ಪ್ರತ್ಯಗಾತ್ಮ ಚಿಂತನ (ನೇನಂಶಿ) – 34

ಹಾದಿ ಬೀದಿಯ ನಡುವೆ ಕಲಹಕ್ಕೆ ಇಳಿಯದಿರು
ಓದು ಬರೆಹವ ಬಲ್ಲರೊಡನೆ ಕಾದದಿರು
ಐದಾರು ಜನರಿರುವ ಜನ ಸಂದಣಿಯಲ್ಲಿ
ವಾದಿಸದೆ ಸುಮ್ಮನಿರು- || ಪ್ರತ್ಯಗಾತ್ಮ ||

ಹುಟ್ಟು ದೈವಾಯತ್ತ; ಬಯಕೆ ಪುರುಷಾಯತ್ತ
ಹುಟ್ಟಿದ್ದನೆಂಬುದಕೆ ಕುರುಹು ಬಿಡಬೇಕು
ಅಟ್ಟು ಉಂಡರೆ ಸಾಕೆ ? ಸೃಷ್ಟಿಸೈ ಹೊಸತೊಂದು,
ಹುಟ್ಟು ಸಾರ್ಥಕ ವಹುದು- || ಪ್ರತ್ಯಗಾತ್ಮ ||

ಹತ್ತಾರು ಮಕ್ಕಳನು ತಾಯ್ತಂದೆ ಸಾಕುವರು
ಹತ್ತು ಮಕ್ಕಳು ಕೂಡಿ ಅವರ ಸಾಕುವರೆ ?
ಮುತ್ತಿನಂತಹ ಮಡದಿ ಮನೆಗೆ ಬಂದಿರುವಾಗ
ಹೆತ್ತವರ ಮಾತೇಕೆ?- || ಪ್ರತ್ಯಗಾತ್ಮ ||

ಹಳೆಯದಿದು ಹಾಳೆಂದು ಹಳೆಯದಿರು ಓ ಜಾಣ !
ಹಳೆಯಲ್ಲವೆ ಮರವು ಕಣ್ ಬಿಟ್ಟು ನೋಡು
ನಳನಳಿಸಿ ಚಿಗುರೊಡೆದು ಹೂ ಹಣ್ಣುಗಳ ಕೊಡಲು
ಹಳೆಯ ಬೇರಿರಬೇಕು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *