ಚುಚ್ಚು ಮಾತುಗಳಿಂದ ಅನ್ಯಾಯದಿಂ ಜರೆದು
ತುಚ್ಛನೊಬ್ಬನು ನಿನ್ನ ಮನವ ನೋಯಿಸಲು
ಕೊಚ್ಚಿ ಬಿಡುವೆನು ಎಂದು ಅಬ್ಬರಿಸಿ ಗುಡುಗಿ ಬಿಡು
ಕಚ್ಚದಿರು ಬುಸ್ಸೆನ್ನು- || ಪ್ರತ್ಯಗಾತ್ಮ ||
ಧರಣಿ ತಿರುಗುವುದಿಲ್ಲ ಸೂರ್ಯ ತಿರುಗುವನೆಂದು
ಮರಣ ಭೀತಿಯ ತೋರೆ ಗೆಲಿಲಿಯೋ ನುಡಿದ
ಅರೆಬರೆಯ ಹುಚ್ಚರಿಗೆ ವಿಜ್ಞಾನಿಗುಂ ಸೋಲು,
ಅರಿವುಳ್ಳವನು ಸೋಲ್ವ- || ಪ್ರತ್ಯಗಾತ್ಮ ||
ಮಾಗಿಯೊಳು ಸೆಕೆ ಎನಲಿ, ಕಾಗೆಯನು ಬಿಳುಪೆನಲಿ,
ಸಾಗರವು ಹರಿಯುವುದು ಎಂದೆನಲಿ ಕೂಗಿ
ಹೀಗೆಯೇ ಏನೇನೊ ನುಡಿವ ಮೂರ್ಖರ ನುಡಿಗೆ
ರೇಗದಿರು; ಸುಮ್ಮನಿರು- || ಪ್ರತ್ಯಗಾತ್ಮ ||
ಅನ್ನದಗುಳನು ಕಂಡು ಕಾಗೆ `ಕಾ’ ಎನ್ನುವುದು,
ತನ್ನ ಬಳಗವ ಕರೆದು ಕೂಡಿ ತಿನ್ನುವುದು,
ತನ್ನ ಹೊಟ್ಟೆಯ ಮಾತ್ರ ತುಂಬಿಕೊಳ್ಳುವೀ ನರನ
ಸಣ್ಣತನ ನೋಡಯ್ಯ – || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ