ಪ್ರತ್ಯಗಾತ್ಮ ಚಿಂತನ (ನೇನಂಶಿ) – 37

ಮುಳ್ಳುಗಿಡಗಳ ನಡುವೆ ಹಳೆಯ ಗುಡಿ ಗೋಪುರವು
ಎಲ್ಲಿಯಾದರೂ ಮಾಸ್ತಿ-ವೀರಗಲ್ಲುಗಳು
ಕಲ್ಲು ಶಾಸನ ನಿಮ್ಮ ಊರಬಳಿ ಇರಬಹುದು
ಎಲ್ಲವನು ಕಾಪಾಡು- || ಪ್ರತ್ಯಗಾತ್ಮ ||

ಗಾಳಿ ಹೊಡೆತಕೆ ಸಿಲುಕಿ ಮನೆದೀಪ ನಂದಿರಲು
ಕಾಳ ಕತ್ತಲೆ ಕವಿಯೆ ಮತ್ತೆ ಬೆಳಗಿಸರೆ?
ಬಾಳ ಗೆಳತಿಯು ಮಡಿಯೆ ಬೇರೊಬ್ಬಳನು ತಂದು
ಬಾಳ ಬೆಳಗಿಸದಿಹರೆ ?- || ಪ್ರತ್ಯಗಾತ್ಮ ||

ನೂರಾರು ಶಾಸ್ತ್ರಗಳು ನೂರು ಬಗೆ ಹೇಳುವುವು
ನೂರು ಗೋಜಲು ಗಂಟು ಶಾಸ್ತ್ರಿಗಳ ತರ್ಕ
ಯಾರ ಗೊಡೆವೆಯೂ ಬೇಡ ನಮ್ಮ ಹಿರಿಯರು ನಡೆದ
ದಾರಿಯೇ ಒಳ್‍ದಾರಿ- || ಪ್ರತ್ಯಗಾತ್ಮ ||

ಸುದತಿಯರ ಸೌಂದರ್ಯ, ಶೃಂಗಾರ ವೈವಿದ್ಯ
ಎದೆ-ನಡುವಿನಲುಗಾಟ, ಹೂ ಹೆಜ್ಜೆ ನಡಿಗೆ
ಮದನಿಕೆಯ ಮೈ ಮಾಟ, ಕಣ್ ಹೊಳಹುಗಳ ಕಾಂಬ
ಹೃದಯವಂತಿಕೆ ಬೇಕು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *