ಮನುಷ್ಯನ ಜೀವನದಲ್ಲಿ ಪ್ರಕೃತಿಯ ಕೊಡುಗೆ ಅಪಾರವಾಗಿದೆ. ಗಿಡ ಮರಗಳು ಹಾಗೂ ಸಕಲ ಜೀವರಾಶಿಗಳು ಅಂದರೆ ಮನುಷ್ಯನೂ ಸೇರಿ ಪ್ರಕೃತಿಯ ಒಂದು ಭಾಗವೆ. ಮನುಷ್ಯನ ಜೀವನಕ್ಕೆ ಮುಖ್ಯವಾದ ಅಂದರೆ, ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನು ನಮಗೆ ಪ್ರಕೃತಿಯು ನೀಡಿದ ಕೊಡುಗೆಯೇ ಸರಿ. ಮನುಷ್ಯನ ದೇಹ ಐದು ಪಂಚ ಮಾಹಾಭೂತಗಳಿಂದಾಗಿದೆ. ಮಣ್ಣು, ವಾಯು, ಅಗ್ನಿ, ಆಕಾಶ, ನೀರು, ಆದುದರಿಂದ ಹುಟ್ಟಿನಿಂದ ಸಾಯುವವರೆಗೂ ನಾವೆಲ್ಲಾ ಇದರೊಂದಿಗೆ ಬಾಳಬೇಕು. ಇದಕ್ಕೆ ಕೃತಜ್ಞತರಾಗಿರಬೇಕು. ಈ ಐದು ಪಂಚಭೂತಗಳು ನಮ್ಮ ಪ್ರಕೃತಿಯಲ್ಲಿರುವ ಒಂದು ವೈಶಿಷ್ಟ್ಯವೇ ಸರಿ. ದೇವರ ವೈಶಿಷ್ಯನೇ ಅದ್ಭುತ. ಪ್ರತೀ ಒಂದು ಜೀವರಾಶಿಯ ಹುಟ್ಟು ಅವನ ಪರಿಕಲ್ಪನೆಯೇ. ಇಂತಹ ಪಕೃತಿಯ ಮಧ್ಯೆ ಹುಟ್ಟಿರುವ ನಾವು ನಿಜಕ್ಕೂ ಧನ್ಯರು.
ಆದರೆ ಇದನ್ನು ತಿಳಿದುಕೊಳ್ಳದೆ ನಮ್ಮ ಕಾಲ ಮೇಲೆ ನಾವೇ ಕಲ್ಲುಚಪ್ಪಡಿ ಹಾಕಿಕೊಳ್ಳುತ್ತಿದ್ದೇವೆ. ಇಂದು ಆಮ್ಲಜನಕಕ್ಕಾಗಿ ಪರದಾಡುವ ಪರಿಸ್ಥಿತಿಯನ್ನು ತಂದುಕೊಂಡಿದ್ದೇವೆ. ಹೀಗೆ ಪ್ರಕೃತಿ ನಾಶಕ್ಕೆ ತೊಡಗಿದರೆ ಮುಂದೊಂದು ದಿನ ಭೀಕರ ಪರಿಣಾಮ ಎದುರಿಸಬೇಕಾಗಬಹುದು. ಉಸಿರೇ ಇಲ್ಲ ಎಂದ ಮೇಲೆ ಮನುಷ್ಯನ ಜೀವಕ್ಕೆ ಬೆಲೆ ಎಲ್ಲಿದೇರಿ. ಮನುಷ್ಯನ ಉಸಿರೇ ನಿಂತು ಹೋದರೆ ಅವನದು ಯಾವ ಆರ್ಭಟವೂ ಇಲ್ಲ. ಆದರೆ ಯೋಚಿಸಬೇಕಾದ ವಿಷಯವೇನೆಂದರೆ, ಪ್ರಕೃತಿಗೆ ನಾವೇನು ಕೊಟ್ಟಿದ್ದೇವೆ. ಗಾಳಿಯನ್ನು ಕಲುಷಿತ ಮಾಡಿದ್ದೇವೆ, ನೀರನ್ನು ಕಲುಷಿತ ಮಾಡಿದ್ದೇವೆ, ಇಷ್ಟೆ ಯಾಕೆ ಇಡೀ ಭೂಮಂಡಲವನ್ನೇ ಕಲುಷಿತಗೊಳಿಸಿದ್ದೇವೆ.
ಮನುಷ್ಯನಿಗೆ ಅರಿತು ಬಾಳಲು ಹಾಗೂ ವಿವೇಚನೆ ಮಾಡುವ ಶಕ್ತಿ ಕೊಟ್ಟ. ಬೇರೆ ಯಾವ ಜೀವರಾಶಿಗಳಿಗು ಆ ಪ್ರಜ್ಞೆ ಕೊಟ್ಟಿಲ್ಲ. ಆದರೆ ಈಗ ನಮಗೆ ಪ್ರಜ್ಞೆ ಇಲ್ಲದೇ ಬದುಕುತ್ತಿದ್ದೇವೆ. ಇಂದು ಪ್ರಕೃತಿ ಸಂಕುಲದ ನಾಶಕ್ಕೆ ಕೈ ಹಾಕಿದ್ದೇವೆ. ಮನುಷ್ಯನು ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬುದ್ಧತೆಯನ್ನು ಹೊಂದಿದಂತೆ ಮನುಷ್ಯತ್ವನ್ನು ಕಳೆದುಕೊಳ್ಳುತ್ತಿದ್ದಾನೆ. ನಾವು ಪ್ರಕೃತಿಯ ತಾಳ್ಮೆ ಪರೀಕ್ಷೆ ಮಾಡುತ್ತಿದ್ದೇವೆ. ಆದರೆ, ನಾವು ನೆನಪಿಡಬೇಕಾಂದಂತಹ ವಿಚಾರ ಅಂದರೆ, ಇವತ್ತು ನಾವು ಅದರ ಒಡಲನ್ನು ಬರಿದು ಮಾಡಬಹುದು. ಆದರೆ, ಮುಂದೊಂದು ದಿನ ಅದು ನಮಗೆ ಪ್ರತಿರೋಧ ಒಡ್ಡಿದಾಗ ನಾವು ಕೂಡಿಟ್ಟ ಹಣ, ಆಸ್ತಿ, ಅಂತಸ್ತು, ನಮ್ಮ ಒಣ ಪ್ರತಿಷ್ಟೆ ಎಲ್ಲವೂ ಮಣ್ಣುಪಾಲು. ಪ್ರಕೃತಿಯ ಮುಂದೆ ನಾವೆಲ್ಲ ಗೌಣ.
ಪ್ರಕೃತಿಯು ತನ್ನ ಜೀವರಾಶಿಗಳೊಂದಿಗೆ ಇಂದಿಗೂ ಒಗ್ಗಟ್ಟಿನಿಂದ ಬದುಕುತ್ತಲಿದೆ. ಪಕ್ಷಿಗಳಾಗಲಿ, ಪ್ರಾಣಿಗಳಾಗಲಿ ಒಂದಕ್ಕೊಂದು ಒಗ್ಗಟ್ಟಿನಿಂದಲೇ ಬದುಕುವುದನ್ನು ಕಾಣುತ್ತಿದ್ದೇವೆ. ನಾನು ಎಲ್ಲೊ ಓದಿದ ನೆನಪು ಕಾಡಿಗೆ ಬೆಂಕಿ ಬಿದ್ದಾಗ ಮರಗಳು ವರುಣ ದೇವನನ್ನು ಪ್ರಾರ್ಥಿಸುತ್ತವಂತೆ. ಆಗ ಮಳೆಯ ಕಾಲ ಅಲ್ಲವಾದರೂ ಮಳೆಯಾದಂತಹ ನೈಜ ಘಟನೆಗಳಿವೆಯಂತೆ. ಅಂದರೆ ತನ್ನನ್ನು ಕಾಪಾಡಿಕೊಳ್ಳಲು ದೇವರು ಅದಕ್ಕೆ ಆ ಶಕ್ತಿಯನ್ನು ಕೊಟ್ಟಿದ್ದಾನೆ ಎಂದರ್ಥ.
ಅದಕ್ಕೂ ಜೀವವಿದೆ. ಅದಕ್ಕೂ ಬಾವನೆಗಳಿವೆ. ಅದು ನಮ್ಮಿಂದ ಯಾವುದೇ ಹಣ, ಆಸ್ತಿನ ಕೇಳುವುದಿಲ್ಲ. ಅದು ನಮ್ಮ ಪ್ರೀತಿ ಕಾಳಜಿಯನ್ನು ಬಯಸುತ್ತದೆ. ನಮ್ಮ ಹಸಿವನ್ನು ನೀಗಿಸುವ ಹಣ್ಣಾಗಿ, ನೆರಳಿನಲ್ಲಿ ನಮಗೆ ತಂಪಾಗಿ, ನಮ್ಮ ಉಸಿರಿಗೆ ಉಸಿರಾಗಿ ನಮ್ಮನ್ನು ಕಾಪಾಡುತ್ತದೆ. ನಮ್ಮ ಚಿಂತೆಯನ್ನು ದೂರವಾಗಿಸುವ ಮನಸ್ಸಿಗೆ ಮುದ ನೀಡುವ ಶಕ್ತಿ ಪ್ರಕೃತಿಗೆ ಇದೆ. ಹಾಗೇ ಒಂದು ಸುತ್ತು ಗಿಡ ಮರಗಳ ಮದ್ಯೆ ಓಡಾಡಿದಾಗ ಸಿಗುವ ಆನಂದ ಕೋಟಿ ಹಣ ಕೊಟ್ಟರು ಸಿಗಲು ಸಾದ್ಯವಿಲ್ಲ.
ಅದಕ್ಕೆ ವಿಷವನ್ನಿತ್ತರೂ ಅದು ಮಾತ್ರ ನಮಗೆ ಅಮೃತವನ್ನೇ ನೀಡುತ್ತದೆ. ನಮ್ಮ ಜೀವನಕ್ಕೂ ಸೃಷ್ಟಿಯ ಸಮಸ್ತ ಜೀವ ಸಂಕುಲಕ್ಕೂ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಇದೊಂದು ತರ ಸರದ ಕೊಂಡಿಗಳಿದ್ದ ಹಾಗೆ ಒಂದು ಕೊಂಡಿ ತಪ್ಪಿ ಹೋದರೂ ಜೀವನ ಅಲ್ಲೋಲಕಲ್ಲೋಲ.
ಇನ್ನಾದರೂ ಎಚ್ಚೆತ್ತುಕೋ ಮಾನವ. ನಿನಗೆ ಬರಿದು ಮಾಡಲು ದಿನಗಳು ಬೇಕು. ಪ್ರಕೃತಿ ಮನಸ್ಸು ಮಾಡಿದರೆ ನಿನ್ನ ನಾಶಕ್ಕೆ ಕ್ಷಣಿಕ ಕಾಲಾವಕಾಶ ಸಾಕು. ಮುಂದೊಂದು ದಿನ ನಿನ್ನ ಮಕ್ಕಳಿಗೆ ನೀನು ಕೊಡಿಟ್ಟ ಹಣ ಪ್ರಯೋಜನಕ್ಕೆ ಬಾರದು. ಆಮ್ಲಜನಕನೇ ಇಲ್ಲ ಎಂದಾದ ಮೇಲೆ ಏನಿದ್ದರೆ ಏನು ಪ್ರಯೋಜನ?. ಪ್ರಕೃತಿಯು ಮಕ್ಕಳಿಗೆ ಬರೀ ಗೋಡೆಯಲ್ಲಿ ಕಾಣುವ ಚಿತ್ರವಾಗಬಹುದು.ಇನ್ನಾದರೂ ಪ್ರಕೃತಿಯ ಋಣ ತೀರಿಸುವ ಹೊಣೆ ನಮ್ಮ ಮೇಲಿದೆ. ಏನನ್ನಾದರೂ ಎಲ್ಲಿಂದ ಪಡೆಯುತ್ತೇವೆಯೋ ಅಲ್ಲಿಗೇ ಮರಳಿ ಕೊಡುವುದು ಮಾನವ ಧರ್ಮ. ಆ ಧರ್ಮಕ್ಕೆ ಬದ್ಧರಾಗೋಣ ಅಲ್ಲವೇ.
ಪ್ರಕೃತಿ ನಮ್ಮ ಉಸಿರು. ಪ್ರಕೃತಿ ನಮ್ಮ ತಾಯಿ.ಪ್ರಕೃತಿ ನಮ್ಮ ಕಣ್ಣಿಗೆ ಕಾಣುವ ದೇವರು.
ಸೌಮ್ಯ ನಾರಾಯಣ್