ಹನಿಗೂಡಿದರೆ ಹಳ್ಳ ತೆನೆಗೂಡಿದರೆ ಬಳ್ಳ
ಅಣುವಿನಿಂದೇನೆಂದು ಸಲ್ಲದು ಉಪೇಕ್ಷೆ
ಇನಿತಾದರೂ ಉಳಿಸಿ ಹಣವನೊಂದಡೆ ಇರಿಸು
ಘನ ನಿಧಿ ಭವಿಷ್ಯಕ್ಕೆ- || ಪ್ರತ್ಯಗಾತ್ಮ ||
ಇರುಳ ಕಾರ್ಗತ್ತಲಲಿ ದಾರಿ ತಪ್ಪಿದವಂಗೆ
ಸರಿದಾರಿ ತೋರುವುದು ಕೋಲ್ಮಿಂಚು ಬೆಳಗಿ
ಕೊರಗದಿರು ನೀಗೈದ ಸೇವೆ ಅಲ್ಪವದೆಂದು
ಕಿರಿದೆ ಅಳಿಲಿನ ಸೇವೆ ?- || ಪ್ರತ್ಯಗಾತ್ಮ ||
ಕೊಳಲಿನಿಂಚರ ಕೇಳಿ ತಲೆದೂಗದವರುಂಟೆ ?
ಉಲಿವ ವೀಣೆಯ ದನಿಗೆ ಸೋಲದವರುಂಟೆ ?
ಎಳೆಯ ಮಕ್ಕಳ ಮುದ್ದು ತೊದಲು ಮಾತನು ಕೇಳಿ
ನಲಿಯದವರುಂಟೇನು ?- || ಪ್ರತ್ಯಗಾತ್ಮ ||
ಬಲಿಕೊಡುವರೇ ಹೇಳು ಆನೆ ಕುದುರೆಗಳನ್ನು
ಹುಲಿಯನೆಂದಾದರೂ ಬಲಿಕೊಟ್ಟುದುಂಟೆ ?
ಬಲಿ ಪಶುವು ಕುರಿ-ಮೇಕೆ, ದೈವ ದುರ್ಬಲರನ್ನೇ
ಬಲಿ ತೆಗೆದುಕೊಳ್ಳುವುದು – || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ