ಪ್ರತ್ಯಗಾತ್ಮ ಚಿಂತನ (ನೇನಂಶಿ) – 30

ತನ್ನ ಮತ ಧರ್ಮಗಳ ಪಾಲಿಸದೆ ಇದ್ದವನು
ಅನ್ಯ ಮತ ಧರ್ಮಗಳ ಗೌರವಿಪನೆಂತು?
ತನ್ನ ತಾಯಿಗೆ ಕೊಡದ ಗೌರವವ, ಕೊಡುವನೇ
ಅನ್ಯ ಮಾತೆಗೆ ? ಹೇಳು- || ಪ್ರತ್ಯಗಾತ್ಮ ||

ತಾಯಿಯೇ ಮೊದಲ ಗುರು; ಮನೆಯೆ ಮೊದಲ ಶಾಲೆ
ತಾಯಿ ನುಡಿ ನಿನ್ನ ನುಡಿ; ಅವಳೆ ಶ್ರೀರಕ್ಷೆ
ತಾಯಿ ವಾತ್ಸಲ್ಯದಲಿ ಬೆಳೆದ ಮಕ್ಕಳೆ ಧನ್ಯ
ತಾಯಿ ಪ್ರೇಮದ ಮೂರ್ತಿ- || ಪ್ರತ್ಯಗಾತ್ಮ ||

ತಾಯಂದಿರುಗಳೆಲ್ಲ ತಮ್ಮ ಮಕ್ಕಳ ಕರೆದು
ಬಾಯಿ ಪಾಠವ ಹೇಳಿ ಕೊಡುತಿದ್ದುದುಂಟು
ತಾಯಿ ಕಲಿಸಿದ ವಿದ್ಯೆ ಆಜೀವ ಪರ್ಯಂತ
ಮಾಯವಾಗಿದೆ ಇಂದು ! – || ಪ್ರತ್ಯಗಾತ್ಮ ||

ಹೊಟ್ಟೆ ಪಾಡಿಗೆ ದುಡಿವ ಮನುಜನಿಗೆ ಬಿಡುವಿಲ್ಲ
ಬಟ್ಟೆ ಬರೆ ತೊಡುವುದಕು ವ್ಯವಧಾನವಿಲ್ಲ
ಅಟ್ಟಿಟ್ಟ ಹಸಿಬಿಸಿಯನಿನಿತು ಗಬಗಬ ತಿಂದು
ನಿಟ್ಟೋಟ ಓಡುವನು – || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *