ಪುಣ್ಯಕೋಟಿ – ಅನಿಮೇಷನ್ ಚಿತ್ರ

ಪುಣ್ಯಕೋಟಿ’-ಆ್ಯನಿಮೇಷನ್ ಚಿತ್ರವನ್ನು ಬೆಂಗಳೂರಿನ ವಾಸಿ ಟೆಕ್ಕಿ ರವಿಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದು ಇದು ಈ ವರ್ಷ ಜಪಾನಿನ 2ನೇ ಗೋಲ್ಡನ್ ಹಾರ್ವೆಸ್ಟ್ ಫಿಲ್ಮ್ ಫೆಸ್ಟಿವಲ್ ನಲ್ಲಿ`ಉತ್ತಮ ಆ್ಯನಿಮೇಷನ್ ಚಿತ್ರ’, `ಉತ್ತಮ ಫೀಚರ್ ಫಿಲ್ಮ್’,ಹಾಗೂ `ಉತ್ತಮ ನಿರ್ದೇಶಕ’ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಸಂಸ್ಕೃತ ಭಾಷೆಯಲ್ಲಿ ಚಿತ್ರಿಸಿದ ಈ ಪುಣ್ಯಕೋಟಿ ಎಂಬ ಕನ್ನಡ ನಾಡಿನ ಸುಪ್ರಸಿದ್ದ ಜನಪ್ರಿಯ ಹಾಡಿಗೆ ಇಷ್ಟು ದೊಡ್ಡ ಪುರಸ್ಕಾರ ದೊರಕಿರುವುದು ಸಂತಸದ ವಿಷಯವೆಂದು ನಿರ್ದೇಶಕ ರವಿಶಂಕರ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ `ಪುಣ್ಯಕೋಟಿ’ ಚಿತ್ರವು ಮುಂಬೈನಲ್ಲಿ ನಡೆದ ಆ್ಯನಿಮೇಷನ್ ನೆಟ್‍ವರ್ಕ್‍ನ ವಾರ್ಷಿಕ ಸ್ಪರ್ಧೆಯಲ್ಲಿ ಬೆಸ್ಟ್ ಡಿಜಿಟಲ್ ಫಿಲ್ಮ್, ಕ್ಯಾರೆಕ್ಟರ್ ಡಿಸೈನ್, ಧ್ವನಿ ಮತ್ತು ಚಿತ್ರಕತೆಗಾಗಿ ನಾಲ್ಕು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ. ಇಂತಹ ವೈವಿಧ್ಯಮಯ ಚಿತ್ರವನ್ನು ಭಾರತ ಚಿತ್ರರಂಗದ ಹಲವು ದಿಗ್ಗಜರ ಮುಂದೆ ಪ್ರಸ್ತುತ ಪಡಿಸಿ ಭೇಷ್ ಎನಿಸಿಕೊಂಡಿದ್ದಾರೆ.

ಕನ್ನಡದ ಈ ನಾಡಲ್ಲಿ `ಪುಣ್ಯಕೋಟಿ’ ಕತೆಯು ಮನೆ ಮಾತಾಗಿದೆ. ಕನ್ನಡ ನೆಲದ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ಹಾಡು ಎಲ್ಲರಿಗೂ ಗೊತ್ತಿರುವಂತಹದ್ದೆ ಆಗಿದೆ. ಎಲ್ಲರ ಮನಸ್ಸಿಗೆ ಮುಟ್ಟುವ ಈ ಹಾಡಿನ ಸಾಲುಗಳು ಇಂದಿಗೂ ಜನಜನಿತವಾಗಿದೆ. `ಸತ್ಯವೇ ನಮ್ಮ ತಾಯಿ-ತಂದೆ’ ಎನ್ನುವಂತಹ ಸಾಲು, ಸತ್ಯವಾಕ್ಯವನ್ನು ತಪ್ಪುವವರಲ್ಲ ಎನ್ನುವ ಮಾತು ಕನ್ನಡಿಗರ ನಿಷ್ಠೆಯನ್ನು ಸಾರುತ್ತದೆ.

ರವಿಶಂಕರ್ ರವರು ಮೋಹನ್‍ದಾಸ್ ಪೈ ಅವರ ವಿಶ್‍ಬೇರ್ರಿ ಸಂಸ್ಥೆಯ ಮೂಲಕ ಎರಡು ಹಂತದಲ್ಲಿ ಕ್ರೌಡ್ ಫಂಡಿಂಗ್‍ನ ಮೂಲಕ ಚಿತ್ರವನ್ನು ಮಾಡಿದ್ದಲ್ಲದೇ ಅಂತಿಮ ಹಂತದಲ್ಲಿ ತಮ್ಮ ಪತ್ನಿ ಸಿಂಧೂ ರವಿಶಂಕರ್ ಅವರ ಹಣಕಾಸಿನ ಸಹಾಯದಿಂದ ಚಿತ್ರವನ್ನು ಮುಗಿಸಿದ್ದಾರೆ. ಈ ಚಿತ್ರದ ಟ್ರೈಲರ್ ಅರ್ಧ ಮಿಲಿಯನ್ ವೀಕ್ಷಕರನ್ನು ತಲುಪಿದ್ದು ಈಗ ಇತಿಹಾಸ.

ಟ್ರೈಲರ್ ವೀಕ್ಷಿಸಿ

`ಪುಣ್ಯಕೋಟಿ’ ಎಂಬ ಗೋವಿನ ಹಾಡಿನ ಮೂಲಕ ಸತ್ಯದ ತತ್ವವನ್ನು ಜಗಜ್ಜಾಹಿರುಗೊಳಿಸಲು ಬೆಂಗಳೂರಿನ ವಾಸಿ ಟೆಕ್ಕಿ ರವಿಶಂಕರ್ ವೆಂಕಟೇಶ್ವರನ್ ಇನ್‍ಫೋಸಿಸ್‍ನ ಕೆಲಸವನ್ನು ಬಿಟ್ಟು ಸತತ ನಾಲ್ಕು ವರ್ಷಗಳು ಶ್ರಮವಹಿಸಿ ನಿರ್ದೇಶಿಸಿದ್ದಾರೆ. ಇಂತಹ ಕನ್ನಡ ಮೂಲದ ಹಾಡಿನ ಅಮೂಲ್ಯ ಸಂದೇಶವನ್ನು ವಿಶ್ವದ ಎಲ್ಲರಿಗೂ ತೋರಿಸುವ ಸಲುವಾಗಿ ಆ್ಯನಿಮೇಷನ್ ಮೂಲಕ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಆ್ಯನಿಮೇಷನ್ ಚಿತ್ರವನ್ನು ಸಂಸ್ಕೃತ ಭಾಷೆಯಲ್ಲಿ ಮಾಡಿ ಮತ್ತಷ್ಟು ವಿಭಿನ್ನಗೊಳಿಸಿದ್ದಾರೆ. ಈ ನಮ್ಮ ದೇವ ಭಾಷೆಯನ್ನು ಸಾಮಾನ್ಯರತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ.

ಕನ್ನಡದ ಹೆಸರಾಂತ ನಟ, ನಿರ್ದೇಶಕರಾಗಿದ್ದ ಜಿ ವಿ ಅಯ್ಯರ್ ಅವರು ಸಂಸ್ಕೃತದಲ್ಲಿ ಹಲವು ಚಿತ್ರಗಳನ್ನು ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಅವರ ಕಾಲಕ್ಕೇ ನಿಂತು ಹೋಗದಂತೆ ಈಗಿನ ಪೀಳಿಗೆಯವರಾದ ರವಿಶಂಕರ್ ರವರು ಅಯ್ಯರ್ ಅವರು ಹಾಕಿ ಕೊಟ್ಟ ಹಾದಿಯನ್ನು ಮುಂದುವರಿಸುತ್ತಾ ಬಂದಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.

ಇಳಯರಾಜ ಹಾಗೂ ರೇವತಿಯಂತಹ ದಿಗ್ಗಜರ ಸಹಕಾರ:
ಈ ಆ್ಯನಿಮೇಷನ್ ಚಿತ್ರಕ್ಕೆ ಭಾರತೀಯ ಸಂಗೀತ ಲೋಕದ ದಿಗ್ಗಜರಲ್ಲೊಬ್ಬರಾದ ಹಾಗೂ ಈ ಚಿತ್ರದ ನಿರ್ದೇಶಕ ರವಿಶಂಕರ್ ಅವರ ಮಾನಸಗುರುಗಳೂ ಆದ ಇಳಯರಾಜ ಅವರಲ್ಲಿ ಈ ಚಿತ್ರದ ಬಗ್ಗೆ ತಿಳಿಸಿದಾಗ ಅವರು ಮುಕ್ತ ಮನಸ್ಸಿನಿಂದ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಲ್ಲದೇ ಈ ಚಿತ್ರಕ್ಕೆ ಸಂಬಂಧಿಸಿದ ಸಂಸ್ಕøತ ಹಾಗೂ ಇಂಗ್ಲಿಷ್ ಆವೃತ್ತಿಯ ಪುಸ್ತಕವನ್ನು ಇಳಯರಾಜ ಲೋಕಾರ್ಪಣೆ ಮಾಡಿ ರವಿಶಂಕರ್ ಅವರ ಸತ್ಕಾರ್ಯವನ್ನು ಪ್ರೋತ್ಸಾಹಿಸಿದ್ದಾರೆ.

ಹೆಸರಾಂತ ನಟಿ ರೇವತಿ ಹಾಗೂ ನಟ ರೋಜರ್ ನಾರಾಯಣ್ ಧ್ವನಿಯನ್ನು ಕೊಟ್ಟಿದ್ದಾರೆ. ಸಂಸ್ಕøತ ನಾಟಕಗಳಲ್ಲಿ ಪಳಗಿರುವ ಪ್ರೊಫೇಸರ್ ಲೀಲಾ ಅವರು ಡಬ್ಬಿಂಗ್ ಕಾರ್ಯವನ್ನು ನಿರ್ವಹಿಸಿದ್ದಾರೆ. ಸಂಸ್ಕøತದಲ್ಲಿ ಡಬ್ಬಿಂಗ್ ಮಾಡಿದ್ದಾರಲ್ಲದೇ ಇಂಗ್ಲಿಷ್ ಸಬ್‍ಟೈಟಲ್ ಅನ್ನು ಅಳವಡಿಸಿದ್ದಾರೆ. ವೈದ್ಯರೂ, ಕವಿಗಳೂ ಆದ ಡಾ. ಶಂಕರ್ ರಾಜಾರಾಮ್ ಅವರು ಈ ಚಿತ್ರಕ್ಕಾಗಿ 4 ಹಾಡುಗಳನ್ನು ರಚಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್ ಕನ್ನೋತ್ ಚಿತ್ರದ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಈ ಎಲ್ಲಾ ದಿಗ್ಗಜರ ಕಾರ್ಯವು ಈ ಚಿತ್ರಕ್ಕೆ ಬಲ ತಂದಿದೆ. ಸಂಸ್ಕೃತದಲ್ಲಿರುವ ಈ ಚಿತ್ರವನ್ನು ಆ್ಯನಿಮೇಷನ್ನಿನ ಮೂಲಕ ಪ್ರಸ್ತುತ ಪಡಿಸಿರುವುದರಿಂದ ದೇಶ-ವಿದೇಶಗಳಲ್ಲಿನ ಎಲ್ಲ ವರ್ಗದ ಚಿತ್ರಪ್ರೇಮಿಗಳನ್ನು ತಲುಪಲು ಸಹಕಾರಿಯಾಗಿದೆ ಎಂಬುದು ನಿರ್ದೇಶಕ ರವಿಶಂಕರ್ ಅವರ ಆಶಯ.

ಕನ್ನಡದ ಖ್ಯಾತ ಚಿತ್ರಕಾರ ಗುಜ್ಜಾರ್ ಅವರಿಂದ ಇದು ಆರಂಭವಾಯ್ತು ಎಂಬುದು ಕನ್ನಡಿಗರ ಹೆಗ್ಗಳಿಕೆಯಾಗಿದೆ. ಈ ಚಿತ್ರದ ಮೂಲ ಕರಡು ಚಿತ್ರಗಳನ್ನು ಕನ್ನಡದ ಖ್ಯಾತ ಚಿತ್ರಕಾರ ಬಿ ಜಿ ಗುಜ್ಜಾರ್ ಅವರು ಚಿತ್ರಿಸಿದ್ದರು. ಅದರ ನಂತರ ಕೇರಳದಲ್ಲಿನ ಸ್ಟುಡಿಯೋಗಳಲ್ಲಿ ಆ್ಯನಿಮೇಷನ್ ಕೆಲಸವನ್ನು ಮಾಡಿಸಿದ್ದಾರೆ. ಆ್ಯನಿಮೇಷನ್ ಕಲಾವಿದ ಎ ವಿ ಗಿರೀಶ್ ಅವರು ರವಿಶಂಕರ್ ಅವರ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಮುಂದಾಳತ್ವ ವಹಿಸಿ ಸಫಲರಾಗಿದ್ದಾರೆ. ಕನ್ನಡದ ಹಾಡು ಹಾಗೂ ಹಾಡಿನ ಸತ್ಯದ ಸಾರವನ್ನು ಜಗಜ್ಜಾಹಿರು ಪಡಿಸಲು ರಾಜ್ಯ ಹಾಗೂ ರಾಷ್ಟ್ರ ಚಿತ್ರರಂಗದವರ ಹಾಗೂ ಸಹೃದಯ ಪ್ರೇಕ್ಷಕ ಮಹಾಶಯರ ಪ್ರೋತ್ಸಾಹದ ಅವಶ್ಯಕತೆ ಇದೆ.

ಪುಣ್ಯಕೋಟಿ ಚಿತ್ರದ ಕಥಾ ಹಂದರ:
ಸತ್ಯವನ್ನೇ ಮಾತಾಡುವ ಹಸುವಿನ ಕತೆ ಪುಣ್ಯಕೋಟಿ. ಇದು ಕಾವೇರಿ ನದಿಯ ದಡದ ಹಳ್ಳಿಯಲ್ಲಿ ನಡೆಯುತ್ತದೆ. ನದಿಯ ಇನ್ನೊಂದು ಬದಿಯಲ್ಲಿರುವ ಕಾಡನ್ನು ದುರುಪಯೋಗ ಪಡಿಸಿಕೊಳ್ಳುವ ಸಲುವಾಗಿ ಕೆಲವು ಗ್ರಾಮಸ್ಥರು ಕಾವೇರಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತಾರೆ. ಗೋಪಜ್ಜಿ ಎಂಬ ಬುದ್ಧಿವಂತ ವೃದ್ದೆಯು ಇಂತಹ ಮೂರ್ಖತನದ ಕಾರ್ಯ ಮಾಡಿದ ಗ್ರಾಮಸ್ಥರಿಗೆ ಎಚ್ಚರಿಕೆ ಕೊಡುತ್ತಾಳೆ. ಹೀಗೆ ಅರಣ್ಯ ನಾಶವು ವಿಳಂಬವಾದ ಮಳೆಗೂ ಹಾಗೂ ನೆಲ ಒಣಗಿ ಮೇಯುವ ಹುಲ್ಲಿಗೆ ಬರ ಬರುತ್ತೆ ಎಂದು ಎಚ್ಚರಿಸುತ್ತಾಳೆ. ಇಂತಹ ಪರಿಸರದಲ್ಲಿ ಒಮ್ಮೆ ತನ್ನ ಕೊರಳಿಗೆ ಕಟ್ಟಿದ್ದಂತಹ ಗಂಟೆಯನ್ನು ಕಳೆದುಕೊಂಡ `ಪುಣ್ಯಕೋಟಿ’ ಎಂಬ ಹಸುವು ತನ್ನ ಮೇವಿಗಾಗಿ ಹೊಸ ಮೈದಾನಕ್ಕೆ ಕಾಲಿಡುತ್ತದೆ. ಅಲ್ಲಿ ಅರ್ಬುದ’ ಎಂಬ ಹುಲಿಯು ಅಚಾನಕ್ಕಾಗಿ ಎದುರಾಗಿ ಬೇಟೆಯಾಡಲು ಬರುವುದು. ಹೀಗೆ ತನ್ನ ತಿನ್ನಲು ಬಂದ ಹುಲಿಗೆ ತನ್ನ ಕಂದನಿಗೆ ಹಾಲುವುಣಿಸಿ ಬರುವೆನೆಂದೂ ಹಾಗೂ ಅದರ ಜವಾಬ್ದಾರಿಯನ್ನು ನನ್ನ ಬಂಧುಗಳಿಗೆ ವಹಿಸಿ ಕಟ್ಟು ಮರಳಿ ಬರುವೆನೆಂದು ಹುಲಿಯಲ್ಲಿ ಅನುಮತಿ ಕೇಳುತ್ತಾಳೆ. ಆಗ ಹುಲಿಯು ಹಸುವಿನ ಈ ಮಾತುಗಳನ್ನು ನಂಬದು. ಆದರೂ ಇಷ್ಟವಿಲ್ಲದೆಯೇ ಅನುಮತಿ ಕೊಡುತ್ತದೆ. ನಿರ್ದಯ ಬೇಟೆ ಹಾಗೂ ಅರಣ್ಯನಾಶಗಳಿಂದ ನಮ್ಮ ಆವಾಸಸ್ಥಾನವನ್ನು ಅರಣ್ಯ ಜೀವಿಗಳು ಕಳೆದುಕೊಂಡಿದ್ದೇವೆ ಎಂಬುದನ್ನು ಹುಲಿಯು ಪುಣ್ಯಕೋಟಿಗೆ ಹೇಳುತ್ತದೆ. ತನ್ನ ಕರುವಿಗೆ ಹಾಲುವುಣಿಸಿದ ಪುಣ್ಯಕೋಟಿಯು ಮತ್ತೆ ಹುಲಿಯ ಮುಂದೆ ಹೋಗುತ್ತದೆ. ಆದರೆ ಪುಣ್ಯಕೋಟಿಯ ಮಾತಿಗೆ ತಪ್ಪದ, ಸತ್ಯವಾಕ್ಯವನ್ನು ನುಡಿದದ್ದನ್ನು ಕಂಡು ಹುಲಿಯು ಹಸುವಿನ ಬೇಟೆಯನ್ನು ನಿರಾಕರಿಸುತ್ತದೆ.

ಹೀಗಾದ ನಂತರ ಭಾರೀ ಮಳೆ-ಪ್ರವಾಹಗಳು ಬಂದು ಸೇತುವೆಯು ನಾಶವಾಗುತ್ತದೆ. ಪ್ರಕೃತಿಯಲ್ಲಿ ಮೊದಲು ಇದ್ದಂತಹ ಹುರುಪು-ಲವಲವಿಕೆಗಳು ಮರುಕಳಿಸುತ್ತದೆ. ಹೀಗೆ ಪರಿಸರದ ಅಸಮತೋಲನದ ಪರಿಸ್ಥಿತಿಗೆ ಗ್ರಾಮಸ್ಥರ ತಪ್ಪು ನಡವಳಿಕೆಯೇ ಕಾರಣವಾಗಿ ಅರಣ್ಯದ ಜೀವಿಗಳು ತಮ್ಮ ಆವಾಸಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಿಂದ ಗ್ರಾಮದ ಜಾನುವಾರುಗಳಿಗೆ ಕಷ್ವವು ಎದುರಾಗುತ್ತದೆ ಎಂಬ ಪರಿಸರ ಸ್ನೇಹಿ ನೀತಿಯನ್ನು ಈ ಪುಣ್ಯಕೋಟಿ ಆ್ಯನಿಮೇಷನ್ನಿನ ಸಂಸ್ಕೃತ ಭಾಷೆಯ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಈ “ಪುಣ್ಯಕೋಟಿ” ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಲು ಈ ಕೆಳಗಿನ ಲಿಂಕನ್ನು ಬಳಸಿ

https://in.bookmyshow.com/bengaluru/movies/punyakoti/ET00309681

ತುಂಕೂರ್ ಸಂಕೇತ್

Related post

Leave a Reply

Your email address will not be published. Required fields are marked *