ಪರಮಾತ್ಮ ಸೃಷ್ಟಿಯೊಳು ಹಿರಿದು ಮಾನವ ಜನ್ಮ
ನರನಾಗಿ ಜನಿಸಿದವ ಗುರುವಾಗಬಹುದು
ಗುರುವೇನು? ಅಮರತ್ವ ಪದವಿಗೇರಲು ಬಹುದು
ನರನು ಅಮರರ ಅಂಶ- || ಪ್ರತ್ಯಗಾತ್ಮ ||
ಸರಿತಪ್ಪುಗಳ ಅರಿವು ನರನಿಗಷ್ಟೇ ಉಂಟು
ಪರರ ದುಃಖವನರಿವ ಅನುಕಂಪೆಯುಂಟು
ನೆರೆ ಹೊರೆಯ ಜನರೊಡನೆ ಸಹಕಾರವಿಲ್ಲುಂಟು
ಬದಲಾವಣೆ ಕುರಿ ಕೋಳಿಗೇನುಂಟು- || ಪ್ರತ್ಯಗಾತ್ಮ ||
ಮಗಮಗಿಪ ಮಲ್ಲಿಗೆಯ ಬಚ್ಚಿಟ್ಟರೇನಂತೆ
ಸೊಗಸಾದ ಪರಿಮಳವ ಸುತ್ತ ಸೂಸುವುದು
ಸುಗುಣಶಾಲಿಯು ನಾಡ ಮೂಲೆಯೊಳಗಿರಲೇನು?
ಜಗದ ಮನ್ನಣೆ ಪಡೆವ- || ಪ್ರತ್ಯಗಾತ್ಮ ||
‘ತಿಳಿ’ ನೀನು ಈ ಜಗದ ಎಲ್ಲ ವಿದ್ಯೆಗಳನ್ನು
‘ಕಳೆ’ ನೀನು ಅದರೊಳಗೆ ತ್ಯಾಜ್ಯವೆಂಬುದನು
‘ಉಳಿಸಿಕೊ’ ನಿನಗಾವುದುಚಿತವೆಂಬುದನರಿತು
ತಿಳಿವಳಿಕೆ ಮರ್ಮವಿದು- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ ‘ನೇನಂಶಿ