–ಕ್ಯುಕೆನ್ಹಾಫ್–
ಹಾಲೆಂಡ್ ಯೂರೋಪಿನಲ್ಲೇ ಅತ್ಯಂತ ಸುಂದರ ರಾಷ್ಟ್ರ ಎಂದರೆ ತಪ್ಪೇನಿಲ್ಲಾ. “ದೇವರು ವಿಶ್ವವನ್ನು ಸೃಷ್ಟಿಸಿದರೆ ಡಚ್ಚರು ಹಾಲೆಂಡನ್ನು ಸೃಷ್ಟಿಸಿದರು” ಎಂಬ ಗಾದೆ ಇದೆ. ಅಷ್ಟು ಸುಂದರವಾಗಿ ಡಚ್ಚರು ಹಾಲೆಂಡನ್ನು ನಿರ್ಮಿಸಿದ್ದಾರೆ. ಹಾಲೆಂಡಿನ ಇನ್ನೊಂದು ಹೆಸರು ನೆದರ್ಲ್ಯಾಂಡ್, ಅಂದರೆ ತಗ್ಗಾದ ಪ್ರದೇಶ ಎಂದು. ಅತ್ಯಂತ ಸ್ವಚ್ಚ ಸುಂದರ ದೇಶ ತನ್ನ ಕಲಾತ್ಮಕತೆಗೆ, ನಾಡಿನ ತುಂಬಾ ಹರಡಿರುವ ಕಾಲುವೆಗಳು ಹಾಗೂ ಇಲ್ಲಿರುವ ಹೂದೋಟಕ್ಕೆ ಪ್ರಸಿದ್ದಿ. ಡಚ್ಚರು ಹೂದೋಟವನ್ನು ಬೆಳೆಸುವುದರಲ್ಲಿ ಎತ್ತಿದ ಕೈ. ತಮ್ಮ ದೇಶದ ಅಂದವನ್ನು ಹೆಚ್ಚಿಸಲು ಇವರು ಅನೇಕ ಹೂಗಳನ್ನು ಬೆಳೆಸುತ್ತಾರೆ. ಅದರಲ್ಲೂ ಟ್ಯುಲಿಪ್ ಹೂಗಳನ್ನು ಬೆಳೆಸುವುದರಲ್ಲಿ ಇವರು ಸಿದ್ದಹಸ್ತರು. ಅಂತೆಯೇ ಯೂರೋಪಿನ ಅತ್ಯಂತ ಸುಂದರ ಹೂದೋಟ ಈ ದೇಶದಲ್ಲೇ ಇರುವುದು ನೆದರ್‍ಲ್ಯಾಂಡಿಗೆ ಹೆಮ್ಮೆಯ ವಿಷಯವಾಗಿದೆ. ಕ್ಯುಕೆನ್ಹಾಫ್ ಎಂದು ಕರೆಯಲ್ಪಡುವ ಈ ಹೂದೋಟ ಭೂಲೋಕದ ಸ್ವರ್ಗ ಎಂದರೆ ತಪ್ಪಾಗಲಾರದು. ಇದನ್ನು “ಗಾರ್ಡನ್ ಆಫ್ ಯೂರೋಪ್” ಎಂದು ಕರೆಯುತ್ತಾರೆ.
ಕ್ಯುಕೆನ್ಹಾಫ್ ಎಂದು ಕರೆಯಲ್ಪಡುವ ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಟ್ಯುಲಿಪ್ ಹೂವುಗಳ ಉದ್ಯಾನವನವಾಗಿದೆ. ವರ್ಷದಲ್ಲಿ ಎಂಟು ವಾರಗಳ ಕಾಲ ಮಾತ್ರ ಈ ಹೂದೋಟ ಮೈತುಂಬಿಕೊಂಡು ಲಕ್ಷಾಂತರ ಮಂದಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಡಚ್ ಭಾಷೆಯಲ್ಲಿ ಕ್ಯುಕೆನ್ಹಾಫ್ ಎಂದರೆ ” ಕಿಚನ್ ಗಾರ್ಡನ್” ಎಂದರ್ಥ. ಹಾಲೆಂಡಿನ ರಾಜಧಾನಿ ‘ಅಮ್ಸಟರಡ್ಯಾಮ’ನ ನೈರುತ್ಯಕ್ಕಿರುವ ‘ಲೆಸ್ಸಿ” ಎಂಬ ಪುಟ್ಟ ನಗರದಲ್ಲಿದೆ ಕ್ಯುಕೆನ್ಹಾಫ್. 32 ಹೆಕ್ಟೇರ್‍ನಲ್ಲಿ ಹರಡಿರುವ ಈ ಹೂದೋಟದಲ್ಲಿ ವಿವಿಧ ಬಣ್ಣದ, ಆಕಾರದ ವಿವಿಧ ಆಕೃತಿಗಳಲ್ಲಿ ಬೆಳೆಸಿರುವ ಟ್ಯುಲಿಪ್ ಹೂವಿನ ರಾಶಿ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಕಣ್ಣು ಹಾಯಿಸಿದಷ್ಟುದ್ದಕ್ಕೂ ಕಾಣುವ ಅಪಾರ ಬಣ್ಣ ಬಣ್ಣದ ಹೂವಿನ ರಾಶಿ ಮನಸ್ಸಿಗೆ ಮುದ ನೀಡುತ್ತದೆ. ಪ್ರಪಂಚದಲ್ಲೇ ಅತಿ ಹೆಚ್ಚು ಟ್ಯುಲಿಪ್ ಹೂಗಳನ್ನು ಬೆಳೆಯುವ ದೇಶ ಎಂಬ ಹೆಗ್ಗಳಿಕೆ ಹಾಲೆಂಡಿನದು. ಟ್ಯುಲಿಪ್ ಮೂಲತಃ ಹಾಲೆಂಡ್ ದೇಶದ್ದಲ್ಲ. ಹಿಮಾಲಯದಲ್ಲಿರುವ ಟಿಯಾನ್‍ಶಾನ್ ಇದರ ಜನ್ಮಸ್ಥಳ. ಟರ್ಕಿ ದೇಶದ ಮೂಲಕ ಇದು ಹಾಲೆಂಡ್ ಪ್ರವೇಶಿಸಿತೆಂದು ಹೇಳಲಾಗುತ್ತದೆ. ವಲಸೆ ಬಂದ ಟ್ಯುಲಿಪ್ ಇಲ್ಲಿನ ವಾತಾವರಣ ಅನೂಕೂಲವಾಗಿದ್ದರಿಂದ ಹಾಲೆಂಡಿನಲ್ಲೇ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ಇಲ್ಲಿ ಬೆಳೆಯುವ ಹೂಗಳ ಶೇಕಡಾ ಅರ್ಧದಷ್ಟು ಹೂವುಗಳು ರಫ್ತಾಗುತ್ತದೆ. ಈ ಹೂದೋಟವೊಂದರಲ್ಲೇ ಪ್ರತಿ ವರ್ಷ ಸುಮಾರು 7 ಲಕ್ಷ ಹೂವಿನ ಗೆಡ್ಡೆಗಳನ್ನು ನೆಡುತ್ತಾರೆ. ಪ್ರಪಂಚದಲ್ಲಿ ಮತ್ತೆಲ್ಲೂ ನಿಮಗೆ ಇಷ್ಟೊಂದು ಹೂವುಗಳನ್ನು ನೋಡಲು ಸಾಧ್ಯವಿಲ್ಲ!
ನೆದರ್ ಲ್ಯಾಂಡಿನಲ್ಲಿರುವ ಹೂ ಬೆಳೆಗಾರರು ತಾವು ಬೆಳೆಯುವ ಹೂವನ್ನು ಪ್ರದರ್ಶನ ಮಾಡುವ ಹಾಗೂ ಹೂವಿನ ರಫ್ತನ್ನು ಉತ್ತೇಜಿಸುವ ಉದ್ದೇಶದಿಂದ ಅಂದಿನ ಲೆಸ್ಸಿ ನಗರದ ಮೇಯರ್ 1949 ರಲ್ಲಿ ಈ ಹೂದೋಟವನ್ನು ನಿರ್ಮಿಸಿದ್ದನು. ಇಳಿಜಾರಿನಲ್ಲಿ ಹಾಗೂ ವಿವಿಧ ರೀತಿಯ ಆಕಾರದಲ್ಲಿ ಹೂಗಳನ್ನು ಬೆಳೆಸುವ ಮೂಲಕ ಈ ಹೂದೋಟದ ಆಂದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಕಣ್ಣು ಹಾಯಿಸಿದಷ್ಟುದ್ದಕ್ಕೂ ಕಾಣುವ ಈ ಹೂದೋಟದ ಅಕ್ಕಪಕ್ಕದಲ್ಲಿ ಅನೇಕ ಖಾಸಗಿ ಟ್ಯುಲಿಪ್ ತೋಟಗಳೂ ಇದ್ದು ಈ ಹೂದೋಟದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಭೂಲೋಕದ ಸ್ವರ್ಗ ಪ್ರವಾಸಿಗರಿಗೆ ತೆರೆಯುವುದು ವರ್ಷದಲ್ಲಿ ಎಂಟು ವಾರಗಳು ಮಾತ್ರ. ಮಾರ್ಚ ಮಧ್ಯ ಭಾಗದಿಂದ ಮೇ ಮಧ್ಯ ಭಾಗದವರೆಗೆ ಮಾತ್ರ ಇದು ಪ್ರವಾಸಿಗರಿಗೆ ತೆರೆದಿರುತ್ತದೆ. ಪ್ರತಿ ವರ್ಷದ ಏಪ್ರಿಲ್ 21 ರಂದು ವಿವಿಧ ಹೂಗಳ ಮೆರವಣಿಗೆಯನ್ನು ಏರ್ಪಡಿಸಲಾಗುತ್ತದೆ.
ಈ ಸಮಯದಲ್ಲಿ ಪ್ರವಾಸಿಗರ ಮನೋರಂಜನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಪ್ರತಿ ವಾರಾಂತ್ಯದಲ್ಲಿ ಇಲ್ಲಿ ಬೆಳೆಗಾರರೇ ಬಂದು ಟ್ಯುಲಿಪ್ ಹೂಗಳನ್ನು ಮಾರುತ್ತಾರಲ್ಲದೇ ಅದನ್ನು ಬೆಳೆಯುವ ವಿಧಾನವನ್ನು ವಿವರಿಸಿ ತಂತಮ್ಮ ಮನೆಗಳಲ್ಲಿ ಟ್ಯುಲಿಪ್ ಹೂವುಗಳನ್ನು ಬೆಳೆಸಲು ಉತ್ತೇಜಿಸುತ್ತಾರೆ. ಮಕ್ಕಳಿಗಾಗಿ ವಿವಿಧ ಆಟಗಳು, ಆಹಾರ ಮೇಳವೂ ನೆಡೆಯುತ್ತದಲ್ಲದೇ ಈ ಆಹಾರ ಮೇಳದಲ್ಲಿ ತಯಾರಾಗುವ ಕೆಲವೊಂದು ಪೇಯಗಳಲ್ಲಿ ಈ ಹೂವುಗಳನ್ನು ಸಹ ಬಳಸುತ್ತಾರೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಡಚ್ ಪರಂಪರೆಯನ್ನು ಬಿಂಬಿಸುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸಂಧರ್ಭದಲ್ಲಿ ಆಯೋಜಿಸಲಾಗುತ್ತದೆ. ಉದ್ಯಾನವನ ಪ್ರವೇಶಿಸುತ್ತಿದ್ದಂತೆ ಮರೆಯದೇ ಉಚಿತವಾಗಿ ಕೊಡುವ ಉದ್ಯಾನವನದ ಭೂಪಟವನ್ನು ತೆಗೆದುಕೊಳ್ಳಲು ಮರೆಯಬೇಡಿ. ಇದರಿಂದ ಈ ಉದ್ಯಾನವನದ ಯಾವ ಮೂಲೆಯಲ್ಲಿ ಏನಿದೆ ಎಂದು ತಿಳಿಯಲು ಸುಲಭವಾಗುತ್ತದೆ. ಇಲ್ಲದಿದ್ದರೆ ಈ 32 ಹೆಕ್ಟೇರ್ ಉದ್ಯಾನವನ್ನು ಸುತ್ತುವುದು ಸುಲಭದ ಮಾತಲ್ಲ! ಈ ಉದ್ಯಾನವನದಲ್ಲಿ ಜಪಾನ್ ಉದ್ಯಾನವನ, ಇಂಗ್ಲೆಂಡ್ ಉದ್ಯಾನವನ ಹಾಗೂ ಚಾರಿತ್ರಿಕ ಉದ್ಯಾನವನ ಮುಂತಾದ ಉದ್ಯಾನವನಗಳನ್ನು ನೋಡಬಹುದಲ್ಲದೇ, ಇಲ್ಲಿರುವ ಸಣ್ಣ ಸರೋವರದಲ್ಲಿನ ದೋಣಿ ವಿಹಾರದ ಆನಂದವನ್ನು ಅನುಭವಿಸಬಹುದು. ಉದ್ಯಾನವನದಲ್ಲಿ ಒಂದು ಗಾಜಿನ ಮನೆಯೂ ಇದ್ದು ಇಲ್ಲಿ ಸುಂದರ ಟ್ಯುಲಿಪ್ ಹೂವುಗಳನ್ನು ಅಂದವಾಗಿ ಜೋಡಿಸಿರುತ್ತಾರೆ. ಉದ್ಯಾನವನದ ಒಂದು ಭಾಗದಲ್ಲಿ ಪುರಾತನ ಮರದ ಗಾಳಿ ಯಂತ್ರವೂ ಕೂಡ ಇದೆ. ಬಣ್ಣ ಬಣ್ಣದ ಹೂಗಳನ್ನು ಬಣ್ಣ, ಆಕಾರ ಹಾಗೂ ಗಾತ್ರಕ್ಕನುಗುಣವಾಗಿ ಬೆಳೆಸುತ್ತಾರೆ. ಈ ಹೂದೋಟವನ್ನು ನಿರ್ಮಿಸಲು ಹಾಲೆಂಡಿನ ಬೆಳೆಗಾರರು ಹೂವಿನ ಗೆಡ್ಡೆಗಳನ್ನು ಉಚಿತವಾಗಿ ಕೊಡುತ್ತಾರೆ ಹಾಗೂ ನೂರಕ್ಕೂ ಹೆಚ್ಚು ನುರಿತ ಬೆಳೆಗಾರರು ಈ ಉದ್ಯಾನವನದಲ್ಲಿ ಗೆಡ್ಡೆಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿ ವಹಿಸುತ್ತಾರೆ. ಪ್ರಪಂಚದಲ್ಲಿ ಸುಮಾರು 2000 ಬಗೆಯ ಟ್ಯುಲಿಪ್ ಹೂವುಗಳ ಪ್ರಭೇದಗಳಿದ್ದು ಅವುಗಳಲ್ಲಿ ಸುಮಾರು 700 ಕ್ಕೂ ಹೆಚ್ಚು ಹೂವುಗಳನ್ನು ಈ ಉದ್ಯಾನವನದಲ್ಲಿಯೇ ನೋಡಬಹುದು.
ಟ್ಯುಲಿಪ್ ಸೇರಿದಂತೆ ಒಟ್ಟು ಏಳು ದಶಲಕ್ಷ ಹೂಗಳನ್ನು ಇಲ್ಲಿ ಬೆಳೆಸಿ ಪ್ರದರ್ಶನ ಮಾಡಲಾಗುತ್ತದೆ. ಭಾರತೀಯ ಚಲನ ಚಿತ್ರಕ್ಕೂ ಈ ಉದ್ಯಾನವನಕ್ಕೂ ಎಲ್ಲಿಲ್ಲದ ನಂಟು, ಹಿಂದಿ, ತಮಿಳು ಹಾಗೂ ತೆಲುಗು ಚಲನ ಚಿತ್ರದ ಚಿತ್ರೀಕರಣ ಇಲ್ಲಿ ನೆಡೆದಿದೆ. “ಧೇಖಾ ಎಕ್ ಕ್ವಾಬ್ ಕೋ ಏ ಸಿಲ್‍ಸಿಲೆ ಹೂಯೇ” ಎಂಬ ಸಿಲ್‍ಸಿಲಾ ಹಿಂದಿ ಸಿನಿಮಾದಲ್ಲಿ ಅಮಿತಾ ಬಚ್ಚನ್ ಹಾಗೂ ರೇಖಾ ಈ ಉದ್ಯಾನವನದಲ್ಲಿ ಹಾಡುವ ಹಾಡನ್ನು ನೋಡಿದಾಗ ಟ್ಯುಲಿಪ್ ಹೂಗಳ ರಾಶಿಯನ್ನು ಕಂಡು ವಾಹ್! ಎಂದು ಉದ್ಗರಿಸಿದವರು ಬಹಳ ಮಂದಿ. ಈ ಹಾಡಿನ ಚಿತ್ರೀಕರಣ ನೆಡೆದಿರುವುದು ಇಲ್ಲಿಯೇ. ಮಾರ್ಚ್ ಮತ್ತು ಮೇ ತಿಂಗಳಲ್ಲಿ ಇಲ್ಲಿ ಚಲನ ಚಿತ್ರದ ಚಿತ್ರಿಕರಣ ಸಾಮಾನ್ಯ. ನಿಮಗೆ ಈ ಉದ್ಯಾನವನದಲ್ಲಿ ಮಾತ್ರವಲ್ಲ ಹಾಲೆಂಡ್ ದೇಶದಲ್ಲಿ ಎಲ್ಲಿ ಓಡಾಡಿದರೂ ನಿಮಗೆ ಈ ಟ್ಯುಲಿಪ್ ಹೂಗಳು ಅಲ್ಲಲ್ಲಿ ಕಾಣಸಿಗುತ್ತದೆ. ಮನೆ ಮನೆಗಳಲ್ಲೂ ಇಲ್ಲಿ ಟ್ಯುಲಿಪ್ ಹೂಗಳನ್ನು ಬೆಳೆಸುತ್ತಾರೆ. ಅಮ್ಸಟರ್‍ಡ್ಯಾಮ್‍ಗೆ ಏಪ್ರಿಲ್ ಮೇ ತಿಂಗಳಲ್ಲಿ ಪ್ರವಾಸಕ್ಕೆ ಹೋದರೆ ಈ ಉದ್ಯಾನವನಕ್ಕೆ ಭೇಟಿ ನೀಡಲು ಮರೆಯದಿರಿ. ಇದೊಂದು ಮಾಯಾಲೋಕ. ಇಲ್ಲಿ ಕಾಲಿಟ್ಟರೆ ವಾಪಸ್ ಬರಲು ಮನಸ್ಸೇ ಆಗುವುದಿಲ್ಲಾ.
ಪ್ರಕಾಶ್.ಕೆ.ನಾಡಿಗ್
ತುಮಕೂರು