ಅತಿ ವಿನಯದಿಂ ನಮಿಪ ದುರ್ಜನನ ನಂಬದಿರು
ಕಿತವನಹಿ ಮಿತ್ರನನು ನಂಬದಿರಬೇಕು
ಅತಿ ಕುಲಟೆ ಪತ್ನಿಯನು ದಿಟದೆ ನೀ ನಂಬದಿರು
ಮೃತಿ ನಿನಗೆ ನಂಬಿದರೆ- || ಪ್ರತ್ಯಗಾತ್ಮ ||
ಬಡಪಾಯಿ ಜಿಂಕೆಗಳ ವ್ಯಾಧ ಬಿಡದೆಯೆ ಕೊಲುವ
ಜಲಚರ ಮೀನುಗಳ ಬೆಸ್ತರವ ಹಿಡಿವ
ಮುಗುದ ಸಜ್ಜನರ ದುರ್ಜನನು ಹಿಂಸಿಸುವ
ಬಿಡದಿವರ ಕಾಯ್ವರಾರ್? – || ಪ್ರತ್ಯಗಾತ್ಮ ||
ಹೊಟ್ಟೆ ಹೊರೆಯುವುದಕ್ಕೆ ಬೇಟೆಯಾಡಲೆ ಬೇಕು
ಪಟ್ಟಿ ಹುಲಿಗಾವುದೇ ಕಾಡಾದರೇನು ?
ರಟ್ಟೆ ಬಲವಿದ್ದು ದುಡಿದು ಜೀವಿಸುವವಗೆ
ಹುಟ್ಟಿದೂರೇ ಏಕೆ ? – || ಪ್ರತ್ಯಗಾತ್ಮ ||
ದಿನಸಿ ಬೆಲೆಗಳು ಏರೆ ಧನಿಕರದ ಚಿಂತಿಸರು
ದಿನಗೂಲಿಯಾಳುಗಳಿಗಾ ಪರಿವೆ ಇಲ್ಲ
ದಿನವೆಣಸಿ ಸಂಬಳವ ಪಡೆದು ಜೀವಿಸುವಂಥ
ಜನರು ತತ್ತರಿಸುವರು- || ಪ್ರತ್ಯಗಾತ್ಮ ||
ಎನ್ ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ