ಗಿಡದೊಳಗೆ ಹೂವಿರಲು ಕಂಡು ಆನಂದಪಡು
ಬಿಡದೆ ಪರಿಮಳ ಸೂಸೆ ಆಘ್ರಾಣಿಸದನು
ಗಿಡದಿ ಹೂವಿರಲಿ ಬಿಡು, ಕಿತ್ತು ಮುಡಿಯಲು ಬೇಡ
ಬಿಡು ಸ್ವಾರ್ಥ ಭಾವನೆಯ- || ಪ್ರತ್ಯಗಾತ್ಮ ||
ಎದೆಯ ಬಡಿತವೆ ದೇಹದೆಲ್ಲ ಕ್ರಿಯೆಗಳ ಮೂಲ
ಮದು ಮಕ್ಕಳೇ ಮೂಲ ಮದುವೆ ಮನೆಗೆಲ್ಲ
ಸುದತಿಯರ ಸಂತಸಕೆ ಸಂತಾನವೇ ಮೂಲ
ಮದವೆ ಕೆಡುಕಿನ ಮೂಲ- || ಪ್ರತ್ಯಗಾತ್ಮ ||
ಕ್ರಿಮಿ-ಕೀಟ-ಪಶು-ಪಕ್ಷಿ ಜೀವರಾಶಿಗಳೆಲ್ಲ
ಸಮಯ ಸಮಯದಿ ಹೆಣ್ಣು ಗಂಡುಗಳು ಕೂಡಿ
ತಮ್ಮ ಸಂತಾನವನು ಬೆಳೆಸಿಕೊಳುವೀ ಅರಿವು
ಅಮಮ! ಏಂ ದೈವಿಕವೊ !- || ಪ್ರತ್ಯಗಾತ್ಮ ||
ನೀರು ನೆಲ ಒಂದೆ ಬಗೆ; ಹಣ್ಣುಗಳ ರುಚಿ ಬೇರೆ
ನೂರು ಬಣ್ಣದ ಹೂವು; ಗಿಡದ ಹಸಿರೊಂದೆ
ನೂರು ಬಗೆ ಸಿಹಿಯುಂಟು, ನೂರು ಬಗೆ ಹುಳಿಯುಂಟು
ಯಾರರಿವರೆಂತಾಯ್ತೊ !- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ