ಪ್ರತ್ಯಗಾತ್ಮ ಚಿಂತನ (ನೇನಂಶಿ) – 20

ಕಾಸಿರಲು ಕೈಯಲ್ಲಿ ದುಂದುವೆಚ್ಚವು ಬೇಡ
ಹಾಸಿಗೆಯು ಇದ್ದಷ್ಟು ಕಾಲುಗಳ ಚಾಚು
ಕಾಸು ಗಳಿಸಲು ಪಟ್ಟ ಪಾಡುಗಳ ನೆನೆಯುತ್ತ
ಕಾಸಿಗಿಹ ಬೆಲೆಯರಿಯೊ- || ಪ್ರತ್ಯಗಾತ್ಮ ||

ಹಣವು ಕೈಯೊಳಗಿರಲು ಸುಮ್ಮನಿರುವುದೆ ಮನವು?
ಮನವು ಚಂಚಲ ಕಪಿಯು ಅದ ನಂಬಬೇಡ
ಹಣವ ಬ್ಯಾಂಕಿನಲಿರಿಸು ಬಡ್ಡಿ ಬೆಳೆವುದು ಮತ್ತೆ
ಮನೆಯವರ ರಕ್ಷಿಪುದು- || ಪ್ರತ್ಯಗಾತ್ಮ ||

ಕಿರು ಹಣತೆ ಜ್ಯೋತಿಯನು ಕಿರಿದೆನ್ನಬಹುದೇನು ?
ಇರುಳ ಕಗ್ಗತ್ತಲಿನ ಕೋಣೆಗದು ಸಾಕು
ಇರುವೆಡೆಯೆ ಕೈಲಾದುದನಿತೆಸಗು; “ಕೊರಗದಿರು”
ಕಿರಿದೆನ್ನದಿರು ಸೇವೆ- || ಪ್ರತ್ಯಗಾತ್ಮ ||

ಪೊಡವಿ ಲಿಂಗದ ಮೇಲೆ ನಭದ ಧಾರಾಪಾತ್ರೆ
ಎಡೆಬಿಡದೆ ಸುರಿವ ಮಳೆ ಕುಂಭಾಭಿಷೇಕ,
ಗುಡುಗು ಘಂಟಾಘೋಷ; ಮಿಂಚು ಪಂಚಾರತಿಯು
ಸಿಡಿಲು ಜಾಗಟೆ ರವವು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ

Related post

Leave a Reply

Your email address will not be published. Required fields are marked *