ಪ್ರತ್ಯಗಾತ್ಮ ಚಿಂತನ (ನೇನಂಶಿ) – 51

ಇರುಳಿನಲಿ ಮೊಸರನ್ನ ಉಣ್ಣದಿರು ಎಂದೆಂದೂ
ಇರುವ ಆಯುಃ ಕ್ಷೀಣ; ಆರೋಗ್ಯವಲ್ಲ.
ಕ್ಷೀರಾನ್ನ ಭುಂಜಿಸಲು ದೀರ್ಘಾಯುವಾಗಿರುವೆ
ಆರೋಗ್ಯಕಿದು ಪಥ್ಯ- || ಪ್ರತ್ಯಗಾತ್ಮ ||

‘ನಶ್ಯವದು ವಶ್ಯಕರ’ ಎಂಬುದೆಲ್ಲಾ ಬೊಗಳೆ
ನಶ್ಯ ತುಂಬಿದ ಮೂಗು ಕೊಳೆನೀರ ಜಿನಗು
ನಶ್ಯ ಒರೆಸಿದ ಬಟ್ಟೆ ಚಿಮಣಿ ಒರೆಸಿದ ಬಟ್ಟೆ
ವಶ್ಯಕರವಿನ್ನಲ್ಲಿ ?- || ಪ್ರತ್ಯಗಾತ್ಮ ||

ಆಫೀಸಿನಿಂ ಬಂದ ಪತಿಯು ಪತ್ನಿಯ ಗದರೆ
ಕೋಪದಿಂ ಹೆಂಡತಿಯು ಮಗುವ ಚಚ್ಚಿದಳು
ಪಾಪ ! ಮಗು ಬೊಂಬೆಯನು ಎತ್ತಿ ಕುಕ್ಕಿತು ನೋಡ !
ಕೋಪವಲ್ಲಿಗೆ ಶಾಂತ- || ಪ್ರತ್ಯಗಾತ್ಮ ||

ಕ್ಷುಲ್ಲಕದ ಕಾರಣಕೆ ಕೆಂಡ ಕಾರಿದಳತ್ತೆ
ಬಲ್ಲಿದಳೆ ಅತ್ತೆಯನು ದಂಡಿಸಲು ಸೊಸೆಯು?
ಅಲ್ಲಿದ್ದ ಬೆಕ್ಕನ್ನು ಬೀಸಿ ಬಿಸುಟಳು ಸೊಸೆಯು
ಅಲ್ಲಿಗಿಳಿಯಿತು ಸಿಟ್ಟು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *