ಪ್ರತ್ಯಗಾತ್ಮ ಚಿಂತನ (ನೇನಂಶಿ) – 26

ಮಲರುಗಳ ಮಕರಂದ ಹೀರಿ ಜೇನನು ಮಾಡಿ
ನಲವಿಂದ ನೀಡಿಹುದು ದುಂಬಿ ಸವಿ ಅದನು
ಹಳಿಯದಿರು ನೀನದನು ದುಂಬಿ ಎಂಜಲು ಎಂದು
ತಿಳಿ ಎಂಜಲೆಲ್ಲಿಲ್ಲ ! || ಪ್ರತ್ಯಗಾತ್ಮ ||

ಕರುವಿನೆಂಜಲು ಹಾಲು, ದುಂಬಿ ಎಂಜಲು ಜೇನು
ಮಿರುಮಿರುಗುವಾ ರೇμÉ್ಮ ಹುಳವೆಂಜಲಲ್ತೆ
ಹಿರಿಹಿಗ್ಗಿ ಒಲಿದೀವ ಅಕ್ಕರೆಯ ಮುತ್ತುಗಳು
ಬರಿ ಎಂಜಲಲ್ಲೇನು?- || ಪ್ರತ್ಯಗಾತ್ಮ ||

ಕಣ್ಣು ಕಾಣದ ಕುರುಡ ವಿಧವೆಯೊಬ್ಬಳ ವರಿಸಿ
ಬನ್ನ ಪಟ್ಟನು ನೂರು ಮಕ್ಕಳನು ಹೆತ್ತು
ಕಣ್ಣು ಎಂಬುದೆ ಅರಿವು; ಅದುವೆ ಇಲ್ಲದ ಮೇಲೆ
ಇನ್ನು ಸುಖವೆಲ್ಲಿಯದು- || ಪ್ರತ್ಯಗಾತ್ಮ ||

ಸೋಲ ಬಯಸುವ ಮನುಜ ಬುವಿಯೊಳಗೆ ಇಹನೇನು?
ಸೋಲ ಬಯಸನೆ ತಂದೆ ತನ್ನ ಮಗನಿಂದ?
ಸೋಲ ಬಯಸನೆ ಗುರುವು ತನ್ನ ಶಿಷ್ಯನ ಎದುರು?
ಸೋಲು ಗೆಲುವಲ್ಲವೇ?- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ತುಮಕೂರು

Related post

Leave a Reply

Your email address will not be published. Required fields are marked *