ಪರಿತಪಿಸುವರು ಕೆಲರು ಹಲ್ಲು ಮಸೆವರು ಕೆಲರು
ಪರಿಪರಿಯುಪಾಯಗಳ ಚಿಂತಿಪರು ಕೆಲರು
ಸೆರೆಯವಧಿ ಮುಗಿದಂದು ಸೇಡು ತೀರಿಸಿಕೊಳುವ
ಸೆರೆಯಾಳುಗಳು ಎನಿತೊ! || ಪ್ರತ್ಯಗಾತ್ಮ ||
ಉಂಡುಂಡು ತೇಗಿದರೆ ದಿಂಡುರುಳಿ ಮಲಗಿದರೆ
ಉಂಡಾಡಿಯಂತಿರಲು ಬಂದ ಫಲವೇನು?
ಭಂಡತನದಿಂ ಬಾಳ ನೂಕಿದರೆ ಬಂತೇನು?
ದಂಡಿಸೆಲೊ ಕಾಯವನು- || ಪ್ರತ್ಯಗಾತ್ಮ ||
ಸಂಜೆ ಮುಂಜಾನೆಯೊಳು ನಿದ್ರಿಸುವ ಮನೆಗಳಲಿ
ಗಂಜಿಗುಂ ಗತಿಯಿಲ್ಲದಾಗುವುದು ಸಹಜ,
ಕಂಜದಳ ನೇತ್ರೆಯಾ ಲಕುಮಿ ನೆಲೆಸಳು ಅಲ್ಲಿ
ಅಂಜಿ ಬಾಳಲೊ ನೀನು- || ಪ್ರತ್ಯಗಾತ್ಮ ||
ಅನ್ನದಗುಳಿನ ಮೇಲೆ ತಿನ್ನುವರ ಹೆಸರಿಹುದು
ಭಿನ್ನ ಭಾವನೆ ಬಿಟ್ಟು ಬಂದವಗೆ ಉಣಿಸು,
ನಿನ್ನ ಭಾಗದ ತಿನಿಸು ಬೇರೊಬ್ಬನುಣ್ಣುವುದು
ನಿನ್ನ ನೆನಪಿಗೆ ಬರದೆ?- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ ‘ನೇನಂಶಿ’
ವಾಚನ – ಗೌರಿ ದತ್ತ ಏನ್ ಜಿ