ಪ್ರತ್ಯಗಾತ್ಮ ಚಿಂತನ (ನೇನಂಶಿ) – 14

ಅಟ್ಟದಿಂ ಬಿದ್ದವನ ದಡಿಯಿಂದ ಬಡಿಯದಿರು
ಮೊಟ್ಟಮೊದಲಿಗೆ ಅವನ ಸಾಂತ್ವಯಿಸಬೇಕು
ಪೆಟ್ಟು ಬಿದ್ದಿರಬಹುದು, ಅದನು ಪರಿಕಿಸಿ ನೋಡು
ಕೆಟ್ಟ ಮಾತಾಡದಿರು- || ಪ್ರತ್ಯಗಾತ್ಮ ||

ಸಾವಿಗಾಗಳುತಿರುವ ಸತ್ತ ಕೂಸಿನ ತಾಯ್ಗೆ
ಸಾವಧಾನದಿ ಬುದ್ಧ ಅವಳ ಸಂತೈಸಿ
ಸಾವು ಕಾಣದ ಮನೆಯ ಸಾಸಿವೆಯ ತಾರೆಂದ
ಸಾವಿರದ ಮನೆಯುಂಟೆ ?- || ಪ್ರತ್ಯಗಾತ್ಮ ||

ನೂರಾರು ಭವಬಾಧೆ ಇರಲಿ, ರಾಮಾಯಣದ
ಪಾರಾಯಣವ ಮಾಡು ಭಯಭಕ್ತಿಯಿಂದ
ತೂರಿ ಬಿಡುವುದು ಗಾಳಿ ಜಳ್ಳು ತೂರುವ ಹಾಗೆ
ತಾರಕೋಪಾಯವಿದು- || ಪ್ರತ್ಯಗಾತ್ಮ ||

ಅಂಬುಧಿಯ ನೀರ್ಕಾದು ಆವಿಯಾಗುವುದೆಂತು !
ಅಂಬರದ ಮೋಡದಲಿ ಅದು ನಿಲ್ವುದೆಂತು !
ತುಂಬಿ ತುಳುಕಿದ ನೀರು ಬುವಿಗೆ ಇಳಿಯುವುದೆಂತು !
ಅಂಬುಜಾಸನ ಬಲ್ಲ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’

Related post

Leave a Reply

Your email address will not be published. Required fields are marked *