ಪ್ರತ್ಯಗಾತ್ಮ ಚಿಂತನ (ನೇನಂಶಿ) – 49

ಸೊಕ್ಕಿನಲಿ ಲಂಚಗುಳಿ ಲಂಚ ಸ್ವೀಕರಿಸುತಿರೆ
ಸಿಕ್ಕಿ ಬಿದ್ದನು ಗುಪ್ತಚರರ ಜಾಲಕ್ಕೆ,
ಇಕ್ಕಿ ಬಡಿಯುವ ಕೋಲ ಕಾಣಲಿಲ್ಲವು ಬೆಕ್ಕು
ನೆಕ್ಕಿತೈ ಹಾಲನ್ನು- || ಪ್ರತ್ಯಗಾತ್ಮ ||

ಲಂಚಗುಳಿಯಧಿಕಾರಿ ಮೈ ಸೊಕ್ಕಿನಿಂ ಕೊಬ್ಬಿ
ಸಂಚಯನ ಮಾಡುವನು ಅಕ್ರಮದಿ ಧನವ,
ಹೊಂಚು ಹಾಕುತಲಿರುವ ಗುಪ್ತಚರರನು ಕಾಣ
ಲಂಚ ಒಂದನೆ ಕಾಂಬ || ಪ್ರತ್ಯಗಾತ್ಮ ||

ರಾಜಕೀಯವ ಮಾಳ್ವ ಶಿಕ್ಷಕರು ಬಹಳಿಹರು
ಓಜೆಯಲಿ ಮಕ್ಕಳನು ಬಳಿಸಿಕೊಳ್ಳುವರು
ಪೂಜೆಗೊಳುವರು ಮತ್ತೆ ಎಲ್ಲರಿಂದಲು ಆಹಾ !
ಸೋಜಿಗವದೇನೆಂಬೆ- || ಪ್ರತ್ಯಗಾತ್ಮ ||

ಮರವೆ ಮನೆಯಾದವಗೆ ಗುಡಿಸಲಲಿ ಇರುವಾಸೆ
ಗರಿಯ ಗುಡಿಸಲವಂಗೆ ಕರಿ ಹೆಂಚಿನಾಸೆ
ಕರಿಯ ಹೆಂಚಿನರುವವಗೆ ಕೆಂಪು ಹೆಂಚಿನ ಆಸೆ
ಇರುದದುಕೆ ತುಡಿವಾಸೆ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *