ಪುಸ್ತಕ ಓದುವವರು ಕಡಿಮೆಯಾಗಿರಬಹುದು. ಆದರೆ ಪುಸ್ತಕ ಓದುವವರೇ ಇಲ್ಲ ಎನ್ನುವ ದೋರಣೆಯನ್ನು ನಾನಂತು ಒಪ್ಪಿಕೊಳ್ಳಲಾರೆ. ಪ್ರಿಂಟೆಡ್ ಪುಸ್ತಕಗಳನ್ನು ಪ್ರೀತಿಯಿಂದ ಓದುವವರು ಖಂಡಿತ ಇದ್ದಾರೆ ಎನ್ನುವುದಕ್ಕೆ ನಾನು ಮತ್ತು ನನ್ನ ಪುಸ್ತಕಗಳೇ ಸಾಕ್ಷಿ. ಬಹುಶಃ ಓದುವವರನ್ನು ತಲುಪುವಲ್ಲಿ ಮತ್ತು ನಮ್ಮ ಸಾಹಿತ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ಎಡವುತ್ತಿರಬಹುದು. ಮತ್ತು ಓದುಗರು ಬಿಡುವಿಲ್ಲದ ಕೆಲಸಗಳಲ್ಲಿ ನಿರತರಾಗಿ, ಓದುವ ಆಸಕ್ತಿಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿರಬಹುದು!
ಕೆಲವು ಹಿರಿಯ ಲೇಖಕರನ್ನು ಸೇರಿಸಿಕೊಂಡು ಯುವಬರಹಗಾರರ ಪುಸ್ತಕಗಳ ಮೊದಲ ಮುದ್ರಣ ಪ್ರತಿಗಳ ಸಂಖ್ಯೆ ಒಂದು ಸಾವಿರಕ್ಕೆ ಇಳಿದಿದೆ. ಮೊದಲೆಲ್ಲ ಮೂರ್ನಾಲ್ಕು ಸಾವಿರ ಪ್ರತಿಗಳು ಮೊದಲ ಮುದ್ರಣಕ್ಕೆ ಸೇರುತ್ತಿದ್ದವು ಮತ್ತು ಅವುಗಳೆಲ್ಲ ಖಾಲಿಯಾಗಿ, ವಾರದಲ್ಲೇ ಎರಡು ಮೂರು ಮುದ್ರಣಗಳನ್ನು ಕಂಡಿದ್ದುಂಟು! ಆಗ ಸಾಹಿತ್ಯದ ಗುಣಮಟ್ಟ, ಮುದ್ರಣದ ಗುಣಮುಟ್ಟ ಯಾವುದೇ ಆಡಂಬರವಿಲ್ಲದೆ ಸರಾಗವಾಗಿ ನಡೆಯುತ್ತಿತ್ತು. ಓದುಗರನ್ನು ತಲುಪುವುದರ ಜೊತೆಗೆ ವ್ಯಾಪಾರ ದೃಷ್ಟಿಯೂ ಇತ್ತು. ಈಗ ಕೆಲವರ ವಿಷಯದಲ್ಲಿ ಇದು ಸುಳ್ಳಾಗಿದೆ. ಕೇವಲ ವ್ಯಾಪಾರ ದೃಷ್ಟಿಯಿಂದಷ್ಟೇ ಪುಸ್ತಕಗಳನ್ನು ಮುದ್ರಣ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಕೆಲವು ಬರಹಗಾರರು ಬರೆದಿದ್ದೆಲ್ಲವನ್ನೂ ಪ್ರಕಟಿಸುವ ಹುಚ್ಚಿಗೆ ಬಿದ್ದಿದ್ದಾರೆ. ಇದರಿಂದ ಓದುಗರಿಗೂ ಬೇಸರವಾಗಿದೆ.
ನಾನು ಸುಮಾರು ಮೂರು ವರ್ಷಗಳಿಂದ ಸಾಹಿತ್ಯ ಓದಲು ಶುರುಮಾಡಿ, ಎರಡುವರೆ ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದೇನೆ. ನನ್ನ ಮೊದಲ ಕಥಾಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಯುವಬರಹಗಾರರ ಚೊಚ್ಚಲ ಕೃತಿ ಬಹುಮಾನಕ್ಕೆ ಆಯ್ಕೆಯಾಗಿತ್ತು. ಹದಿನೈದು ಸಣ್ಣ ಕಥೆಗಳ, 110 ಪುಟಗಳ, 70GSM ಮುದ್ರಣ ಕ್ವಾಲಿಟಿಯಲ್ಲಿ 1000 ಪ್ರತಿಗಳನ್ನು ಮುದ್ರಣ ಮಾಡಿಸಲು ನನಗೆ 35000 ಖರ್ಚಾಗಿತ್ತು. ಅದರಲ್ಲಿ 15000 ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಹುಮಾನ ಹಣ ದೊರೆಯಿತು. ಸಾವಿರ ಪ್ರತಿಗಳಲ್ಲಿ 350 ಪ್ರತಿಗಳನ್ನು ಯಾವುದೇ ಪುಸ್ತಕದ ಅಂಗಡಿಯ ಮೊರೆಹೋಗದೆ, ಫೇಸ್ಬುಕ್, ವಾಟ್ಸಾಪ್ ಮೂಲಕ ಪ್ರಚಾರಮಾಡಿಕೊಂಡು ಅಂಚೆವೆಚ್ಚವನ್ನು ನಾನೇ ಭರಿಸಿ ಮಾರಾಟ ಮಾಡಿದೆ. ಅದರಿಂದ ಅಂಚೆವೆಚ್ಚ ಕಳೆದು 25000 ಹಣ ಸಂಪಾದಿಸಿದ್ದೇನೆ. ಅಲ್ಲಿಗೆ ನನ್ನ ಬಂಡವಾಳ ನನಗೆ ಸಿಕ್ಕಿತು. 300 ಪ್ರತಿಗಳನ್ನು ಕುಟುಂಬದವರಿಗೆ, ಗುರುಹಿರಿಯರಿಗೆ, ಗೆಳೆಯ ಗೆಳತಿಯರಿಗೆ, ನಾನು ಓದಿದ ಶಾಲಾಕಾಲೇಜುಗಳಿಗೆ, ಖಾಸಗಿ ಗ್ರಂಥಾಲಯಗಳಿಗೆ ಮತ್ತು ಪ್ರಶಸ್ತಿಗಾಗಿ ಕಳುಹಿಸಿದೆ. ಹೆಬ್ಬಗೋಡಿ ಗೋಪಾಲ್ ದತ್ತಿ, ಗುರುಕುಲ ಸಾಹಿತ್ಯ ಸೌರಭ ಪ್ರಶಸ್ತಿಗಳು ಸಂದವು. ಮಿಕ್ಕುಳಿದ 350 ಪ್ರತಿಗಳನ್ನು ಗ್ರಂಥಾಲಯ ಆಯ್ಕೆಗಾಗಿ ಎತ್ತಿಟ್ಟಿದ್ದೆ. ಫಲಿತಾಂಶ ತಡವಾಗುತ್ತಿರುವುದರಿಂದ ಈಗ ಅವುಗಳನ್ನು ಮಾರಾಟ ಮಾಡಲು ಯೋಜನೆ ಹಾಕಿದ್ದೇನೆ.
ಈಗಾಗಲೇ ನನ್ನ ಮೂರು ಪುಸ್ತಕಗಳು ಪ್ರಕಟವಾಗಿದ್ದು ಇದೇ ರೀತಿ ಪಾರ್ಮುಲ ಬಳಸಿದ್ದೇನೆ. ಸಾವಿರ ಪ್ರತಿಗಳಿಗೆ 100 ರಿಂದ 150 ಪುಟಗಳ ಪುಸ್ತಕ ಮಾಡಿಸಲು 30 ರಿಂದ 35000 ಹೂಡಿಕೆ. 350-500 ಪ್ರತಿಗಳನ್ನು ಮಾರಾಟ ಮಾಡುವುದೇ ನನ್ನ ಗುರಿ. ಅದರಿಂದ ಹೂಡಿಕೆಯ ಅಸಲನ್ನು ಸಂಪಾದಿಸಿಕೊಳ್ಳುವುದು. ಮಿಕ್ಕುಳಿದ ಪ್ರತಿಗಳನ್ನು ಅಂಗಡಿಗಳು, ಗ್ರಂಥಾಲಯ ಇಲಾಖಾ ಆಯ್ಕೆ, ಗೆಳೆಯರು, ಕುಟುಂಬ, ಗುರುಹಿರಿಯರು ಹೀಗೇ.. ಹೇಗೋ ಖರ್ಚಾಗಿಬಿಡುತ್ತವೆ. ಇದರೊಂದಿಗೆ ಬೇರೆ ಲೇಖಕರ ಪುಸ್ತಕಗಳನ್ನು ನನ್ನ ಪುಸ್ತಕದ ಜೊತೆ ವಿನಿಮಯ ಮಾಡಿಕೊಳ್ಳುವ ಕೆಲಸವನ್ನೂ ಆರಂಭಿಸಿದ್ದೇನೆ. ಇದರಿಂದ ಯಾವುದೇ ನಷ್ಟವಿಲ್ಲದೆ, ಇತರರ ಪುಸ್ತಕ ಸಂಗ್ರಹಕ್ಕೆ ನನ್ನ ಪುಸ್ತಕವೂ ಸೇರಿದಂತಾಗುತ್ತದೆ. ಅವರ ಪುಸ್ತಕಗಳು ನನ್ನ ಗ್ರಂಥಾಲಯವನ್ನೂ ಸೇರುತ್ತವೆ.
ನನ್ನ ಪುಸ್ತಕಗಳನ್ನು ಓದಿದವರು ಖುಷಿಪಟ್ಟು ಹಾರೈಸಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿ ಅಭಿಪ್ರಾಯ ಬರೆದಿದ್ದಾರೆ. ಕೆಲವರು ಸಲಹೆಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಅಳವಡಿಸಿಕೊಂಡು ಮುಂದಿನ ಪುಸ್ತಕದ ಬಗ್ಗೆ ಯೋಚಿಸುತ್ತಿರುತ್ತೇನೆ. ಇದು ನನಗೆ ಉದ್ಯಮವಲ್ಲ. ಬದಲಾಗಿ ಆಸಕ್ತಿ. ಪುಸ್ತಕಪ್ರಿಯನಾದ್ದರಿಂದ ಈ ಆಸಕ್ತಿಗೆ ಹುಚ್ಚನಂತೆ ಶರಣಾಗಿದ್ದೇನೆ.
ಕೆಲವರು ಪುಸ್ತಕ ಮಾಡಿಸಿ ಮಾರಾಟ ಮಾಡಲಾಗದೆ ಸೋಲನ್ನೊಪ್ಪಿಕೊಳ್ಳಲು ತಯಾರಿಲ್ಲದೆ ಓದುಗರನ್ನು ದೂರುತ್ತಾರೆ. ಈಗ ಕವಿತೆಗಳನ್ನು ಹೆಚ್ಚು ಜನ ಇಷ್ಟಪಡುವುದಿಲ್ಲ. ಮಕ್ಕಳ ಪುಸ್ತಕಗಳನ್ನೋ, ಪಿ.ಹೆಚ್.ಡಿ ಪ್ರಬಂಧವನ್ನೋ, ಯಾವುದೋ ಸ್ಥಳದ ಅಥವಾ ವ್ಯಕ್ತಿಯ ಬಗ್ಗೆ ಚರಿತ್ರೆಯನ್ನೋ ಬರೆದು, ಪ್ರಕಟಿಸಿ ಅದನ್ನು ಬೇರೆಯವರಿಗೆ ಕೊಳ್ಳುವಂತೆ ಒತ್ತಾಯಮಾಡುತ್ತಾರೆ. ಅವರು ಪ್ರತಿಕ್ರಿಯಿಸದಿದ್ದಲ್ಲಿ ಓದುಗರೇ ಇಲ್ಲ ಎಂದು ಪುಟಗಟ್ಟಲೆ ಬರೆದು ದೂರುತ್ತಾರೆ. ಇಷ್ಟವಿಲ್ಲದಿದ್ದನ್ನು ಅವರೇಕೆ ಓದುತ್ತಾರೆ? ಎಂಬ ಪ್ರಶ್ನೆಯನ್ನು ಲೇಖಕರು ತಮಗೆ ತಾವೇ ಕೇಳಿಕೊಳ್ಳಬೇಕಾಗುತ್ತದೆ. ಹೆಚ್ಚು ಜನರನ್ನು ತಲುಪುವಲ್ಲಿ ಸೃಜನಾತ್ಮಕ ಬರವಣಿಗೆಗಳ ಮೂಲಕ ವೈಚಾರಿಕತೆಯನ್ನು ಬಿತ್ತುವುದಾಗಬೇಕು. ಒಳ್ಳೆಯ ಮುದ್ರಣ ಗುಣಮಟ್ಟ ಹಾಗೂ ಪುಸ್ತಕದ ಪುಟಗಳಿಗೆ ಅನುಗುಣವಾಗಿ ಬೆಲೆ ನಿಗದಿ ಮಾಡಬೇಕು. ನಮ್ಮ ಪುಸ್ತಕಗಳನ್ನು ಬೇರೆಯವರು ಕೊಳ್ಳಬೇಕಾದರೆ ನಾವು ಇತರರ ಪುಸ್ತಕಗಳನ್ನು ಕೊಂಡು ಓದಬೇಕು. ಸುತ್ತಾಡಬೇಕು, ಓದುಗರ ಜೊತೆ, ಸಾಹಿತ್ಯಾಸಕ್ತರ ಜೊತೆ, ಹಿರಿಯ ಬರಹಗಾರರ ಜೊತೆ ನಿರಂತರ ಒಡನಾಟವನ್ನು ಇಟ್ಟುಕೊಳ್ಳಬೇಕು. ಮತ್ತು ತಮ್ಮ ಬರಹಗಳನ್ನಾಗಲೀ, ಪುಸ್ತಕಗಳನ್ನಾಗಲೀ, ತಮ್ಮನ್ನಾಗಲೀ.. ಎಲ್ಲೂ ಹೆಚ್ಚು ವೈಭವೀಕರಿಸಿಕೊಳ್ಳಬಾರದು. ಇದೆಲ್ಲವೂ ನನ್ನ ಸಾಹಿತ್ಯ ಪಯಣದಲ್ಲಿ ನಾನು ಕಂಡುಕೊಂಡ ಸೂಕ್ಷ್ಮಗಳು.
ಅನಂತ್ ಕುಣಿಗಲ್
1 Comment
ನಿಮ್ಮ ಮಾತು ಹಾಗೂ ಅಭಿಪ್ರಾಯ ನೂರಕ್ಕೆ ನೂರರಷ್ಟು ಸತ್ಯ. ಈಗೀಗ ಕೆಲಸದ ಒತ್ತಡದಲ್ಲಿ ಓದುವುದು ತಡವಾಗಬಹುದೇ ಹೊರತು ಓದದೇ ಉಳಿಯುವುದಿಲ್ಲ. ಇನ್ನು ನಮಗೂ ಅನೇಕ ಲೇಖಕರು ಸಹ ಈಗ ಪುಸ್ತಕ ಪ್ರಕಟಣೆಯನ್ನು ಒಂದು ವ್ಯಾಪಾರದಂತೆ ನೋಡುತ್ತಿದ್ದಾರೆ ಅದು ಸ್ವಲ್ಪ ಬೇಸರದ ಸಂಗತಿ .