ಸಾವಧಾನದಿ ಕುಳಿತು ಉಣ್ಣುವರ ನಾ ಕಾಣೆ
ಯಾವುದೋ ಧಾವಂತ ಯಾವುದೋ ಚಿಂತೆ
ಯಾವ ಪುರುಷಾರ್ಥಕ್ಕೆ ಈ ಪರಿಯ ದುಡಿಮೆ!
ಯಾವ ಕಾಲಕೆ ಬಿಡುವು_ || ಪ್ರತ್ಯಗಾತ್ಮ ||
ಎರಡು ಕೈಗಳ ಬಳಸಿ ಕೋತಿಗಳು ಮುಕ್ಕುವುವು
ಸರಸರನೆ ಹಕ್ಕಿಗಳು ಕುಕ್ಕಿ ತಿನ್ನುವುವು
ಗುರುಗುಟ್ಟಿ ಅತ್ತಿತ್ತ ನೋಡಿ ತಿಂಬುದು ನಾಯಿ
ನರನಿದಕೆ ಹೊರತೇನು? || ಪ್ರತ್ಯಗಾತ್ಮ ||
ಹಕ್ಕಿಗಳು ತಮ್ಮವರನೊಂದು ಚಣವಗಲಿರವು
ಅಕ್ಕರೆಯೊಳೊಂದಾಗಿ ಒಲವ ತೋರುವುವು
ರೊಕ್ಕ ಸಂಪಾದನೆಗೆ ನರನು ಅಲೆಯುತ ಮಡದಿ-
ಮಕ್ಕಳನು ಅಗಲುವನು- || ಪ್ರತ್ಯಗಾತ್ಮ ||
ಇರುಳಿನಲಿ ವಿಶ್ರಮಿಸಿ ಪ್ರಾಣಿ ಪಕ್ಷಿಗಳೆಲ್ಲ
ಇರುವನಿತು ಕಾಲವನು ಸುಖಿಸಿ ಬಾಳುವುವು
ಇರುಳು ಹಗಲೆನ್ನದೆಯೆ ದುಡಿದು ಬಳಲುತ್ತಿರುವ
ನರರ ಬಾಳ್ ನರಕವೈ – || ಪ್ರತ್ಯಗಾತ್ಮ ||
ಎನ್ ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ