ಪ್ರತ್ಯಗಾತ್ಮ ಚಿಂತನ (ನೇನಂಶಿ) – 24

ತಲೆ ಎತ್ತಿ ‘ಮೃಗರಾಜ’ ಪದವಿ ಪಡೆಯಿತು ಸಿಂಹ
ತಲೆಯ ತಗ್ಗಿಸಿ ಕುರಿಯು `ಕುರಿಯೆ’ ಆಗಿಹುದು
ತಲೆಯೆತ್ತಿ ಧೈರ್ಯದಿಂ ನುಗ್ಗಿದವನಿಗೆ ಜಯವು
ಚಳಿಬಿಟ್ಟು ಮುನ್ನುಗ್ಗು- || ಪ್ರತ್ಯಗಾತ್ಮ ||

ಕಾಲ ಮರುಭೂಮಿಯಲಿ ಹೆಜ್ಜೆ ಇಕ್ಕುತ ನಡೆಯೊ
ಬಾಳ ಬಟ್ಟೆಯ ನಡೆದು ಬಸವಳಿದ ಪಥಿಕ
ನಾಳೆ ಯಾವನೊ ನಿನ್ನ ಹೆಜ್ಜೆ ಗುರುತನು ಹಿಡಿದು
ಬಾಳ ಪಥ ಸಾಗಿಸುವ- || ಪ್ರತ್ಯಗಾತ್ಮ ||

ಒಂದು ಗೊತ್ತಾದ ಸರಿ ದಾರಿಯನು ಹಿಡಿದು ನಡೆ
ಹಿಂದೆ ಹೆಜ್ಜೆಯ ಗುರುತು ಬಿಟ್ಟು ನಡೆ ಮುಂದೆ
ಎಂದಾದರೊಂದು ದಿನ ದಾರಿ ತಪ್ಪಿದ ಜನಕೆ
ಮುಂದೆ ನೆರವಹುದೇನೊ – || ಪ್ರತ್ಯಗಾತ್ಮ ||

ತನ್ನ ಕಾರ್ಯವ ತಾನೆ ಮಾಳ್ಪುದುತ್ತಮವಂತೆ
ಇನ್ನು ಅರೆಬರೆ ಕೆಲಸ ಮಗ ಮಾಳ್ಪುದಂತೆ
ಅನ್ಯನಾಗಿಹ ಆಳು ಮಾಡುವುದು ಹಾಳಂತೆ
ಚೆನ್ನಾಗಿ ನೆನಪಿರಲಿ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ

ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *