ಪ್ರತ್ಯಗಾತ್ಮ ಚಿಂತನ (ನೇನಂಶಿ) – 45

 ಪ್ರತ್ಯಗಾತ್ಮ ಚಿಂತನ (ನೇನಂಶಿ) – 45

ಶಾಂತಿ ದೂತರ ತೆರದಿ ಶಾಂತಿ ಮಾತಾಡುವರು
ಮಂತಣದಿ ಹಠಮಾರಿತನವ ತೋರುವರು
ಎಂತಾದರೂ ಇವರ ಹಠವೆ ವಿಶ್ವಕೆ ಕುತ್ತು
ಎಂತಪ್ಪುದೈ ಶಾಂತಿ_ || ಪ್ರತ್ಯಗಾತ್ಮ ||

ಗೆದ್ದ ಎತ್ತಿನ ಬಾಲ ಹಿಡಿದ ಜನರೇ ಹೆಚ್ಚು
ಗೆದ್ದ ಮಂದಿಗೆ ಹಾರ; ಸೋತವಗೆ ಕಲ್ಲು
ಬಿದ್ದವನೆ ಮತ್ತೊಮ್ಮೆ ಗೆದ್ದು ಬರಬಹುದೇನೊ !
ಗುದ್ದಾಟವೇಕಯ್ಯ? – || ಪ್ರತ್ಯಗಾತ್ಮ ||

ಸದ್ದುಗದ್ದಲ ಮಾಡಿ ಗುದ್ದಾಡಿ ಬಡಿದಾಡಿ
ಉದ್ದನೆಯ ಜುಬ್ಬಗಳ ಹರಿದು ಹಾಕಿದರೆ
ಉದ್ದುದ್ದ ಭಾಷಣವ ಮಾಡಿದರೆ ಈ ದೇಶ
ಉದ್ಧಾರವಾಗುವುದೇ ?- || ಪ್ರತ್ಯಗಾತ್ಮ ||

ಧ್ವನಿವರ್ಧಕವ ಕಿತ್ತು ಬೀಸಿ ಹೊಡೆವವನೊಬ್ಬ
ಮುನಿದು ಕುರ್ಚಿಯ ಮುರಿದು ಬಡಿವನಿನ್ನೊಬ್ಬ
ಕನಿಕರವ ಕೈ ಬಿಟ್ಟು ಕತ್ತಿ ಮಸೆಯುವನೊಬ್ಬ
ಜನ ಸೇವೆಯೇನು ಇದು ? – || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *