ಪ್ರತ್ಯಗಾತ್ಮ ಚಿಂತನ (ನೇನಂಶಿ) – 12

ಆವ ಕೊಂಬೆಯ ಹೂವು ಆರ ಮುಡಿಗೋ ಕಾಣೆ !
ಆವ ನದಿ ನೀರಾವ ಹೊಲಗದ್ದೆಗಳಿಗೊ !
ಆವ ಪೆಣ್ಗಂಡುಗಳ ಒಲವು ಮತ್ತಾರಿಗೋ ?
ದೇವನೊಬ್ಬನೆ ಬಲ್ಲ- || ಪ್ರತ್ಯಗಾತ್ಮ ||

ಹುತ್ತ ಗೆದ್ದಲ ಗೂಡು; ರೊಟ್ಟಿ ಜೇನಿನ ಗೂಡು,
ಕತ್ತೆ ದುಡಿತವು ಅಷ್ಟೆ, ಅವಕಿಲ್ಲ ಲಭ್ಯ,
ಹುತ್ತ ಹಾವಿನ ಪಾಲು, ಜೇನು ಮನುಜರ ಪಾಲು
ಎತ್ತಣದ ನ್ಯಾಯವಿದು- || ಪ್ರತ್ಯಗಾತ್ಮ ||

ಕೂರುಗುರು, ಕೊಂಬುಗಳು, ಕೋರೆ ಹಲ್ಲಿನ ಪ್ರಾಣಿ,
ಕ್ರೂರಸರ್ಪಗಳಂಥ ವಿಷ ಜಂತುಗಳಲಿ
ಕೂರಿತಹ ಕೈದುಗಳ ಜೊತೆಗೆ ಸರಸವು ಬೇಡ.
ಮಾರಿಗೌತಣವದುವೆ- || ಪ್ರತ್ಯಗಾತ್ಮ ||

ಕತ್ತೆ ಕುದುರೆಯ ಹಿಂದೆ ಅಡ್ಡಾದಿರು ಜೋಕೆ
ಎತ್ತು ಹಸುಗಳ ಮುಂದೆ ಸಾರದಿರು ಮರೆತು
ಮತ್ತೆ ಹುತ್ತವನೇರಿ ಹೂ-ಪತ್ರೆ ಕೊಯ್ಯದಿರು
ಉತ್ತಮರ ನುಡಿ ಕೇಳು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’

Related post