ಪ್ರತ್ಯಗಾತ್ಮ ಚಿಂತನ (ನೇನಂಶಿ) – 11

ಕೂಸು ತಿನ್ನಲು ತಂದ ರೊಟ್ಟಿ ಕಾಗೆಯ ಪಾಲು
ಕಾಸಿಟ್ಟ ಹಾಲನ್ನು ಬೆಕ್ಕು ಕುಡಿದಿತ್ತು,
ಲೇಸಾಯ್ತು ಆ ವಸ್ತು ನಿನ್ನದಲ್ಲವು ತಿಳಿಯೊ
ಬೇಸರವು ಅದಕೇಕೆ- || ಪ್ರತ್ಯಗಾತ್ಮ ||

ಕಳೆ ಕಿತ್ತು ಹೊಲದ ಬೆಳೆ ಕಾಪಿಡುವ ರೈತನೋಲ್
ಇಳೆಯ ಪಾಲಿಪ ರಾಜನಿರಬೇಕು ಜಗದಿ,
ಕೊಲೆ ಸುಲಿಗೆ ಕಳ್ಳತನ ಮಾಳ್ಪವರ ಶಿಕ್ಷಿಸುತ
ಸಲಹಿ ಕಾಪಿಡಬೇಕು- || ಪ್ರತ್ಯಗಾತ್ಮ ||

ಗುಡಿಸಿ ಸಾರಿಸಿ ಮತ್ತೆ ರಂಗವಲ್ಲಿಯನಿಟ್ಟು
ಸಡಗರದಿ ಬಾಗಿಲಿಗೆ ಕುಂಕುಮವನಿಟ್ಟು
ಮಡಿಯುಟ್ಟು ಶ್ರೀಮಾತೆ ತುಳಸಿ ಪೂಜೆಯ ಗೈವ
ಮಡದಿಯೇ ಸದ್‍ಗೃಹಿಣಿ- || ಪ್ರತ್ಯಗಾತ್ಮ ||

ಇಂದೇನೊ ಮುಂದೇನೊ ಕಾಂಬರಾರಿಹರಿಲ್ಲಿ ?
ಬಂದುದನು ಸಂತಸದಿ ಉಣ್ಣುತಿರಬೇಕು,
ಮಂದಹಾಸವ ಬೀರಿ ಬಂದ ಕಷ್ಟಗಳನ್ನು
ನಿಂದು ಎದುರಿಸಬೇಕು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’

ವಾಚನ – ಗೌರಿ ದತ್ತ ಏನ್ ಜಿ

Related post