ಪ್ರತ್ಯಗಾತ್ಮ ಚಿಂತನ (ನೇನಂಶಿ) – 36

ಊನವಾಗಿಹ ಒಂದು ಅಂಗಕ್ಕೆ ಎಷ್ಟು ಬೆಲೆ ?
ಏನು ಮಾಡಿದರೇನು ಅದು ಕೃತಕವಷ್ಟೇ!
ನಿನ್ನ ಅಂಗಾಂಗಗಳೆ ಕೋಟಿ ಹೊನ್ನಿಗು ಮಿಗಿಲು
ಇನ್ನು ನೀ ಬಡವನೇಂ? – || ಪ್ರತ್ಯಗಾತ್ಮ ||

ಒಡಲೆಂಬ ಒಡವೆಯನು ಪಡೆದಿದ್ದರೂ ಕೆಲರು
ಬಡವನೆನ್ನುತ ಕೈಯ ಚಾಚುವರು ಬಾಗಿ
ಬಡವನೆಂಬುದೆ ಸಲ್ಲ; ಅಂಗವಿಕಲನೆ ಬಡವ
ದೃಢಕಾಯ ಸಂಪತ್ತು- || ಪ್ರತ್ಯಗಾತ್ಮ ||

ನಿನ್ನ ವಂಶದ ಮೂಲ ಪುರುಷರಾರೆಂಬುದನು,
ನಿನ್ನ ಬುಡಕಟ್ಟು ಶಾಖೆಗಳ ತಿಳಿಯೆ
ಇನ್ನು ತಡಮಾಡದೆಯೆ ವಂಶವೃಕ್ಷವ ಬರೆದು
ಚೆನ್ನಾಗಿ ಕಾಪಾಡು- || ಪ್ರತ್ಯಗಾತ್ಮ ||

ತಾಳೆಗರಿ ಗ್ರಂಥ ಮೇಣ್ ತಾಮ್ರ ಶಾಸನಗಳನು
ಜಾಳು ಜಾಳಾಗಿರುವ ಹಳೆ ಕಡತಗಳನು
ಬೀಳುಗಳೆಯದೆ ಜತನ ಮಾಡು ಅವುಗಳನೆಲ್ಲ
ನಾಳೆ ಬಹ ಪೀಳಿಗೆಗೆ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶೀ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *