ಮೂಡಿ ಬಹ ದಿನಮಣಿಯ ಬ್ರಹ್ಮ ರೂಪನು ಕಾಣ
ನಡುನೆತ್ತಿ ಮೇಲಿರುವ ಸೂರ್ಯ ಶಿವ ತಾನು,
ಪಡುವಣದ ಕಡೆಗಿಳಿವ ಸೂರ್ಯ ಸಾಕ್ಷಾತ್ ವಿಷ್ಣು
ನೋಡಿವನೆ ತ್ರೈಮೂರ್ತಿ- || ಪ್ರತ್ಯಗಾತ್ಮ ||
ವಿಶ್ವದೇವನ ವರ್ಣಮಾಲೆಯನು ಕಂಡಾಗ
ಹ್ರಸ್ವನಾನಾಗುವೆನು ದೀರ್ಘ ಚಿಂತನದೆ|
ವಿಶ್ವ ಪ್ರಕೃತಿಯ ಭಾವ ಎಂದೆಂದು ಅವ್ಯಯವು
ವಿಶ್ವಾತ್ಮನಿಗೆ ಶರಣು – || ಪ್ರತ್ಯಗಾತ್ಮ ||
ಋಷಿಯಲ್ಲದವರಾರೂ ಕವಿಯಾಗಲಾರರೈ
ಋಷಿಯ ಅಂಶವು ಬೇಕು ಕಾವ್ಯಕರ್ಮಕ್ಕೆ
ಋಷಿಯ ತಪಸ್ ಸಾಧನೆಯು, ಸಿದ್ಧಿ ಮೇಣ್ ದರ್ಶನವು
ರಸಋಷಿಗಿದತಿಮುಖ್ಯ- || ಪ್ರತ್ಯಗಾತ್ಮ ||
ಯಾವಾಗ ಬರುವಳೋ ಯಾವಾಗ ಹೋಗುವಳೋ
ಭಾವದೇವಿಯು ತಾನು ನಾ ಹೇಳಲಾರೆ,
ಆವ ಸಮಯದಿ ಎನ್ನ ಕೈಯಿಂದ ಬರೆಯಿಪಳೊ
ಆ ವಿಚಾರವನರಿಯೆ- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ ‘ನೇನಂಶಿ’
ವಾಚನ – ಗೌರಿ ದತ್ತ ಏನ್ ಜಿ