ಪ್ರತ್ಯಗಾತ್ಮ ಚಿಂತನ (ನೇನಂಶಿ) – 41

ಸರ್ವರೊಳಗೊಂದೊಂದು ನುಡಿಗಲಿತು ಮಾನವನು
ಸರ್ವಜ್ಞನಾಗುವನು ಸಂದೇಹವಿಲ್ಲ
ಸರ್ವರೊಳಗೊಂದಾಗಿ ನಗುನಗುತ ಮಾತಾಡು
ಸರ್ವಜನ ಮಾನ್ಯನಹೆ- || ಪ್ರತ್ಯಗಾತ್ಮ ||

ತಲೆ ಬಾಚಿ ಹೂ ಮುಡಿದು ಹಣೆಗೆ ತಿಲಕವನಿಟ್ಟು
ಮಲಿನವಲ್ಲದ ಸೀರೆ ಕುಪ್ಪಸವ ಧರಿಸಿ
ಬಳಲಿ ಬಹ ಪತಿಯೆದಿರು ಸತಿ ಸುಳಿಯೆ ಪತಿಗಾಗ
ಬಳಲಿಕೆಯು ಹಿಂಗುವುದು- || ಪ್ರತ್ಯಗಾತ್ಮ ||

ಜನುಮ ನೀಡಿದ ಜನನಿ ಜನಕರೇ ಪರದೈವ
ಅನುನಯದೊಳವರನ್ನು ಮುಪ್ಪಿನಲಿ ಸಲಹು.
ನಿನಗಾಗಿ ಅವರೆನಿತು ಕಷ್ಟಗಳ ಸಹಿಸಿದರೊ !
ನೆನೆಯ ಬೇಡವೆ ನೀನು- || ಪ್ರತ್ಯಗಾತ್ಮ ||

ಹದಿ ಹರೆಯದ ಹೆಣ್ಣ ಹೊಳೆವ ಕಣ್ಣೇ ಚಂದ
ಅದಕಿನಿತು ಕಾಡಿಗೆಯು ಮತ್ತಷ್ಟು ಚಂದ
ಮುದಿತನದಲಿ ಮಂಜಾಗಿ ಸುಕ್ಕಾಗಿ ಗುಳಿಬಿದ್ದ
ಮುದಿಕಣ್ಗೆ ಕಾಡಿಗೆಯೆ ?- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ : ಗೌರಿದತ್ತ

Related post

Leave a Reply

Your email address will not be published. Required fields are marked *