ಪೂತನಿ ಮತ್ತಿತರ ನಾಟಕಗಳು – ಮುನ್ನುಡಿ

ಪೂತನಿ ಮತ್ತಿತರ ನಾಟಕಗಳು

‘ಕಾವ್ಯೇಷು ನಾಟಕಂ ರಮ್ಯಂ’ – ಭಾರತೀಯ ಸಾಹಿತ್ಯವನ್ನು ಒಳಗೊಂಡು ವಿಶ್ವಸಾಹಿತ್ಯ ಸಂದರ್ಭದಲ್ಲಿ ಬಹಳ ಜನಜನಿತವಾದ ನುಡಿ ಇದು. ಮನುಷ್ಯನ ಚಿಂತನ-ಮಂಥನಗಳು, ಆಲೋಚನೆಗಳು, ಅನುಭವಗಳು, ರಾಗಾನುರಾಗಗಳು, ಲೋಕಾಲೋಕದ ಪುರಾಣ-ಚರಿತ್ರೆ ಹಾಗೂ ವರ್ತಮಾನದ ಕಾಲಸಂದರ್ಭಗಳಲ್ಲಿ ಫಲಿಸುವ ಆಗುಹೋಗುಗಳು.. ಇವೆಲ್ಲವು ಮನುಷ್ಯನ ಭಾವಕೋಶದೊಳಗೆ ಬೆಸೆದು ಬೆಸೆದು ಕಡೆದು ಕಡೆದು ಮಿಳಿತಗೊಂಡು ಸೃಜನಶೀಲ ಸೃಷ್ಟಿಯ ಮಿಂಚೊಂದು ಮಿನುಗಿ ಮನದೊಳಗೇ ಬೀಜಾಂಕುರವಾಗಿ.. ಅಣುಯಾಗಿ.. ಕುಡಿಯಾಗಿ.. ಟಿಸಿಲೊಡೆದು ಚಿಗುರು ಚಿಗುರಾಗಿ ನಳನಳಸಿ ಬದುಕಿನ, ಬಾಳಿನ ಸತ್ವಸಾರವ ಹೀರಿ ಕೈಕಾಲುಗಳು.. ಅಂಗಾಂಗಗಳು ಮೂಡಿ ಜೀವತಳೆದು.. ಕಣ್ದೆರವ ಪರಿ.. ರೂಪರೂಪಗಳ ತಾಳಿ ವೇಷ ವೇಷಗಳ ತೊಟ್ಟು.. ಬಣ್ಣಬಣ್ಣವ ಬಿತ್ತುವ ಈ ಅಭಿವ್ಯಕ್ತಿಯ ಪಯಣವಿದೆಯಲ್ಲಾ.. ಈ ಯಾನ ಇದೆಯಲ್ಲಾ.. ಅದೊಂದು ವಿಸ್ಮಯ!

ಎಲ್ಲಿ.. ಹೇಗೆ ಅರಳಿನಿಂತು.. ಗಂಧ-ಸುಗಂಧವ ಅಡರುತ್ತದೆ ಎಂಬುದೇ ಸೋಜಿಗ.. ಸವಿರಾಗ ತೇಲಿ ಇಂಪಾಗುತ್ತದೆ ಎಂಬುದೇ ಸೋಜಿಗ.. ಅದೊಂದು ಅದ್ಭುತ ಸೃಜನಶೀಲ ಸೃಷ್ಟಿಕ್ರಿಯೆ.. ಅದರ ಅಣುಅಣುವೂ ಮತ್ತೆ ಮತ್ತೆ ಮಾನವ ಕೋಟಿಯ ಜೀವ ಜೀವದೊಳಗೆ.. ಬದುಕು ಬದುಕಿನೊಳಗೆ ಬೆರೆತು ಮತ್ತೆ ಅರಳುತ್ತಾ ಪುನರ್ ಸೃಷ್ಟಿಗೊಳ್ಳುತ್ತಾ.. ಸಾರ್ಥಕ್ಯಗೊಳ್ಳುತ್ತಾ ಸಾಗಿ ಈ ಲೋಕವನ್ನು ವ್ಯಾಖ್ಯಾನಿಸುತ್ತದೆ.. ವಿಶ್ಲೇಷಿಸುತ್ತದೆ.. ಸಂವಾದಿಸುತ್ತದೆ.. ಜನಸಮುದಾಯದ ಲೋಕಲೋಕಗಳ ಬೆಳಕಾಗುತ್ತದೆ.

ಯಾವುದೇ ಸೃಜನಶೀಲ ಅಭಿವ್ಯಕ್ತಿಯ ಧಾರೆಯೂ ಮನುಕುಲವನ್ನು ಉದ್ದರಿಸುವ ಘನ ಉದ್ದೇಶವನ್ನೇ ಪಡೆದಿರುತ್ತದೆ.. ಸೃಷ್ಟಿಯ ಆದಿಯಿಂದ ಇದು ನಡೆದೇ ಬಂದಿದೆ. ಅದು ಕಾವ್ಯವಾಗಿರಬಹುದು, ನೃತ್ಯವಾಗಿರಬಹುದು, ಚಿತ್ರವಾಗಿರಬಹುದು, ಸಂಗೀತವಾಗಿರಬಹುದು, ಸಾಹಿತ್ಯದ ಯಾವುದೇ ಪ್ರಕಾರಗಳಾಗಿರಬಹುದು.. ಸೃಷ್ಟಿಕರ್ತನ ಜೀವನಾನುಭವ- ಲೋಕಾನುಭವ- ಪ್ರತಿಭೆ ಇವುಗಳು ಆ ಕೃತಿಯ ಸೌಂದರ್ಯವನ್ನು ವೃದ್ಧಿಸುತ್ತವೆ.. ಆ ಪಾಕದ ಸವಿಯನ್ನು ಹೆಚ್ಚಿಸುತ್ತದೆ.. ಆ ಹೊಸ ಪುಷ್ಪದ ಪರಿಮಳವನ್ನು ಸಹ್ಯಗೊಳಿಸುತ್ತದೆ.. ಸತ್ಯಂ.. ಶಿವ.. ಸುಂದರಂ.

ವಿಶ್ವ ಸಾಹಿತ್ಯವಿರಲಿ.. ಭಾರತೀಯ ಸಾಹಿತ್ಯವಿರಲಿ.. ಇವೆರಡನ್ನೂ ಪಕ್ಕ ಸರಿಸಿ ನೋಡುವುದಾದರೂ ಕನ್ನಡ ಸಾಹಿತ್ಯ ಸಂದರ್ಭದಲ್ಲೇ ಎಂಥೆಂಥಾ ಹುಲುಸಾದ ಬೆಳೆ ನಳನಳಿಸಿದೆ.. ಇರಲಿ.. ಅದೆಲ್ಲವನ್ನೂ ನಾನಿಲ್ಲಿ ಚರ್ಚಿಸಲಾರೆ. ಅದಕ್ಕೆ ಇದು ವೇದಿಕೆ ಅಲ್ಲ. ಆದರೆ ಆ ಎಲ್ಲಾ ಪೂರ್ವಸೂರಿಗಳ ಎಳೆಗಳನ್ನು ಹಿಡಿದೆ ಇಂದಿನ ಸಾಹಿತ್ಯ ಪಥ ಮುಂದೆ ಸಾಗಿದೆ.. ಸಾಗುತ್ತಲಿದೆ.. ಸಾಗಲಿದೆ.

ಈ ಪಥದಲ್ಲಿ ಹೆಜ್ಜೆ ಹಾಕುತ್ತಿರುವವರು ಆಶಾ ರಘು. ಅವರು ರಂಗಭೂಮಿಯ ಹಿನ್ನೆಲೆಯಿಂದ ಬಂದ ಹೆಣ್ಣು ಮಗಳು. ಕಲಾವಿದೆಯಾಗಿ, ಸಂಘಟಕಿಯಾಗಿ, ರಂಗಶಿಕ್ಷಕಿಯಾಗಿ ತಮ್ಮದೇ ಛಾಪನ್ನು ಮೂಡಿಸಿದವರು. ಟಿ.ವಿ. ಧಾರಾವಾಹಿಗಳಿಗೆ ಕಥೆಗಾರ್ತಿಯಾಗಿ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದವರು. ಹೀಗೆ ಸಾಗಿಬಂದ ಆಶಾಜೀ ಅವರು ಬರಹವನ್ನು ತಮ್ಮ ಪ್ರಧಾನ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡು ದಾಪುಗಾಲು ಹಾಕಿದವರು. ಅಲ್ಲಿ ತಮ್ಮ ಬರವಣಿಗೆಯ ಝಲಕ್ ತೋರಿದವರು. ತಮ್ಮ ಸೃಜನಶೀಲ ಸೃಷ್ಟಿಕ್ರಿಯೆ ಪ್ರತಿಭೆಯನ್ನು ಮೆರೆದವರು. ಸಾಹಿತ್ಯ ಕ್ಷೇತ್ರದಲ್ಲಿ ಇಂದು ಪ್ರಮುಖ ಕಾದಂಬರಿಕಾರ್ತಿಯಾಗಿ ಗುರುತಿಸಿಕೊಂಡವರು, ಓದುಗರಿಂದ ಮೆಚ್ಚುಗೆ ಪಡೆದವರು. ವಿಮರ್ಶಕರಿಂದ ಗಂಭೀರ ಚರ್ಚೆಗೆ ಇವರ ಕಾದಂಬರಿಗಳು ಶಾಣೆಗೊಳಗಾಗಿ ಹೊಳೆದು ನಿಂತಿವೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ವರ್ಗದಲ್ಲಿ ಪ್ರಮುಖ ಬರಹಗಾರ್ತಿಯರ ಸಾಲಿನಲ್ಲಿ ನಿಂತಿರುವವರು ಆಶಾರಘು. ಅವರು ಪ್ರಸ್ತುತ ನಾಟಕಕಾರ್ತಿಯಾಗಿ ತಮ್ಮಂತಹ ಸಹೃದಯ ಓದುಗರ ಮುಂದೆ ನಿಂತಿದ್ದಾರೆ.

ಕನ್ನಡ ರಂಗಭೂಮಿಯಲ್ಲಿ ನಾಟಕಕಾರರ ಕೊಡುಗೆ ಬಹಳ ದೊಡ್ಡದು. ಸಂಸ್ಕೃತ ಹಾಗೂ ಭಾರತೀಯ ಭಾಷೆಗಳು, ಇಂಗ್ಲೀಷ್ ಮತ್ತು ಪಾಶ್ಚಿಮಾತ್ಯ ನಾಟಕಗಳಿಂದ ಅನುವಾದಗೊಂಡ, ರೂಪಾಂತರ-ಭಾಷಾಂತರಗೊಂಡ ನಾಟಕ ಚರಿತ್ರೆಯೂ.. ಅವುಗಳನ್ನು ಕನ್ನಡಕ್ಕೆ ತಂದ ನಾಟಕಕಾರ ಯಾದಿ ಒಂದು ಕಡೆಯಾದರೆ, ಪಾರ್ಸಿ ರಂಗಭೂಮಿಯಿಂದ ಪ್ರಭಾವಿತವಾದ ವೃತ್ತಿರಂಗಭೂಮಿಯಲ್ಲಿ ಪ್ರದರ್ಶಿತವಾದ ನಾಟಕಗಳ ನಾಟಕಕಾರರ ಯಾದಿ ಮತ್ತೊಂದು ಕಡೆ. ಇವುಗಳಿಂದ ಮುಂದುವರಿದ ಆಧುನಿಕೋತ್ತರ ಹಾಗೂ ಹವ್ಯಾಸಿ ರಂಗಭೂಮಿ ಕಂಡ ನಾಟಕಗಳು ಮತ್ತು ನಾಟಕಕಾರರ ಯಾದಿ ಇನ್ನೊಂದು ಕಡೆ. ವಿಭಿನ್ನ ಧಾರೆಯನ್ನು ತಾಳಿದ ಸಂಸ, ಕೈಲಾಸಂ, ಶ್ರೀರಂಗರು ತಮ್ಮ ಅಭಿವ್ಯಕ್ತಿಯ ಪ್ರಧಾನ ಮಾಧ್ಯಮವಾಗಿ ನಾಟಕ ರಚನೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ತದನಂತರದ ಗಿರೀಶ ಕಾರ್ನಾಡರು ಸಹ ನಾಟಕದ ರಚನೆಯನ್ನೇ ಅವರ ಪ್ರಧಾನ ಭೂಮಿಕೆಯಾಗಿಸಿಕೊಂಡಿದ್ದಾರೆ. ಚಂದ್ರಶೇಖರ ಕಂಬಾರ, ಲಂಕೇಶ್ ನಾಟಕಗಳ ಜೊತೆಗೆ ಕತೆ, ಕಾದಂಬರಿ, ಕಾವ್ಯಗಳನ್ನೂ ಬರೆದಿದ್ದಾರೆ. ಕಾವ್ಯವನ್ನು ತಮ್ಮ ಪ್ರಧಾನ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡಿದ್ದ ಹೆಚ್.ಎಸ್.ವೆಂಕಟೇಶ ಮೂರ್ತಿ, ಎಚ್.ಎಸ್.ಶಿವಪ್ರಕಾಶ್, ಎಚ್.ಜಿ.ಸಿದ್ದರಾಮಯ್ಯ ತದನಂತರದ ಡಿ.ಎಸ್.ಚೌಗಲೆ, ಕೆ.ವೈ.ನಾರಾಯಣಸ್ವಾಮಿ, ರಾಜಪ್ಪ ದಳವಾಯಿ, ಬಸವರಾಜ ಸೂಳೇರಿಪಾಳ್ಯ ಇವರೆಲ್ಲರೂ ರಂಗಭೂಮಿಯನ್ನು ತಮ್ಮ ನಾಟಕ ಕೃತಿಗಳಿಂದ ಕಟ್ಟುತ್ತಾ ಹೋಗುತ್ತಾರೆ. ಇದರ ನಡುವೆ ಕುವೆಂಪು, ಬೇಂದ್ರೆ, ಮಾಸ್ತಿ, ಅನಕೃ, ಪುತಿನ, ಶಿವರಾಮ ಕಾರಂತರು ಮೊದಲಾದ ಪ್ರಮುಖ ಸಾಹಿತಿಗಳೂ ಸಹ ನಾಟಕ ರಚನೆ ಮಾಡಿದುದೇ ಅಲ್ಲದೇ, ಜಡಭರತರು, ಅಸಂಗತ ನಾಟಕಗಳನ್ನು ಕೊಟ್ಟ ಚಂದ್ರಕಾಂತ ಕುಸನೂರ, ಚಂಪ ಹಾಗೂ ಮಾದಲಾದವರು ಜನಪದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ನಾಟಕಗಳನ್ನು ಬರೆದಿದ್ದಾರೆ. ನಿಸರ್ಗಪ್ರಿಯಾ ಮತ್ತು ಹೊಲಿಶೇಖರ್ ಸಹ ವಿಭಿನ್ನ ನಾಟಕಗಳನ್ನು ಕೊಟ್ಟಿದ್ದಾರೆ.

ರಂಗಭೂಮಿ ಪುರುಷಪ್ರಧಾನ ಕ್ಷೇತ್ರ ಹೇಗೋ ಹಾಗೆ ನಾಟಕ ರಚನಾ ಕ್ಷೇತ್ರದಲ್ಲಿಯೂ ಪುರುಷರದೇ ಪಾರಮ್ಯ. ಸ್ತ್ರೀಯರ ಪ್ರವೇಶ ಇಲ್ಲಿ ಕಡಿಮೆಯೇ. ವೈದೇಹಿ ಬರುವವರೆಗೂ ಪ್ರಮುಖ ನಾಟಕಕಾರ್ತಿಯರು ಈ ಕ್ಷೇತ್ರದಲ್ಲಿ ವಿರಳವೇ. ಇದಕ್ಕೆ ಅಪವಾದವೆಂಬಂತೆ ಸ್ತ್ರೀಯರು ನಾಟಕಗಳನ್ನು ಬರದೇ ಇಲ್ಲ ಎಂದು ನಾನು ಹೇಳಲಾರೆ. ಹಲವು ಮಹಿಳಾ ಸಾಹಿತಿಗಳು ನಾಟಕಗಳನ್ನು ಬರೆದಿದ್ದಾರೆ. ಡಾ.ವಿಜಯಾ, ಹೆಚ್.ಎಸ್.ಪಾರ್ವತಿ, ಯಮುನಾಮೂರ್ತಿ ಇವರ ನಾಟಕಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಬೀದಿ ನಾಟಕವಾಗಿ, ರೇಡಿಯೋ ನಾಟಕಗಳಾಗಿ, ರಂಗದ ಮೇಲೆ ಬಂದವೆ. ಇವರ ಕಾಣ್ಮೆಯನ್ನು ನಾನು ಮರೆಯಲಾರೆ. ಈ ಎಲ್ಲ ಪೂರ್ವಸೂರಿಗಳ ದಾರಿಯಲ್ಲಿ ಸಾಗುತ್ತಾ ಹೊಸ ಹೆಜ್ಜೆಗಳನ್ನು ಮೂಡಿಸುತ್ತಿರುವವರು ಆಶಾ ರಘು. ಅವರ ’ಪೂತನಿ ಮತ್ತಿತರ ನಾಟಕಗಳು’ 10 ಸೆಪ್ಟೆಂಬರ್ ರಂದು ನಿಮ್ಮ ಕೈ ಸೇರಲಿವೆ.

’ಪೂತನಿ ಮತ್ತಿತರ ನಾಟಕಗಳು’ ಕೃತಿಯಲ್ಲಿ ಒಟ್ಟು ಒಂಭತ್ತು ನಾಟಕಗಳು ಇದ್ದಾವೆ. ಬುದ್ಧನ ಕಥೆ ಆಧಾರಿತ ’ಪಟಾಚಾರ’, ಮಹಾಭಾರತದ ಕಥೆ ಆಧಾರಿತ, ಏಕವ್ಯಕ್ತಿ ರಂಗಪ್ರಸ್ತುತಿ ’ಪೂತನಿ’, ರಾಮಾಯಣ ಕಥೆ ಆಧಾರಿತ ಗೀತನಾಟಕ ’ಚೂಡಾಮಣಿ’, ಹೆಣ್ಣಿನ ಮೇಲಿನ ಶೋಷಣೆ ಹಾಗೂ ಕೌರ್ಯವನ್ನು ಬಿಂಬಿಸುವ ’ಕ್ಷಮಾದಾನ’ ಹಾಗೂ ಮಕ್ಕಳ ನಾಟಕಗಳಾದ ’ಬಂಗಾರದ ಪಂಜರ’, ’ಎಣ್ಣೆಗಾಯ್’, ’ಕೃಷ್ಣ ಸುದಾಮ’, ’ಒನಕೆ ಪೂಜೆ’, ’ಚಿನ್ನದ ಮಾವಿನ ಹಣ್ಣು’. ಹೀಗೆ ಹಲವು ವಸ್ತುಗಳನ್ನು ಗರ್ಭೀಕರಿಸಿಕೊಂಡಿರುವ ನಾಟಕಗಳನ್ನು ರಂಗಕ್ಕೆ ಕೊಡುಗೆ ನೀಡುವುದರ ಮೂಲಕ ಆಶಾ ರಘು ಅವರು ಮಹಿಳಾ ನಾಟಕಕಾರ್ತಿಯರ ಕೊರತೆಯನ್ನು ನೀಗಿದ್ದಾರೆ. ಇಲ್ಲಿರುವ ಬಹುತೇಕ ನಾಟಕಗಳು ಮಹಿಳಾಪ್ರಧಾನ ನಾಟಕಗಳಾಗಿ ಸ್ತ್ರೀ ಸಂವೇದನೆಯನ್ನು ಪ್ರತಿಬಿಂಬಿಸುತ್ತವೆ. ಹೆಣ್ಣಿನ ದನಿಯಾಗಿ ಮಾತಾಡುತ್ತವೆ.

’ಪಟಾಚಾರ’- ಒಬ್ಬ ಬೌದ್ಧ ಭಿಕ್ಷುಣಿಯ ಕಥೆ. ಮೊದಮೊದಲಿಗೆ ಇದು ಪ್ರೇಮ ಕಥಾನಕ ಎನಿಸುತ್ತಾ ಮುಂದೆ ಸಾಗಿದಂತೆಲ್ಲಾ ಗಂಡ, ಮಕ್ಕಳು, ತಂದೆ, ತಾಯಿ, ಬಂಧುಬಳಗವನ್ನೆಲ್ಲಾ ಕಳೆದುಕೊಂಡು ಹೆಣ್ಣುಮಗಳೊಬ್ಬಳ ಕಥೆಯಾಗಿ ಮೈದಾಳಿ ತದನಂತರ ಬುದ್ಧನಲ್ಲಿಗೆ ಬಂದು ಭಿಕ್ಷುಣಿಯಾಗಿ ಬುದ್ಧನ ತತ್ವಗಳ ಬೋಧಕಿಯಾಗಿ ತನ್ನ ಇಡೀ ಬದುಕನ್ನು ಸಾರ್ಥಕ್ಯಗೊಳಿಸಿಕೊಳ್ಳುವ ವ್ಯಥೆಯ ಕಥೆಯಾಗಿದೆ ಎಂಬ ಅರಿವಾಗುತ್ತದೆ. ಇದರ ಮೂಲ ಥೇರೀಗಾಥಾ. ಈ ಕಥೆಯನ್ನು ಆಶಾ ರಘು ನಾಟಕವಾಗಿಸುವಲ್ಲಿ ರಂಗದ ಎಲ್ಲಾ ಸಾಧ್ಯತೆಗಳನ್ನು ದುಡಿಸಿಕೊಂಡಿದ್ದಾರೆ.

ವಯಸು ಹದಿನಾರು ನನಗೆ
ಆಸೆ ನೂರಾರು ಒಳಗೆ
ಅಂಗಳದಿ ಬಿರಿದ ಮಲ್ಲಿಗೆ
ಹಾಡಿತ್ತು ನನ್ನೆಯ ಜೊತೆಗೆ

ಶೋಡಶಿಯೊಬ್ಬಳ ವಯೋಸಹಜ ಭಾವನೆಗಳನ್ನು ಹೊರಹಾಕುತ್ತಲೇ ’ಹಹ್ಹಹ್ಹಾ.. ಹಹ್ಹಹ್ಹಾ.. ನಾನು ಅಪ್ಪನಿಗೆ ವಿಧೇಯಳಾದ್ರೂ, ನನ್ನ ಪ್ರಾಯ ನನಗೆ ವಿಧೇಯ ಆಗಿಲ್ಲವಲ್ಲಾ..’ ಎಂಬ ಸಾಲುಗಳಲ್ಲಿ ಕಠೋರ ಸತ್ಯವನ್ನು ತಂದುಬಿಡುತ್ತಾರೆ. ಪ್ರೇಮಿಯಾಗಿ, ಹೆಂಡತಿಯಾಗಿ, ತವರ ಹಂಬಲಿಸುವ ಮಗಳಾಗಿ, ತಾಯಿಯಾಗಿ ಎಲ್ಲರನ್ನು ಕಳೆದುಕೊಳ್ಳುವ ಅನಾಥೆಯಾಗಿ ’ಪಟಾಚಾರ’ ಬುದ್ಧನೆಡೆಗೆ ಬರುತ್ತಾಳೆ.

’ಒಂದು ದಿನ, ಎರಡು ದಿನ, ಮೂರು ದಿನ.. ಹೀಗೆ ಕ್ರಮೇಣ ಬುದ್ಧ ಭಗವಾನನ ಮಾತು ಕಿವಿಗೆ ಬೀಳ್ತಾ ಬೀಳ್ತಾ ನನ್ನೊಳಗಿನ ನೋವೆಲ್ಲಾ ಶಮನವಾಗ್ತಾ ಇದೆ! ಇದೀಗ.. ಹುಟ್ಟಿನಷ್ಟೇ ಸಹಜ ಸಾವು ಕೂಡಾ ಅನ್ನೋ ಸತ್ಯ ಅರಿವಿಗೆ ಮುಟ್ತಾ ಇದೆ’ ಅನ್ನುವ ಪ್ರಬುದ್ಧ ಮನಸ್ಥಿತಿಗೆ ಬಂದು ನಿಲ್ಲುತ್ತಾಳೆ. ’ನನ್ನಂತೆಯೇ ಮಕ್ಕಳನ್ನು ಕಳೆದುಕೊಂಡು ದುಃಖಿತರಾಗಿ ಬಳಿಗೆ ಬಂದ ಎಲ್ಲಾ ತಾಯಂದಿರಿಗೆ ನಾನೇ ಸಮಾಧಾನ ಹೇಳೋಕ್ಕೆ ಶುರು ಮಾಡ್ದೆ’ ಎಂದು ಹೇಳುತ್ತಾ ’ಅವನು ಬಂದ ಮಾರ್ಗವನ್ನಾಗಲೀ, ಹೋದ ಮಾರ್ಗವನ್ನಾಗಲೀ ನೀನು ಬಲ್ಲೆಯಾ..? ಅದು ತಿಳಿಯದ ಮೇಲೆ ಅದಕ್ಕಾಗಿ ಶೋಕ ಪಡಬಾರದು’ ಎಂಬ ಇಂತಹ ಬದುಕಿನ ಸಾಂತ್ವನದ ಮಾತುಗಳು ಓದುಗರ, ನೋಡುಗರ ಎದೆಯೊಳಗೆ ನಾಟುತ್ತವೆ.

’ಪೂತನಿ’- ಇದೊಂದು ಏಕವ್ಯಕ್ತಿ ರಂಗಪ್ರಸ್ತುತಿ. ’ಕಂಸಾಕ್ಯಾನ’ವನ್ನು ಒಳಗೊಂಡ ಕಥೆ ಇಲ್ಲಿದೆ. ಕೃಷ್ಣ ಚರಿತ್ರೆಯ ಕಂಸ ಸಂದರ್ಭದಲ್ಲಿ ಬರುವ ಪೂತನಿ ಒಬ್ಬ ರಾಕ್ಷಸಿ. ಪುರಾಣಗಳಲ್ಲಿ ಕಂಸನ ಆಣತಿಯಂತೆ ಸಾಲು ಸಾಲು ಶಿಶುಗಳ ಹತ್ಯೆಗಳನ್ನು ಮಾಡುವ ರಕ್ಕಸಿಯಂತೆ ಇವಳು ಬಿಂಬಿತಳಾಗಿದ್ದಾಳೆ. ಆದರೆ ಇಲ್ಲಿ ಅವಳೊಬ್ಬಳು ಸಹಜ ಹೆಣ್ಣಿನಂತೆ, ತನ್ನ ಸ್ವಂತ ಅವಳಿ ಮಕ್ಕಳ ಕಳೆದುಕೊಂಡು ದುಃಖಸಾಗರದಲ್ಲಿ ಮುಳುಗಿದ, ನೊಂದ ತಾಯಿಯಾಗಿ, ಆ ಸಾವುಗಳಿಂದ ವಿಚಲಿತಳಾಗುವ ಆ ಅಕ್ಷಮ್ಯದಿಂದ ಹೊರಬರಲಾರದ ಪರಿತಪಿಸುವ ಹೆಣ್ಣಾಗಿ ಬಿಂಬಿತಳಾಗಿದ್ದಾಳೆ. ಪೂತನಿ ಕೊನೆಗೆ ತನ್ನದೇ ಇಚ್ಛೆಯಂತೆ ಬಾಲಕೃಷ್ಣನಿಗೆ ಎದೆಹಾಲು ಉಣಿಸುತ್ತಾ ಮೃತಳಾಗುತ್ತಾ ಪ್ರಾಯಶ್ಚಿತ್ತವನ್ನು ಪಡೆಯುತ್ತಾಳೆ.

’ಮಕ್ಕಳು ಚದುರಿ ಓಡ್ತಾವೆ..! ಕಂದಮ್ಮಗಳು ಚಟ್ಟನೆ ಚೀರ್ತಾವೆ..! ತಾಯಂದಿರು ಮುಖಕ್ಕೆ ಬಾಗಿಲು ಹಾಕ್ತಾರೆ..! ಗಂಡಸರು ತಮ್ಮ ಕಣ್ಣುಗಳನ್ನ ಮುಚ್ಕೋತಾರೆ..! ಹಾಂ.. ಹೌದು..! ಎಷ್ಟೋ ಎಳೆಯ ಕಂದಮ್ಮಗಳನ್ನು ನಿರ್ದಯದಿಂದ ಕೊಂದ ಪಾತಕಿ.. ಕೊಲೆಗಡುಕಿ… ನಾನೇ ಶಾಪಗ್ರಸ್ತ್ರ ಹೆಂಗಸು.. ಪೂತನಿ’ ಈ ಸಾಲುಗಳಲ್ಲಿ ಪೂತನಿಯ ವೇದನೆ ಅಭಿವ್ಯಕ್ತಗೊಳ್ಳುತ್ತವೆ.

’ಹೊನ್ನಿನ ಗಣಿಯೇ.. ಮುದ್ದಿನ ಗಿಣಿಯೇ.. ಜಗದಾದಿ ದೇವನೇ ಕುಡಿ.. ಈ ಬೆಂದ ಹೃದಯದ ತಾಯಿಯ ಮೊಲೆಹಾಲನ್ನು ಸಂಮೃದ್ಧವಾಗಿ ಕುಡಿ.. ಕ್ಷಣಿಕ ಕಾಲವಾದರೂ ಈ ನತದೃಷ್ಟೆಗೆ, ಸರಣಿ ಶಿಶು ಹತ್ಯೆಗಳನ್ನು ಮಾಡಿದ ಮಹಾ ಪಾತಕಿಗೆ, ಜಗದೋದ್ದಾರಕನಾದ ನಿನ್ನ ತಾಯಿ ಆಗೋ ಯೋಗ ಕರುಣಿಸು.. ಸ್ವೀಕರಿಸು..’ ಎಂದು ಹೇಳುತ್ತಾ, ’ನಾನೀಗ ಪಾತಕಿಯಲ್ಲ.. ಕೊಲೆಗಡುಕಿಯಲ್ಲ.. ಶ್ರೀಕೃಷ್ಣನಿಗೆ ಮೊಲೆಕೊಟ್ಟಿರೋ ಮಹಾತಾಯಿ.. ತಾಯಿ ನಾನು..! ನನ್ನ ಹೆಣ್ತನ ಪರಿಪೂರ್ಣವಾಯಿತು ಸ್ವಾಮಿ’ ಎನ್ನುತ್ತಾ ಕೊನೆಯುಸಿರೆಯುವ ಪೂತನಿಯನ್ನು ಇಲ್ಲಿ ಕಾಣುತ್ತೇವೆ.

ಚೂಡಾಮಣಿ

’ಚೂಡಾಮಣಿ’- ಇದೊಂದು ಸಂಗೀತ ನಾಟಕ. ರಾಮಾಯಣದ ಕಥೆಯನ್ನು ಆಧರಿಸಿದ್ದು, ಸೀತೆಯ ವ್ಯಥೆಯನ್ನು ಬಿಂಬಿಸುವಂತದ್ದು. ಸೀತೆ ಹಾಗೂ ಕಸ್ತೂರಿ ಇವರಿಬ್ಬರ ಮಾತುಕತೆಯೊಂದಿಗೆ ನಾಟಕ ಬಿಚ್ಚಿಕೊಳ್ಳುತ್ತದೆ. ಮತ್ತೊಂದೆಡೆ ರಾಮ ಹಾಗೂ ಶಕನ ಮಾತುಗಳೊಂದಿಗೆ ನಾಟಕ ಮುಂದುವರಿಯುತ್ತದೆ. ಸೀತೆಯ ಅಳಲುಗಳು.. ರಾಮನ ಪರಿತಾಪಗಳು ಇಲ್ಲಿ ಅರಳುತ್ತವೆ. ರಂಗಭೂಮಿಯ ಹಿನ್ನೆಲೆಯಿಂದ ಬಂದ ನಾಟಕಕಾರ್ತಿ ಆಶಾ ರಘು ಅವರು ತಮ್ಮ ರಂಗಾನುಭವನ್ನು ಅತ್ಯಂತ ಪ್ರಬುದ್ಧವಾಗಿ ಈ ನಾಟಕದಲ್ಲಿ ದುಡಿಸಿಕೊಂಡಿದ್ದಾರೆ. ನಾಟಕೀಯತೆ, ದೃಶ್ಯ ಸಂಯೋಜನೆ, ರಚನಾಶೈಲಿ ಮತ್ತು ನಿರೂಪಣೆ ಇವೆಲ್ಲವೂ ಇಲ್ಲಿ ಮೇಳೈಸಿವೆ.

’ಇಂತಹ ಮಂಗಳಕಾರ್ಯಕ್ಕೆ ಮಧುಮಗಳನ್ನು ಹರಸೋಕ್ಕೆ ಇಲ್ಲೊಬ್ಬ ಗಂಡ ಬಿಟ್ಟ ಹೆಂಗಸು ಬಂದಿದ್ದಾಳೆ ನೋಡಿ’ ಅಂತ ಯಾರಾದ್ರೂ ಹಂಗಿಸೋದಕ್ಕೆ ಮೊದಲು’ ’ಗಂಡ ಬಿಟ್ಟ ಕಾರಣ ಏನು ಗೊತ್ತಾ?’ ಅಂತ ಆರಂಭವಾಗಿ ’ಲಂಪಟನಾದ ಪರಪುರುಷನ ಆಶ್ರಯದಲ್ಲಿ ತಿಂಗಳುಗಟ್ಟಲೆ ಇದ್ದು ಬಂದ ಹೆಂಗಸು’ ಅಂತಾರೆ’ ಇಂತಹ ವೇದನೆ ತುಂಬಿದ ಮಾತುಗಳನ್ನು ಆಡುವ ಸೀತೆ ಭಾರತೀಯ ಸ್ತ್ರೀಯನ್ನು ಪ್ರತಿನಿಧಿಸುತ್ತಾಳೆ.

ಇಂತಹ ಗೀತೆಗಳ ಮೂಲಕ ಸೀತೆಯಂತಾ ಹೆಣ್ಣಿನ ಮೂಕವೇದನೆಯನ್ನು ಪ್ರದರ್ಶಿಸುತ್ತಾರೆ ನಾಟಕಕಾರ್ತಿ.

ನಾಟಕದ ಅಂತ್ಯದಲ್ಲಿ ಬರುವ, ’ನಿನ್ನನ್ನು ವಿವಾಹವಾದ ಮೇಲೆ ಕೇವಲ ನನ್ನ ಸೀತೆ ಅಂತಷ್ಟೇ ನನ್ನ ಅರಿವಿರೋದು! ಅನುಮಾನದಂತಹ ವಿಷಯಕ್ಕೆ ನನ್ನ ಮನಸ್ಸಿನಲ್ಲಿ ಜಾಗವಿಲ್ಲ’ ಎಂಬ ಶ್ರೀರಾಮನ ಮಾತಿಗೆ ಸೀತೆಯ ಹರ್ಷ ನೋಡಿ.. ’ರಾವಣನಿಂದ ಬಿಡುಗಡೆ ಹೊಂದಿದ್ದಕ್ಕಿಂತ ಹೆಚ್ಚಿಗೆ, ಮನಸ್ಸಿಗೆ ಬಿಡುಗಡೆ ನೀಡಿದ್ದು ರಾಮನ ಈ ಮಾತು ಕಣೆ, ನನ್ನ ಕೈ ಉರಿ ಮನಸ್ಸಿನ ಉರಿ ಎಲ್ಲವೂ ಮಾಯವಾಗಿ ಬಿಡ್ತು’ ಎಂಬ ಮಾತುಗಳನ್ನು ತನ್ನ ಸಖಿಯಾದ ಕಸ್ತೂರಿಯೊಡನೆ ಆಡುವುದರ ಮೂಲಕ ಸೀತೆ ತನ್ನ ಹೆಸರೊಂದಿಗೆ ಅಂಟಿಕೊಂಡಿದ್ದ ಕಳಂಕವನ್ನು ತೊಳೆದುಕೊಂಡು ಹರ್ಷಚಿತ್ತಳಾಗುತ್ತಾಳೆ ಎಂದು ಸೂಚಿಸುತ್ತಾ, ಯಾವುದೇ ಹಣ್ಣಿಗೆ ನಿಂಧನೆಗಳು, ಬಿರುನುಡಿಗಳು, ಅಪಮಾನಗಳು, ಅನುಮಾನಗಳು ಎದುರಾದರೆ, ಎಷ್ಟು ಜರ್ಜರಿತಳಾಗಿ ಉಸಿರನ್ನು ಬಿಗಿಮುಷ್ಟಿಯಲ್ಲಿಡಿದು ಜೀವನದುದ್ದಕ್ಕೂ ಬದುಕಬೇಕಾಗುತ್ತದೆ ಎಂಬುದನ್ನು ಅಭಿವ್ಯಕ್ತಿಸುತ್ತಾರೆ.

ಕೊನೆಗೆ ರಾಮಸೀತೆಯ ಸಮಾಗಮವಾಗುತ್ತದೆ. ರಾಮ, ‘ಬಾ ಈಗ.. ಹೀಗೆ ಕೂರು.. ಈ ಚೂಡಾಮಣೀನ ನಿನ್ನ ತಲೆಗಿಟ್ಟು ಹೆರಳು ಕಟ್ಟುತೀನಿ..’ ಎನ್ನುವ ಮಾತುಗಳ ಮೂಲಕ ಪ್ರೀತಿಯ ಮಳೆಗರೆಯುತ್ತಾನೆ. ಸಾರ್ಥಕ್ಯ ಪಡೆದು ಸೀತೆ ರಾಮನ ಪ್ರೀತಿಯಪ್ಪುಗೆಯಲ್ಲಿ ಲೀನವಾಗುತ್ತಾಳೆ.

ಕ್ಷಮಾದಾನ

ಕ್ಷಮಾದಾನ: ನಾಲ್ಕು ದೃಶ್ಯಗಳುಳ್ಳ, ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಪಾತ್ರಗಳುಳ್ಳ ಪುಟ್ಟ ನಾಟಕ. 44 ವರ್ಷದ ಪ್ರಭುದೇವನಾಥ ಸ್ವಾಮಿಯಿಂದ ಅತ್ಯಾಚಾರಕ್ಕೊಳಗಾದ 14 ವರ್ಷದ ಕುಮಾರಿ ಅಂಬುಜ ಪುಟ್ಟಸ್ವಾಮಿ ಎಂಬ ಹೆಣ್ಣುಮಗಳೊಬ್ಬಳ ಧಾರುಣ ಕಥನ ಈ ನಾಟಕದಲ್ಲಿದೆ. ಆಗಸ್ಟ್ 14.2004 ರಂದು, ಅತ್ಯಾಚಾರ ಹಾಗೂ ಕೊಲೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಲ್ಲಿಗೇರಿಸಲ್ಪಟ್ಟ ಕಲ್ಕತ್ತಾದ ಧನಂಜಯ ಚಟರ್ಜಿಯ ಪ್ರಕರಣವನ್ನು ನಾಟಕವಾಗಿ ಮರುಸೃಷ್ಟಿಸಿದ್ದಾರೆ ನಾಟಕಕಾರ್ತಿ.

ಮಧ್ಯಮ ವರ್ಗದ ಕೌಟುಂಬಿಕ ವಾತಾವರಣದಿಂದ ಪ್ರಾರಂಭವಾಗುವ ನಾಟಕ.. ಅತ್ಯಾಚಾರಿ ಹಾಗೂ ಕೊಲೆಗಾರನೊಬ್ಬನ ಕುಟುಂಬ.. ಅವನ ಹೆಂಡತಿ ಮತ್ತು ಮಕ್ಕಳು ಅನುಭವಿಸಬಹುದಾದ ಸಮಾಜದ ನಿಂದನೆ, ಅನಾದರ ಹಾಗೂ ಯಾತನೆಯನ್ನು, ಸಂಕಟವನ್ನು ಬಿತ್ತರಿಸುತ್ತದೆ. ಅಪರಾಧ ನಿರಪರಾಧಗಳ ನಡುವೆ ನಿಂತು ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ. ಶಿಕ್ಷೆ ಹಾಗೂ ಕ್ಷಮಾದಾನಗಳನ್ನು ಸಂವಾದಿಸುತ್ತದೆ ಈ ನಾಟಕ. ಅತ್ಯಾಚಾರಿ ಹಾಗೂ ಕೊಲೆಗಾರನ ಒಳತೋಟಿಯನ್ನು ಚಿತ್ರಿಸುತ್ತದೆ. ಕುಂಟೇಬಿಲ್ಲೆ ಆಡುವ ಹಸುಳೆಯ ಮೇಲೆ ಎರಗಿದ ಕಾಮಗಿಡಗನ ನಡುವಿನ ಕಥಾನಕ ಸೂಕ್ಷ್ಮವಾದ ಅನೇಕಾನೇಕ ವಿಚಾರಗಳನ್ನು ರಾಚುವಂತೆ ಹೊರಗೆಡವುತ್ತದೆ.

’ನೋಡಿ, ನಮ್ಮಜ್ಜಿ ಅಳ್ತಾ ಇರೋದು ಸಂಕಟದಿಂದ. ನೀವು ಫೋಟೋ ತಗೊಂಡು ಪೇಪರಿನಲ್ಲಿ ಹಾಕಿ ಪ್ರಚಾರ ಕೊಡಲಿ ಅಂತಲ್ಲ.. ದಯವಿಟ್ಟು ಹೋಗಿ ಆಚೆ.. ದಯವಿಟ್ಟು ಹೋಗಿ..’

’ಇನ್ನೊಬ್ಬರನ್ನು ಕೊಲೆ ಮಾಡೋದಲ್ಲ.. ನಮ್ಮ ಜೀವನ ನಾವೇ ಕೊನೆ ಮಾಡ್ಕೊಳಕ್ಕೂ ಸ್ವತಂತ್ರ್ಯ ಇಲ್ಲವಾ?’

’ಹೇಳೋದಕ್ಕೆ ಏನಿದೆಯಪ್ಪಾ., ಸಂಕಟ ಆಗ್ತಾ ಇದೆ ಅಷ್ಟೆ.. ಮಹಾತ್ಮರು ಹೇಳೋರು, ’ಪ್ರತಿಯೊಂದು ಜೈಲೂ ಕೂಡ ಮನಪರಿವರ್ತನೆಯ ಕೇಂದ್ರವಾಗಬೇಕು ಅಂತ. ಆ ಮಾತು ಆಚರಣೆಗೆ ತರಬೇಕಾಗಿದೆ ಈಗ ಅಷ್ಟೇ.. ಅಷ್ಟೇ..’ ಇಂತಹ ಮನಕಲುಕುವ.. ವ್ಯವಸ್ಥೆಯನ್ನು ಪ್ರಶ್ನಿಸುವ, ಅಂತರಂಗ ಶೋಧನೆಯ ಅನೇಕ ಸಾಲುಗಳು ನಾಟಕದುದ್ದಕ್ಕೂ ಇವೆ.

’ಮುಗಿಯಿತವನ ಕಹಿ ಅಖ್ಯಾನ
ನೇಣುಗಂಬದಲ್ಲಿ ಅವನ ಮರಣ
ವಿವೇಚಿಸಿ ಹೇಳಿ ಸಾವಧಾನ
ನೀಡಬಲ್ಲಿರೆ ನೀವು ಕ್ಷಮಾದಾನ..?

ಈ ಪ್ರಶ್ನೆಯನ್ನು ನಾಟಕ ಪ್ರೇಕ್ಷಕರ ಮುಂದಿಡುತ್ತದೆ.

ಬಂಗಾರದ ಪಂಜರ

ರವೀಂದ್ರನಾಥ ಠಾಗೂರರ ’ದಿ ಪ್ಯಾರೆಟ್ಸ್ ಟ್ರೈನಿಂಗ್’ ಸಣ್ಣಕಥೆಯನ್ನು ಆಧರಿಸಿ ರಚಿತವಾದ ಮಕ್ಕಳ ನಾಟಕ ’ಬಂಗಾರದ ಪಂಜರ’. ಠಾಗೂರರ ಇದೇ ಕಥೆಯನ್ನು ಆಧರಿಸಿದ ನಾಟಕ ‘ಪಂಜರಶಾಲೆ’ ಕನ್ನಡ ರಂಗಭೂಮಿಯಲ್ಲಿ ಸುಪ್ರಸಿದ್ಧ. ಬಿ.ವಿ.ಕಾರಂತರು ಇದೇ ನಾಟಕವನ್ನು ಹಿಂದಿ, ಗುಜರಾತಿ ಭಾಷೆಗೆ ಅನುವಾದಿಸಿ ರಂಗಕ್ಕೆ ತಂದಿದ್ದರು. ಅವರೇ ಕನ್ನಡಕ್ಕೂ ತಂದು ಈ ನಾಟಕವನ್ನು ಜನಪ್ರಿಯಗೊಳಿಸಿದ್ದರು. ರಾಜ ವಾತಾವರಣ ಅರಮನೆ ಪರಿಸರದಲ್ಲಿ ಘಟಿಸುವ ಈ ನಾಟಕ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುತ್ತದೆ.

’ಎಣ್ಣೆಗಾಯ್’- ಆಶಾ ರಘು ಅವರು ಬರೆದಿರುವ ಮತ್ತೊಂದು ಮಕ್ಕಳ ನಾಟಕ. ಕೌಟುಂಬಿಕ ವ್ಯವಸ್ಥೆ.. ಅತ್ತೆ ಸೊಸೆಯರ ನಡುವಿನ ಸಂಬಂಧ.. ಇರುಸುಮುರುಸುಗಳು ಮುಂದೆ ಸಾಗಿ ಹಾಸ್ಯ, ಜಾಣತನ, ಮೂರ್ಖತನಗಳು.. ಇವುಗಳ ಮೇಳ ಮೆರವಣಿಗೆ ಹೊರಟು ’ಅತ್ತೆಗೊಂದು ಕಾಲ ಆದ್ರೆ, ಸೊಸೆಗೊಂದು ಕಾಲ ಇದೆ’ ಎಂಬ ರೂಢಿಗತ ಮಾತನ್ನು ಸಾರುವ ನಾಟಕವಿದು.

’ಕೃಷ್ಣ ಸುದಾಮ’- ಇದೊಂದು ಮಕ್ಕಳ ಪುಟ್ಟ ನಾಟಕ. ಕೃಷ್ಣ ಸುದಾಮರ ಸ್ನೇಹದ ಅನನ್ಯತೆಯನ್ನು ಬಿಂಬಿಸುವ ನಾಟಕ. ಗೆಳೆಯ ಬಡವನಾದರೂ ಕೃಷ್ಣನಂತಹವನು ಆತನಿಗೆ ತೋರುವ ಪ್ರೀತಿಯನ್ನು ಹೇಳುತ್ತಲೇ ಗೆಳೆಯ ಗೆಳೆಯರ ನಡುವೆ ಯಾವುದೇ ತರತಮ ಭಾವಗಳಿರಕೂಡದು ಎಂದು ನೀತಿ ಹೇಳುವ ನಾಟಕವಿದು.

’ಒನಕೆ ಪೂಜೆ’- ಜಾನಪದ ಹಾಸ್ಯ ಕಥೆಯೊಂದನ್ನು ಆಧರಿಸಿದ ನಾಟಕವಿದು. ಈ ನಾಟಕದಲ್ಲಿ ಹಾಸ್ಯವೇ ಪ್ರಧಾನವಾದದ್ದು. ಅತಿಥಿ ದೇವೋಭವ.. ಅತಿಥಿ ದೇವೋಭವ ಎನ್ನುತ್ತಾ ತನ್ನ ಕುಟುಂಬವನ್ನು ಮರೆತು.. ಆವಜ್ಞೆಗೆ ಈಡುಮಾಡುವ ಕೋದಂಡಪಾಣಿ ಭಟ್ಟನಿಗೆ ಆತನ ಹೆಂಡತಿ ಮೀನಾಕ್ಷಿ ಕಲಿಸುವ ಪಾಠ ಈ ನಾಟಕದ ಕಥಾ ಹಂದರ. ಶಾಲೆಗಳಲ್ಲಿ ಅಭಿನಯಿಸಲು ಸೊಗಸಾದ ನಾಟಕ. ಮಕ್ಕಳನ್ನು ರಂಜಿಸುತ್ತಲೇ ನೀತಿ ಹೇಳುವ ನಾಟಕವಿದು.

’ಚಿನ್ನದ ಮಾವಿನ ಹಣ್ಣು’- ಇದು ಮತ್ತೊಂದು ಮಕ್ಕಳ ಹಾಸ್ಯ ನಾಟಕ. ತೆನಾಲಿ ರಾಮಕೃಷ್ಣ ಶಾಸ್ತ್ರದ ಹೆಸರಿನಲ್ಲಿ ಅಮಾಯಕರನ್ನು, ಬಡವರನ್ನು ಸುಲಿಗೆ ಮಾಡುತ್ತಿದ್ದ ಬ್ರಾಹ್ಮಣರಿಗೆ ಕಲಿಸುವ ಪಾಠ ಈ ನಾಟಕದ ಕಥಾವಸ್ತು. ಇಂದಿಗೂ ಸಹ ಈ ನಾಟಕ ಪ್ರಸ್ತುತವೆ. ದೇವರು ದಿಂಡಿರು.. ಆ ಕಾಟ ಈ ಕಾಟ.. ಆ ಯೋಗ ಈ ಯೋಗ.. ವಾಸ್ತು ಪಾಸ್ತು ಎಂದು ಬೊಗಳೆ ಹೊಡೆಯುವ ಪಂಡಿತೋತ್ತಮರಿಗೆ ಚಾಟಿ ಬೀಸುವ ನಾಟಕವಿದು.

ಒಟ್ಟು ಒಂಭತ್ತು ನಾಟಕಗಳನ್ನು ಬರೆದಿರುವ ಆಶಾ ರಘು ಅವರು ಮೂಲತಃ ರಂಗಭೂಮಿಯವರು.. ರಂಗಶಿಕ್ಷಕಿಯಾಗಿದ್ದವರು.. ರಂಗದ ಎಲ್ಲಾ ಸೂಕ್ಷ್ಮಗಳನ್ನು ಬಲ್ಲವರು. ಅವರಿಗೆ ಸಾಹಿತ್ಯಕೃತಿಯೂ ಗೊತ್ತೂ, ಹಾಗೆಯೇ ರಂಗಕೃತಿಯೂ ಗೊತ್ತು. ರಂಗ ಸಾಹಿತ್ಯದ ಜೊತೆ ಜೊತೆಗೆ ರಂಗಭಾಷೆಯನ್ನು ಬಲ್ಲವರು. ಅವರ ಅಷ್ಟೂ ನಾಟಕಗಳೂ ರಂಗಪರಿಭಾಷೆಯ ಮೂಲಕವೇ ಅಭಿವ್ಯಕ್ತಿಗೊಳ್ಳುವಂತಹುವು. ಇವರಿಗೆ ರಂಗಭೂಮಿ ಗೊತ್ತಿರುವುದರಿಂದಲೇ ಇಲ್ಲಿಯ ನಾಟಕಗಳೆಲ್ಲವೂ ನೇರವಾಗಿ ರಂಗದಲ್ಲಿ ಪ್ರದರ್ಶಿಸಲು ಪೂರಕವಾಗಿವೆ. ಆಶಾ ರಘು ಅವರು ಕಾದಂಬರಿಗಾರ್ತಿಯಾಗಿ ಹೇಗೆ ಉನ್ನತ ಹೆಸರು ಮಾಡಿದ್ದಾರೆಯೋ.. ಅವರ ಕಾದಂಬರಿಗಳು ಹೇಗೆ ಸಾರಸ್ವತ ಲೋಕದಲ್ಲಿ ಬಹುಚರ್ಚೆಗೆ ಒಳಗಾಗಿದ್ದಾವೋ ಹಾಗೆಯೇ ಇವರ ಈ ನಾಟಕಗಳು ರಂಗವೇರಿ ಸಹೃದಯ ಪ್ರೇಕ್ಷಕರ ಮನ ಗೆಲ್ಲಲಿ. ಯಾವುದೇ ರಂಗ ಸಾಹಿತ್ಯ ಕೃತಿಯು ರಂಗಕೃತಿಯಾಗಿ ಹೊರಹೊಮ್ಮಿ ಪ್ರದರ್ಶಿನಕ್ಕೆ ಒಡ್ಡಿಕೊಂಡಾಗಲೇ ಆ ನಾಟಕ ಸಾರ್ಥಕ್ಯವನ್ನು ಸಾಧಿಸುವುದು. ಇವರ ನಾಟಕಗಳನ್ನು ರಂಗತಂಡಗಳು, ರಂಗನಿರ್ದೇಶಕರು ಬಹುಬೇಗ ರಂಗಕ್ಕೆ ತರಲಿ ಎಂದು ಆಶಿಸುತ್ತೇನೆ.

ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ರಂಗ ನಿರ್ದೇಶಕರು, 94489 70731

Related post