ರೂಪಕದ ಸೊಗಸಿಂಗೆ ಕವಿ ಕುಮಾರವ್ಯಾಸ
ಉತ್ಪ್ರೇಕ್ಷೆ ಷಡಕ್ಷರದೇವನಿಗೆ ಸಿದ್ಧಿ
ಹಂಪ ಕವಿಯೂಳು ಕಾಣು ಅರ್ಥಾಂತರನ್ಯಾಸ
ಉಪಮೆ ಲಕ್ಮೀಶನೊಳು- || ಪ್ರತ್ಯಗಾತ್ಮ ||
ಜುಟ್ಟು ಹಿಡಿದೆಳದಾಡಿ ತಂದೆ ಅಣ್ಣನ ಬಡಿಯೆ
ಪುಟ್ಟ ಮಗು ಹೆದರುವುದು ಕಿಟ್ಟೆಂದು ಚೀರಿ
ಗಟ್ಟಿತನವವಕಿಲ್ಲ ರೌದ್ರತೆಗೆ ಹೆದರುವುವು
ಪುಟ್ಟ ಮಕ್ಕಳೆ ಹಾಗೆ- || ಪ್ರತ್ಯಗಾತ್ಮ ||
ನೂರು ಜನ ಮೌರ್ಯರಲಿ ಚಂದ್ರಗುಪ್ತನು ಉಳಿದ
ಕ್ರೂರ ದಾಯಾದಿಗಳ ಕೋಟಲೆಗೆ ಸಿಲುಕಿ
ಹಾರುವನ ದಯೆಯಿಂದ ರಾಜ್ಯ ಕೋಶವ ಪಡೆದ
ಯಾರ ನೆರವಿಗೆ ಯಾರೊ !- || ಪ್ರತ್ಯಗಾತ್ಮ ||
ನೂರು ಕೌರವರೊಳಗೆ ಅದಟ ದುರ್ಯೋಧನನು
ನೂರು ಗಾಂಧಾರರೊಳು ಶಕುನಿ ಅತಿ ಚತುರ
ನೂರು ಜನ ಮೌರ್ಯರೊಳು ಚಂದ್ರಗುಪ್ತನು ವೀರ
ನೂರರೊಳಗೊಬ್ಬನೆಯೆ !- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ (ನೇನಂಶಿ)
ತುಮಕೂರು