ಪ್ರತ್ಯಗಾತ್ಮ ಚಿಂತನ (ನೇನಂಶಿ) – 28

ಎತ್ತು ಕೋಣಗಳಲ್ಲಿ ಮೂಗುದಾರದ ಬಳಕೆ
ಕುತ್ತಿಗೆಗೆ ಹಗ್ಗ, ಬಾಯ್ ಬೀಗ ಕೆಲವಕ್ಕೆ
ಹಸ್ತಿಗಂಕುಶ ಚುಚ್ಚಿ ದುಡಿಸಿಕೊಳ್ಳುವೀ ಬುದ್ಧಿ-
ಮತ್ತೇ ನರನಿಗೆ ಮಾತ್ರ- || ಪ್ರತ್ಯಗಾತ್ಮ ||

ಕವಿ ಚುರುಕು ಕುರುಡಂಗೆ, ಅಂತೆ ಸ್ಪರ್ಶಜ್ಞಾನ
ಕಿವುಡುನಿಗೆ ಕಣ್ ಚುರುಕು ಗಮನಿಸಿರಬೇಕು
ಅವರಿವರ ಕೈ ಬಾಯ ಸನ್ನೆಯರಿವನು ಮೂಗ
ಇವರು ಯಾರಿಗೆ ಕಡಿಮೆ ? || ಪ್ರತ್ಯಗಾತ್ಮ ||

ಕಣ್ಣಂತೆ ಕುರುಡಂಗೆ ಕೈ ಕಾಲು ಕಿವಿಗಳೆಯೆ
ಸನ್ನೆ ಕೈ ಬಾಯ್ಗಳದೆ ಮಾತು ಮೂಗನಿಗೆ,
ಕಣ್ಣೆ ಕಿವಿ ಕಿವುಡನಿಗೆ, ಹೆಳವನಿಗೆ ಕೈಯೆ ಕಾಲ್,
ಅನ್ಯೋನ್ಯ ಸಹಕಾರ- || ಪ್ರತ್ಯಗಾತ್ಮ ||

ಸ್ವರಗಳೇಳೇ ಏಳು ಸಂಗೀತ ಶಾಸ್ತ್ರದಲಿ
ಪರಿ ಪರಿಯ ರಾಗಗಳು ಲೆಕ್ಕವುಂಟೇನು ?
ಎರಡು ಧಾಟಿಯು ಬೇರೆ – ದಕ್ಷಿಣೋತ್ತರವೆಂದು
ಅರಿವ ಬಗೆ ಇನ್ನೆಂತೊ !- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *