ಪ್ರತ್ಯಗಾತ್ಮ ಚಿಂತನ (ನೇನಂಶಿ) – 17

ಗುರಿಯು ಹಿರಿಯದಾಗಿರಲಿ ತಲುಪದಿದ್ದರೂ ಸರಿಯೆ
ಕಿರಿಯ ಗುರಿ ತಲುಪಿದರೂ ಪ್ರತಿಫಲವು ಕಡಿಮೆ
ಹಿರಿಯ ಚೇತನವೆಲ್ಲ ಇದನೆ ಬೋಧಿಸುತಿಹವು
ಹಿರಿಮೆಗದು ಹೆಗ್ಗುರುತು- || ಪ್ರತ್ಯಗಾತ್ಮ ||

ಅಟ್ಟವೇರದ ಮನುಜ ಬೆಟ್ಟ ಏರುವನೇನು ?
ಮೆಟ್ಟಿಲನು ಒಂದೊಂದೆ ಹತ್ತಿ ಗುರಿ ಮುಟ್ಟು
ಮೊಟ್ಟಮೊದಲಿಗೆ ಕುಳಿತು ಆಮೇಲೆ ಮಲಗುವುದು
ಇಷ್ಟು ತಿಳಿದರೆ ಸಾಕು- || ಪ್ರತ್ಯಗಾತ್ಮ ||

ಯಾರ ನಾಮದ ಬಲದಿ ಕಡಲ ಜಿಗಿದನೊ ಹನುಮ
ಆ ರಾಮ ಅಂಬುಧಿಗೆ ಸೇತುವೆಯ ಕಟ್ಟಿ
ವೀರ ಲಕ್ಷ್ಮಣನೊಡನೆ ಕಡಲ ದಾಟಿದನಂತೆ !
ಯಾರ ಬಲ ಹೆಚ್ಚಾಯ್ತು?- || ಪ್ರತ್ಯಗಾತ್ಮ ||

ಉಟ್ಟ ಪಂಚೆಯು ಕಳಚಿ ಜಾರಿ ಬೀಳುತಲಿರಲು
ಥಟ್ಟೆಂದು ಕೈಗಳದ ಬಿಗಿದು ಕಟ್ಟುವುದು
ಕಷ್ಟದಲ್ಲಿರುವವಗೆ ತಾನೆ ನೆರವಾಗುವನು
ಶ್ರೇಷ್ಠ ಮಟ್ಟದ ಗೆಳೆಯ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯನೇನಂಶಿ’

Related post

Leave a Reply

Your email address will not be published. Required fields are marked *