾಡ್ತಾರೆ. ಅಂತಹ ಒಬ್ಬ ಗಾಂಧಿ ಸಾಕು. ಈ ಗಾಂಧಿ ವೇಷದ ಗಾಂಧಿಗಳು ನನಗೆ ಬೇಕಿಲ್ಲ. ಅಂತಹ ಒಬ್ಬ ಗಾಂಧಿಯನ್ನು ನೋಡುವ ತವಕ ನನಗಿದೆ. ನಿನ್ನ ಮುಂದಿನ ಪರಂಪರೆಯಲ್ಲಾದರೂ ಅಂತಹ ಒಬ್ಬ ಗಾಂಧಿ ಬರಲಿ ಮಗೂ’ ಎಂದು ನಿಟ್ಟುಸಿರು ಬಿಟ್ಟರು.
‘ಈಗ ನನಗೊಂದು ಐಡಿಯಾ ಬಂದಿದೆ ತಾತಾ. ಈ ಗಾಂಧಿ ತಾತನನ್ನು ಯಾವ ದೇಶದವರಾದರೂ ಸರೀ ಅವರಿದ್ದಲ್ಲಿಂದಲೇ ಒಂದೇ ಬಾರಿಗೆ ನೋಡುವ ಅವಕಾಶವಿದೆ’.
‘ಅದು ಹೇಗೆ ಪುಟ್ಟಿ? ಅವರು ಈಗಿಲ್ಲವಲ್ಲಾ?’
‘ಇಲ್ಲದಿದ್ದರೂ ನೋಡಬಹುದು! ಈಗ ‘ಧ್ರುವ’ ಅನ್ನೋನು ನಕ್ಷತ್ರ ಆಗಿದ್ದಾನಲ್ವಾ? ಹಾಗೆಯೇ ಒಂದು ನಕ್ಷತ್ರಕ್ಕೆ ‘ಗಾಂಧಿ’ ಅಂತಾ ಹೆಸರಿಟ್ಟರೆ ಹೇಗೆ?
‘ಆ ನಕ್ಷತ್ರವನ್ನು ಇಡೀ ವಿಶ್ವದವರೆಲ್ಲರೂ ಒಂದೇ ಬಾರಿಗೆ ನೋಡಬಹುದಲ್ವಾ? ಆಗ ನೀನು ಚಿಕ್ಕವನಾಗಿದ್ದಾಗ ಗಾಂಧಿ ಬಾಪು ಚುಕ್ಕೆಯಂತೆಯೇ ಕಾಣಿಸಿದ್ದು ಅಂದೆ?’
‘ಹೌದಲ್ಲವಾ? ಒಳ್ಳೆ ಐಡಿಯಾ ಮಗೂ. ನೀನೂ ತುಂಬಾ ಜಾಣೆ’
‘ಚುಕ್ಕೆ ಅಂದ್ರೂ ನಕ್ಷತ್ರ ತಾನೆ? ಸರೀ ಹಾಗಾದ್ರೇ ಇವತ್ತೆ ರಾತ್ರಿ ಚೆನ್ನಾಗಿ ಬ್ರೈಟ್ ಆಗಿರೋ ಒಂದು ನಕ್ಷತ್ರಕ್ಕೆ ‘ಗಾಂಧಿ’ ಅಂತಾ ನಾಮಕರಣ ಮಾಡೋಣ ಸರೀನಾ?’
ಚಿತ್ರಗಳು ಹಾಗು ಬರಹ
ತುಂಕೂರ್ ಸಂಕೇತ್