ಪ್ರತ್ಯಗಾತ್ಮ ಚಿಂತನ (ನೇನಂಶಿ) – 44

ಇನ್ನಾವ ಗ್ರಹದೊಳಗೆ ಜೀವರಾಶಿಗಳಿವೆಯೊ
ಇನ್ನವರ ಮೆಮಗಂತು ತಿಳಿದು ಬಂದಿಲ್ಲ
ಔನ್ನತ್ಯಕೇರಿರುವ ನಾಗರಿಕ ಭೂಮಿಯಿದು
ಸೊನ್ನೆಯಾಗುವುದೇನೊ !- || ಪ್ರತ್ಯಗಾತ್ಮ ||

ಉರಿವ ಹಣತೆಯ ದೀಪವನು ಗಾಳಿ ನಂದಿಪುದು
ಉರಿಯುತಿರೆ ಹುಲು ಬಣವೆ ಬೆನ್ನು ತಟ್ಟುವುದು
ಪಿರಿದು ಬಲಶಾಲಿಗಳ ಎಲ್ಲ ಬೆಂಬಲಿಸುವರು
ದುರುಬಲತೆಯೇ ಶಾಪ- || ಪ್ರತ್ಯಗಾತ್ಮ ||

ನೀತಿವಂತನ ಕಂಡು ಭ್ರಷ್ಟ ಕಿಡಿ ಕಾರುವನು
ಮಾತಿನಲಗಲಿ ಚುಚ್ಚಿ ಮನವ ನೋಯಿಪನು
ಧೂರ್ತ ಕಾಗೆಯು ಪುಟ್ಟ ಕೋಗಿಲೆಯ ಮರಿಯನ್ನು
ಘಾತಿಸುತ್ತಿದೆ ನೋಡು- || ಪ್ರತ್ಯಗಾತ್ಮ ||

ಕಟ್ಟುಕಟ್ಟಳೆ ಎಂಬುದುಂಟೇನು ನಾಡಿನಲಿ?
ಪುಟ್ಟ ಮಕ್ಕಳ ಶಾಲೆ ಕುಸಿದು ಬೀಳುತಿದೆ
ಗಟ್ಟಿ ಸೇತುವೆ ಇಲ್ಲ; ಗಟ್ಟಿ ಅಣೆಕಟ್ಟಿಲ್ಲ
ಭ್ರಷ್ಟತೆಯೆ ತುಂಬಿಹುದು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *